ಭಾನುವಾರ, ಫೆಬ್ರವರಿ 28, 2021
29 °C
ಶನಿವಾರ ಮಧ್ಯರಾತ್ರಿಯಿಂದಲೇ ಜಾರಿ: ಸವಾರರ ಆಕ್ರೋಶ

ಎನ್‌ಎಚ್‌ 7 ಟೋಲ್‌ ದರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್‌ಎಚ್‌ 7 ಟೋಲ್‌ ದರ ಹೆಚ್ಚಳ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.ಏಕಾಏಕಿ 2–3 ಪಟ್ಟು ಶುಲ್ಕ ಹೆಚ್ಚಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ಆಕ್ರೋಶಗೊಂಡ ವಾಹನ ಸವಾರರು,  ರಾತ್ರಿ 12 ಗಂಟೆಗೆ ಪರಿಷ್ಕೃತ ದರ ಅಳವಡಿಸುತ್ತಿದ್ದಂತೆಯೇ ಟೋಲ್‌ ಸಂಗ್ರಹಕಾರರ ಜತೆ ಮಾತಿನ ಚಕಮಕಿಗೆ ಇಳಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕೆಲ ಟ್ಯಾಕ್ಸಿ ಚಾಲಕರು ಟೋಲ್‌ ಕೇಂದ್ರದ ಬಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು.22 ಕಿ.ಮೀ ಮಾರ್ಗದ ಈ ಹೆದ್ದಾರಿಯಲ್ಲಿ ಒಂದು ಬಾರಿ ಪ್ರಯಾಣಿಸಲು ಕಾರು, ಜೀಪು, ಹಗುರ ವಾಹನಗಳಿಗೆ ರೂ 75,   ಲಘು ವಾಣಿಜ್ಯ ವಾಹನ (ಎಲ್‌ಸಿವಿ) ಹಾಗೂ ಮಿನಿ ಬಸ್‌ಗಳಿಗೆ ರೂ120, ಬಸ್‌, ಲಾರಿ ಹಾಗೂ ಎರಡು ಆ್ಯಕ್ಸಲ್‌ ವಾಹನಗಳಿಗೆ ರೂ 235,  ಮೂರರಿಂದ ಆರು ಆ್ಯಕ್ಸಲ್‌ ವಾಹನಗಳಿಗೆ ರೂ 380 ಹಾಗೂ ಜೆಸಿಬಿಯಂತಹ ಬೃಹತ್ ಗಾತ್ರದ ವಾಹನಗಳಿಗೆ ರೂ 470 ಶುಲ್ಕ ಹೆಚ್ಚಳ ಮಾಡಲಾಗಿದೆ.ಈ ಹಿಂದೆ ಸಂಗ್ರಹ ಮಾಡುತ್ತಿದ್ದ ಶುಲ್ಕವೇ ಸಾಕಷ್ಟು ಹೆಚ್ಚಿತ್ತು. ಹೀಗಿರುವಾಗ ಯಾವುದೇ ಮುನ್ಸೂ­ಚನೆ ನೀಡದೇ ಹೆದ್ದಾರಿ ಪ್ರಾಧಿಕಾರ ಏಕಾಏಕಿ ಟೋಲ್‌ ಶುಲ್ಕ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದರು.

‘ಈ ಹೆದ್ದಾರಿಯಲ್ಲಿ ಸರ್ವೀಸ್‌ ರಸ್ತೆ, ಸಮರ್ಪಕ ತಡೆಗೋಡೆ ಹಾಗೂ ಸರಿಯಾದ ಮಾರ್ಗಸೂಚಿಗಳು ಇಲ್ಲ.  ಆದರೂ, ಸಾರ್ವಜನಿಕರಿಂದ ಅವೈಜ್ಞಾ­ನಿಕ­ವಾಗಿ ಹೆಚ್ಚಿನ ಪ್ರಮಾಣದ ಶುಲ್ಕ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸಲಾಗುತ್ತಿದೆ’ ಎಂದು ಮೆಘಾ ಕ್ಯಾಬ್‌ ಚಾಲಕ ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.‘ಸಾಲ ಮಾಡಿ ವಾಹನಗಳನ್ನು ಖರೀದಿ ಮಾಡಿದ್ದೇನೆ. ಈಗಾಗಲೇ ತೆರಿಗೆ ರೂಪ­ದಲ್ಲಿ ಸಾಕಷ್ಟು ಹಣ ಪಾವತಿಸ­ಲಾಗು­ತ್ತಿದೆ. ಇಷ್ಟೊಂದು ಪ್ರಮಾಣ­ದಲ್ಲಿ ಟೋಲ್‌ ದರ ಹೆಚ್ಚಳ ಮಾಡಿದರೆ ಸಾಮಾನ್ಯ ಚಾಲಕರ ಪಾಡೇನು’ ಎಂದು ಟ್ಯಾಕ್ಸಿ ಚಾಲಕ ಎಸ್‌. ಸತ್ಯ ಅಳಲು ತೋಡಿಕೊಂಡರು.ಪೊಲೀಸ್ ಬಂದೋಬಸ್ತ್‌:  ‘ಎನ್‌ಎಚ್‌7ರಲ್ಲಿ ಎರಡು ಟೋಲ್‌ ಕೇಂದ್ರಗಳಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ  ಪ್ರತಿ ಕೇಂದ್ರದ ಬಳಿಯೂ 50 ಮಂದಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸ­ಲಾಗಿದೆ’ ಎಂದು ವಿಮಾನ ನಿಲ್ದಾಣ ಪೊಲೀಸರು ತಿಳಿಸಿದ್ದಾರೆ.‘ನಗರದಿಂದ ವಿಮಾನ ನಿಲ್ದಾ­ಣಕ್ಕೆ ಹೋಗುವ ಟ್ಯಾಕ್ಸಿಗಳು ಈ ಮೊದಲು ಯಾವುದೇ ಟೋಲ್‌ ಶುಲ್ಕ ಪಾವತಿಸುತ್ತಿರಲಿಲ್ಲ. ಆದರೆ, ವಿಮಾನ ನಿಲ್ದಾಣದಿಂದ ನಗರಕ್ಕೆ ವಾಪ­ಸಾ­ಗುವಾಗ ₨ 30 ಕೊಡ­ಬೇಕಿತ್ತು. ಆದರೆ, ಈಗ ದರ ಹೆಚ್ಚಳ ಮಾಡಿರುವುದರಿಂದ ಪ್ರತಿ ಬಾರಿಯ ಓಡಾಟಕ್ಕೂ ₨ 75 ಪಾವತಿಸ­ಬೇಕಿದೆ. ಈ ಜನವಿರೋಧಿ ಕ್ರಮವನ್ನು ಹಿಂಪಡೆ­ಯದಿದ್ದರೆ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು’

– ಟಿ.ಪ್ರಭಾಕರನ್‌, ಅಧ್ಯಕ್ಷರು, ಸಿಟಿ ಟ್ಯಾಕ್ಸಿ ಅಸೋಸಿಯೇಷನ್‌

‘ಈ ಮಾರ್ಗವಾಗಿಹೋಗಿ ವಾಪಸ್‌ ಬರಲು ಪ್ರತಿ ಲಾರಿ­ಯಿಂದ ಮೊದಲು ₨ 170 ಸಂಗ್ರ­ಹಿಸ­ಲಾಗುತ್ತಿತ್ತು. ಈಗ ಆ ಮೊತ್ತ­ವನ್ನು ₨ 540ಕ್ಕೆ  ಹೆಚ್ಚಿಸಿರು­ವುದು ಖಂಡನೀಯ. ಇದನ್ನ್ನು ವಿರೋಧಿಸಿ ಹೋರಾಟ ನಡೆಸಲು ಲಾರಿ ಮಾಲೀಕ­ರೊಂದಿಗೆ ಭಾನುವಾರ ಸಭೆ ನಡೆಸ­ಲಾಗು­ವುದು’

– ಜಿ.ಆರ್‌ ಷಣ್ಮುಗಪ್ಪ, ಅಧ್ಯಕ್ಷ, ಲಾರಿ ಮಾಲೀಕರ ಸಂಘ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.