ಸೋಮವಾರ, ಜನವರಿ 20, 2020
17 °C

ಎರಡು ಕ್ಲಸ್ಟರ್‌ ವಿ.ವಿ ಸ್ಥಾಪನೆಗೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ / ವಿಜೇಶ್‌ ಕಾಮತ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ ಯೋಜನೆಯಡಿ ನಾಲ್ಕರಿಂದ ಆರು ಕಾಲೇಜುಗಳನ್ನು ಗುಂಪಾಗಿ ಸೇರಿಸಿ ಅವುಗಳಿಗೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವ ವಿನೂತನ ಪ್ರಯತ್ನ ನಡೆದಿದೆ. ಉನ್ನತ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ಆರು ಮತ್ತು ಮೈಸೂರಿನಲ್ಲಿ ನಾಲ್ಕು ಕಾಲೇಜುಗಳನ್ನು ಗುರುತಿಸಿದ್ದು, ಅವುಗಳಿಗೆ  ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ.ಕ್ಲಸ್ಟರ್‌ ವಿಶ್ವವಿದ್ಯಾಲಯ ಕಲ್ಪನೆಯಡಿ ಕಾಲೇಜುಗಳ ಗುಂಪಿಗೆ ವಿಶ್ವವಿದ್ಯಾಲಯ ಸ್ಥಾನಮಾನ ನೀಡಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವುದು, ಗುಣಮಟ್ಟಕ್ಕೆ ಒತ್ತು ನೀಡುವುದು ಇದರ ಮುಖ್ಯ ಗುರಿ. ಬೆಂಗಳೂರಿನ ಆರು ಕಾಲೇಜುಗಳನ್ನು ಸೇರಿಸಿ ಒಂದು ಕ್ಲಸ್ಟರ್‌ ವಿ.ವಿ ಹಾಗೂ ಮೈಸೂರಿನ ನಾಲ್ಕು ಕಾಲೇಜುಗಳನ್ನು ಸೇರಿಸಿ ಮತ್ತೊಂದು ಕ್ಲಸ್ಟರ್‌ ವಿ.ವಿ ಸ್ಥಾಪಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದು, ಸದ್ಯದಲ್ಲೇ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಪ್ರತಿ ವಿ.ವಿ.ಗೆ 12ನೇ ಪಂಚವಾರ್ಷಿಕ ಯೋಜನೆಯಡಿ ತಲಾ ₨ 55 ಕೋಟಿ ಹಾಗೂ 13ನೇ ಪಂಚವಾರ್ಷಿಕ ಯೋಜನೆಯಡಿ ₨ 65 ಕೋಟಿ ಅನುದಾನ ದೊರೆಯಲಿದೆ. ಉನ್ನತ ಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರ ಶೇ 65ರಷ್ಟು ಅನುದಾನ ನೀಡಲಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ.ಕ್ಲಸ್ಟರ್‌ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಸಂಪನ್ಮೂಲ ಸಂಗ್ರಹಣೆಗೆ, ಸಂಶೋಧನಾ ಚಟುವಟಿಕೆಗಳಿಗೆ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಅನುಕೂಲವಾಗ­ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕ್ಲಸ್ಟರ್‌ ವಿಶ್ವವಿದ್ಯಾಲಯದ ಅಡಿಯಲ್ಲಿ ಬರಬೇಕಾದರೆ ಕಾಲೇಜು ಸ್ಥಾಪನೆಯಾಗಿ 15 ವರ್ಷ ಆಗಿರಬೇಕು.

ಎರಡು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ ಯೋಜನೆಯಡಿ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದೇಶದಲ್ಲಿ 35 ಕ್ಲಸ್ಟರ್‌ ವಿಶ್ವವಿದ್ಯಾಲಯಗಳನ್ನು ಆರಂಭಿಸಲು  ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಬೆಂಗಳೂರು

ಕ್ಲಸ್ಟರ್‌ ವಿ.ವಿ.ಗೆ ಗುರುತಿಸಿರುವ ಕಾಲೇಜುಗಳು

* ಸರ್ಕಾರಿ ಕಲಾ ಕಾಲೇಜು

* ಸರ್ಕಾರಿ ವಿಜ್ಞಾನ ಕಾಲೇಜು

* ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು

* ಮಹಾರಾಣಿ ವಿಜ್ಞಾನ ಕಾಲೇಜು

* ರೇಣುಕಾಚಾರ್ಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು

* ವಿಎಚ್‌ಡಿ ಗೃಹವಿಜ್ಞಾನ ಕಾಲೇಜು

ಮೈಸೂರು

* ಮಹಾರಾಣಿ ವಿಜ್ಞಾನ ಕಾಲೇಜು

* ಮಹಾರಾಣಿ ಕಲಾ ಕಾಲೇಜು

* ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ವಿಜಯನಗರ)

* ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಕುವೆಂಪು ನಗರ)

ಪ್ರತಿಕ್ರಿಯಿಸಿ (+)