ಸೋಮವಾರ, ಮೇ 10, 2021
26 °C

ಎರಡು ಕಡೆ ಎಟಿಎಂ ಕಳವು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಗಲೂರು ಸಮೀಪದ ದ್ವಾರಕಾನಗರದಲ್ಲಿ ದುಷ್ಕರ್ಮಿಗಳು ಇತ್ತೀಚೆಗೆ ಎಟಿಎಂ ಯಂತ್ರವನ್ನು ಕದ್ದೊಯ್ದ ಬೆನ್ನಲ್ಲೆ, ಬುಧವಾರ ರಾತ್ರಿ ನಗರದ ಎರಡು ಕಡೆ ಎಟಿಎಂ ಘಟಕಗಳಲ್ಲಿ ಕಳವು ಯತ್ನ ನಡೆದಿದೆ. ಒಂದೇ ತಂಡದ ಸದಸ್ಯರು ಈ ಕೃತ್ಯಗಳಲ್ಲಿ ತೊಡಗಿರುವ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ.ರಾತ್ರಿ 12 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದಿರುವ ನಾಲ್ಕು ಮಂದಿ ದುಷ್ಕರ್ಮಿಗಳ ತಂಡ, ವಿದ್ಯಾರಣ್ಯಪುರ ಮುಖ್ಯರಸ್ತೆಯ ಎಸ್‌ಬಿಎಂ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಹಣ ಕಳವು ಮಾಡಲು ಯತ್ನಿಸಿದೆ.ಈ ವೇಳೆ ಎಟಿಎಂ ಘಟಕಕ್ಕೆ ಸಮೀಪದಲ್ಲೇ ಇರುವ ಮತ್ತೊಂದು ಎಟಿಎಂ ಘಟಕದ ಸೆಕ್ಯುರಿಟಿ ಗಾರ್ಡ್ ದುಷ್ಕರ್ಮಿಗಳನ್ನು ಗಮನಿಸಿ ವಿಷಲ್ ಹೊಡೆದಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿಗಳು, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

`ದುಷ್ಕರ್ಮಿಗಳು ಸಿಸಿಟಿವಿ ಕ್ಯಾಮೆರಾದ ಮೇಲೆ ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿದ್ದಾರೆ. ಆದರೂ, ಒಬ್ಬ ಮುಸುಕುಧಾರಿಯ ಚಿತ್ರ ಕ್ಯಾಮೆರಾದಲ್ಲಿ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದೇವೆ' ಎಂದು ವಿದ್ಯಾರಣ್ಯಪುರ ಪೊಲೀಸರು ಮಾಹಿತಿ ನೀಡಿದ್ದಾರೆ.12.30ಕ್ಕೆ ಮತ್ತೊಂದು ಯತ್ನ: ಮೊದಲ ಘಟನೆ ನಡೆದ ಅರ್ಧ ತಾಸಿನ ಅಂತರದಲ್ಲೇ ಮಾರತ್ತಹಳ್ಳಿಯಲ್ಲಿರುವ ಯುನೈಟೆಡ್ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಕಳವು ಯತ್ನ ನಡೆದಿದೆ. ಇಲ್ಲೂ ಕೂಡ ದುಷ್ಕರ್ಮಿಗಳು ಸಿಸಿಟಿವಿ ಕ್ಯಾಮೆರಾ ಮೇಲೆ ಕಪ್ಪು ಬಣ್ಣದ ಬಟ್ಟೆ ಹಾಕಿ ಕಳ್ಳತನಕ್ಕೆ ಯತ್ನಿಸಿ ವಿಫಲರಾಗಿದ್ದಾರೆ.ಗುರುವಾರ ಮಧ್ಯಾಹ್ನ ಸೆಕ್ಯುರಿಟಿ ಏಜೆನ್ಸಿ ಸಿಬ್ಬಂದಿ ಹಣ ತುಂಬಲು ಎಟಿಎಂ ಘಟಕಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಂತ್ರಕ್ಕೆ ಹಾನಿಯಾಗಿರುವುದು ಹಾಗೂ ಸಿಸಿಟಿವಿ ಕ್ಯಾಮೆರಾದ ಮೇಲೆ ಬಟ್ಟೆ ಹಾಕಿದ್ದರಿಂದ ಗಾಬರಿಗೊಂಡ ಸಿಬ್ಬಂದಿ ಕೂಡಲೇ ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ದುಷ್ಕರ್ಮಿಗಳು ಹಣ ಕಳವು ಮಾಡಲು ಯತ್ನಿಸಿ ವಿಫಲರಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.`ಮೇಲಿನ ಎರಡೂ ಎಟಿಎಂ ಘಟಕಗಳಲ್ಲೂ ಸೆಕ್ಯುರಿಟಿ ಗಾರ್ಡ್‌ಗಳು ಇರಲಿಲ್ಲ. ಇದರಿಂದ ದುಷ್ಕರ್ಮಿಗಳು ಸುಲಭವಾಗಿ ಕಾರ್ಯ ಸಾಧಿಸಿಕೊಳ್ಳಲು ಯತ್ನಿಸಿದ್ದಾರೆ. ದ್ವಾರಕನಗರದಲ್ಲಿ ಎಟಿಎಂ ಯಂತ್ರ ಕದ್ದೊಯ್ದ ಪ್ರಕರಣ ಹಾಗೂ ಈ ಎರಡು ಕಳವು ಯತ್ನ ಪ್ರಕರಣಗಳಲ್ಲಿನ ಕೆಲ ಅಂಶಗಳನ್ನು ಗಮನಿಸಿದರೆ, ಒಂದೇ ತಂಡದ ಸದಸ್ಯರು ಈ ಕೃತ್ಯಗಳನ್ನು ಎಸಗುತ್ತಿರುವ ಸಾಧ್ಯತೆ ಇದೆ' ಎಂದು ದ್ವಾರಕನಗರ ಎಟಿಎಂ ಯಂತ್ರ ಕಳವು ಪ್ರಕರಣದ ತನಿಖಾ ತಂಡದಲ್ಲಿರುವ ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.