ಬುಧವಾರ, ಜುಲೈ 28, 2021
26 °C

ಉತ್ತಮ ಶೈಕ್ಷಣಿಕ ಸಾಧನೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಸರ್ಕಾರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶೇ 7.25ರ ಅಡಿಯಲ್ಲಿ ಕೊಡಮಾಡುವ ಪ್ರೋತ್ಸಾಹಧನದ ಸದುಪಯೋಗ ಪಡೆದುಕೊಂಡು ಉತ್ತಮ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಪುರಸಭೆ ಅಧ್ಯಕ್ಷೆ ಪಿ. ಶಂಷಾದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಚಳ್ಳಕೆರೆ ಪಟ್ಟಣದ ಪುರಸಭೆಯಲ್ಲಿ ಶನಿವಾರ ಹಿಂದುಳಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ಸಹಾಯಧನ ವಿತರಿಸಿ ಅವರು ಮಾತನಾಡಿದರು.ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಬೇಕೆಂಬ ಅದಮ್ಯ ಉತ್ಸಾಹ ಇರುವ ವಿದ್ಯಾರ್ಥಿಗಳಿಗೆ ಬಡತನದ ಕಾರಣದಿಂದ ಉನ್ನತ ಶಿಕ್ಷಣ ಸಾಧ್ಯವಾಗುವುದಿಲ್ಲ. ಇದನ್ನರಿತ ರಾಜ್ಯ ಸರ್ಕಾರ ಹಿಂದುಳಿದ ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸಹಾಯಧನ ನೀಡುತ್ತಿದೆ ಎಂದು ವಿವರಿಸಿದರು.ಪ್ರಸಕ್ತ ಸಾಲಿನಲ್ಲಿ ಶೇ 7.25 ಅನುದಾನದ ಅಡಿಯಲ್ಲಿ ಒಟ್ಟು 3.54 ಲಕ್ಷ ಹಣ ವಿದ್ಯಾರ್ಥಿ ಸಹಾಯಧನಕ್ಕಾಗಿ ಬಿಡುಗಡೆ ಮಾಡಲಾಗಿದೆ. ಪದವಿ ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಎರಡು ಸಾವಿರ, ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಐದು ಸಾವಿರ, ಸಂಶೋಧನಾ ವಿದ್ಯಾರ್ಥಿಗಳಿಗೆ ` 15 ಸಾವಿರ, ವೃತ್ತಿಪರ ಕೋರ್ಸ್‌ಗಳಿಗೆ ` 10 ಸಾವಿರ ಸಹಾಯಧನ ವಿತರಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಹಾಜರಿದ್ದ ಸ್ನಾತಕೋತ್ತರ ಪದವಿ ಪಡೆಯುತ್ತಿರುವ 4 ವಿದ್ಯಾರ್ಥಿಗಳಿಗೆ ಹಾಗೂ ಪದವಿ ಪಡೆಯುತ್ತಿರುವ 4ಜನ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ಅನ್ನು ವಿತರಿಸಿದರು.ಪುರಸಭೆ ಮುಖ್ಯಾಧಿಕಾರಿ ರಾಮಪ್ಪ, ಪುರಸಭೆ ಉಪಾಧ್ಯಕ್ಷೆ ಶೋಭಾ ಜಗದೀಶ್, ವ್ಯವಸ್ಥಾಪಕ ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು. ಸೌಲಭ್ಯಕ್ಕೆ ಆಗ್ರಹ

ಹಿರಿಯೂರು:
ನಗರದ 7 ನೇ ವಾರ್ಡ್‌ನಲ್ಲಿ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸದೆ ತಾರತಮ್ಯ ಮಾಡಲಾಗಿದೆ ಎಂದು ಬಡಾವಣೆ ನಿವಾಸಿಗಳಾದ ಎಂ. ತಿಪ್ಪೇಸ್ವಾಮಿ, ಎಲ್. ಅಬ್ಬಾಸ್, ಎನ್. ರಾಘು, ರಿಜ್ವಾನ್ ಮತ್ತಿತರರು ಆರೋಪಿಸಿದ್ದಾರೆ.ಬಡಾವಣೆಯಲ್ಲಿ ಹತ್ತು ವರ್ಷದ ಹಿಂದೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ನಿವಾಸಿಗಳಿಗೆ ಇನ್ನೂ ಬಿಟ್ಟುಕೊಟ್ಟಿಲ್ಲ. ಮಹಿಳೆಯರು ಈಗಲೂ ಶೌಚಕ್ರಿಯೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ಚರಂಡಿ-ರಸ್ತೆ ಕಾಮಗಾರಿಗಳು ಇಲ್ಲಿ ಕಾಣುವುದೇ ಇಲ್ಲ. ಹಲವು ಬಾರಿ ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ತಮ್ಮ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ನಿವಾಸಿಗಳು ಒತ್ತಾಯ ಮಾಡಿದ್ದಾರೆ.ಬದಲಾವಣೆ

ಮೊಳಕಾಲ್ಮುರು:
ಪಕ್ಷದ ಬಲವರ್ಧನೆ ದೃಷ್ಟಿಯಿಂದಾಗಿ ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಪಕ್ಷದ ಕ್ಷೇತ್ರಾಧ್ಯಕ್ಷ ಪಿ.ಇ. ವೆಂಕಟಸ್ವಾಮಿ ತಿಳಿಸಿದ್ದಾರೆ.ನೂತನವಾಗಿ ಮಲ್ಲೂರಹಳ್ಳಿಯ ಕೆ. ವೆಂಕಟೇಶ್ ಹಾಗೂ ಕಾಟನಾಯಕನಹಳ್ಳಿಯ ಬಿ. ಭೀಮಣ್ಣ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಹಾಗೂ ಕ್ಷೇತ್ರ ಉಪಾಧ್ಯಕ್ಷರಾಗಿ ಕರಿಯಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.