ಉತ್ತಪ್ಪ ಶತಕ; ಕರ್ನಾಟಕಕ್ಕೆ ಜಯ

ಬೆಂಗಳೂರು: ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಶತಕದ ನೆರವಿನಿಂದ ಸವಾಲಿನ ಮೊತ್ತ ಕಲೆ ಹಾಕಿದ್ದ ಕರ್ನಾಟಕ ತಂಡ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಕೇರಳ ಎದುರಿನ ಪಂದ್ಯದಲ್ಲಿ 104 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಆಲೂರು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ಫೀಲ್ಡಿಂಗ್ ಮಾಡಲು ಮುಂದಾಯಿತು. ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿರುವ ಆತಿಥೇಯ ತಂಡ ಮೊದಲು ಬ್ಯಾಟ್ ಮಾಡಲು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು 50 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 317 ರನ್ ಕಲೆ ಹಾಕಿತು. ಸವಾಲಿನ ಗುರಿ ಮುಟ್ಟುವ ಹಾದಿಯಲ್ಲಿ ಎಡವಿದ ಕೇರಳ 213 ರನ್ ಗಳಿಸಿ ತನ್ನ ಹೋರಾಟ ಅಂತ್ಯಗೊಳಿಸಿತು.
ಗಟ್ಟಿ ಬುನಾದಿ: ಕೆ.ಎಲ್. ರಾಹುಲ್ ಬದಲು ಮಯಂಕ್ ಅಗರವಾಲ್ (39) ಜೊತೆ ಇನಿಂಗ್ಸ್ ಆರಂಭಿಸಿದ ಅನುಭವಿ ಉತ್ತಪ್ಪ 104 ಎಸೆತಗಳಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 104 ರನ್ ಕಲೆ ಹಾಕಿದರು. ಲಿಸ್ಟ್ ‘ಎ’ ಪಂದ್ಯದಲ್ಲಿ ಉತ್ತಪ್ಪ ಗಳಿಸಿದ 12ನೇ ಶತಕ ಇದು. ಮೊದಲ ವಿಕೆಟ್ಗೆ ಈ ಜೋಡಿ 85 ರನ್ ಗಳಿಸಿ ಉತ್ತಮ ಆರಂಭ ಒದಗಿಸಿತು.
ಆಂಧ್ರ ಮತ್ತು ಹೈದರಾಬಾದ್ ಎದುರಿನ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ರಾಹುಲ್ (51, 65ಎಸೆತ, 1ಬೌಂಡರಿ, 1 ಸಿಕ್ಸರ್) ಅರ್ಧಶತಕ ಗಳಿಸಿ ತಮ್ಮ ಹಿಂದಿನ ವೈಫಲ್ಯ ವನ್ನು ಮೆಟ್ಟಿನಿಂತರು. ಮನೀಷ್ ಪಾಂಡೆ 39 ರನ್ ಗಳಿಸಿದರೆ, ಕರುಣ್ ನಾಯರ್ ಕೇವಲ 35 ಎಸೆತಗ ಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಒಳಗೊಂಡಂತೆ 60 ರನ್ ಗಳಿಸಿ ಅಬ್ಬರಿಸಿದರು.
ಪರದಾಡಿದ ಕೇರಳ: ಆರಂಭದಲ್ಲಿ ವಿಕೆಟ್ ಕಳೆದು ಕೊಂಡು ಪರದಾಡಿದ ಕೇರಳ ತಂಡ ಆತಿಥೇಯರ ಬೌಲಿಂಗ್ ಎದುರಿಸಲು ಪರದಾಡಿತು. ರೋಹನ್ ಪ್ರೇಮ್ (103, 100ಎಸೆತ, 10ಬೌಂಡರಿ, 1ಸಿಕ್ಸರ್) ಶತಕ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಷ್ಟು ಹೋರಾಟ ನಡೆಸಿದರು. ಆದರೆ, ಉಳಿದ ಬ್ಯಾಟ್ಸ್ಮನ್ಗಳಿಂದ ಬೆಂಬಲ ಲಭಿಸಲಿಲ್ಲ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಉರುಳಿಸಿದ್ದ ನಾಯಕ ವಿನಯ್ ಕುಮಾರ್ ಕೇರಳ ವಿರುದ್ಧವೂ ಪ್ರಾಬಲ್ಯ ಮೆರೆದರು.
ವಿನಯ್ ಮತ್ತೊಮ್ಮೆ ಐದು ವಿಕೆಟ್ ಪಡೆದರೆ, ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಪಂದ್ಯ ಆಡುತ್ತಿರುವ ಎಚ್.ಎಸ್. ಶರತ್ ಒಂದು ವಿಕೆಟ್ ಕಬಳಿಸಿದರು. ಎಸ್. ಅರವಿಂದ್ (46ಕ್ಕೆ2) ಮತ್ತು ಸಾಂದರ್ಭಿಕ ಬೌಲರ್ ಅಮಿತ್ ವರ್ಮ (34ಕ್ಕೆ2) ಕೇರಳದ ಬ್ಯಾಟ್ಸ್ಮನ್ಗಳನ್ನು ಕಾಡಿದರು.
ಇಂದು ಗೋವಾ ಎದುರು ಸೆಣಸಾಟ: ಆಲೂರು ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ವಿನಯ್ ಪಡೆ ಗೋವಾದ ಎದುರು ಪೈಪೋಟಿ ನಡೆಸಲಿದೆ. ಆದಿತ್ಯ ಅಕಾಡೆಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ತಮಿಳುನಾಡು ತಂಡ ಹೈದರಾಬಾದ್ ವಿರುದ್ಧ 125 ರನ್ ಗೆಲುವು ಸಾಧಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಆಂಧ್ರ ತಂಡ ಗೋವಾದ ಎದುರು ನಾಲ್ಕು ವಿಕೆಟ್ಗಳ ಜಯವನ್ನು ತನ್ನದಾಗಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ 50 ಓವರ್ಗಳಲ್ಲಿ 5 ವಿಕೆಟ್ಗೆ 317. (ರಾಬಿನ್ ಉತ್ತಪ್ಪ 104, ಮಯಂಕ್ ಅಗರವಾಲ್ 39, ಕೆ.ಎಲ್. ರಾಹುಲ್ 51, ಮನೀಷ್ ಪಾಂಡೆ 39, ಕರುಣ್ ನಾಯರ್ 60, ಅಮಿತ್ ವರ್ಮ ಔಟಾಗದೆ 10; ಪ್ರಶಾಂತ್ ಪರಮೇಶ್ವರನ್ 57ಕ್ಕೆ2, ಸಿ. ಶಾಹಿದ್ 56ಕ್ಕೆ1, ಪದ್ಮನಾಭನ್ ಪ್ರಶಾಂತ್ 52ಕ್ಕೆ1).
ಕೇರಳ 46.2 ಓವರ್ಗಳಲ್ಲಿ 213. (ವಿ.ಎ. ಜಗದೀಶ್ 22, ರೋಹನ್ ಪ್ರೇಮ್ 103, ಸಂಜು ಸಾಮ್ಸನ್ 14, ರಾಬರ್ಟ್ ಫೆರ್ನಾಂಡಿಸ್ 32, ಪ್ರಶಾಂತ್ ಪರಮೇಶ್ವರನ್ 13). ಫಲಿತಾಂಶ: ಕರ್ನಾಟಕಕ್ಕೆ 104 ರನ್ ಜಯ ಮತ್ತು ನಾಲ್ಕು ಪಾಯಿಂಟ್.
ಗೋವಾ 50 ಓವರ್ಗಳಲ್ಲಿ 6 ವಿಕೆಟ್ಗೆ 268. (ಸುಗಣ್ ಕಾಮತ್ 65, ಹನುಮಂತ್ ಗಾಡೇಕರ್ 61, ಕೆನನ್ ವಾಜ್ 29, ರಾಹುಲ್ ಕೇಣಿ 43, ಅಮಿತ್ ಯಾದವ್ ಔಟಾಗದೆ 40; ಡಿ.ಪಿ. ವಿಜಯ್ ಕುಮಾರ್ 64ಕ್ಕೆ2, ಅಚುಂತಾ ರಾವ್ 43ಕ್ಕೆ2, ಡಿ.ಬಿ. ಪ್ರಶಾಂತ್ 29ಕ್ಕೆ1).
ಆಂಧ್ರ 48.4 ಓವರ್ಗಳಲ್ಲಿ 6 ವಿಕೆಟ್ಗೆ 272. (ಡಿ.ಬಿ. ಪ್ರಶಾಂತ್ 90, ಬಿ. ಸುಮಂತ್ 13, ರಿಕಿ ಭುಯೆ ಔಟಾಗದೆ 103, ಡಿ. ಸ್ವರೂಪ್ ಕುಮಾರ್ ಔಟಾಗದೆ 27; ಅಮಿತ್ ಯಾದವ್ 45ಕ್ಕೆ3).
ಫಲಿತಾಂಶ: ಆಂಧ್ರಕ್ಕೆ 4 ವಿಕೆಟ್ ಜಯ.
ತಮಿಳುನಾಡು 45 ಓವರ್ಗಳಲ್ಲಿ 4 ವಿಕೆಟ್ಗೆ 280 (ಮುರಳಿ ವಿಜಯ್ 90, ಬಾಬಾ ಅಪರಾಜಿತ್ 91, ಎಸ್. ಅನಿರುದ್ಧ್ ಔಟಾಗದೆ 29; ತಿರುಮಲಶೆಟ್ಟಿ ಸುಮನ್ 21ಕ್ಕೆ1).
ಹೈದರಾಬಾದ್ 35.5 ಓವರ್ಗಳಲ್ಲಿ 155. (ಅಕ್ಷತ್ ರೆಡ್ಡಿ 42, ಹನುಮ ವಿಹಾರಿ 24, ಆಶಿಶ್ ರೆಡ್ಡಿ ಔಟಾಗದೆ 40; ಲಕ್ಷ್ಮಿಪತಿ ಬಾಲಾಜಿ 27ಕ್ಕೆ3, ರಾಹಿಲ್ ಷಾ 32ಕ್ಕೆ3).
ಫಲಿತಾಂಶ: ತಮಿಳುನಾಡಿಗೆ 125 ರನ್ ಗೆಲುವು.
ಇಂದಿನ ಪಂದ್ಯಗಳು
* ಆಂಧ್ರ–ಹೈದರಾಬಾದ್ (ಚಿನ್ನಸ್ವಾಮಿ)
* ಕರ್ನಾಟಕ–ಗೋವಾ (ಆಲೂರು–3)
* ತಮಿಳುನಾಡು–ಕೇರಳ (ಆದಿತ್ಯ)
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.