ಶುಕ್ರವಾರ, ಜೂನ್ 18, 2021
28 °C

ಎನ್‌ಜಿಒಗಳಿಗೆ ವಿದೇಶಿ ನೆರವು: 10 ಸಾವಿರ ಕೋಟಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ವಿದೇಶಿ ದೇಣಿಗೆ ಪಡೆದು ಭಾರತದಲ್ಲಿ ಅಹಿತಕರ ವಾತಾವರಣ ನಿರ್ಮಿಸುತ್ತಿರುವ ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳ (ಎನ್‌ಜಿಒ) ಮೇಲೆ ಕೇಂದ್ರ ಸರ್ಕಾರ ಈಗ ತೀವ್ರ ನಿಗಾ ಇಟ್ಟಿರುವ ಮಧ್ಯೆಯೇ, ಸುಮಾರು 22 ಸಾವಿರ ಸ್ವಯಂ ಸೇವಾ ಸಂಸ್ಥೆಗಳು 2009-10ನೇ ಸಾಲಿನಲ್ಲಿ ವಿದೇಶಗಳಿಂದ 10 ಸಾವಿರ ಕೋಟಿ ರೂಪಾಯಿ ದೇಣಿಗೆ ಪಡೆದಿರುವುದು ಸರ್ಕಾರದ ದಾಖಲೆಗಳಿಂದ ಬಹಿರಂಗವಾಗಿದೆ.ಇವುಗಳಲ್ಲಿ 3,218 ಎನ್‌ಜಿಒಗಳು ತಮಿಳುನಾಡಿಗೆ ಸೇರಿದ್ದು, ಅಮೆರಿಕ, ಇಂಗ್ಲೆಂಡ್, ಜರ್ಮನಿ, ಇಟಲಿ ಮತ್ತು ನೆದರ್‌ಲೆಂಡ್‌ಗಳಿಂದ ಸುಮಾರು 1663.41 ಕೋಟಿ ರೂ. ದೇಣಿಗೆ ಪಡೆದಿವೆ. ಈ ವರದಿಯನ್ನು ಗೃಹ ಸಚಿವಾಲಯ ಸಿದ್ಧಪಡಿಸಿದೆ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಆರ್. ಕೆ. ಸಿಂಗ್ ಇದನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ.ತಮಿಳುನಾಡಿನ ಕೂಡಂಕುಳಂ ಪರಮಾಣು ಘಟಕದ ವಿರುದ್ಧ ಎನ್‌ಜಿಒಗಳು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶಿ ದೇಣಿಗೆ ಹರಿದು ಬಂದಿದೆ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಅವರು ಹೇಳಿಕೆ ನೀಡಿ ವಾರಗಳು ಕಳೆದ ಬಳಿಕ ಈ ವರದಿ ಬಂದಿದೆ. ಹಣ ದುರುಪಯೋಗದ ಆರೋಪ ಕ್ಕಾಗಿ 12 ಎನ್‌ಜಿಒಗಳ ಕಾರ್ಯ ವೈಖರಿಯನ್ನು ಗೃಹ ಸಚಿವಾಲಯ ಪರಿಶೀಲನೆಗೆ ಒಳಪಡಿಸಿದೆ. ಅಲ್ಲದೆ ಇತರ ನಾಲ್ಕು ಎನ್‌ಜಿಒಗಳ ವಿರುದ್ಧ ಪ್ರಕರಣ ದಾಖಲಿಸಿದೆ.21,508 ಎನ್‌ಜಿಒಗಳು ಒಟ್ಟು 10,337 ಕೋಟಿ ವಿದೇಶಿ ದೇಣಿಗೆ ಪಡೆದಿವೆ. ಅತಿ ಹೆಚ್ಚು ವಿದೇಶಿ ದೇಣಿಗೆ ಪಡೆದ ರಾಜ್ಯಗಳ ಪೈಕಿ ದೆಹಲಿ (ರೂ 1815.91 ಕೋಟಿ) ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು (ರೂ 1663.31 ಕೋಟಿ)ಎರಡನೇ ಸ್ಥಾನದಲ್ಲಿ, ಆಂಧ್ರಪ್ರದೇಶ (ರೂ 1324,87 ಕೋಟಿ) ಮೂರನೇ ಸ್ಥಾನದಲ್ಲಿದೆ.ಅತಿ ಹೆಚ್ಚು ವಿದೇಶಿ ದೇಣಿಗೆ ಪಡೆದ ಜಿಲ್ಲಾವಾರು ಸಂಸ್ಥೆಗಳ ವಿವರಗಳು ಇಂತಿವೆ:  ಚೆನ್ನೈ 871.60 ಕೋಟಿ, ಬೆಂಗಳೂರು 702.43 ಕೋಟಿ ಮತ್ತು ಮುಂಬೈ 606.63 ಕೋಟಿ. ಕಳೆದ ಮೂರು ವರ್ಷಗಳ ಅಂಕಿಸಂಖ್ಯೆಗಳ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದ್ದು, ಅಮೆರಿಕವೇ ಅತೀ ಹೆಚ್ಚು ದೇಣಿಗೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.