ಶನಿವಾರ, ಏಪ್ರಿಲ್ 17, 2021
31 °C

ಊಟದ ಜೊತೆ ಸಂಗೀತ ಒಂದು ಸಾಂಸ್ಕೃತಿಕ ವ್ಯತ್ಯಾಸ

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಊಟದ ಜೊತೆ ಸಂಗೀತ ಒಂದು ಸಾಂಸ್ಕೃತಿಕ ವ್ಯತ್ಯಾಸ

ಜೆ.ಪಿ.ನಗರದಲ್ಲಿ ಬಾರ್ಬೆಕ್ಯು ನೇಶನ್ ಎಂಬ ರೆಸ್ಟೋರೆಂಟ್ ಇದೆ. ಅಲ್ಲಿಯ ವಿಶೇಷ ಏನಪ್ಪ ಅಂದರೆ ಪ್ರತಿ ಟೇಬಲ್‌ನಲ್ಲೂ ಒಂದು ಗ್ರಿಲ್ (ಆಹಾರ ಸುಡಲು ಮಾಡಿದ ಕೆಂಡದ ಒಲೆ) ಅಳವಡಿಸಿದ್ದಾರೆ. ಗಡ್ಡೆಗೆಣಸು, ಮಾಂಸ ಸುಟ್ಟು ತಿನ್ನುವ ಅನಾದಿ ಕಾಲದ ಈ ಅಭ್ಯಾಸವನ್ನು ಆಧುನಿಕ ರೆಸ್ಟೋರೆಂಟ್ ಸಂಸ್ಕೃತಿಗೆ ಮಾರ್ಪಾಡು ಮಾಡಿಕೊಂಡಿದ್ದಾರೆ. ನೀವು ಗ್ರಿಲ್ ಇರುವ ಟೇಬಲ್‌ಗೆ ಹೋಗಿ ಕೂತ ಕೂಡಲೇ ಒಂದಿಷ್ಟು ಕೆಂಡ ತಂದು ಆ ಒಲೆಯಲ್ಲಿ ಸುರಿಯುತ್ತಾರೆ. ಊಟಕ್ಕೆ ಹೋಗುವ ಜನ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಅನುಭವ ನೀಡುವ ಈ ರೆಸ್ಟೋರೆಂಟ್‌ನಲ್ಲಿ ಇನ್ನೊಂದು ವಿಶೇಷ: ವೈಟರ್‌ಗಳು ಇದ್ದಕ್ಕಿದ್ದಂತೆ ಹಾಡು ಹೇಳುವುದು!ಯಾರದಾದರೂ ಹುಟ್ಟು ಹಬ್ಬ ಎಂದು ಗೊತ್ತಾದರೆ ಅವರ ಟೇಬಲ್ ಹತ್ತಿರ ಒಂದರ್ಧ ಡಜನ್ ಕೆಲಸಗಾರರು ಸೇರಿ ಚಪ್ಪಾಳೆ ತಟ್ಟಿಕೊಂಡು, ಕುಣಿಯುತ್ತ ಹಾಡುತ್ತಾರೆ. ಅದು ಸಾಲದು ಎಂಬಂತೆ ಗಂಗ್ನಂ ಸ್ಟೈಲ್‌ನಂಥ ಪಾಪ್ ಹಾಡುಗಳ ಸೀಡಿ ಹಾಕಿ ಅದಕ್ಕೂ ಕುಣಿಯುತ್ತಾರೆ.ಊಟ ಮಾಡಲು ಬಂದ ಜನ ಆಶ್ಚರ್ಯಗೊಂಡು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋಗ್ರಹಣ ಪ್ರಾರಂಭಿಸುತ್ತಾರೆ. ಇದೆಲ್ಲ ನೋಡಿ ಅಭ್ಯಾಸ ಇಲ್ಲದ ಜನ ಸ್ವಲ್ಪ ಗಲಿಬಿಲಿ ಆಗುವುದು ಸಹಜ. `ಅಯ್ಯೋ ಇವರೆಲ್ಲ ಇಲ್ಲಿ ಬಂದುಬಿಟ್ಟರೆ ಅಲ್ಲಿ ಅಡಿಗೆ ಮನೆಯಲ್ಲಿ ನಮ್ಮ ಆರ್ಡರ್ ಎಲ್ಲ ಸೀದು ಹೋಗೋದಿಲ್ಲವೇ?~ ಎಂಬ ಸ್ವಲ್ಪ ಹುಂಬ ಪ್ರಶ್ನೆ ಹೊಸಬರಿಗೆ ಬರುವುದು ಉಂಟು.  ನಮ್ಮ ಮದುವೆ ಮನೆಗಳಲ್ಲಿ ಸಂಗೀತ ಇರುತ್ತದೆ. ಅದನ್ನು ಬಿಟ್ಟರೆ, ಊಟದ ಸ್ಥಳದಲ್ಲಿ ಸಂಗೀತ ಏರ್ಪಡಿಸುವುದು ತೀರ ಪಾಶ್ಚಿಮಾತ್ಯ ರೂಢಿ ಇರಬೇಕು. ಊಟವನ್ನು ಏಕಾಗ್ರತೆಯಿಂದ ಮಾಡಬೇಕು, ಊಟ ಮಾಡುವಾಗ ಹೆಚ್ಚು ಮಾತಾಡಕೂಡದು ಎಂದು ಹಿರಿಯರು ಹೇಳುತ್ತಿದ್ದುದನ್ನು ನೀವು ಕೇಳಿರಬಹುದು. ಆದರೆ ಈಗ ಹೊರಗೆ ತಿನ್ನುವ ಶೋಕಿ, ಅನಿವಾರ್ಯ ಎರಡೂ ಇರುವುದರಿಂದ ಹಲವು ಪದ್ಧತಿಗಳು ಬದಲಾಗಿವೆ.ದರ್ಶಿನಿಗಳಲ್ಲಿ ನಿಂತು ಊಟ ಮಾಡುವುದರಿಂದ ಆರಾಮಾಗಿ ಕೂತು ಸಂಗೀತ ಕೇಳುವ ಪ್ರಶ್ನೆಯೇ ಇರುವುದಿಲ್ಲ. ಇನ್ನು ಟೇಬಲ್ ಕುರ್ಚಿ ಇರುವ ದಕ್ಷಿಣಾದಿ ರೆಸ್ಟೋರೆಂಟ್‌ಗಳಲ್ಲಿ ಗಿರಾಕಿಗಳು ಬಂದ ಕೆಲಸ ಬೇಗ ಮುಗಿಸಿ ಹೋಗುವುದಕ್ಕೆ ವ್ಯವಸ್ಥೆ ಇರುತ್ತದೆಯೇ ಹೊರತು ಅಲ್ಲೇ ಒರಗಿ ಕೂತು ಸಂಗೀತ ಕೇಳುವುದಕ್ಕೆ ಪ್ರೋತ್ಸಾಹ ಇರುವುದಿಲ್ಲ.ನಮ್ಮ ಶೈಲಿಯ ಊಟದ ಜೊತೆ ಸಂಗೀತ ಏರ್ಪಡಿಸುವ ಪ್ರಯತ್ನವನ್ನು ಮಾಡುತ್ತಿರುವುದು ದೊಡ್ಡ ಗಣೇಶನ ಗುಡಿಯ ಪಕ್ಕದಲ್ಲಿ ಇರುವ ಕಾಮತ್ ರೆಸ್ಟೋರೆಂಟ್. ಐಡಿಯಾ ಏನೋ ಚೆನ್ನಾಗಿದೆ. ಸಂಗೀತಗಾರರಿಗೆ ಒಂದು ವೇದಿಕೆ ಒದಗಿಬಂದಿದೆ. ರೆಸ್ಟೋರೆಂಟ್‌ಗೆ ಕಲಾ ಪೋಷಕ ಮೆರಗು ಬಂದಿದೆ. ಆದರೆ ಅಲ್ಲಿ ಜನ ಒಂದೆರದು ಗಂಟೆ ಕೂತು ಸಂಗೀತ ಕೇಳುವ ಪರಿಪಾಠವಿಲ್ಲ. ಇದಕ್ಕೆ ಕಾರಣ ಸಾಂಸ್ಕೃತಿಕವಿರಬಹುದೇ? ನಮ್ಮ ಊಟ ಸಂಗೀತದ ಜೊತೆ ಒಟ್ಟೊಟ್ಟಿಗೆ ಬೆರೆಸುವುದು ಕಷ್ಟವೇ?ಬಿ ಫ್ಲಾಟ್ ಎಂಬ ಲೌಂಜ್ ಬಾರ್ ಇಂದಿರಾನಗರದಲ್ಲಿದೆ. ಅಲ್ಲಿ ಪ್ರತಿ ಶನಿವಾರ ಒಂದು ಸಂಗೀತದ ಕಾರ್ಯಕ್ರಮವಿರುತ್ತದೆ. ಸೆಂಟ್ ಮಾರ್ಕ್ಸ್ ಕ್ಯಾಥೆಡ್ರೆಲ್ ಪಕ್ಕದಲ್ಲಿರುವ ಹಾರ್ಡ್ ರಾಕ್ ಕೆಫೆ ಯಲ್ಲಿ ಪ್ರತಿ ಗುರುವಾರ ಒಂದು ಕಾರ್ಯಕ್ರಮವಿರುತ್ತದೆ.ಇಲ್ಲೆಲ್ಲಾ ಏನಾಗುತ್ತದೆ ಅಂದರೆ: ಬಂದ ಜನ ಕನಿಷ್ಟ ಎರಡು ಗಂಟೆ ಕೂತಿರುತ್ತಾರೆ. ಪಾಶ್ಚಿಮಾತ್ಯ ರೆಸ್ಟೋರೆಂಟ್‌ಗಳಲ್ಲಿ ಆರ್ಡರ್ ಪೂರೈಸುವುದು ನಿಧಾನ. ಜನ ಕುಡಿಯುತ್ತ ಹರಟುತ್ತ ಕೂರುವುದು ಸಾಮಾನ್ಯ. ಆದರೆ ಭಾರತೀಯ ಶೈಲಿಯ ರೆಸ್ಟೋರೆಂಟ್‌ಗಳಲ್ಲಿ ಆದಷ್ಟೂ ಬೇಗ ಸರ್ವ್ ಮಾಡಲು ಹಾತೊರೆಯುತ್ತಿರುತ್ತಾರೆ. ಸಾಗರ್ ಥರದ ರೆಸ್ಟೋರೆಂಟ್‌ಗಳಲ್ಲೂ ಸಂಗೀತಗಾರರು ಕಲಾಪ್ರದರ್ಶನ ಮಾಡುವಂತೆ ಸ್ಥಳಾವಕಾಶ ಇರುವುದಿಲ್ಲ. ಪಂಚತಾರಾ ಹೋಟೆಲ್‌ಗಳ ದಕ್ಷಿಣಾದಿ ರೆಸ್ಟೋರೆಂಟ್‌ಗಳನ್ನು ಬಿಟ್ಟರೆ ಬೇರೆಡೆ ಇಂಥ ಸೌಕರ್ಯ ಇಲ್ಲವೇ ಇಲ್ಲವೇನೋ.        ಮದುವೆ ಮನೆಗಳಲ್ಲಿ ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಡಿಸುವುದು ಮಧ್ಯಮ ವರ್ಗಗಳಲ್ಲಿ ಒಂದು ಸಂಪ್ರದಾಯವಾಗಿತ್ತು. ಎಂ.ಎಸ್. ಸುಬ್ಬುಲಕ್ಷ್ಮಿ ಅವರಂಥ ಮೇರು ಕಲಾವಿದರೂ ಮದುವೆ ಮನೆ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತಿದ್ದರಂತೆ. ನಂತರ ಸುಗಮ ಸಂಗೀತ, ಸಿನಿಮಾ ಹಾಡುಗಳ ಆರ್ಕೆಸ್ಟ್ರಾ ಕೂಡ ಸೇರಿಕೊಂಡವು. ದೊಡ್ಡ ಸುಗಮ ಸಂಗೀತ ಕಲಾವಿದರೆಲ್ಲ ಮದುವೆ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.

 

ಈ ಕಲ್ಯಾಣ ಮಂಟಪದ ದೊಂಬಿ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಎಲ್ಲರೂ ಸಾವಧಾನವಾಗಿ ಕೂತು ರಾಗ ಸಂಗೀತವನ್ನು ಆಲಿಸಿದ್ದ ಕಾಲವಿತ್ತೇನೋ. ಆದರೆ ಇಂದಿನ ಮದುವೆ ಮನೆಗಳಲ್ಲಿ ಸಂಗೀತ ಕೇಳುವ ಮೂಡ್ ಯಾರಿಗೂ ಇರುವುದಿಲ್ಲ.ಸಾಲಾಗಿ ಹೋಗಿ ಉಡುಗೊರೆ ಕೊಟ್ಟು ಬಸ್ಸೋ ಆಟೊನೋ ಹಿಡಿದು ಮನೆಗೆ ಹೋದರೆ ಸಾಕು ಎಂಬ ಚಿಂತೆಯಲ್ಲಿರುತ್ತಾರೆ. ಕಾರಿರುವವರು ಕೆಟ್ಟ ಟ್ರಾಫಿಕ್‌ನಲ್ಲಿ ಡ್ರೈವ್ ಮಾಡಬೇಕಲ್ಲ ಎಂದು ಯೋಚಿಸುತ್ತಿರುತ್ತಾರೆ.ನಮ್ಮ ಉಪಹಾರ ಮಂದಿರಗಳು ಕಲಾವಿದರಿಗೆ ಸಣ್ಣ ಪುಟ್ಟ ವೇದಿಕೆಗಳು ಒದಗಿಸಿಕೊಡುವ ದಿನ ಬಂದೀತೆ? ನಿಧಾನವಾಗಿ ಕೂತು ಸಂಗೀತ ಕೇಳುತ್ತ ಊಟ ಮಾಡುವ ಲಕ್ಷುರಿ ಎಲ್ಲರಿಗೂ ಸಿಗುವ ಸೂಚನೆ ಕಾಣುತ್ತಿಲ್ಲ. ಉಡುಪಿ, ದಕ್ಷಿಣ ಭಾರತೀಯ ಹೋಟೆಲ್ ನಡೆಸುವವರು ಎಷ್ಟೋ ಮಂದಿ ಯಕ್ಷಗಾನದ ಪೋಷಕರು. ಅವರಿಗೆ ಕಲಾ ಪೋಷಣೆ ಮಾಡುವ ಸಂಗತಿ ಹೊಸದೇನಲ್ಲ.ಒಂದು ನಿಮಿಷ ಹಾಡುವ ಕುಣಿಯುವ ವೈಟರ್‌ಗಳ ವಿಷಯಕ್ಕೆ ಮರಳೋಣ. ಈ ಥರ ರೆಸ್ಟೋರೆಂಟ್‌ನಲ್ಲಿ ಅವರಿಗೆ ಕೆಲಸ ಮಾಡುವುದು ಸ್ವಲ್ಪ ಮಜ ಅನಿಸಬಹುದು. ಆದರೆ ಹೋಟೆಲ್ ಮಾಣಿ ಕೆಲಸ ಮಾಡಬೇಕಾದರೆ ಹಾಡುವುದು, ಕುಣಿಯುವುದು ಮತ್ತು ಸರ್ವ್ ಮಾಡುವುದು ಮೂರೂ ಬರಬೇಕು ಅಂದರೆ ಎಷ್ಟು ಕಷ್ಟ, ಅಲ್ಲವೇ? 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.