ಮಂಗಳವಾರ, ಜುಲೈ 14, 2020
27 °C

ಎಚ್‌ಎಎಲ್‌ಗೆ ಚಿರಾಗ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಎಎಲ್‌ಗೆ ಚಿರಾಗ್ ಸವಾಲು

ಬೆಂಗಳೂರು: ಕಳೆದ ಪಂದ್ಯದಲ್ಲಿ ವಿವಾ ಕೇರಳ ತಂಡದ ಎದುರು ಸೋಲು ಅನುಭವಿಸಿ ನಿರಾಸೆ ಹೊಂದಿರುವ ತವರು ನೆಲದ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ (ಎಚ್‌ಎಎಲ್) ಕ್ಲಬ್ ತಂಡದವರು ಭಾನುವಾರ ನಡೆಯಲಿರುವ ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಚಿರಾಗ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಪುಟಿದೇಳುವ ವಿಶ್ವಾಸ ಹೊಂದಿದ್ದಾರೆ.ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.45ಕ್ಕೆ ಪಂದ್ಯ ನಡೆಯಲಿದೆ. ಈ ಟೂರ್ನಿಯಲ್ಲಿ ಎಚ್‌ಎಎಲ್ ತಂಡ ಒಟ್ಟು 18 ಪಂದ್ಯಗಳನ್ನು ಆಡಿದ್ದು 19 ಪಾಯಿಂಟ್‌ಗಳನ್ನು ಕಲೆ ಹಾಕಿ 9ನೇ ಸ್ಥಾನದಲ್ಲಿದೆ. ಚಿರಾಗ್ ಯುನೈಟೆಡ್ 17 ಪಂದ್ಯಗಳನ್ನು ಆಡಿದ್ದು, ಒಟ್ಟು 23 ಪಾಯಿಂಟ್‌ಗಳನ್ನು ಹೊಂದಿ 7ನೇ ಸ್ಥಾನವನ್ನು ಗಳಿಸಿದೆ.‘ಸ್ನಾಯು ಸೆಳೆತದ ತೊಂದರೆಯಿಂದ ಬಳಲುತ್ತಿರುವ ಎಚ್‌ಎಎಲ್‌ನ ಮಾಜಿ ನಾಯಕ ಕ್ಸೇವಿಯರ್ ವಿಜಯ್‌ಕುಮಾರ್ ವಿವಾ ಕೇರಳ ವಿರುದ್ಧದ ಪಂದ್ಯದಲ್ಲಿ  ಆಡಿರಲಿಲ್ಲ. ಅವರಿಗೆ  ಮೂರರಿಂದ ನಾಲ್ಕು ವಾರಗಳ ವಿಶ್ರಾಂತಿ ಅಗತ್ಯವಿರುವುದರಿಂದ ಅವರು ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಅಂಕಿತ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗುವುದು’ ಎಂದು ಎಚ್‌ಎಎಲ್ ತಂಡದ ಮ್ಯಾನೇಜರ್ ಮುರಳೀಧರನ್ ತಿಳಿಸಿದ್ದಾರೆ.ತಂಡದಲ್ಲಿ ಗಾಯಾಳುಗಳ ಸಮಸ್ಯೆ ಇದ್ದರೂ ಕೂಡ ಭಾನುವಾರದ ಚಿರಾಗ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಾರೆ ಎಂದು ಅವರು ಹೇಳಿದ್ದಾರೆ.‘ಎಚ್‌ಎಎಲ್ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯಲು ಈ ಪಂದ್ಯ ನಮಗೊಂದು ಉತ್ತಮ ಅವಕಾಶ. ಖಂಡಿತವಾಗಿಯೂ ನಮಗೆ ವಿಶ್ವಾಸವಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂದ ಚಿರಾಗ್ ಯುನೈಟೆಡ್‌ನ ಕೋಚ್ ಸಂಜಯ್ ಸೇನ್, ಎಚ್‌ಎಎಲ್ ಕೂಡಾ ಪ್ರಬಲ ತಂಡವಾಗಿದ್ದರಿಂದ ಗೆಲುವು ಯಾರಿಗಾದರೂ ಒಲಿಯಬಹುದು ಎನ್ನುವುದನ್ನು ಹೇಳಲು ಮರೆಯಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.