ಬುಧವಾರ, ಏಪ್ರಿಲ್ 14, 2021
25 °C

ಎಚ್‌ಡಿಕೆ ಭೇಟಿಯಾದ ಬೇಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವ ಸ್ಥಾನದಿಂದ ವಂಚಿತರಾಗಿರುವ ಬಿಜೆಪಿಯ ಸುಮಾರು 20ಕ್ಕೂ ಅಧಿಕ ಶಾಸಕರು ಅಸಮಾಧಾನಗೊಂಡಿರುವ ಬೆನ್ನಿಗೇ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

3-4 ದಿನಗಳಿಂದ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿ ಸಂಪುಟ ರಚನೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಒತ್ತಡ ಹೇರುತ್ತಿರುವ ಶಾಸಕರು ತಮ್ಮ ಪಟ್ಟನ್ನು ಬಿಗಿಗೊಳಿಸಲು ನಿರ್ಧರಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡು, ಮುಂದಿನ ಚುನಾವಣೆಯಲ್ಲಿ ಆ ಪಕ್ಷದಿಂದ ಸ್ಪರ್ಧಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಬೇಳೂರು ಗೋಪಾಲಕೃಷ್ಣ ಅವರು ಸೋಮವಾರ ಸಂಜೆ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ಸುಮಾರು ಅರ್ಧ ಗಂಟೆ ಕಾಲ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ಗೊತ್ತಾಗಿದೆ.

`ಚರ್ಚೆಯ ವಿವರಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದ ಗೋಪಾಲಕೃಷ್ಣ, ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ವೈಯಕ್ತಿಕ ಕಾರಣಕ್ಕಾಗಿ ಅವರನ್ನು ಭೇಟಿಯಾಗಿದ್ದೆ ಅಷ್ಟೇ~ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

ಅಧ್ಯಕ್ಷ ಸ್ಥಾನ ನೀಡಲಿ: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಬೇಕು ಎಂದೂ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದರು. ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸದಾನಂದಗೌಡ ಅವರು ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಮುಖ್ಯಮಂತ್ರಿ ಆಗಿಯೂ ಒಳ್ಳೆಯ ಆಡಳಿತ ನೀಡಿದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ~ ಎಂದರು.

`ಸಂಪುಟದಲ್ಲಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ಶಾಸಕರು ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಸಂಪುಟದಲ್ಲಿರುವ ಕಳಂಕಿತ ಸಚಿವರನ್ನು ಕೈಬಿಡಬೇಕು ಎನ್ನುವುದು ನಮ್ಮ ಬೇಡಿಕೆ. 22ಕ್ಕೂ ಹೆಚ್ಚು ಶಾಸಕರು ನಮ್ಮಂದಿಗೆ ಇದ್ದಾರೆ. ಬುಧವಾರ ಮತ್ತೆ ಸಭೆ ಸೇರಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡುವ ಸಂಬಂಧ ಚರ್ಚಿಸಲಾಗುವುದು~ ಎಂದು ಅವರು ತಿಳಿಸಿದರು.

`ಸಂಪುಟದಲ್ಲಿ ಸ್ಥಾನಮಾನ ನೀಡಬೇಕು ಎಂಬುದು ನಮ್ಮ ಆಗ್ರಹ. ಇದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗುವುದು. ಸಚಿವ ಸ್ಥಾನ ದೊರೆಯದವರಿಗೆ ನಿಗಮ-ಮಂಡಳಿಗಳಲ್ಲಿ ಆದ್ಯತೆ ನೀಡುವುದಾಗಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅಧಿಕಾರ ಕೊಡಿ ಎಂದು ನಾವು ಅವರನ್ನು ಕೇಳಿಲ್ಲ. ಸಂಪುಟ ರಚನೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಂಬುದಷ್ಟೇ~ ನಮ್ಮ ಆಗ್ರಹವಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.