ಸೋಮವಾರ, ಏಪ್ರಿಲ್ 19, 2021
25 °C

ಉಲ್ಲಾಸ ಆಯಾಸ : ಚಿತ್ರ: ಪ್ರೀತಿಯ ಲೋಕ

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ನಿರ್ಮಾಪಕ: ಮಾಧವ ರೆಡ್ಡಿ

ನಿರ್ದೇಶಕ: ನಂದನ್ ಪ್ರಭು

ತಾರಾಗಣ: ವಿನಯ್, ಅರ್ಚನಾ, ರಮೇಶ್ ಭಟ್, ಶಂಕರ್ ಅಶ್ವತ್ಥ್, ಬಿರಾದಾರ್, ಕುರಿಗಳು ಪ್ರತಾಪ್, ವಠಾರ ಮಲ್ಲೇಶ್, ಗುಬ್ಬಿ ಪ್ರಕಾಶ್, ಸುಷ್ಮಾ ರಾಜ್ ಮತ್ತಿತರರು.

ಒಂದೆಡೆ ಒಲವಿನ ಸಿಂಚನ ಮತ್ತೊಂದೆಡೆ ದುರಂತದ ಆಲಿಂಗನ. ಇವುಗಳ ನಡುವೆ `ಪ್ರೀತಿಯ ಲೋಕ~ದ ಪಯಣ. ಜತೆಗೆ ಇಲ್ಲಿ ಹಾಸ್ಯ, ದ್ವೇಷ, ವಾತ್ಸಲ್ಯ, ವಿರಹ ಮುಂತಾದ ಹಲವು ನಿಲ್ದಾಣಗಳಿವೆ.

 

ನಿರ್ದೇಶಕರ `ಬಸ್~ ಏರಿದರೆ ಆ ಎಲ್ಲ ತಾಣಗಳ ದರ್ಶನ ಸಾಧ್ಯ. ಚಿತ್ರವನ್ನು ಬಸ್ ಎಂದು ಕರೆಯಲು ಕಾರಣವೂ ಉಂಟು. ನಿರ್ದೇಶಕರು ವೃತ್ತಿಯಲ್ಲಿ ಬಸ್ ಕಂಡಕ್ಟರ್.ಚೇತು ಎಂಬ ಅನಾಥ ಹುಡುಗನಿಗೆ ಹೋಟೆಲ್ ನಡೆಸುವ ಕಾಯಕ. ಜತೆಗೆ ಒಂದಷ್ಟು ಗೆಳೆಯರ ಜೋಡಿ. ಹೀಗಿರುವಾಗ ಅನು ಎಂಬ ಶ್ರೀಮಂತ ಮನೆತನದ ಹುಡುಗಿಯ ಪರಿಚಯ. ಪರಿಚಯ ಪ್ರೇಮಕ್ಕೆ ತಿರುಗಲು ಹೆಚ್ಚು ಕಾಲ ಹಿಡಿಯದು.ಇದೇ ಹೊತ್ತಿಗೆ ಪ್ರೀತಿಗೆ ಅಡ್ಡಗಾಲಾಗಲು ಖಳನ (ನಂದನ್ ಪ್ರಭು) ಯತ್ನ. ಅನುವಿನ ಪ್ರೀತಿಗೆ ಹಾತೊರೆಯುತ್ತಿರುವ ಅತಿ ವಿನಯದ ಧೂರ್ತನೀತ. ಅನುವಿನ ತಂದೆ (ರಮೇಶ್ ಭಟ್) ಮಗಳ ಪ್ರೀತಿಯನ್ನು ಸಹಿಸುವುದಿಲ್ಲ. ಚೇತು ಒಳ್ಳೆಯವನಾದರೂ ಬಡವ ಎಂಬ ಕಾರಣಕ್ಕೆ ತಿರಸ್ಕೃತನಾಗುತ್ತಾನೆ. ವಿರಹದ ಬೇಗೆಯಲ್ಲಿ ಪ್ರೀತಿ ಬೇಯತೊಡಗುತ್ತದೆ.ನಿರ್ದೇಶಕರ `ಬಸ್~ನಲ್ಲಿ ಪ್ರೇಕ್ಷಕರಿಗೆ ಸುಖಕರ ಪಯಣ ಸಾಧ್ಯ ಎಂಬುದನ್ನು ಹೇಳುವಂತಿಲ್ಲ. ಏಕೆಂದರೆ ಚಿತ್ರದ ಮೊದಲರ್ಧದಲ್ಲಿ ಅವರ ಬಸ್ ಗೊತ್ತು ಗುರಿಯಿಲ್ಲದೆ ಸಾಗುತ್ತದೆ. ಭಾವನಾತ್ಮಕ ಏರಿಳಿತಗಳಿಲ್ಲದೆ ಏಕತಾನತೆಯ ಯಾತ್ರೆ ನಿಮ್ಮದಾಗುತ್ತದೆ.ಅವರು ಕರೆದೊಯ್ಯುವ ನಿಲ್ದಾಣಗಳೂ ಹೊಸತಾಗಿ ತೋರವು. ಹೋದ ತಾಣಗಳಿಗೇ ಮರಳಿ ಮರಳಿ ಹೋದ ಯಾಂತ್ರಿಕ ಅನುಭವ ಮಾತ್ರ ಉಳಿಯುತ್ತದೆ. ಆದ್ದರಿಂದ ಪಯಣದಲ್ಲಿ ಉಲ್ಲಾಸಕ್ಕಿಂತಲೂ ಆಯಾಸವೇ ಹೆಚ್ಚು.ಚೇತು ಪಾತ್ರದಲ್ಲಿ ವಿನಯ್ ಅವರಿಂದ ಉತ್ತಮ ನಟನೆ ಸಾಧ್ಯವಾಗಿಲ್ಲ, ಆದರೆ ಅವರ ಶ್ರಮವನ್ನು ಅಲ್ಲಗಳೆಯುವಂತಿಲ್ಲ. ನಟಿ ಅರ್ಚನಾ ಅವರಿಗೂ ಇದೇ ಮಾತು ಹೇಳಬಹುದು. ರಮೇಶ್ ಭಟ್, ಶಂಕರ್ ಅಶ್ವತ್ಥ್ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಖಳನಾಗಿಯೂ ಕಾಣಿಸಿಕೊಂಡಿರುವ ನಿರ್ದೇಶಕರದ್ದು ಎರಡು ದೋಣಿಯ ಪಯಣ. ನಿರ್ದೇಶನಕ್ಕೆ ಒತ್ತು ನೀಡಬೇಕೋ ಪಾತ್ರಕ್ಕೆ ಒತ್ತು ನೀಡಬೇಕೋ ಎಂಬ ಗೊಂದಲದಲ್ಲಿ ಅವರು ಇದ್ದಂತಿದೆ.ಸಂಗೀತ ನಿರ್ದೇಶಕ ಸಾಯಿ ಕಿರಣ್‌ರ ಕೊಡುಗೆಯನ್ನು ಮರೆಯುವಂತಿಲ್ಲ. ಚಿತ್ರದ ಎಲ್ಲಾ ಹಾಡುಗಳೂ ಉತ್ತಮವಾಗಿ ಮೂಡಿ ಬಂದಿವೆ. ಕುರಿಗಳು ಪ್ರತಾಪ್ ನೇತೃತ್ವದಲ್ಲಿ ಹಾಸ್ಯದ ಬುಗ್ಗೆ ಹರಿದಿದೆ. ಆದರೆ ಹಾಸ್ಯಕ್ಕೆ ಅಶ್ಲೀಲತೆಯ ಸ್ಪರ್ಶ ಢಾಳಾಗಿದೆ. ಕೃಷ್ಣ ಸಾರಥಿ ಛಾಯಾಗ್ರಹಣದಲ್ಲಿ ಹೊಸತನವನ್ನೇನೂ ಹುಡುಕಲಾಗದು.ಸಂಭಾಷಣೆ ಬರೆದಿರುವ ಪಣಕನಹಳ್ಳಿ ಪ್ರಸನ್ನ, ರವಿಶಂಕರ್ ನಾಗ್ ಉದ್ದುದ್ದ ಮಾತುಗಳಿಂದ ಕಂಗೆಡಿಸುತ್ತಾರೆ. ಉಪಕತೆಯಾಗಿರುವ ನಾಯಕನ ಜೀವನ ಚರಿತ್ರೆಯನ್ನು ಅನಗತ್ಯವಾಗಿ ಹಿಂಜಲಾಗಿದೆ.

 

ಎಲ್ಲೋ ಕೇಳಿದಂತಿದ್ದರೂ ಕತೆ ಗಟ್ಟಿಕಾಳು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮುಂಗಾರು ಮುಗಿದ ನಂತರ ಬಿತ್ತನೆಗೆ ಹೊರಟಂತೆ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಕತೆ ಬಿತ್ತುತ್ತಾರೆ. ಇದೇ ಹೊತ್ತಿಗೆ ಬಿತ್ತನೆಗೆ ಬೇಕಾದ ನೆಲ ಹದಗೊಳಿಸುವುದನ್ನೇ ಅವರು ಮರೆತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.