ಸೋಮವಾರ, ಏಪ್ರಿಲ್ 12, 2021
23 °C

ಎನ್‌ಎಲ್‌ಬಿಸಿ ನವೀಕರಣ: ಅನುದಾನ ಯಾಕೆ ನೀಡಬೇಕು..?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ:  ಶಿಥಿಲಾವಸ್ಥೆಗೊಂಡಿರುವ ನಾರಾಯಣಪೂರ ಎಡದಂಡೆ ಮುಖ್ಯ ಕಾಲುವೆ ನವೀಕರಣಕ್ಕಾಗಿ 420 ಕೋಟಿ ರೂಪಾಯಿ ಅಂದಾಜು ಮೊತ್ತದ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು ಸಮಂಜಸವಲ್ಲ. ನೀರಾವರಿ ಯೋಜನೆಯ ಸಮೃದ್ಧಿ ಫಲವನ್ನು ಕಾಲುವೆ ಮೇಲ್ಭಾಗದ ರೈತರು ಪಡೆದುಕೊಂಡು ಲಕ್ಷಾವಧಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ವಿಚಿತ್ರವೆಂದರೆ ಇಂದಿಗೂ ಕೋಟ್ಯಂತರ ರೂಪಾಯಿ ನೀರಾವರಿ ಕರವನ್ನು ಪಾವತಿಸಿಲ್ಲ. ಕಾಲುವೆ ನವೀಕರಣಕ್ಕೆ ಸರ್ಕಾರ ಯಾಕೆ ಅನುದಾನ ನೀಡಬೇಕು ಎಂದು ನೀರು ವಂಚಿತ ರೈತರ ಪ್ರಶ್ನೆ.ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಉದ್ಧತಿ ಉಲ್ಲಂಘನೆ ಮಾಡಿ ಭತ್ತ ಬೆಳೆಯುತ್ತಿದ್ದಾರೆ ನೀರಾವರಿ ಕಾಯ್ದೆಯ ಪ್ರಕಾರ ಬೆಳೆ ಉದ್ಧತಿ ಉಲ್ಲಂಘನೆ ಮಾಡಿದರೆ ದಂಡದ ಜೊತೆಗೆ ನೀರಾವರಿ ಕರವನ್ನು ಕಡ್ಡಾಯವಾಗಿ ಪಾವತಿಸಬೇಕು.ನಿಗಮದ ನಿರ್ಲಕ್ಷ್ಯ ಧೋರಣೆ ಜನಪ್ರತಿನಿಧಿಗಳ ರೈತರಿಗೆ ತಪ್ಪು ಮಾಹಿತಿ, ಕರ ವಸೂಲಿಗೆ ಬಂದರೆ ಗ್ರಾಮೀಣ ಭಾಗದಲ್ಲಿ ರೈತರ ಹೆಸರಿನ ಗುಂಡಾಪಡೆ ತಲೆ ಎತ್ತಿ ಕರ ವಸೂಲಿದಾರರ ಹಲ್ಲೆ ಇಲ್ಲವೆ ಎಂಜಿನಿಯರ್ ಮೇಲೆ ರಾಜಕೀಯ ಒತ್ತಡ ತಂದು ಕೋಟ್ಯಂತರ ರೂಪಾಯಿ ಕರ ಪಾವತಿಯಾಗದೆ ಉಳಿದು ಕೊಂಡಿದೆ. ‘ನೀರು ಪಡೆಯುವುದು ನಮ್ಮ ಹಕ್ಕು ಎನ್ನುವ ರೈತರು ಕರ ಪಾವತಿಸುವುದು ನಮ್ಮ ಕರ್ತವ್ಯವೆಂದು ಯಾಕೆ ಭಾವಿಸುತ್ತಿಲ್ಲ’ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಯ ಶಾಸಕರು ರಾಜಕೀಯ ಸ್ವಾರ್ಥಕ್ಕಾಗಿ ನೀರಾವರಿ ಕರ ಪಾವತಿಸುವಂತೆ ಒಬ್ಬ ರೈತರಿಗೂ ಪ್ರೇರೆಪಿಸುತ್ತಿಲ್ಲ. ಅದರಲ್ಲಿ ಕೆಲ ಶಾಸಕರು ಸದನದಲ್ಲಿ ಹಿಂದಿನ ನೀರಾವರಿ ಕರವನ್ನು ಮನ್ನಾ ಮಾಡುವಂತೆ  ಪ್ರಸ್ತಾಪ ಮಾಡಲಾಗುವುದೆಂದು ರೈತರ ಮುಂದೆ ಬುರುಡೆ ಬಿಡುತ್ತಿರುವುದು ನಾಚಿಕೆಗೇಡು ಸಂಗತಿ ಎನ್ನುತ್ತಾರೆ ಖಾನಾಪೂರ ಗ್ರಾಮದ ರೈತ ಸಿದ್ದಪ್ಪ. ಪ್ರತಿವರ್ಷ ನೀರಾವರಿ ಸೌಲಭ್ಯವನ್ನು ಪಡೆದು ಲಕ್ಷಾವಧಿ ರೂಪಾಯಿ ಸಂಪಾದಿಸುವ ರೈತರು ಯಾಕೆ ಕಡ್ಡಾಯವಾಗಿ ನೀರಾವರಿ ಕರ ಪಾವತಿಸುತ್ತಿಲ್ಲ. ಬಾಕಿ ಉಳಿದ ಕೋಟ್ಯಂತರ ರೂಪಾಯಿ ನೀರಾವರಿ ಕರವನ್ನು ಪ್ರಾಮಾಣಿಕವಾಗಿ  ನೀರು ಪಡೆದ ರೈತರು ಪಾವತಿಸಿದರೆ ಸರ್ಕಾರದಿಂದ ನಯಾ ಪೈಸೆ ಅನುದಾನ ಪಡೆಯದೆ ಅತ್ಯುತ್ತಮ ಗಣಮಟ್ಟದ ಕಾಲುವೆ ನವೀಕರಿಸಲು ಅವಕಾಶವಿದೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುವ ಪ್ರವೃತ್ತಿಯನ್ನು ಸ್ವಾರ್ಥ ರಾಜಕಾರಣಿ ಗಳು ಕೈ ಬಿಡಬೇಕೆಂದು ನೀರು ವಂಚಿತ ಕೆಳಭಾಗದ ರೈತ ಮುಖಂಡ ಚಂದ್ರಶೇಖರ ನಾಯ್ಕಲ್ ಸಲಹೆ ಮಾಡಿದ್ದಾರೆ.ಮಾನವೀಯತೆ ಮೇಲೆ ಬೇಸಿಗೆ ಕಾಲದಲ್ಲಿ ಬೆಳೆದು ನಿಂತ ಪೈರಿಗೆ ನೀರು ಹರಿಸಿ ಎಂದು ರೈತರ ಹೆಸರಿನಲ್ಲಿ ಮುಖವಾಡ ಕೆಲ ರೈತರ ಹೆಸರಿನ ಸಂಘಟನೆಯ ನಾಯಕರು ಸ್ವಪ್ರೇರಣೆಯಿಂದ ಮೊದಲು ತಮ್ಮ ನೀರಾವರಿ ಕರ ಪಾವತಿಸಿ ನಂತರ ಸಹೋದರ ರೈತರಿಗೆ ಕಡ್ಡಾಯವಾಗಿ ಕರ ಪಾವತಿಸುವುದು ನಮ್ಮ ಹೊಣೆಗಾರಿಕೆ ಎಂದು ತಿಳಿಸಿ ಎನ್ನುತ್ತಾರೆ ರೈತರ ಸಾಯಿಬಣ್ಣ ಗೊಂದೆನೂರ. ನೀರಾವರಿ ಸೌಲಭ್ಯ ಪಡೆದ ರೈತರು ಕಡ್ಡಾಯವಾಗಿ ಬಾಕಿ ನೀರಾವರಿ ಕರ ಪಾವತಿಸಬೇಕು. ಇಲ್ಲದಿದ್ದರೆ ಪಾಹಣಿಯಲ್ಲಿ ಕರ ಬಾಕಿ ಎಂದು ನಮೂದಿಸಿ. ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆಯಲು ಬಂದಾಗ ಕಡ್ಡಾಯವಾಗಿ ನೀರಾವರಿ ಕರ ಪಾವತಿಸಿದ ಮೇಲೆ ಕೃಷಿ ಸಾಲ ಪಾವತಿಸಿ ಇಲ್ಲವೆ ನವೀಕರಿಸಿ ಎಂದು ಕೆಳ ಭಾಗದ ರೈತರು ಕೆಬಿಜೆಎನ್‌ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಗತಿಪರ ರೈತರು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.