ಶನಿವಾರ, ಮೇ 15, 2021
24 °C

ಉತ್ಕಟ ಬರಹಗಳು ಇಂದೂ ಬರುತ್ತಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಯಂತ ಕಾಯ್ಕಿಣಿ, ಸುನಂದಾ ಪ್ರಕಾಶ್ ಕಡಮೆ ಅವರಂತಹ ಅನೇಕ ಸಾಹಿತಿ, ಬರಹಗಾರರು ಶಿವರಾಮ ಕಾರಂತರು ಅಥವಾ ಯಶವಂತ ಚಿತ್ತಾಲರು ಬರೆದಷ್ಟೇ ಉತ್ಕಟವಾಗಿ ಬರೆಯುತ್ತಿದ್ದಾರೆ ಎಂದು ದೇಶಕಾಲ ತ್ರೈಮಾಸಿಕ ಪತ್ರಿಕೆಯ ಸಂಪಾದಕ ವಿವೇಕ ಶಾನಭಾಗ ಅಭಿಪ್ರಾಯ ವ್ಯಕ್ತಪಡಿಸಿದರು.`ಟೊಟೊ ಫಂಡ್ಸ್ ದಿ ಆರ್ಟ್ಸ್~ ಮತ್ತು ಬ್ರಿಟಿಷ್ ಕೌನ್ಸಿಲ್ ಇಲ್ಲಿನ ಬ್ರಿಟಿಷ್ ಲೈಬ್ರರಿಯಲ್ಲಿ ಶುಕ್ರವಾರ ಆಯೋಜಿಸಿದ್ದ `ಸಿರಿಗನ್ನಡ~ ಪುಸ್ತಕದ ಆಯ್ದ ಭಾಗಗಳ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಅಮರೇಶ ನುಗಡೋಣಿ, ಗಿರೀಶ ಕಾರ್ನಾಡ ಮತ್ತಿತರ ಸಾಹಿತಿಗಳ ಬರಹಗಳೂ ಚಿತ್ತಾಲ, ಕಾರಂತರ ಬರಹಗಳಷ್ಟೇ ಕಾಡುತ್ತವೆ. ಸಾಹಿತ್ಯ ಸೃಷ್ಟಿಗೆ ಸಾಹಿತಿಯ ಸುತ್ತಲಿನ ಪ್ರಪಂಚದಲ್ಲಿ ಸಮಸ್ಯೆಗಳುತುಂಬಿರಬೇಕೆಂಬ ನಿಯಮವೇನೂ ಇಲ್ಲ~ ಎಂದ ಅವರು, `ಕನ್ನಡದಲ್ಲಿ ಇಂದು ಸುಮಾರು 600 ಬ್ಲಾಗ್‌ಗಳಿವೆ. ಅದರಲ್ಲಿ ಕೆಲವು ಕಲ್ಲು, ಜೊಳ್ಳುಗಳಿರಬಹುದು. ಆದರೆ ಅನೇಕ ಬ್ಲಾಗ್‌ಗಳು ಗಟ್ಟಿಯಾದ ಬರಹಗಳಿಂದ ತುಂಬಿವೆ. ಜನರ ಅಭಿವ್ಯಕ್ತಿಗೆ ಹೊಸ ಮಾಧ್ಯಮವೊಂದು ದೊರೆತಿದೆ~ ಎಂದರು.ಹಿಂದೆ ಕನ್ನಡ ಸಾಹಿತ್ಯದಲ್ಲಿದ್ದ ದಲಿತ ಮತ್ತು ನವ್ಯ ಚಳವಳಿಗಳು ಒಂದನ್ನೊಂದು ಪರಸ್ಪರ ಪ್ರಭಾವಿಸಿದವು. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯಂತಹ ಮಹತ್ವದ ಬರಹಗಾರರು ದಲಿತ ಚಳವಳಿಯಿಂದ ಪ್ರಭಾವಿತರಾಗಿದ್ದರು ಎಂದರು. ಸಮಕಾಲೀನ ಜಗತ್ತಿನಲ್ಲಿ ಹೇಳಿಕೊಳ್ಳುವಂಥ ಯಾವುದೇ ಚಳವಳಿಗಳು ಇಲ್ಲ. ಸಾಮಾಜಿಕ ಚಳವಳಿಯ ಅನುಪಸ್ಥಿತಿಯ ಕಾರಣ ಸಾಹಿತ್ಯದಲ್ಲೂ ಚಳವಳಿಯ ಪ್ರಕಾರಗಳು ಉಳಿದಿಲ್ಲ ಎಂದು ವಿಶ್ಲೇಷಿಸಿದರು.ಶಾನಭಾಗ ಅವರ ಜೊತೆಗೆ ಸಂವಾದ ನಡೆಸಿದ ನಾಟಕಕಾರ ಪ್ರಕಾಶ್ ಬೆಳವಾಡಿ `ನಮ್ಮ ರಾಜ್ಯ ಬಹುಸಂಸ್ಕೃತಿಯ ನಾಡಾದ ಕಾರಣ ಇಲ್ಲಿನ ಸಾಹಿತ್ಯ ಕೂಡ ವಿಭಿನ್ನ ಧ್ವನಿಗಳಿಗೆ ವೇದಿಕೆಯಾಗಿದೆ~ ಎಂದು ಅಭಿಪ್ರಾಯಪಟ್ಟರು.ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ ಮೂಡಿದ ಬರಹಗಳಿಗೆ ಸೂಕ್ತ ಕಲಾತ್ಮಕ ಅಭಿವ್ಯಕ್ತಿ ದೊರೆಯಲಿಲ್ಲ. ಆ ಸಾಹಿತ್ಯಕ ಚಳವಳಿಗಳ ಅವಸಾನಕ್ಕೆ ಇದೂ ಕಾರಣವಾಗಿರಬಹುದು ಎಂದು ಪ್ರತಿಪಾದಿಸಿದರು.ಸಿರಿಗನ್ನಡ ಪುಸ್ತಕದ ಕೆಲವು ಆಯ್ದ ಭಾಗಗಳನ್ನು ಮೌನೇಶ್ ಬಡಿಗೇರ್, ಶಿವಾ ಪಾಠಕ್ ಮತ್ತು ದೀಪಿಕಾ ಅರವಿಂದ್ ಓದಿದರು. ಅವರು ಓದಿದ ಭಾಗಗಳ ಆಧಾರದಲ್ಲಿ ಸಭಿಕರು ಶಾನಭಾಗ ಮತ್ತು ಬೆಳವಾಡಿ ಅವರೊಂದಿಗೆ ಸಂವಾದ ನಡೆಸಿದರು.ಬಡಿಗೇರ್ ಅವರು ತೇಜಸ್ವಿಯವರ `ಪರಿಸರದ ಕತೆ~ ಕೃತಿಯ `ಸಂಬಳಕ್ಕೆ ಸಿಕ್ಕಿಕೊಂಡ ದೆವ್ವ~ ಅಧ್ಯಾಯದ ಕೆಲವು ಭಾಗಗಳನ್ನು ಭಾವಪೂರ್ಣವಾಗಿ, ತಿಳಿಹಾಸ್ಯ ಬೆರೆಸಿ ಓದಿದ ಸಂದರ್ಭದಲ್ಲಿ ಸಭಿಕರ ಮುಖದಲ್ಲಿ ಮಂದಹಾಸ ಪದೇ ಪದೇ ಇಣುಕುತ್ತಿತ್ತು. ಕಳೆದ ಎರಡು ದಶಕಗಳಲ್ಲಿ ಕನ್ನಡದಲ್ಲಿ ಬಂದ ಆಯ್ದ ಕಥೆ, ಕಾವ್ಯ, ಲೇಖನ, ವಿಮರ್ಶೆಗಳ ಇಂಗ್ಲಿಷ್ ಅನುವಾದವನ್ನು `ಸಿರಿಗನ್ನಡ~ ಪುಸ್ತಕದಲ್ಲಿ ನೀಡಲಾಗಿದೆ.ಡಾ.ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ, ಡಿ.ಆರ್. ನಾಗರಾಜ್, ಪೂರ್ಣಚಂದ್ರ ತೇಜಸ್ವಿ, ವೈದೇಹಿ, ಕುಂ. ವೀರಭದ್ರಪ್ಪ, ಜಯಂತ ಕಾಯ್ಕಿಣಿ, ಗಿರೀಶ ಕಾರ್ನಾಡ ಮುಂತಾದವರ ಆಯ್ದ ಬರಹಗಳ ಇಂಗ್ಲಿಷ್ ಅನುವಾದ ಈ ಪುಸ್ತಕದಲ್ಲಿದೆ.ಈ ಪುಸ್ತಕವನ್ನು ಸಂಪಾದಿಸಿರುವ ಶಾನಭಾಗ ಅವರು ಇದನ್ನು `ಸಮಕಾಲೀನ ಕನ್ನಡ ಬರಹಗಳ ಸಂಕಲನ~ ಎಂದು ಕರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.