ಭಾನುವಾರ, ಮೇ 16, 2021
28 °C

ಎಡವಬಾರದಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರು ಅನಿರೀಕ್ಷಿತವಾದ ಬೆಳವಣಿಗೆಯಲ್ಲಿ ಕರ್ನಾಟಕದ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗೃಹ ನಿರ್ಮಾಣ ಸಂಘಗಳ ಉಪನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಪಡೆದಿದ್ದಾರೆಂಬುದು ಅವರ ವಿರುದ್ಧದ ಆರೋಪ.ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ವಾಪಸು ನೀಡಿರುವುದರಿಂದ ರಾಜೀನಾಮೆ ಅಗತ್ಯ ಇಲ್ಲ ಎಂಬ ಮೊಂಡುವಾದವನ್ನು ಮುಂದೊಡ್ಡದೆ ಅಧಿಕಾರ ತ್ಯಜಿಸಿರುವುದು ಒಂದು ಒಳ್ಳೆಯ ಸಂಪ್ರದಾಯ. ಕಾನೂನು ಪಾಲನೆ ಪ್ರತಿಯೊಬ್ಬ ನಾಗರಿಕನ ಸಹಜ ಸ್ವಭಾವ ಆಗಬೇಕು, ನಮ್ಮಲ್ಲಿ ಕಾನೂನು ಉಲ್ಲಂಘನೆ ಸಹಜ ಸ್ವಭಾವ ಆಗಿಬಿಟ್ಟಿದೆ.ಇದರಿಂದಾಗಿ ಸಾಮಾನ್ಯ ಜನತೆ ಮಾತ್ರವಲ್ಲ, ಕಾನೂನು ಮತ್ತು ನಿಯಮವಾಳಿಗಳ ಬಗ್ಗೆ ತಿಳುವಳಿಕೆ ಇರುವವರು ಕೂಡಾ ತಮಗರಿವಿಲ್ಲದಂತೆಯೇ ಅಡ್ಡ ಹಾದಿ ತುಳಿದುಬಿಡುತ್ತಾರೆ. ಕಾನೂನು ಉಲ್ಲಂಘನೆಗೆ ಅಜ್ಞಾನ ಕಾರಣವಾಗುವುದಿಲ್ಲ ಎಂದು ನ್ಯಾಯಶಾಸ್ತ್ರ ಹೇಳುತ್ತದೆ.ಕಾನೂನಿನಲ್ಲಿ ಪಾಂಡಿತ್ಯ ಹೊಂದಿರುವ ನ್ಯಾಯಮೂರ್ತಿಗಳು ಗೃಹನಿರ್ಮಾಣ ಸಂಘಗಳ ಉಪನಿಯಮಗಳನ್ನು ತಿಳಿಯದಿರುವಷ್ಟು ಅಮಾಯಕರೆಂದು ಹೇಳಲಾಗುವುದಿಲ್ಲ. ಈ ದೃಷ್ಟಿಯಿಂದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಿತ್ತು.ಅವರೂ ಕೂಡಾ ಸಾಮಾನ್ಯ ಮನುಷ್ಯನಂತೆ ಸಂಪತ್ತಿನ ಲಾಲಸೆಗೆ ಬಿದ್ದು ಎಡವಿರುವುದು ಅವರ ಮೇಲೆ ಅಭಿಮಾನ ಇಟ್ಟುಕೊಂಡವರನ್ನು ನಿರಾಶೆಗೊಳಿಸಿದೆ.  ತಪ್ಪು ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರೊಬ್ಬರದ್ದೇ ಅಲ್ಲ. ಲೋಕಾಯುಕ್ತರಾಗಿ ನೇಮಕ ಮಾಡುವಾಗ ಅಭ್ಯರ್ಥಿಗಳ ಅರ್ಹತೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕಾಗಿದ್ದ ರಾಜ್ಯ ಸರ್ಕಾರ ಕೂಡಾ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ವಿರೋಧಪಕ್ಷಗಳ ನಾಯಕರ ಜತೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ ಲೋಕಾಯುಕ್ತರನ್ನು ನೇಮಿಸಬೇಕೆಂದು ಕಾನೂನು ಹೇಳುತ್ತದೆ.ನ್ಯಾ. ಸಂತೋಷ್ ಹೆಗ್ಡೆ ಅವರು ನಿವೃತ್ತಿಯಾದ ತಕ್ಷಣ ಅನುಮಾನ ಪಡುವಷ್ಟು ಅವಸರದಿಂದ ಹಿಂದಿನ ಮುಖ್ಯಮಂತ್ರಿಗಳು ಹೊಸ ಲೋಕಾಯುಕ್ತರನ್ನು ನೇಮಿಸಿಬಿಟ್ಟಿದ್ದರು.ತಮ್ಮ ಜತೆ ಸರಿಯಾಗಿ ಸಮಾಲೋಚನೆ ನಡೆಸಿಲ್ಲ ಎಂದು ವಿರೋಧಪಕ್ಷಗಳ ನಾಯಕರು ಗೊಣಗಾಡಿದರೂ ಸರಿಯಾದ ಚಿತ್ರವನ್ನು ಅವರೂ ಸಾರ್ವಜನಿಕರ ಮುಂದೆ ಇಟ್ಟಿರಲಿಲ್ಲ.ಈ ಅನುಭವ ಮುಂದಿನ ನೇಮಕದ ಸಂದರ್ಭದಲ್ಲಿ ಪಾಠ ಆಗಬೇಕು. ಹೊಸ ಲೋಕಾಯುಕ್ತರನ್ನು ನೇಮಕ ಮಾಡುವಾಗ ರಾಜ್ಯಸರ್ಕಾರ ವಿರೋಧ ಪಕ್ಷಗಳ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು,ಅಭ್ಯರ್ಥಿಗಳ ಹಿನ್ನೆಲೆಯನ್ನು ಹೆಚ್ಚು ಎಚ್ಚರಿಕೆಯಿಂದ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು.ಭ್ರಷ್ಟಾಚಾರದಿಂದಾಗಿ ರಾಜ್ಯ ಕಳೆದುಕೊಂಡಿರುವ ಮಾನವನ್ನು ಹಿಂದಿನ ಲೋಕಾಯುಕ್ತರು ತಂದುಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ಸರ್ಕಾರದ ಕರ್ತವ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.