ಬುಧವಾರ, ಜೂನ್ 3, 2020
27 °C

ಉತ್ಖನನಕ್ಕೆ ಪುರಾತತ್ವ ಇಲಾಖೆ ಅಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಪಟ್ಟಣದ ಕೆಲವು ಪ್ರದೇಶಗಳಲ್ಲಿ ಆದಿಮಾನವರು ವಾಸವಾಗಿದ್ದ ಕುರುಹುಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಯು ಪಟ್ಟಣದಲ್ಲಿ ಉತ್ಖನನ ಕಾರ್ಯ ಹಮ್ಮಿಕೊಂಡಿದೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಮೈಸೂರು ವಿಭಾಗದ ಅಧೀಕ್ಷಕ  ಎಂ. ಮಹಾದೇವಯ್ಯ ತಿಳಿಸಿದರು. ಪಟ್ಟಣದ ಮಾನವ ಧರ್ಮ ಮಕ್ಕಳ ಮಂಟಪದಲ್ಲಿ ಗುರುವಾರ  ಪತ್ರಿಕಾಗೋಷ್ಠಿಯಲ್ಲಿ ಅವರು ಉತ್ಖನನದ ವಿವರಗಳನ್ನು ನೀಡಿದರು.‘ಜಿಲ್ಲೆಯ ಸಂಗಕಲ್ಲು ಮತ್ತು ತೆಕ್ಕಲಕೋಟೆ ಗ್ರಾಮಗಳಲ್ಲಿ ನಡೆಸಿದ ಉತ್ಖನನದಿಂದ ಈ ಪ್ರದೇಶಗಳಲ್ಲಿ ವಾಸವಾಗಿದ್ದ ಆದಿಮಾನವರ ಜೀವನ ಶೈಲಿ ಮತ್ತು ಅವರು ಅನುಸರಿಸುತ್ತಿದ್ದ ವ್ಯವಸಾಯ ಪದ್ಧತಿಯ ಬಗ್ಗೆ ತಿಳಿದುಬಂದಿದೆ’ ಎಂದರು. ’ಅಕ್ಷರ ಉಗಮವಾಗದ ಶಿಲಾಯುಗದಲ್ಲಿ ಆದಿಮಾನವರು ತಮ್ಮ ಭಾವನೆಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿಪಡಿಸುತ್ತಿದ್ದರು. ಇದಕ್ಕೆ ಪೂರಕ ಎನ್ನುವಂತೆ ಪಟ್ಟಣದ ಮುಷ್ಟಘಟ್ಟೆ ರಸ್ತೆಯ ಕೆಲವು ಗುಹೆಗಳಲ್ಲಿ ಮನುಷ್ಯ, ಸಾಕುಪ್ರಾಣಿ ಮತ್ತು ಕಾಡುಪ್ರಾಣಿಗಳ ವರ್ಣ ಚಿತ್ರಗಳು ಕಂಡುಬಂದಿವೆ’ ಎಂದು ತಿಳಿಸಿದರು.‘ಇಲ್ಲಿನ ಬೂದಿಕೊಳ್ಳ, ಬಾಳೆಕೊಳ್ಳ, ಮುದುವಿನಮೂಲೆ ಪ್ರದೇಶಗಳಲ್ಲಿ ಆದಿಮಾನವರು ವಾಸವಾಗಿದ್ದರು ಎನ್ನುವುದಕ್ಕೆ ಅವರು ಬಳಸಿದ ಕಲ್ಲಿನಿಂದ ತಯಾರಿಸಿದ ಕೊಡಲಿ ಮತ್ತು ಮಣ್ಣಿನಲ್ಲಿ ಮಾಡಿದ ಮಡಿಕೆ, ಕುಡಿಕೆಗಳು ದೊರೆತಿವೆ. ಈ ಅಂಶಗಳ ಆಧಾರದ ಮೇಲೆ ಪಟ್ಟಣಕ್ಕೆ ಸುಮಾರು 2500 ವರ್ಷಗಳ ಇತಿಹಾಸವಿರ್ದುವುದು ಖಚಿತವಾಗಿದೆ.ಆದಿಮಾನವರು ವಾಸವಿರಲು ಸೂಕ್ತ ಸುರಕ್ಷಿತ ಸ್ಥಳ ಮತ್ತು ಬಳಕೆಗೆ ಸಮೃದ್ಧ ನೀರು ದೊರೆಯುತ್ತಿತ್ತು ಎಂಬುದು ತಿಳಿದುಬಂದಿದೆ’ ಎಂದು ವಿವರಿಸಿದರು.‘ಇನ್ನೂ ಉತ್ಖನನ ನಡೆಸಿದರೆ ವ್ಯವಸಾಯ ಪದ್ಧತಿ ಮತ್ತು ಮರಣಾನಂತರದ ವಿಧಿವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ’ ಎಂದರು.ಈ ಪ್ರದೇಶದಲ್ಲಿ ಆದಿಮಾನವರು ವಾಸವಾಗಿದ್ದರು ಎನ್ನುವುದಕ್ಕೆ ಶೋಧಕರು ಮತ್ತು ವಿವಿಧ ವಿಶ್ವವಿದ್ಯಾಲಯಗಳು ಮಾಹಿತಿ ನೀಡಿವೆ. ಈ  ಹಿನ್ನೆಲೆಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಉತ್ಖನನಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.ಪ್ರಾರಂಭಲ್ಲಿ ಪಟ್ಟಣದ ಮುಷ್ಟಘಟ್ಟೆ ರಸ್ತೆಯಲ್ಲಿರುವ ಬಾಳೆಕೊಳ್ಳ, ಬೂದಿಕೊಳ್ಳ ಮತ್ತು ಮುದುಗನಮೂಲೆ ಪ್ರದೇಶದ ಸ್ಥಳಗಳಲ್ಲಿ ಉತ್ಖನನ ಪ್ರಾರಂಭಿಸಲಾಗುವುದು.ಇಲ್ಲಿ ದೊರೆತ ಮಾಹಿತಿ ಆಧರಿಸಿ ಎರಡನೇ ಸುತ್ತಿನ ಉತ್ಖನನ ಕಾರ್ಯವನ್ನು ಸಂಗಮೇಶ್ವ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು,ಉತ್ಖನನ ಕಾರ್ಯಕ್ಕೆ ಸಹಕರಿಸಲು ಔರಂಗಾಬಾದ್, ನಾಗಪೂರ್, ಮತ್ತು ತಮಿಳುನಾಡಿನಿಂದ ನುರಿತ ನಾಲ್ಕು ಜನ ತಜ್ಞರು ಆಗಮಿಸಿದ್ದಾರೆ.ಅಲ್ಲದೆ  ಸ್ಥಳೀಯ ಪುರಾತನ ಇತಿಹಾಸದ ಬಗ್ಗೆ ಕೆಲವು ಮಹತ್ವದ ಮಾಹಿತಿ ಸಂಗ್ರಹಿಸಿರುವ ಎನ್. ತಿಪ್ಪೇರುದ್ರಗೌಡ ಇವರೊಂದಿಗೆ ಉತ್ಖನನ ಕಾರ್ಯಕ್ಕೆ ಸಹಕರಿಸಲಿದ್ದಾರೆ. ಪಟ್ಟಣದಲ್ಲಿ ಉತ್ಖನನ ಕಾರ್ಯಕ್ಕೆ ಕೈಗೊಳ್ಳುವ ಬಗ್ಗೆ ಸ್ಥಳೀಯ ಪೊಲೀಸ ಠಾಣೆ, ವಿಷೇಶ ತಹಸೀಲ್ದಾರ ಕಚೇರಿ, ಗ್ರಾಮ ಪಂಚಾಯ್ತಿಗೆ ಮಾಹಿತಿ ನೀಡಲಾಗಿದೆ. ಆದಿಮಾನವರು ವಾಸವಾಗಿದ್ದರು ಎನ್ನುವ ಬಗ್ಗೆ ಮಾಹಿತಿ ಇರುವ  ಸಾರ್ವಜನಿಕರು ಮತ್ತು ಬುದ್ಧಿಜೀವಿಗಳು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.  

 

ಮಾಪನ ತಜ್ಞರಾದ(ಸರ್ವೆತಜ್ಞರು) ದೇವೇಂದ್ರ ಕಸಬಿ, ಅಶೋಕ್ ತೊರಿ, ವೀರರಾಘವ, ಸುಭಾಷ್ ಪಂಡಿತ್, ಕೆ.ಎಸ್. ಕೃಷ್ಣಯ್ಯ, ರವಿ, ಎನ್. ಮರೇಗೌಡ, ಎನ್.ನಾಗನಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.