ಶುಕ್ರವಾರ, ಜೂನ್ 25, 2021
26 °C

ಎಲ್ಲರಂತಲ್ಲದ ಆಟೊ ಅಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ನಾದಿನಿ ಮಗಳು ಸುಮನಾ ಬಿದ್ದು ತಲೆಗೆ ಪೆಟ್ಟಾಗಿ ಅವಳನ್ನು ಆಟೊದಲ್ಲಿ ಒಂದು ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಮೊದಲು ಪೊಲೀಸ್ ಕಂಪ್ಲೇಂಟ್ ಕೊಡಬೇಕು ಹಾಗೆ ಹೀಗೆ ಎಂದು ಹೇಳಿದರು.ಸರಿ, ನಮ್ಮ ಭಾವನವರು ಆಗ ತಾನೇ ಬಂದ ಒಬ್ಬ ಗೆಳೆಯನ ಜೊತೆ ಕಂಪ್ಲೇಂಟ್ ಕೊಡಲು ಹೋದರು. ಪ್ರಜ್ಞೆ ತಪ್ಪಿದ್ದ ಮಗುವನ್ನು ಎತ್ತಿಕೊಂಡು ನನ್ನ ನಾದಿನಿ ಮಧ್ಯರಾತ್ರಿ ಹೊರಗಡೆ ಕಲ್ಲು ಬೆಂಚಿನಲ್ಲಿ ಅಳುತ್ತಾ ಕೂತಿದ್ದರು. ಅಷ್ಟರಲ್ಲಿ ಕರೆದುಕೊಂಡು ಬಂದಿದ್ದ ಆಟೊ ಡ್ರೈವರ್ ಅಲ್ಲಿಯ ಡಾಕ್ಟರ್‌ಗಳ ಜೊತೆ ಜಗಳವಾಡಿ, `ಮೊದಲು ಮಗುವಿಗೆ ಟ್ರೀಟ್‌ಮೆಂಟ್ ಕೊಡಿ. ಅವರು ಪೊಲೀಸ್ ಕಂಪ್ಲೇಂಟ್ ಕೊಟ್ಟು ಬರುತ್ತಾರೆ~ ಎಂದು ಹೇಳಿ ಕೊನೆಗೂ ಅಡ್ಮಿಟ್ ಮಾಡಿಸಿದರು.ಇಂಜೆಕ್ಷನ್, ಡ್ರಿಪ್ಸ್ ಕೊಟ್ಟ ಡಾಕ್ಟರ್ ಬೆಳಗಿನವರೆಗೂ ಏನೂ ಹೇಳಲಾಗದು ಎಂದುಬಿಟ್ಟರು. ನನ್ನ ನಾದಿನಿಯ ಕೈಕಾಲು ಕುಸಿದಂತಾಗಿ ಕಣ್ಣೀರು ಕೋಡಿ ಹರಿಸುತ್ತಾ ಕಲ್ಲು ಬೆಂಚಿನ ಮೇಲೆ ದಿಕ್ಕು ತೋಚದವರಂತೆ ಕೂತಿದ್ದರು. ಆತ ಅವರನ್ನು ಸಾಂತ್ವನ ಮಾಡಿ, `ನೋಡೀಮ್ಮಾ, ನನ್ನನ್ನು ನಿಮ್ಮ ಅಣ್ಣಾಂತ ತಿಳ್ಕೊಳ್ಳಿ. ನೀವೇ ಹೀಗೆ ಅಳುತ್ತಾ ಕೂತರೆ ಹೇಗೆ? ನಿಮ್ಮ ಯಜಮಾನ್ರು ಇನ್ನೇನು ಬಂದುಬಿಡುತ್ತಾರೆ.ಧೈರ್ಯ ತಂದುಕೊಳ್ಳಿ. ನಾನೂ ರಾಘವೇಂದ್ರ ಸ್ವಾಮಿಯನ್ನು ಕೇಳಿಕೊಳ್ತೀನಿ. ನೀವೂ ನಿಮ್ಮ ಮನೆದೇವರನ್ನು ಬೇಡಿಕೊಳ್ಳಿ. ನಿಮ್ಮ ಮಗೂಗೆ ಏನೂ ಆಗಲ್ಲ~ ಎಂದು ತನ್ನವರಾರೂ ಜೊತೆಯಲ್ಲಿರದ ಆ ಗಳಿಗೆಯಲ್ಲಿ ನಾದಿನಿಯನ್ನು ಸಂತೈಸಿದರು. ನಂತರ ಆತ ಹೊರಗೆ ಹೋಗಿ ಮತ್ತೆ ಬಂದು ಜೊತೆಯಲ್ಲಿದ್ದು ಧೈರ್ಯ ಹೇಳುತ್ತಿದ್ದರು.

 

ಆಮೇಲೆ ನಮ್ಮ ಭಾವ ಬಂದರು. ಬೆಳಗಿನ ಜಾವದ ಹೊತ್ತಿಗೆ ಸುಮನಾಳಿಗೆ ಪ್ರಜ್ಞೆ ಬಂದಿತ್ತು. ಅಷ್ಟು ಹೊತ್ತಿಗೆ ನಾವೆಲ್ಲಾ ಅಲ್ಲಿದ್ದೆವು. ಎಲ್ಲರಿಗೂ ಸಂತೋಷವಾಗಿತ್ತು. ಡ್ರೈವರ್ ಬಂದು, `ನೋಡೀಮ್ಮಾ, ನಾನು ಆಗಲೇ ಹೇಳಿರಲಿಲ್ವೇ; ದೇವರು ಒಳ್ಳೆದು ಮಾಡ್ತಾನೆ ಅಂತ~ ಎಂದರು. ಅವರಿಗೆ ಒಂದಷ್ಟು ದುಡ್ಡು ಕೊಡಲು ಹೋದ ನಮ್ಮ ಭಾವನನ್ನು ತಡೆದು ಆತ, `ಸಾರ್, ನನ್ನ ತಂಗಿ ಮಗು ಉಳೀತಲ್ಲ. ಅದಕ್ಕಿಂತ ನನಗೆ ಇನ್ನೇನು ಬೇಕು?~ ಎಂದರು.`ನಿಮ್ಮ ಗೋಳು ನೋಡೋಕೆ ನನ್ನಿಂದ ಆಗ್ಲಿಲ್ಲ. ಅದಕ್ಕೇ ಸ್ವಲ್ಪ ಆಚೆ ಹೋಗಿ ಒಂದು ಬಾಟಲ್ (ಗುಂಡು) ಹಾಕ್ಕೊಂಡು ಬಂದೆ~ ಎಂದೂ ಮುಚ್ಚುಮರೆಯಿಲ್ಲದೆ ಹೇಳಿಕೊಂಡರು. ಆಗ ಅವರು ಆಚೆ ಹೋಗಿದ್ದ ಕಾರಣ ತಿಳಿದು ನಾದಿನಿಗೆ ಆ ಪರಿಸ್ಥಿತಿಯಲ್ಲೂ ನಗು ಬಂತು.

`ಬರ‌್ತೀನಮ್ಮಾ, ನನ್ನ ಹೆಸರು ಶಿವರಾಂ~ ಎಂದು ಹೇಳಿ ಯಾವ ಪ್ರತಿಫಲವನ್ನೂ ಅಪೇಕ್ಷಿಸದೆ, ಬಾಡಿಗೆ ಹಣವನ್ನೂ ಪಡೆಯದೆ ಸ್ವಂತ ಅಣ್ಣನಿಗಿಂತ ಹೆಚ್ಚಾಗಿ ಮಾನವೀಯತೆ ಮೆರೆದು ಸದ್ದಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಿ ಆ ಆಟೊ ಡ್ರೈವರ್ ಹೊರಟುಹೋದರು. ಅವರನ್ನು ಈ ಜನ್ಮದಲ್ಲಿ ಮರೆಯುವಂತಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.