ಸೋಮವಾರ, ಜನವರಿ 27, 2020
15 °C

ಊಟ ಆಯ್ತೊ ಅಂದರೆ ಏನರ್ಥ?

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಮುಂಬೈ ಕಡೆ ಹೋಗಿ ಬಟ್ಟೆ ಅಂಗಡಿಯಲ್ಲಿ ಮಕ್ಕಳ ಉಡುಪುಗಳ ಬಗ್ಗೆ ವಿಚಾರಿಸಿ ನೋಡಿ. ಸಂಭಾಷಣೆ  ಹೀಗಿರುತ್ತೆ- ನೀವು: ಎಂಟು ವರ್ಷದ ಮಗುವಿಗೆ ಡ್ರೆಸ್ ತೋರಿಸಿ.

ಅಂಗಡಿಯವನು: ಬೇಬಿ ಯಾ ಬಾಬಾ? (ಇಲ್ಲಿ ಬೇಬಿ ಅಂದರೆ ಹೆಣ್ಣು. ಬಾಬ ಅಂದರೆ ಗಂಡು.) ನೀವು: ಬೇಬಿ. ಅಂಗಡಿಯವನು: ಪತ್ಲಾ ಯಾ ಹೆಲ್ತಿ? (ತೆಳ್ಳಗಿರುವ ಮಗುವೋ? ಹೆಲ್ತಿ ಮಗುವೋ?). ಈ ಪ್ರಶ್ನೆ ಮೊದಲ ಸಲ ಕೇಳಿದವರಿಗೆ ಅರ್ಥವಾಗುವುದು ಕಷ್ಟ. ಮುಂಬೈ ಜನಪದದಲ್ಲಿ ಹೆಲ್ತಿ (ಆರೋಗ್ಯವಂತ) ಅಂದರೆ ದಪ್ಪ ಎಂದು. ಇದು ದಪ್ಪವಿರುವವರಿಗೆ ನೋವಾಗಬಾರದು ಎಂದು ಕೇಳುವ ಪರಿಯೋ ಅಥವಾ ದಪ್ಪಗಿರುವರೆಲ್ಲ ಆರೋಗ್ಯವಂತರು ಎಂಬ ನಂಬಿಕೆಯೋ ನನಗಿನ್ನೂ ಗೊತ್ತಾಗಿಲ್ಲ.

`ಸಣಕಲಿಯೋ ಡುಮ್ಮಿಯೋ?~ ಎಂದು ಕೇಳೋದಕ್ಕಂತೂ ಆಗಲ್ಲ ನೋಡಿ.

ಅದೇನೇ ಇರಲಿ. ಒಂದೊಂದು ನಗರಕ್ಕೂ ಅದರದ್ದೇ ಆದ ಭಾಷಾ ಛ್ಚ್ಚಿಛ್ಞಿಠ್ಟಿಜ್ಚಿಜಿಠಿ ಇರುತ್ತೆ. ಬೆಂಗಳೂರಿನಲ್ಲಿ `ಊಟ ಆಯ್ತೊ?~ ಅನ್ನೋದು ಹಾಗೇ. ಇದರ ಅರ್ಥ ಇಂಗ್ಲಿಷ್‌ನ `ಹೌ ಡು ಯೂ ಡೂ?~ ಅನ್ನೋ ಥರ. ಈ ಇಂಗ್ಲಿಷ್ ನುಡಿಯ ಲಿಟರಲ್ ಅರ್ಥ `ಹ್ಯಾಗೆ ಮಾಡುತ್ತಿದೀರ?~ ಎಂದು. ಅದಕ್ಕೆ ನಿಮ್ಮ ಉತ್ತರ `ಏನನ್ನ?~ ಅಂತ ಆದರೆ ನಿಮಗೆ ಆ ಸಂಸ್ಕೃತಿಯ ರೀತಿ ರಿವಾಜು ಗೊತ್ತಿಲ್ಲ ಎಂದೇ ಅರ್ಥ. `ಹೌ ಡು ಯು ಡೂ?~ ಅನ್ನುವ ಮಾತಿನ ಭಾವಾರ್ಥ `ಚೆನ್ನಾಗಿದ್ದೀರಾ?~ ಎಂದು. ಹಾಗೆಯೇ ನಮ್ಮ `ಊಟ ಆಯ್ತೊ?~

ಅನ್ನೋ ಮಾತು ಅಂತ ಕಾಣತ್ತೆ. ಅದರ ಅರ್ಥ ಊಟ ಆಯ್ತೊ ಅನ್ನೋದಕ್ಕಿಂತ ವಿಸ್ತಾರವಾಗಿರುತ್ತೆ. ಹಲೋ, ಹಾಯ್, ಹೇಯ್ ಅಂತ ಎಲ್ಲ ಈಗ ಕೇಳಿಬರತ್ತಲ್ಲ; ಆ ಶೈಲಿಯ ಒಂದು ಗ್ರೀಟಿಂಗ್. ಇಂಗ್ಲೆಂಡಿನ ಜನ ಕಂಡ ಕೂಡಲೇ ಹವಾಮಾನದ ವಿಚಾರ ಮಾತಾಡುತ್ತಾರಂತೆ. ಅದೂ ನಮ್ಮ `ಊಟ ಆಯ್ತೊ?~ ಅನ್ನೋ ಯೋಗಕ್ಷೇಮ ವಿಚಾರಿಸುವ ಒಂದು ಮಾರ್ಗ.

ಈ ನಮ್ಮ ಮಾತಿನ ಗೂಢಾರ್ಥ ತಿಳಿಯದ ಕನ್ನಡೇತರರಿಗೆ ಒಂದು ಬಿಟ್ಟಿ ಸಲಹೆ. ಯಾರಾದರೂ `ಊಟ ಆಯ್ತೊ?~ ಅಂತ ಕೇಳಿದರೆ ಸುಮ್ಮನೆ ತಲೆ ಆಡಿಸಿ `ನಿಮ್ಮದು?~ ಅಂತ ಕೇಳಿಬಿಡಿ. ಕನ್ನಡಿಗರು ಉದಾರಿಗಳು. ನೀವೇನಾದರೂ ಆಗಿಲ್ಲ ಅಂತ ಹೇಳಿದರೆ `ಊಟ ಮಾಡೋಣ, ಬನ್ನಿ~ ಎನ್ನುವ ಆಹ್ವಾನ ಬಂದೇ ಬರುತ್ತೆ. ನಿಮಗೆ ಅವರ ಮನೆಯಲ್ಲಿ ಊಟ ಮಾಡುವ ಮನಸ್ಸಿದ್ದರೆ ಸರಿ. ಇಲ್ಲದಿದ್ದರೆ ಪೇಚಿಗೆ ಸಿಕ್ಕಿಕೊಳ್ಳಿತ್ತೀರಿ.

ಮೊನ್ನೆ ಒಂದು ವರದಿ ಬಂತು. ಧಡೂತಿ ಮೈಯಿದ್ದವರಿಗೆ ಮೀಸಲಾದ ವಿವಾಹದ ವೆಬ್‌ಸೈಟ್ ಒಂದು ಪ್ರಾರಂಭವಾಗಿದೆ ಎಂಬುದೇ ಅದರ ವಿಷಯ. ಅದರಲ್ಲಿ ಹೀಗಿತ್ತು: ಹೆಲ್ತಿ ಆಗಿರುವವರು ಕೂಡ ಮದುವೆಯಾಗಬಹುದು. ಹಾ? ಏನಿದರ ಅರ್ಥ? ಮುಂಬೈ ಜವಳಿ ಅಂಗಡಿಗೆ ಹೋಗಿದ್ದ ಅನುಭವದಿಂದ ಆ ವಾಕ್ಯದ ಅರ್ಥ ನನಗೆ ತೀರ ಕಷ್ಟವಾಗಲಿಲ್ಲ.

ಆದರೆ ಆ ವರದಿಯನ್ನು ಎಡಿಟ್ ಮಾಡುತ್ತಿದ್ದ ನನಗೂ ಮೇಲೆ ಹೇಳಿದ ಸಂಕಟ ಒದಗಿ ಬಂದಿತ್ತು. ಹೆಲ್ತಿ ಅಂದರೆ ದಪ್ಪ ಎಂದು ಮುಂಬೈ ಹೊರಗಿನ ಓದುಗರಿಗೆ ಅರ್ಥವಾಗುವುದಿಲ್ಲ. ಓವರ್ ವೇಯ್ಟ, ಫ್ಯಾಟ್ ಅಂತ ಹೇಳುವುದು ಒರಟೊರಟಾಗಿ ಕಾಣುತ್ತಿತ್ತು. ನಾನು ಬಳಸಿದ ಪದ: `ಪ್ಲಂಪ್~! ಅಂದರೆ ದಷ್ಟ ಪುಷ್ಟ ಅನ್ನುವ ಅರ್ಥ ಬರುವ, ಯಾರಿಗೂ ನೋವಾಗದ ಪದ.  

ಹೊರಗಿನಿಂದ ಬೆಂಗಳೂರಿಗೆ ಬಂದವರಿಗೆ ನಮ್ಮ `ಊಟ ಆಯ್ತೊ?~ ಅನ್ನೋದು ಬೈ ಟೂ ಕಾಫಿಯಷ್ಟೇ ವಿಶೇಷವಾಗಿ ಕಾಣಬಹುದು.

ಬೆಂಗಳೂರು ಹಬ್ಬದ ಆಕ್ಷೇಪಗಳು

ಪ್ರತಿ ವರ್ಷ ಚಳಿಗಾಲದಲ್ಲಿ ನಡೆಯುವ ಬೆಂಗಳೂರು ಹಬ್ಬಕ್ಕೆ ಈ ವರ್ಷ ತೀರ ಸಪ್ಪೆ ಪ್ರತಿಕ್ರಿಯೆಯಂತೆ. ಹೊಸ ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಗಳು ಸೇರಿ ಸಂಸ್ಕೃತಿಯನ್ನು ಬೆಂಬಲಿಸುವ ಈ ಹಬ್ಬ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭವಾಯಿತು. ಎಲ್ಲರೂ ಗೊಣಗುತ್ತಿರುವುದು ಏನಪ್ಪಾ ಅಂದರೆ ಈ ವರ್ಷ ಈ ಹಬ್ಬಕ್ಕೆ ಪ್ರಚಾರವೇ ಇಲ್ಲ ಅಂತ.

ಆದರೆ ಒಂದು ವಿಷಯ ಗಮನಿಸಿದ್ದೀರಾ? ಹೀಗೆ ಗೊಣಗುವ ಕಲಾ ಪ್ರೇಮಿಗಳು ಹೆಚ್ಚಾಗಿ `ನಗರದಲ್ಲಿ ಇಂದು~ ಕಾಲಂ ನೋಡುವ ಅಭ್ಯಾಸ ಇಲ್ಲದವರೇ ಆಗಿರುತ್ತಾರೆ. ಅವರಿಗೆ ದೊಡ್ಡ ದೊಡ್ಡ ಜಾಹೀರಾತು ಇಂಗ್ಲಿಷ್ ಪೇಪರ್‌ಗಳಲ್ಲಿ ಬಂದರಷ್ಟೆ ಸಂಗೀತ ನಾಟ್ಯದ ಬಗ್ಗೆ ಗೊತ್ತಾಗುವುದು. ಇಂಥವರಿಗೆ ಕೋಟೆ ಹೈಸ್ಕೂಲಿನ ರಾಮನವಮಿ ಕಛೇರಿಗಳು, ರವೀಂದ್ರ ಕಲಾಕ್ಷೇತ್ರದ ನಾಟಕಗಳ ಬಗ್ಗೆ ಸುಳಿವೇ ಇರುವುದಿಲ್ಲ. ವರ್ಷಪೂರ್ತಿ ಇಲ್ಲಿ ಕಾರ್ಪೊರೇಟ್ ಸಹಾಯವಿಲ್ಲದೆ ಸಂಸ್ಕೃತಿ ಜೀವಂತವಾಗೇ ಇರುತ್ತದೆ. ಕಾರ್ಪೊರೇಟ್ ದುಡ್ಡಿನ ಮೂಲಕ ಹಾಡು ಹಸೆಗೆ ಪ್ರೋತ್ಸಾಹ ಕೊಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಆ ದುಡ್ಡಿಲ್ಲದೆ ಹಾಡು ಹಸೆಯೇ ಇಲ್ಲ ಅಂದುಕೊಳ್ಳೋದು ಸ್ವಲ್ಪ ಅತಿ ಆಯಿತು ಅಲ್ಲವೇ?

ಉಳ್ಳವರು, ಬಡವರು

ಬೆಂಗಳೂರಿಗೆ ಉತ್ತರ ರಾಜ್ಯಗಳಿಂದ ವಲಸೆ ಬರುವವರಲ್ಲಿ ಶ್ರೀಮಂತರು, ಬಡವರು ಇಬ್ಬರೂ ಇದ್ದಾರೆ. ಹಣ ಹೂಡುವವರಿಗೆ ಮಾರ್ಗದರ್ಶನ ನೀಡುವ ಕಂಪನಿಯೊಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದೆ. ಅವರ ಸೇವೆ ನಿಮಗೆ ಬೇಕಾದರೆ ಕನಿಷ್ಠ 1.5 ಕೋಟಿ ರೂಪಾಯಿಯನ್ನು ನೀವು ಹೂಡಬೇಕಂತೆ. ಇಲ್ಲಿ ನೆಲೆಸಿರುವ ಉತ್ತರ ಭಾರತೀಯರು, ಅದರಲ್ಲೂ ಗುಜರಾತಿಗಳು ಮತ್ತು ಜೈನರು, ಶೇರು ಪೇಟೆ ಜೂಜಿಗೆ ಧೈರ್ಯವಾಗಿ ಧುಮುಕುತ್ತಾರಂತೆ. ನಮ್ಮೂರಿನ ಕೆಲವು ಸಮುದಾಯಗಳಲ್ಲಿ ಕಾಲೇಜು ಓದುವ ಹುಡುಗರಿಗೂ ಈ ಶೇರು ಪೇಟೆ ಆಟವನ್ನು ಆಡಲು ಅಪ್ಪ ಅಮ್ಮಂದಿರ ಪ್ರೋತ್ಸಾಹವಿದೆ. ವರ್ತಕ, ಸಾಫ್ಟ್‌ವೇರ್ ಜನರಲ್ಲದೆ, ಸಣ್ಣ ಪುಟ್ಟ ಕಸುಬುಗಳಲ್ಲಿ ತೊಡಗಿಕೊಂಡವರೂ ಉತ್ತರ ರಾಜ್ಯಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಈಚೆಯ ಕೆಲವು ವರ್ಷದಿಂದ ನೀವು ಗಮನಿಸಿರಬಹುದು: ಪಾನಿಪುರಿ ಮಾಡುವ ಸುಮಾರು ಜನ ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಪಾನಿಪುರಿ ಮಾಡುವ ಕನ್ನಡದವರು ಗಾಜಿನ ಕಿಟಕಿಯನ್ನು ಅಳವಡಿಸಿದ ಕೈ ಗಾಡಿಯನ್ನು ತಳ್ಳಿಕೊಂಡು ಹೋಗಿ ವ್ಯಾಪಾರ ಮಾಡುತ್ತಾರೆ. ಹಿಂದಿ ಮಾತಾಡುವವರು ಮೋಡದಾಕಾರದ ಬೆತ್ತದ ಬುಟ್ಟಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಬುಟ್ಟಿಯನ್ನೇ ಅಂಗಡಿಯಾಗಿಸಿಕೊಂಡು ಹೊಟ್ಟೆ ಹೊರೆಯುವವರು ಹೆಚ್ಚಾಗಿ ಉತ್ತರ ಪ್ರದೇಶದವರು. ಒಂದು ಕೋಟಿ ಬೆಲೆಯ ಬಿಎಂಡಬ್ಲ್ಯು ಕಾರನ್ನು ಕೊಂಡು ಬೆಂಗಳೂರಿನ ಇಕ್ಕಟ್ಟಾದ ಬೀದಿಗಳಲ್ಲಿ ತಿರುಗುವ ಉತ್ತರ ಭಾರತೀಯರಂತೆಯೇ ಕೂಲಿನಾಲಿ ಮಾಡುವವರು, ಪಾನಿಪುರಿ ಮಾರಿ ಬದುಕುವವರು ಇಲ್ಲಿಗೆ ಬರುತ್ತಿದ್ದಾರೆ. ಈಚೆಗೆ ಈ ಊರು ಬಡ ಹಿಂದೀ ಜನರನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಸೆಳೆಯುತ್ತಿದೆ.

ಪ್ರತಿಕ್ರಿಯಿಸಿ (+)