ಶುಕ್ರವಾರ, ಮೇ 7, 2021
24 °C

ಉಪಕಾರ ಸ್ಮರಣೆ ಮರೆತ ಜನ: ಭೈರಪ್ಪ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಸಮಾಜಸೇವೆ ಮಾಡಬೇಕಾದರೆ ಹಣವೊಂದೇ ಮುಖ್ಯವಲ್ಲ. ಹಣವಿಲ್ಲದೇ ಬಡವರಾಗಿಯೂ ಸಮಾಜ ಸೇವೆ ಮಾಡಬಹುದು ಎಂಬುದನ್ನು ತಾತಯ್ಯ ತೋರಿಸಿಕೊಟ್ಟಿದ್ದಾರೆ~ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಭಾನುವಾರ ಹೇಳಿದರು.ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ದಿವಂಗತ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ವಿಚಾರ ವೇದಿಕೆ, ಅನಾಥಾಲಯ ಹಾಗೂ ಶಾರದ ವಿಲಾಸ ವಿದ್ಯಾಸಂಸ್ಥೆಯ ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ತಾತಯ್ಯ ನವರ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು.`ಟಾಟಾ, ಬಿಲ್‌ಗೇಟ್ಸ್, ಇನ್ಫೋಸಿಸ್ ಮುಂತಾದ ಸಂಸ್ಥೆಗಳಲ್ಲಿ ಸಾಕಷ್ಟು ಹಣವಿದೆ. ಅವರು ಸಮಾಜಸೇವೆ ಮಾಡುವುದು ದೊಡ್ಡ ಸಾಧನೆಯಲ್ಲ. ಬಡತನದಲ್ಲಿ ಬೆಳೆದು, ತಮ್ಮ ಅಸಾಧಾರಣ ವ್ಯಕ್ತಿತ್ವದಿಂದ ಸಮಾಜಸೇವೆ ಮಾಡುವುದು ದೊಡ್ಡ ಸಾಧನೆ. ತಾತಯ್ಯ ಅವರ ವ್ಯಕ್ತಿತ್ವ ಅರ್ಥ ಮಾಡಿಕೊಂಡರೆ ಸಾಕು ಬಡವನಾದವನೂ ಸಮಾಜಸೇವೆ ಮಾಡಬಹುದು. ಅಣ್ಣಾ ಹಜಾರೆ ತಾತಯ್ಯ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ~ ಎಂದರು.`ಮರಿಮಲ್ಲಪ್ಪ ಶಾಲೆ, ಶಾರದ ವಿಲಾಸ, ಅನಾಥಾಲಯ ಇನ್ನಿತರೆ ಸಂಸ್ಥೆಗಳನ್ನು ಕಟ್ಟಿದವರು ತಾತಯ್ಯ. ಅನಾಥಾಲಯದ ಮೇಲೆ ಇರುವ ಪ್ರೀತಿ ಬೇರೆ ಯಾವ ಸಂಸ್ಥೆಗಳಲ್ಲೂ ಇಲ್ಲ. ಅನಾಥಾಲಯದಲ್ಲಿ ಇದ್ದಾಗ ತಾತಯ್ಯನವರ ಜೀವನ ಚರಿತ್ರೆ ಬರೆಯಬೇಕು ಎಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ವ್ಯಕ್ತಿಯ ದೊಡ್ಡತನ ನೋಡಬೇಕು ಎಂದರೆ ಬಡತನವನ್ನು ಅಪ್ಪಿಕೊಂಡವರ ಸಾಧನೆ ನೋಡಬೇಕು. ತಾತಯ್ಯ ಹಲವು ಪ್ರಾಮಾಣಿಕ ವ್ಯಕ್ತಿಗಳನ್ನು ಮುಂದೆ ತಂದಿದ್ದಾರೆ~ ಎಂದು ಹೇಳಿದರು.ಮೈಸೂರಿನ ಮರಿಮಲ್ಲಪ್ಪ ಸಂಸ್ಥೆ ಈಚೆಗೆ ಶತಮಾನೋತ್ಸವ ಆಚರಿಸಿಕೊಂಡಿತು. ಕೆಲವು ಪತ್ರಿಕೆಗಳಲ್ಲಿ ಅವರ ಕುರಿತು ಲೇಖನಗಳು ಪ್ರಕಟವಾದವು. ಆದರಲ್ಲಿ ಸಂಸ್ಥೆ ಹುಟ್ಟಿದ ಬಗೆ ಹೇಗೆ ಎಂಬುದರಲ್ಲಿ ತಾತಯ್ಯ ಅವರ ಹೆಸರೇ ಇಲ್ಲ. ಜನಗಳ ಮನಸ್ಸು ಅಷ್ಟೇ. ನಮಗೆ ಉಪಕಾರ ಸ್ಮರಣೆ ಇಲ್ಲ. ಇತಿಹಾಸವೆಂದರೆ ದೇಶದ, ರಾಜ್ಯದ ಇತಿಹಾಸವೇ ಆಗಬೇಕಿಲ್ಲ. ಒಂದು ಮನೆತನದ ಇತಿಹಾಸವೇ ಆಗಿರಬಹುದು ಎಂದರು.ಅನಾಥಾಲಯದ ವೆಬ್‌ಸೈಟ್‌ಗೆ ಚಾಲನೆ ನೀಡಿದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಮಾತನಾಡಿ `ಇಂದು ಪತ್ರಿಕೆಗಳಲ್ಲಿ ಮುಖ್ಯವಲ್ಲದ್ದು, ಪ್ರಮುಖ ಸುದ್ದಿಯಾಗ ಬಹುದು. ಪ್ರಮುಖ ಸುದ್ದಿಯೇ ಮುಖ್ಯವಾಗದೆಯೇ ಉಳಿಯಬಹುದು. ಇಂದಿನ ಪತ್ರಕರ್ತರಿಗೆ ತಾತಯ್ಯ ಮಾದರಿ. ಅವರು ನಿಜವಾದ ದಂತಕತೆ.  ಅಂದಿನ ಸಮಸ್ಯೆಗಳಿಗೆ ರೋಗ ನಿರೋಧಕವಾಗಿ ಕೆಲಸ ಮಾಡಿದವರು~ ಎಂದರು.ಉದ್ಯಮಿ ಆರ್.ಗುರು, ಶಾರದವಿಲಾಸ ಶಿಕ್ಷಣ ಸಂಸ್ಥೆಯ ಜಿ.ನಾರಾಯಣರಾವ್ ವೇದಿಕೆಯಲ್ಲಿದ್ದರು. ಅನಾಥಾಲಯದ ಹಳೆಯ ವಿದ್ಯಾರ್ಥಿಗಳಾದ  ಡಾ.ಜಿ.ರಾಮಕೃಷ್ಣ, ಎಚ್.ಕೆ.ಲಕ್ಷ್ಮಣರಾವ್, ಸಿ.ವಿ.ಗೋಪಿನಾಥ್, ವೆಬ್‌ಸೈಟ್ ನಿರೂಪಿಸಿದ ರಾಮಚಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.