ಮಂಗಳವಾರ, ಏಪ್ರಿಲ್ 20, 2021
29 °C

ಎರಡನೇ ರಾಜಧಾನಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದಾವಣಗೆರೆಯನ್ನು ರಾಜ್ಯದ 2ನೇ ರಾಜಧಾನಿ ಮಾಡಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಲಹಾ ಸಮಿತಿ ಆಗ್ರಹಿಸಿದ್ದು, ಈ ಕುರಿತು ಚರ್ಚಿಸಲು ಮಾರ್ಚ್ 16ರಂದು ಬೆಳಿಗ್ಗೆ 11ಕ್ಕೆ ರೋಟರಿ ಬಾಲಭವನದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಹೇಳಿದರು.ಅಂದಿನ ಕಾರ್ಯಕ್ರಮದಲ್ಲಿ ಈ ವಿಷಯದ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗುವುದು. ಸಾವಜನಿಕರು ಭಾಗವಹಿಸಬೇಕು ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.ಮಹಾರಾಷ್ಟ್ರದಲ್ಲಿ ಮುಂಬೈ ಬಿಟ್ಟರೆ ನಾಗಪುರವನ್ನು 2ನೇ ರಾಜಧಾನಿ ಮಾಡಲಾಗಿದ್ದು, ಪ್ರತಿ ವರ್ಷ ಒಂದು ಅಧಿವೇಶನವನ್ನು ಅಲ್ಲಿ ನಡೆಸಲಾಗುತ್ತದೆ. ಅದೇ ರೀತಿ ದಾವಣಗೆರೆಯನ್ನು ರಾಜ್ಯದ 2ನೇ ರಾಜಧಾನಿ ಮಾಡಿ ಇಲ್ಲೂ ಅಧಿವೇಶನ ನಡೆಯುವ ವ್ಯವಸ್ಥೆ ಮಾಡಬೇಕು. ಅದರಿಂದ ಈ ಭಾಗದ ಅಭಿವೃದ್ಧಿ ಆಗಿ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರದಲ್ಲಿ ಕರ್ನಾಟಕಕ್ಕೆ ಯಾವ ನಗರ ರಾಜಧಾನಿಯಾಗಬೇಕು ಎಂಬ ಜಿಜ್ಞಾಸೆ ಉಂಟಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಸೇರಿದಂತೆ ಹಲವರು ದಾವಣಗೆರೆಯನ್ನೇ ರಾಜಧಾನಿ ಮಾಡಬೇಕು ಎಂಬ ಆಸೆ ಹೊಂದಿದ್ದರು ಎಂದು ಹೇಳಿದರು.ಭೌಗೋಳಿಕವಾಗಿ ದಾವಣಗೆರೆ ರಾಜ್ಯದ ಮಧ್ಯದಲ್ಲಿದೆ. ಯಾವುದೇ ಜಿಲ್ಲೆಯಿಂದಲೂ ಜನರು ಬರಲು ಅನುಕೂಲವಾಗುತ್ತದೆ. ಶೈಕ್ಷಣಿಕ ವಾಗಿಯೂ ನಗರ ಬೆಳೆದಿದೆ. ವ್ಯಾಪಾರ- ವಾಣಿಜ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿದೆ. ಭತ್ತ, ಮೆಕ್ಕೆಜೋಳದಂಥ ಆಹಾರಧಾನ್ಯ ರಫ್ತು ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ 2ನೇ ರಾಜಧಾನಿಯಾಗಲು ಯೋಗ್ಯವಾಗಿದೆ ಎಂದು ತಿಳಿಸಿದರು.ಸರ್ಕಾರಿ ಕಚೇರಿಗಳೆಲ್ಲವೂ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿವೆ. ಅವುಗಳಲ್ಲಿ ಕೆಲವನ್ನು ವಿಕೇಂದ್ರೀಕರಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ಮನವಿ ಮಾಡಲು ಮಾರ್ಚ್ 19ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.ಮುಖಂಡರಾದ ಎಲ್.ಎಚ್. ಅರುಣ್ ಕುಮಾರ್, ಬಿ.ಎಂ. ರವಿಕುಮಾರ್, ಕೆ. ಹಾಲಪ್ಪ, ಎನ್.ಎಸ್. ವೀರಭದ್ರಪ್ಪ, ಕೆ.ಜಿ. ಶರಣಪ್ಪ, ಹಯಾತ್ ಸಾಬ್, ಸಿದ್ದರಾಮಪ್ಪ, ಸಂಗಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.ಉಪ್ಪಾರ ನೌಕರರ ಸಭೆ

ಜಿಲ್ಲಾ ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಮತ್ತು ಉಪ್ಪಿನ ದಂಡಿ ಯಾತ್ರಾ ದಿನ ಆಚರಣೆ ಮಾರ್ಚ್ 12ರಂದು ಮಧ್ಯಾಹ್ನ 3.30ಕ್ಕೆ ನಗರದ ಎಂಸಿಸಿ ಬಿ ಬ್ಲಾಕ್‌ನ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.