ಬುಧವಾರ, ಜೂನ್ 23, 2021
30 °C
ಮುರುಘಾಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ

ಉತ್ತಮ ಬಾಳಸಂಗಾತಿ ಆಯ್ಕೆ ಮಹತ್ವದ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಯುವಕರು ಜೀವನದಲ್ಲಿ ಉತ್ತಮ ಸಂಗಾತಿ ಹುಡುಕುವುದು ಕೂಡ ಮಹತ್ವದ ಕೆಲಸ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಕಿವಿಮಾತು ಹೇಳಿದರು.ನಗರದ ಮುರುಘಾಮಠದಲ್ಲಿ ಬುಧವಾರ ನಡೆದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಧು-ವರರಿಗೆ ವಿವಾಹ ಪವಿತ್ರ ದಿನ. ಈ ನಿಟ್ಟಿನಲ್ಲಿ ಕುಡುಕ, ಕೆಡುಕ ಹಾಗೂ ಕಿಡಿಗೇಡಿ ಮನೋಭಾವವುಳ್ಳ ಪತಿಯನ್ನು ಯುವತಿಯರು ಹುಡುಕಬೇಡಿ. ಉತ್ತಮ ಗುಣವುಳ್ಳ ಪತಿಯನ್ನು ಹುಡುಕಿ ಎಂದು ಸಲಹೆ ನೀಡಿದರು.ಗುಲ್ಬರ್ಗ ಜಿಲ್ಲೆ ಖಜೂರಿಯ ಕೋರಣ್ಯೇಶ್ವರ ವಿರಕ್ತಮಠದ ಮುರುಘೇಂದ್ರ ಕೋರಣ್ಯೇಶ್ವರ ಸ್ವಾಮೀಜಿ ಮಾತನಾಡಿ, ಆಧುನಿಕ ಅನುಭವ ಮಂಟಪ ನಿರ್ಮಿಸಿ ಅಲ್ಲಮಪ್ರಭುಗಳ ಹಾಗೆ ಮುರುಘಾ ಶರಣರು ಆಶೀರ್ವದಿಸುತ್ತಿದ್ದಾರೆ.ಜನಕಲ್ಯಾಣ, ಮನಕಲ್ಯಾಣ ಹಾಗೂ ದೀನ, ದಲಿತರಿಗೆ ಸ್ಪಂದಿಸುತ್ತಾ ಮುರುಘಾಮಠ ಉತ್ತಮ ಕಾರ್ಯಕ್ರಮ ಮಾಡುತ್ತಿದೆ ಎಂದರು.ಹರಿಹರ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಬಡವರು, ಶೋಷಿತರು, ಎಲ್ಲ ವರ್ಗದವರಿಗೆ ಮುರುಘಾಮಠ ಬದುಕಿನ ದಾರಿತೋರಿಸುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದರು.ಶ್ರೀಮಂತರಿಗೆ ಮದುವೆ ಪ್ರತಿಷ್ಠೆಯ ಸಂಕೇತ. ಆದರೆ, ಮದುವೆ ಎನ್ನುವುದು ಬದುಕಿನ ಪ್ರಶ್ನೆ. ನಮಗೆ ಬದುಕಿನ ಮಾರ್ಗದರ್ಶನ ಸಿಗುತ್ತದೆ ಎನ್ನುವುದಾದರೆ, ಅದು ಮುರುಘಾಮಠದಲ್ಲಿ ಮಾತ್ರ. ಭೂಮಿ ಮೇಲಿರುವ ಎಲ್ಲರಿಗೂ ಇಲ್ಲಿ ಅವಕಾಶ ಇದೆ. ಸರ್ವರಿಗೆ ಸಮಬಾಳು ಎನ್ನುವ ತತ್ವದಡಿ ಇಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಮಾದರಿಯಾಗಿದೆ ಎಂದರು.ರಾಷ್ಟ್ರದಲ್ಲಿ ಹಲವಾರು ಮಠ-ಮಾನ್ಯಗಳು ಅಕ್ಷರದಾಸೋಹ ಮತ್ತು ಅನ್ನದಾಸೋಹ ಮಾಡುತ್ತಿವೆ. ಆದರೆ, ಮುರುಘಾಮಠ ಅದರೊಟ್ಟಿಗೆ ಪ್ರತಿ ತಿಂಗಳು ಸಾಮೂಹಿಕ ವಿವಾಹ ಮಾಡುತ್ತಿರುವುದು ಸಂತಸದ ಸಂಗತಿ. ಇಂತಹ ದೊಡ್ಡ ಅನುಭವ ಮಂಟಪ ಮಧ್ಯಕರ್ನಾಟಕದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಈಚೆಗೆ ಶ್ರೀಮಂತರು ಸಹ ಸಾಮೂಹಿಕ ವಿವಾಹದತ್ತ ಆಕರ್ಷಿತರಾಗುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡುವುದು ಮುಖ್ಯ ವಲ್ಲ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಿಕ್ಷಿತರನ್ನಾಗಿ ಮಾಡುವುದು ಮುಖ್ಯ ಎಂದರು.ಈ ಸಂದರ್ಭದಲ್ಲಿ ೩೧ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಾವಣಗೆರೆಯ ಜಯಶೀಲಾ, ಎಂ.ಕೆ. ಪ್ರಕಾಶ್, ಪೈಲ್ವಾನ್ ತಿಪ್ಪೇಸ್ವಾಮಿ, ವೀರೇಂದ್ರ ಕುಮಾರ್, ಕೇಶವ ಮೂರ್ತಿ, ತಿಪ್ಪಣ್ಣ, ಷಡಾಕ್ಷರಯ್ಯ  ಇದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ.ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.