ಗುರುವಾರ , ಸೆಪ್ಟೆಂಬರ್ 19, 2019
26 °C

ಉತ್ತರಾಖಂಡ: ನಿಶಾಂಕ್ ರಾಜೀನಾಮೆ, ಖಂಡೂರಿ ಪ್ರಮಾಣವಚನ

Published:
Updated:

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದಲ್ಲಿ ಮುಖ್ಯಮಂತ್ರಿ ರಮೇಶ ಪೋಖ್ರಿಯಾಲ್ ನಿಶಾಂಕ್ ಅವರು ರಾಜೀನಾಮೆ ನೀಡಿದ್ದು, ಬಿ.ಸಿ. ಖಂಡೂರಿ ಅವರು ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಖಂಡೂರಿ ಅವರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ನಿಶಾಂಕ್ ಅವರು ಪಕ್ಷದ ಕೆಲವು ನಾಯಕರೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.ಚುನಾವಣೆ ಸನಿಹದಲ್ಲೇ ಇರುವ ಹಿನ್ನೆಲೆಯಲ್ಲಿ ಉತ್ತರಾ ಖಂಡದಲ್ಲಿ  ಕುಸಿಯುತ್ತಿರುವ ಪಕ್ಷದ ವರ್ಚಸ್ಸನ್ನು ಸುಧಾರಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ 76ರ ಹರೆಯದ ಮಾಜಿ ಮುಖ್ಯಮಂತ್ರಿ ಖಂಡೂರಿ ಅವರು ನಿಶಾಂಕ್ ಸ್ಥಾನಕ್ಕೆ ಏರಲಿದ್ದಾರೆ ಎಂದು ಬಿಜೆಪಿ ಶನಿವಾರ ಪ್ರಕಟಿಸಿತ್ತು.ರಾಜೀನಾಮೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಿಶಾಂಕ್ ~ನಾನು ಪಕ್ಷದ ಕಾರ್ಯಕರ್ತ. ಪಕ್ಷವು ನಾನೇನು ಮಾಡಬೇಕು ಎಂದು ಬಯಸುವುದೋ ಅದನ್ನು ಮಾಡುತ್ತೇನೆ~ ಎಂದು ಹೇಳಿದರು.ದೆಹಲಿಯಲ್ಲಿ ನಡೆದ ದೀರ್ಘಕಾಲದ ಸಮಾಲೋಚನೆಗಳ ಬಳಿಕ ಬಿಜೆಪಿ ವರಿಷ್ಠರು, ಸರ್ಕಾರದ ವಿರುದ್ಧದ ಹಲವಾರು ಹಗರಣಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ನಿಶಾಂಕ್ ಮನ ಒಲಿಸಿದರು.ಉತ್ತರಾಖಂಡದಲ್ಲಿ ಬರಲಿರುವ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ನಾಯಕತ್ವ ಬದಲಾಯಿಸಲು ಬಿಜೆಪಿ ತೀರ್ಮಾನಿಸಿದೆ. ಖಂಡೂರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು 4 ಗಂಟೆಗಳ ಸುದೀರ್ಘ ಮಾತುಕತೆಗಳ ಬಳಿಕ ಶನಿವಾರ ಪ್ರಕಟಿಸಿದ್ದರು.

Post Comments (+)