ಶನಿವಾರ, ಮೇ 21, 2022
23 °C

ಎಂ.ಪಿ. ಪ್ರಕಾಶ್ ನುಡಿನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಮುಖಿ, ಸಮಾಜಮುಖಿ, ಕ್ರಿಯಾಶೀಲ, ಜನಮುಖಿ, ಮಲ್ಲಿಗೆ ಮಡಿಲು... ಇವು ಹಂಪಿ ಪ್ರಕಾಶ್ ಎಂದೇ ಖ್ಯಾತರಾದ ಎಂ.ಪಿ. ಪ್ರಕಾಶ್ ಅವರ ಬಹುಮುಖಿ ವ್ಯಕ್ತಿತ್ವವನ್ನು  ಬಣ್ಣಿಸುವ ಶಬ್ದಗಳೇ. ಆದರೆ ಅದಕ್ಕಿಂತ ಮುಖ್ಯವಾಗಿ ಎಂ.ಪಿ. ಪ್ರಕಾಶ್ ಅವರನ್ನು ಅಭಿನಂದಿಸುವ ಸಲುವಾಗಿ ಅವರ ಅಭಿಮಾನಿಗಳು ಹೊರ ತಂದ ವಿವಿಧ ಅಭಿನಂದನಾ ಗ್ರಂಥಗಳ ಶೀರ್ಷಿಕೆಗಳು.ಮರಿಸ್ವಾಮಯ್ಯ ಮಠದ ಪಾಟೀಲ ಪ್ರಕಾಶ್ ಎಂದರೆ ಬಹುಶಃ ಇದು ಯಾರ ಹೆಸರು ಎಂದು ಯಾರಿಗೂ ಗೊತ್ತಾಗದು. ಅದೇ ಎಂ.ಪಿ. ಪ್ರಕಾಶ್ ಎಂದರೆ ಇಡೀ ನಾಡಿಗೇ ಚಿರಪರಿಚಿತ.ಹೊಸಪೇಟೆ ಸಮೀಪ ಇರುವ ತುಂಗಭದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆಯಾದ ನಾರಾಯಣ ದೇವರ ಕೆರೆ ಎಂಬ ಗ್ರಾಮದಲ್ಲಿ ಹುಟ್ಟಿದ ಪ್ರಕಾಶ್‌ರ ಕುಟುಂಬ ಗ್ರಾಮ ಮುಳುಗಡೆಯ ನಂತರ ಹಗರಿಬೊಮ್ಮನಹಳ್ಳಿ ಸಮೀಪದ ವಲ್ಲಭಾಪುರಕ್ಕೆ ಬಂದು ನೆಲೆ ಊರಿತು. ನಂತರ ಹೂವಿನ ಹಡಗಲಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಪ್ರಕಾಶ್, ಹಡಗಲಿಯ ಮುಳ್ಳುಬೇಲಿಯ ಮೇಲೆ ಹಬ್ಬಿದ ಸುವಾಸಿತ ಮಲ್ಲಿಗೆ.ರಾಜಕೀಯದಲ್ಲಿ ಹಲವು ಏಳು ಬೀಳುಗಳನ್ನು ಕಂಡ ಈ ಸಮಾಜವಾದಿ ರಾಜಕಾರಣಿ, ಸೋತಾಗಲೆಲ್ಲ ಸಾಂಸ್ಕೃತಿಕ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಂಡು ಅದನ್ನು ಬೆಳೆಸುವ ಜತೆಗೆ ತಾವೂ ಬೆಳೆದರು. ಅಂತಲೇ ಹೀಗಾಗಿಯೇ ನಾಡಿನ ಸಾರಸ್ವತ ಲೋಕದ ಅನೇಕ ಗಣ್ಯರು ಅನೇಕ ಪ್ರಕಾಶ್‌ರನ್ನು ಗುರುತಿಸಿಕೊಳ್ಳುವುದು ಸಾಹಿತಿ, ಕಲಾವಿದ ಎಂದೇ.

ರಾಮ ಮನೋಹರ ಲೋಹಿಯಾರ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿ ನೆಲೆಗಟ್ಟಿನ ರಾಜಕಾರಣಿಯಾಗಿ ಬೆಳೆದುಬಂದ ಎಂ.ಪಿ. ಪ್ರಕಾಶ್, ಸಂಡೂರಿನ ಘೋರ್ಪಡೆ ಮನೆತನದ ವಿರುದ್ಧ ಮೊಟ್ಟ ಮೊದಲು ಧ್ವನಿ ಎತ್ತಿದವರು. ತುರ್ತು ಪರಿಸ್ಥಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ರಾಜ್ಯದ ಮೊಟ್ಟಮೊದಲು ಕಾಂಗ್ರೆಸ್ಸೇತರ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ ನಾಯಕತ್ವದಲ್ಲಿ ಸಚಿವರಾಗಿ, ಉಪಮುಖ್ಯಮಂತ್ರಿ ಸ್ಥಾನದವರೆಗೂ ಏರಿದವರು.ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್. ಪಟೇಲರಿಂದ ‘ಬುದ್ಧಿವಂತ ಮಂತ್ರಿ’ ಎಂಬ ಪಟ್ಟವನ್ನೂ ಪಡೆದಿದ್ದ ಎಂಪಿಪಿ ಅವರ ಕನಸಿನ ಕೂಸು ಹಂಪಿ ಉತ್ಸವ. ಮೈಸೂರು ಅರಸರ ಕಾಲದಲ್ಲಿ ದಸರಾ ಉತ್ಸವ ಮೊದಲು ಹಂಪಿಯಲ್ಲೇ ನಡೆಯುತ್ತಿತ್ತು. ಹಾಗಾಗಿಯೇ ಹಂಪಿಯಲ್ಲಿ ಈಗಲೂ ಮಹಾನವಮಿ ದಿಬ್ಬ ಇದೆ. ನಂತರದ ವರ್ಷಗಳಲ್ಲಿ ದಸರಾ ಮೈಸೂರಿಗೆ ಸ್ಥಳಾಂತರವಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ.1986ರಲ್ಲಿ ಆಗಿನ ಜನತಾ ಪಕ್ಷದ ಅಧಿಕಾರಾವಧಿಯಲ್ಲಿ ಶುರುವಾದ ಹಂಪಿ ಉತ್ಸವ ನಂತರ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ನಿಂತು ಹೋದಾಗ ಮತ್ತೆ ಅಧಿಕಾರಕ್ಕೆ ಬಂದಾಗ ಎಂಪಿ ಪ್ರಕಾಶ್ ಮಾಡಿದ ಮೊದಲ ಕೆಲಸವೆಂದರೆ ಹಂಪಿ ಉತ್ಸವ ಆಚರಣೆ ಪ್ರತಿ ವರ್ಷ ನಡೆಯಬೇಕೆಂದು ಸರ್ಕಾರಿ ಸುತ್ತೋಲೆ ಹೊರಡಿಸಿ ಅದಕ್ಕೆ ಬಜೆಟ್‌ನಲ್ಲಿ ಹಣ ಮೀಸಲಾಗಿ ಇರಿಸಿದ್ದು. ರಾಜಕೀಯ ಸ್ಥಿತ್ಯಂತರದಿಂದಾಗಿ ತಮ್ಮ ಕೊನೆಗಾಲದಲ್ಲಿ ಕಾಂಗ್ರೆಸ್ ಸೇರಿದ್ದ ಎಂಪಿಪಿ ಅವರಿಗೆ ಈ ಬಾರಿ ಉತ್ಸವದ ಆಮಂತ್ರಣ ಪತ್ರಿಕೆಯೂ ಹೋಗಿರಲಿಲ್ಲ ಎಂಬುದು ಕಟು ವಾಸ್ತವವೇ ಸರಿ.ನಾಟಕರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಸೂರ್ಯಶಿಕಾರಿ (ಬಂಗಾಳಿ ನಟ ಉತ್ಪಲ್ ದತ್ ಅವರ ಇದೇ ಹೆಸರಿನ ಕೃತಿ) ಎಂಬ ನಾಟಕವನ್ನೂ ರಚಿಸಿದ್ದರು. ಪಾಯಸ್ ಕಂಡ ವಿಜಯನಗರ (ಅನುವಾದ), ಚುನಾವಣೆಯ ಸುಧಾರಣೆಗಳು ಹಾಗೂ ರಾಜಕೀಯ ಸಂಕಲ್ಪದ ಅಭಾವ (ಮೂಲ: ರಾಮಕೃಷ್ಣ ಹೆಗಡೆ, ಅನುವಾದ: ಎಂ.ಪಿ. ಪ್ರಕಾಶ್ ಹಾಗೂ ವಿದ್ಯಾಶಂಕರ), ಪ್ರೀತಿಯೇ ದೇವರು ಮತ್ತು ಇತರ ಕಥೆಗಳು (ಅನುವಾದ), ಕಳಿಂಗ ಸೂರ್ಯ ಮತ್ತು ಇತರ ಲೇಖನಗಳು, ನನ್ನ ಜೀವನ ಮತ್ತು ರಾಜಕೀಯ (ಇಂಗ್ಲಿಷ್ ಮೂಲ: ಎಸ್. ನಿಜಲಿಂಗಪ್ಪ, ಕನ್ನಡಕ್ಕೆ: ಎಂ.ಪಿ. ಪ್ರಕಾಶ್) ಅವರ ಕೃತಿಗಳು. 1998ರಲ್ಲಿ ನಾಟಕ ಅಕಾಡೆಮಿಯ ಫೆಲೋಶಿಪ್ ಪಡೆದಿದ್ದರು.ಹಡಗಲಿಯಲ್ಲಿ ರಂಗಭಾರತಿ ಸ್ಥಾಪಿಸಿ ನಾಟಕಗಳಿಗೆ ಪ್ರೋತ್ಸಾಹ ನೀಡಿದ್ದ ಎಂ.ಪಿ. ಪ್ರಕಾಶ್, ಬಳ್ಳಾರಿಯ ಅನಂತಪುರ ರಸ್ತೆಯ ಸಾಂಸ್ಕೃತಿಕ ಸಮುಚ್ಚಯಕ್ಕೆ ಪುನರುಜ್ಜೀವನ ನೀಡಿದ್ದರು.ರಾಜ್ಯದ ಯಾವುದೇ ಮೂಲೆಗೆ ಹೋದರೂ ಅವರ ಹಿಂದೆ ಜನರ ದಂಡೇ ಇರುತ್ತಿತ್ತು. ಈ ಜನಜಂಗುಳಿ ಅವರು ರಾಜಕಾರಣಿ ಎಂಬ ಕಾರಣಕ್ಕಲ್ಲ; ಬದಲಾಗಿ ಅವರೊಬ್ಬ ಸಾಂಸ್ಕೃತಿಕ ಜೀವಿ, ಸಜ್ಜನ, ಮೃದು ಭಾಷಿ ಎಂಬ ಕಾರಣಕ್ಕೆ. ಜನರ ಮಧ್ಯೆ ಪ್ರಕಾಶಿಸುತ್ತಿದ್ದ ಈ ಸಾಂಸ್ಕೃತಿಕ ಜೀವಿ ಈಗ ದೈಹಿಕವಾಗಿ ಇಲ್ಲವಾದರೂ ಅವರ ನೆನಪು ಜನರ ಮನದಲ್ಲಿ ಸದಾ ಅಚ್ಚಳಿಯದೇ ಇರುತ್ತದೆ ಎಂಬುದು ಸತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.