ಗುರುವಾರ , ಜುಲೈ 29, 2021
26 °C

ಉಗ್ರರ ನೆಲೆ ದಮನ: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿನ್ ಲಾಡೆನ್ ಹತ್ಯೆಯನ್ನು ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿನ ಚಾರಿತ್ರಿಕ ವಿಜಯ ಪತಾಕೆ ಎಂದಿರುವ ಭಾರತ, ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣಗಳನ್ನು ದಮನ ಮಾಡುವ ಉದ್ದೇಶವನ್ನು ಅಂತರರಾಷ್ಟ್ರೀಯ ಸಮುದಾಯ ಕೈಬಿಡಬಾರದು ಎಂದು ಒತ್ತಾಯಿಸಿದೆ.

ಅಲ್‌ಖೈದಾ ಮುಖ್ಯಸ್ಥನಿಗಾಗಿ ಒಂದು ದಶಕದಿಂದ ನಡೆದಿದ್ದ ಶೋಧ ಕಾರ್ಯಾಚರಣೆಗೆ ಈಗ ತೆರೆ ಬಿದ್ದಿದೆ ಎಂದು ಪತ್ರಿಕಾ ಹೇಳಿಕೆ ನೀಡಿರುವ  ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಉಗ್ರರ ವಿರುದ್ಧದ ಸಂಘಟಿತ ಹೋರಾಟ ತಡೆಯಿಲ್ಲದೆ ಮುಂದುವರಿಯಬೇಕು ಎಂದಿದ್ದಾರೆ.

ವಿವಿಧ ಸಂಘಟನೆಗಳಿಗೆ ಸೇರಿದ ಉಗ್ರರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಭಾರತದ ಆತಂಕವನ್ನು ಇದು ಪುಷ್ಟೀಕರಿಸಿದೆ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

‘ಲಾಡೆನ್ ಹತ್ಯೆಯಾದಾಗ ಪಾಕಿಸ್ತಾನದ ಆಯಕಟ್ಟಿನ ತಾಣದಲ್ಲಿರುವ ಅಬಾತಾಬಾದ್‌ನಲ್ಲಿ ಅಡಗಿದ್ದ ಎಂಬುದನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪ್ರಕಟಿಸಿದ್ದು, ಇದನ್ನು ನಾವು ಬಹು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದಿದ್ದಾರೆ.

ಮುಂಬೈ ಮೇಲೆ ಅಮಾನುಷ ದಾಳಿ ಎಸಗಿದ ಉಗ್ರರು ಹಾಗೂ ಅವರ ನಿಯಂತ್ರಕರು ಪಾಕಿಸ್ತಾನದಲ್ಲೇ ಆಶ್ರಯ ಪಡೆದಿದ್ದಾರೆ. ಈ ಸಂಬಂಧ ಪಾಕಿಸ್ತಾನದ ಒಳಾಡಳಿತ ಸಚಿವರಿಗೆ ನಾವು ಆರೋಪಿಗಳ ಪಟ್ಟಿ ಹಾಗೂ ಕೆಲವು ಶಂಕಿತರ ಧ್ವನಿ ಮಾದರಿಗಳನ್ನು ಬಹಳ ಹಿಂದೆಯೇ ಒದಗಿಸಿದ್ದು, ಅವರನ್ನೆಲ್ಲಾ ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯೂಯಾರ್ಕಿನ ಅವಳಿ ಗೋಪುರಗಳ ಮೇಲೆ ದಾಳಿ ಎಸಗಿದ ಮೇಲೆ ಲಾಡೆನ್ ಹಾಗೂ ಆತನ ಸಹಚರರನ್ನು ಬೇಟೆಯಾಡುವ ಜರೂರು ಅಮೆರಿಕಕ್ಕೆ ಇತ್ತು ಎಂದು ಅವರು ಬೆಂಬಲಿಸಿದ್ದಾರೆ.

ಲಾಡೆನ್‌ಗೆ ಪಾಕ್ ಆಶ್ರಯ ನೀಡಿತ್ತು ಎಂಬುದು ಇದೀಗ ಜಗಜ್ಜಾಹೀರಾಗಿದೆ. ಆತ ರಾಷ್ಟ್ರದ ರಾಜಧಾನಿಯಾದ ಇಸ್ಲಾಮಾಬಾದ್‌ಗೆ ಅತಿ ಹತ್ತಿರದಲ್ಲೇ ಇದ್ದುದು ಪಾಕಿಸ್ತಾನ ಉಗ್ರರ ಆಡುಂಬೊಲ ಎಂಬುದನ್ನು ನಿಚ್ಚಳವಾಗಿ ತೋರಿಸಿದೆ ಎಂದು ಬಿಜೆಪಿ ಹೇಳಿದೆ.

ಆತನ ಅವಸಾನ ದುಷ್ಟರಿಗೆ ಸೂಕ್ತ ಸಂದೇಶವನ್ನು ರವಾನಿಸಿದೆ. ಕ್ರೂರ ಸಿದ್ಧಾಂತವನ್ನು ಬೋಧಿಸಿದ ಆತನಿಗೆ ಶಿಕ್ಷೆ ಆಗಬೇಕಿತ್ತು ಎಂದು ಪಕ್ಷದ ವಕ್ತಾರ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.