ಶನಿವಾರ, ಜೂನ್ 12, 2021
22 °C
ಕರಿಬಸವೇಶ್ವರ ಸನ್ನಿಧಿಯಲ್ಲಿ ಹರಕೆ ತೀರಿಸಿದ ಭಕ್ತರು

ಉಕ್ಕಡಗಾತ್ರಿ ರಥೋತ್ಸವಕ್ಕೆ ಹರಿದುಬಂದ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.ಉತ್ಸವಕ್ಕೂ ಮುನ್ನ ಕರಿಬಸವೇಶ್ವರ ಸ್ವಾಮಿ ರಾಜಬೀದಿ ಉತ್ಸವ ನಡೆಯಿತು. ಪುಣ್ಯಾಹವಾಚನ, ರಥಪೂಜೆ, ಶಾಂತಿಮಂತ್ರ ಪಠಣ, ಅಷ್ಟದಿಕ್ಪಾಲಕರಿಗೆ ಬಲಿದಾನದ ನಂತರ ರಥಾರೋಹಣವಾಯಿತು.ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ದರಾಮೆಶ್ವರ ದೇಶೀಕೇಂದ್ರ ಸ್ವಾಮೀಜಿ ರಥಪೂಜೆ ನೆರವೇರಿಸಿದರು. ಭಕ್ತರು ರಥಕ್ಕೆ ಉತ್ತುತ್ತೆ, ಬಾಳೆಹಣ್ಣು, ಧಾನ್ಯ, ಗಾಲಿಗೆ ತೆಂಗಿನಕಾಯಿ ಸಮರ್ಪಣೆ ಮಾಡಿದರು.ನಂದಿಕೋಲು, ತಮಟೆ, ಜಾಂಚ್‌, ಡೊಳ್ಳು, ಭಜನಾತಂಡ, ಪುರವಂತರ ವೀರಭದ್ರ ದೇವರ ಕುಣಿತ, ಬೊಂಬೆ, ಕೀಲು ಕುದುರೆ ಕುಣಿತ ಮಂಗಳವಾದ್ಯ ಜೋಡು ನಂದಾದೀಪ ಉತ್ಸವಕ್ಕೆ ಕಳೆ ತಂದಿದ್ದವು.ದೇವಾಲಯ, ರಾಜಬೀದಿಗೆ ವಿದ್ಯುದ್ದೀಪ ಗಳಿಂದ ಹಾಗೂ ರಥವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಗದ್ದುಗೆಗೆ ರುದ್ರಾಭೀಷೇಕ ಹಾಗೂ ವಿಶೇಷ ಪೂಜೆ ಮಾಡಲಾಯಿತು.2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಭಕ್ತರು ಬಗೆಬಗೆಯ ಹರಕೆ ತೀರಿಸಿದರು. ಕರಿಬಸವೇಶ್ವರ ಟ್ರಸ್ಟ್‌ ಅನ್ನ ಸಂತರ್ಪಣೆ ಹಾಗೂ ವಸತಿ ವ್ಯವಸ್ಥೆ ಮಾಡಿತ್ತು. ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ವಿಚಿತ್ರ ಪದ್ಧತಿಗಳ ಅನಾವರಣ

ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಭಕ್ತರು ವಿಶೇಷ ಪೂಜಾ ವಿಧಿ ನೆರವೇರಿಸಿದರು.ನದಿಯಲ್ಲಿ ಮಿಂದವರ ಮೇಲೆ ಅವಾಹಿತವಾದ ಕ್ಷುದ್ರ ಶಕ್ತಿಗಳನ್ನು ಅಜ್ಜಯ್ಯ ನಿವಾರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ತಲೆ ಮೇಲೆ ಕಲ್ಲು ಹೊತ್ತವರು, ಸೊಂಟಕ್ಕೆ ಬೀಗ ಹಾಕಿಕೊಂಡು ಮುಕ್ತಿ ನೀಡುವಂತೆ ಪ್ರಾರ್ಥಿಸುವುದು ಕಂಡುಬಂದಿತು.ಇನ್ನೂ ಕೆಲ ಭಕ್ತರು ದೇವಾಲಯದ ಪ್ರಾಕಾರದಲ್ಲಿ ಉರುಳು ಸೇವೆ ಮಾಡಿದರು. ಹಲವಾರು ಬಗೆ ಹರಕೆ ಸಮರ್ಪಿಸಿ ಜನತೆ ಭಕ್ತಿ ಮೆರೆದರು.ಹೋಳಿಗೆಯೂಟ: ನದಿ ದಂಡೆಯಲ್ಲಿ ಭಕ್ತರು ಮರಳಲ್ಲಿ ಶಿವಲಿಂಗ ಮಾಡಿ ಪೂಜೆ ಸಲ್ಲಿಸಿ, ಹೋಳಿಗೆ, ಕಡಬು ಸೇರಿದಂತೆ ಹಲವು ಭಕ್ಷ್ಯ  ನೈವೇದ್ಯ ಮಾಡಿ ಕುಟುಂಬ ಸಮೇತ ಹೋಳಿಗೆಯೂಟ ಸವಿದರು.ಹೇಳಿಕೆ–ಕೇಳಿಕೆ: ವಿಶೇಷ ಪೂಜೆ ಮಾಡಿದ ಕೆಲವರು ಕೈಯಲ್ಲಿ ನಿಂಬೆಹಣ್ಣು ಹಿಡಿದ ದೇವತೆ ಆವಾಹನೆ ಆದ ವ್ಯಕ್ತಿಗೆ,  ತಮ್ಮ ಬಯಕೆ ಈಡೇರುತ್ತವೆಯೇ? ಸಮಸ್ಯೆ ಎಂದು ಪರಿಹಾರವಾಗುತ್ತದೆ ?ಮಕ್ಕಳ ಭಾಗ್ಯ ಎಂದು? ಎಂಬ ಹೇಳಿಕೆ–ಕೇಳಿಕೆ ನಡೆದವು.

ತೆಪ್ಪ ವಿಹಾರದ ಆಕರ್ಷಣೆಜಾತ್ರೆ ವೇಳೆ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ಜನರು ಭಾನುವಾರ ಓಡಾಡಲು ತೆಪ್ಪಗಳನ್ನು ಬಳಸಿದರು.

16 ತೆಪ್ಪಗಳು ಜನರನ್ನು ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಹಾಗೂ ನಡುಗಡ್ಡೆಗಳಿಗೆ ಕರೆದೊಯ್ದವು. ರಜಾ ದಿನವಾದ ಕಾರಣ ಅನೇಕರು ಮಕ್ಕಳ ಸಮೇತ ಆಗಮಿಸಿದ್ದರು. ತೆಪ್ಪಗಳ ಮಾಲೀಕರು ತಲಾ ₨ 5 ದರ ಪಡೆದರು.ಯುವ ಜನತೆ, ಮಹಿಳೆಯರು, ಮಕ್ಕಳು ನದಿಯಲ್ಲಿ ಈಜಾಡಿ ರಜೆ ಖುಷಿ ಅನುಭವಿಸಿದರು. ರಥೋತ್ಸವದ ವೇಳೆ ದೇವರಿಗೆ ಸಮರ್ಪಿಸಿದ ಧಾನ್ಯ ಆರಿಸಿಕೊಂಡು ಹೋಗಲು ಜನರು ಮುಗಿಬಿದ್ದಿದ್ದರು.ಜೋಳ, ಮುಸುಕಿನ ಜೋಳ, ನವಣೆ, ಸಜ್ಜೆ, ರಾಗಿ, ಹತ್ತಿ, ಕುಸುಬೆ, ಎಳ್ಳು, ಹರಳಕಾಳು, ಭತ್ತದಕಾಳನ್ನು ಆರಿಸಿಕೊಳ್ಳುವ ದೃಶ್ಯ ಕಂಡುಬಂದಿತು.ದೇವರಿಗೆ ಅರ್ಪಿಸಿದ ಧಾನ್ಯವನ್ನು ಬಿತ್ತನೆ ಮಾಡುವಾಗ ಬಳಸಿದರೆ ರೋಗಭಾಧೆ ಕಡಿಮೆಯಾಗಿ ಉತ್ತಮ ಇಳುವರಿ ಬರುತ್ತದೆ ಎಂದು ಆರಿಸಿಕೊಳ್ಳುತ್ತಿದ್ದವರು ಮಾಹಿತಿ ನೀಡಿದರು.ಕಳವು ಘಟನೆ: ಮೊಬೈಲ್‌, ಸರ ಕಳವು ಕಿಸೆಗಳ್ಳತನದ ಕೆಲವು ಪ್ರಕರಣಗಳು ವರದಿಯಾದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.