ಗುರುವಾರ , ಜನವರಿ 23, 2020
23 °C

ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ; ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ವಸತಿ ನಿಲಯದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಆಂಧ್ರ ಮೂಲದ ಜಿತೇಂದ್ರ ಸಾಯಿ (20) ಮೃತಪಟ್ಟವರು. ಸರ್ಜಾಪುರ ರಸ್ತೆಯಲ್ಲಿರುವ ಅಮೃತ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ ಎಂಜಿನಿಯರಿಂಗ್ ಓದುತ್ತಿದ್ದರು. ಮಧ್ಯಾಹ್ನ 12.45ರ ಸುಮಾರಿಗೆ ನೇಣು ಹಾಕಿಕೊಂಡಿದ್ದಾರೆ.ಕಿಟಕಿಯಿಂದ ನೋಡಿದ ಸಹಪಾಠಿಗಳು ಕೊಠಡಿಯ ಕದವನ್ನು ಮುರಿದು ಸ್ನೆಹಿತನ ರಕ್ಷಣೆಗೆ ಮುಂದಾಗಿದ್ದಾರೆ, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜಿತೇಂದ್ರ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.ಜಿತೇಂದ್ರ 2009ರಲ್ಲಿ ಕಾಲೇಜಿಗೆ ಸೇರಿದ್ದು ಈಗ ಆವರು ಐದನೇ ಸೆಮಿಸ್ಟರ್ ಇರಬೇಕಿತ್ತು. ಆದರೆ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರಿಂದ ಎರಡನೇ ಸೆಮಿಸ್ಟರ್‌ನಲ್ಲಿಯೇ ಉಳಿದಿದ್ದರು ಎಂದು ಅವರ ಸ್ನೇಹಿತರು ತಿಳಿಸಿದರು.ಧರಣಿ: ಕಾಲೇಜು ಆಡಳಿತಾಧಿಕಾರಿಗಳ ಕಿರುಕುಳ ಹಾಗೂ ಶೈಕ್ಷಣಿಕ ಒತ್ತಡಗಳಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಕೋಪಗೊಂಡ ವಿದ್ಯಾರ್ಥಿಗಳು ದಿಢೀರ್ ಧರಣಿ ಆರಂಭಿಸಿದರು. ಕಾಲೇಜಿನ ಗೇಟ್‌ಗಳನ್ನು ಮುಚ್ಚಿ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

 

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ಕಾಲೇಜಿನ ಆಡಳಿತಾಧಿಕಾರಿಗಳ ಸಮಿತಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿತಾದರೂ ವಿದ್ಯಾರ್ಥಿಗಳು ಧರಣಿ ಮುಂದುವರಿಸಿದರು. ಮಧ್ಯರಾತ್ರಿಯಾದರೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದರಲ್ಲಿ ಹಾಗೂ ದಂಡ ರೂಪದಲ್ಲಿ ವಿದ್ಯಾರ್ಥಿಗಳಿಂದ ಹಣ ಕೀಳುವುದರಲ್ಲಿ ಕಾಲೇಜಿನ ಆಡಳಿತಾಧಿಕಾರಿಗಳು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಒಂದು ವಿಷಯದಲ್ಲಿ ಅನುತ್ತೀರ್ಣರಾದರೂ ಆರು ಸಾವಿರ ರೂಪಾಯಿ ದಂಡ ವಿಧಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಇಂತಹ ಹಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ.ವಿದ್ಯಾರ್ಥಿಗಳು ಸ್ನೇಹಿತರ ಹುಟ್ಟುಹಬ್ಬವನ್ನು ಕಾಲೇಜು ಆವರಣದಲ್ಲಿ ಆಚರಿಸಿದರೆ, ಅವರನ್ನು ಒಂದು ಸೆಮಿಸ್ಟರ್‌ವರೆಗೆ ಕಾಲೇಜಿನಿಂದ ಅಮಾನತು ಮಾಡಲಾಗುತ್ತದೆ ಹಾಗೂ 25 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕಾಲೇಜಿನ ಸಹಾಯಕ ಡೀನ್ ಡಾ. ರಾಕೇಶ್ `ನಾವು ಕಠಿಣ ನಿಯಮಗಳಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದೇವೆ ಎಂದು ಆರೋಪಿಸಲಾಗುತ್ತಿದೆ. ಆದರೆ ಕೇವಲ ಎರಡರಷ್ಟು ವಿದ್ಯಾರ್ಥಿಗಳು ಮಾತ್ರ ಓದಿನಲ್ಲಿ ಹಿಂದುಳಿದಿದ್ದಾರೆ. ನಮ್ಮ ನಿಯಮಗಳು ಶಿಸ್ತುಬದ್ಧವಾಗಿಯೇ ಇವೆ~ ಎಂದರು.`ಜಿತೇಂದ್ರನನ್ನು ರಕ್ಷಿಸಲು ಅವರ ಸಹಪಾಠಿಗಳು ಮುಂದಾದಾಗ ಇದು ಅಕ್ರಮವಾಗುತ್ತದೆ. ಪೊಲೀಸರು ನಿಮ್ಮ ಬೆರಳಚ್ಚುಗಳನ್ನು ಪತ್ತೆ ಹಚ್ಚಿ ನಿಮ್ಮನ್ನು ಬಂಧಿಸುತ್ತಾರೆ. ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತೀರಿ. ಪೊಲೀಸರು ಬರುವವರೆಗೆ ಕಾಯಿರಿ, ಹತ್ತಿರ ಹೋಗಬೇಡಿ~ ಎಂದು ಕಾಲೇಜಿನ ವಸತಿ ನಿಲಯದ ವಾರ್ಡನ್‌ಗಳಾದ ಲಕ್ಷ್ಮಣ್ ಕರೆ ಮತ್ತು ಕರುಣಾಕರ್ ಬೆದರಿಕೆ ಹಾಕಿದ್ದರಿಂದ ವಿದ್ಯಾರ್ಥಿಗಳು ಅಸಹಾಯಕರಾಗಿದ್ದರು.`ಜೀತೆಂದ್ರ ಫ್ಯಾನ್‌ಗೆ ನೇಣು ಹಾಕಿಕೊಂಡು ಒದ್ದಾಡುತ್ತಿರುವುದ್ದರೂ ವಾರ್ಡನ್‌ಗಳು  ನೆರವಿಗೆ ಬಾರದೆ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು. 25 ನಿಮಿಷಗಳಾದ ನಂತರ ವೈದ್ಯರು ಕೊಠಡಿಯನ್ನು ಪ್ರವೇಶಿಸಿದರು.ಇನ್ನೂ ಉಸಿರಾಡುತ್ತಿದ್ದ ಜಿತೇಂದ್ರನನ್ನು ಬೇರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. ಮಾರ್ಗ ಮಧ್ಯ ಅವರು ಸಾವನ್ನಪ್ಪಿದರು~ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಕಾಲೇಜಿನಲ್ಲಿರುವ ವೈದ್ಯರು ಎಂಬಿಬಿಎಸ್ ಮಾಡಿದ್ದಾರೆ. ಆದರೆ ಎಲ್ಲಾ ಕಾಯಿಲೆಗೂ ನೋವು ನಿರೋಧಕ ಮಾತ್ರೆಗಳನ್ನೇ ನೀಡುತ್ತಾರೆ ಅಥವಾ ಬೇರೆ ಆಸ್ಪತ್ರೆಗೆ ಹೋಗಲು ಶಿಫಾರಸು ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.`ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವಿಲ್ಲ. ಎಲ್ಲಾ ಕಾಲೇಜುಗಳ ಪರೀಕ್ಷೆಯಲ್ಲಿ ಪ್ರಶ್ನೆಗಳಲ್ಲಿ ಆಯ್ಕೆಗಳಿರುತ್ತವೆ. ಆದರೆ ಇಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕು. ಪ್ರತಿ ವಿದ್ಯಾರ್ಥಿಯೂ ಪ್ರತಿ ವರ್ಷ 1.8 ಲಕ್ಷ ಶುಲ್ಕ ಪಾವತಿಸುತ್ತಾರೆ. ಇದನ್ನು ಮುಂದಿನ ಸೆಮಿಸ್ಟರ್‌ನಿಂದ 2.2 ಲಕ್ಷಕ್ಕೆ ಹೆಚ್ಚಿಸಲು ಆಡಳಿತ ತಿರ್ಮಾನಿಸಿದೆ~ ಎಂದು ವಿದ್ಯಾರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.ಯಾರಾದರೂ ದೂರು ನೀಡಿದರೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಇನ್‌ಸ್ಪೆಕ್ಟರ್ ಎನ್.ಟಿ.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

 

ಪ್ರತಿಕ್ರಿಯಿಸಿ (+)