ಸೋಮವಾರ, ಆಗಸ್ಟ್ 3, 2020
23 °C

ಉತ್ತಮ ಮಳೆ: ರಸ್ತೆಗಳೆಲ್ಲಾ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತಮ ಮಳೆ: ರಸ್ತೆಗಳೆಲ್ಲಾ ಜಲಾವೃತ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಳ್ಳಾರಿ ಜಿಲ್ಲೆ ಸೇರಿದಂತೆ ವಿವಿಧೆಡೆ ಸೋಮವಾರ ಮಳೆ ಸುರಿದಿದೆ. ಬೆಳಗಾವಿಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದರಿಂದ ರಸ್ತೆಗಳು ಜಲಾವೃತವಾಗಿದ್ದವು. ಇದರಿಂದ ಸಂಚಾರಕ್ಕೂ ಅಡಚಣೆಯಾಯಿತು. ಧಾರವಾಡದಲ್ಲೂ ಧಾರಾಕಾರವಾಗಿ ಮಳೆ ಸುರಿಯಿತು. ಮಳೆಯಲ್ಲೇ ಮಕ್ಕಳು ಫುಟ್‌ಬಾಲ್ ಆಡುತ್ತಿದ್ದ ನೋಟ ಮೋಜು ತರಿಸಿತು.

ಧಾರವಾಡದಲ್ಲಿ ಬೆಳಗಿನಿಂದಲೇ ಕಪ್ಪು ಮೋಡ ದಟ್ಟೈಸಿತ್ತು. ಮಧ್ಯಾಹ್ನದ ವೇಳೆಗೆ ಮಳೆಯ ಆಗಮನವೂ ಆಯಿತು. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಹುಬ್ಬಳ್ಳಿ ಆಗಸದಲ್ಲಿ ಮೋಡ  ತೇಲಾಡಿದರೂ ಆಗಾಗ ತುಂತುರು ಹನಿ ಬಿಟ್ಟರೆ ಮಳೆ ಸುರಿಯಲಿಲ್ಲ.

ವಿಜಾಪುರ ಪಟ್ಟಣ, ತಾಳಿಕೋಟೆ ಹಾಗೂ ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ಮಳೆಯಾಗಿದೆ.

ಬೆಳಗಾವಿ ವರದಿ:  ಬೆಳಗಾವಿಯಲ್ಲಿ  ಮುಂಗಾರು ಹಂಗಾಮಿನಲ್ಲಿ ಪ್ರಥಮ ಬಾರಿಗೆ ಭಾರಿ ಮಳೆಯಾಯಿತು. 

ಮಧ್ಯಾಹ್ನ 12ಕ್ಕೆ ಆರಂಭವಾದ ಮಳೆ 45 ನಿಮಿಷಗಳವರೆಗೆ ನಿರಂತರವಾಗಿ ಸುರಿಯಿತು. ಮಧ್ಯಾಹ್ನ ಮತ್ತೆ ಮಳೆ ಸುರಿಯಿತು. ಬಹುತೇಕ ತೆರೆದ ಚರಂಡಿಗಳು ತುಂಬಿಕೊಂಡು ರಸ್ತೆ ಮೇಲೆ ನೀರು ಹರಿಯಿತು. ಕೆಲವೊಂದು ಪ್ರದೇಶಗಳಲ್ಲಿ ಮಕ್ಕಳು ನೀರಿನಲ್ಲಿ ಕುಣಿದು ಕುಪ್ಪಳಿಸಿದರು.

ಭಾನುವಾರದಿಂದ ಸೋಮವಾರ ಬೆಳಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 85.9 ಮಿ.ಮೀ. ಮಳೆಯಾಗಿದೆ. ಖಾನಾಪುರ ತಾಲ್ಲೂಕಿನಲ್ಲಿ 35.8 ಮಿ.ಮೀ, ರಾಮದುರ್ಗದಲ್ಲಿ 20.4 ಮಿ.ಮೀ ಮಳೆ ಸುರಿದಿದೆ.

ಬಳ್ಳಾರಿ ವರದಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಮಳೆಯಾಗಿದೆ. ಸೋಮವಾರ ಬೆಳಿಗ್ಗೆ 8.30ರವರೆಗೆ ಬಳ್ಳಾರಿ ತಾಲ್ಲೂಕಿನಲ್ಲಿ ಅತ್ಯಧಿಕ 17 ಮಿ.ಮೀ ಮಳೆಯಾಗಿದ್ದು, ಹೂವಿನ ಹಡಗಲಿಯಲ್ಲಿ 11.8, ಹಗರಿ ಬೊಮ್ಮನಹಳ್ಳಿಯಲ್ಲಿ 10.8, ಹೊಸಪೇಟೆಯಲ್ಲಿ 10.2, ಕೂಡ್ಲಿಗಿಯಲ್ಲಿ 7.5, ಸಂಡೂರಿನಲ್ಲಿ 10.4, ಸಿರುಗುಪ್ಪದಲ್ಲಿ 3.2 ಮಿ.ಮೀ ಮಳೆ ಸುರಿದಿದೆ.

ಗದಗ: ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬೆಳಿಗ್ಗೆ ಸ್ವಲ್ಪ ಹೊತ್ತು ತುಂತುರು ಮಳೆಯಾಯಿತು. ಸಂಜೆ 4 ಗಂಟೆಗೆ ಜೋರಾಗಿ ಮಳೆ ಸುರಿಯಿತು. ರಸ್ತೆ ತುಂಬ ನೀರು ನಿಂತಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ನೆನೆದುಕೊಂಡು ಮನೆಗೆ ಹೋದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.