ಗುರುವಾರ , ಜೂನ್ 17, 2021
21 °C

ಉರ್ದು ಭಾಷೆಗೆ ತಾತ್ಸಾರ ಬೇಡ: ರಾಜ್ಯಪಾಲ ಎಚ್.ಆರ್.ಭಾರದ್ವಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಯಾವುದೋ ಒಂದು ಧರ್ಮಕ್ಕೆ ಉರ್ದು ಭಾಷೆಯನ್ನು ಸಂಕುಚಿತಗೊಳಿಸುವುದು ಸರಿಯಲ್ಲ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಉರ್ದು ಭಾಷೆ ಬಗ್ಗೆ ಇರುವ ತಾತ್ಸಾರ ಮನೋಭಾವ ತೊಡೆದು ಹಾಕಿ, ಕಡ್ಡಾಯ ಕಲಿಕೆಗೆ ಒತ್ತು ನೀಡಬೇಕು~ ಎಂದು  ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮನವಿ ಮಾಡಿದರು.

ಕರ್ನಾಟಕ ಉರ್ದು ಅಕಾಡೆಮಿಯು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ `ಉರ್ದು ಕಥೆ ಮತ್ತು ಕವಿತೆ~ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಉರ್ದು ಭಾಷೆಯ ಜನ್ಮ ಸ್ಥಳ ಭಾರತ. ರಾಜಕೀಯ ಲಾಭಕ್ಕಾಗಿ ಈ ಭಾಷೆಯನ್ನು ಕೇವಲ ಮುಸ್ಲಿಂ ಸಮುದಾಯಕ್ಕೆ ಸಂಕುಚಿತಗೊಳಿಸುತ್ತಿರುವುದು ನಿಜಕ್ಕೂ ಖೇದನೀಯ~ ಎಂದ ಅವರು, `ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಉರ್ದು ಭಾಷೆಯ ಕೊಡುಗೆ ಅಪಾರ. ಲೇಖಕರು, ಕವಿಗಳು, ಸಾಹಿತಿಗಳು ಉರ್ದು ಭಾಷೆಯಲ್ಲಿ ಉತ್ತಮ ಕೃತಿಗಳನ್ನು ರಚಿಸಿದ್ದು, ಉರ್ದು ಭಾಷೆ ಇಡೀ ದೇಶದ ಆಸ್ತಿಯಾಗಬೇಕೇ ಹೊರತು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು.

`ಭಾಷೆ ಮತ್ತು ಸಾಹಿತ್ಯದ ವಿಚಾರದಲ್ಲಿ ಬೆಳೆಯುವ ಸಂಕುಚಿತ ಮನೋಭಾವವು ದೇಶದ ಅಭಿವೃದ್ಧಿಗೆ ಮಾರಕ. ಇದರಿಂದ ಜನರು ಹೊರ ಬಂದು ಸಂಪದ್ಭರಿತ ಸಾಹಿತ್ಯದ ಮೂಲಕ ದೇಶವನ್ನು ಕಟ್ಟಿ ಬೆಳೆಸಲು ಪಣ ತೊಡಬೇಕು~ ಎಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಪ್ರಭುದೇವ್, `ಬೆಂಗಳೂರು ವಿ.ವಿಯ ಉರ್ದು ವಿಭಾಗದ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿ.ವಿ.ಯು ಇಕ್ಬಾಲ್ ಮತ್ತು ಗಾಲಿಬ್ ಕವಿಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಚರ್ಚಿಸಿ ಅಂತಿಮರೂಪ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದು ಭರವಸೆ ನೀಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೈಯದ್ ಜಮೀರ್ ಪಾಷಾ ಇತರರು ಉಪಸ್ಥಿತರಿದ್ದರು.

`ಬಹಿಷ್ಕಾರ ಸಲ್ಲ~

`ವಕೀಲರು ತಮ್ಮ ಸಮಸ್ಯೆಯನ್ನು ಕಾನೂನಿನ ಮೂಲಕ ಪರಿಹರಿಸಿಕೊಳ್ಳಬೇಕೆ ವಿನಃ ಕೋರ್ಟ್‌ನ ಕಲಾಪಗಳನ್ನು ಬಹಿಷ್ಕರಿಸುವುದು ಸರಿಯಲ್ಲ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಆಕ್ಷೇಪಿಸಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಪ್ರತಿಭಟನೆಯ ನೆಪದಲ್ಲಿ ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಬಾರದು. ಈ ಬಗ್ಗೆ ನಾನು ಸಾಕಷ್ಟು ಬಾರಿ ಸಲಹೆ ನೀಡಿದ್ದರೂ ಅದನ್ನು ಪರಿಗಣಿಸಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.