ಎಲ್ಲಾ ಭಾಷೆಗಳಿಗೆ ಅವಕಾಶವಿರುವ ನೀತಿ ಅಗತ್ಯ

ಭಾನುವಾರ, ಮೇ 26, 2019
27 °C

ಎಲ್ಲಾ ಭಾಷೆಗಳಿಗೆ ಅವಕಾಶವಿರುವ ನೀತಿ ಅಗತ್ಯ

Published:
Updated:

ಬೆಂಗಳೂರು:  `ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಯೂರೋಪಿಯನ್ ಒಕ್ಕೂಟದಲ್ಲಿ ಇರುವಂತೆ ಇಲ್ಲಿಯೂ ಎಲ್ಲ ಭಾಷೆಗಳಿಗೆ ಅವಕಾಶ ಕೊಡುವ ಭಾಷಾ ನೀತಿ ಜಾರಿಗೆ ಬರಬೇಕು~ ಎಂದು ಭಾಷಾತಜ್ಞ ಡಾ.ಪಿ.ವಿ.ನಾರಾಯಣ ನುಡಿದರು.ಬನವಾಸಿ ಬಳಗವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಭಾರತಕ್ಕೊಪ್ಪೋ ಭಾಷಾ ನೀತಿ~ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, `ಸಂಸತ್ತಿನಲ್ಲಿ ಎಲ್ಲ ಭಾಷೆಗಳನ್ನು ಬಳಸುವಂತಹ ಅನುಕೂಲ ಕಲ್ಪಿಸಬೇಕು. ಎಲ್ಲ ನುಡಿಗಳಿಗೂ ಸಮಾನ ಗೌರವ, ಸಮಾನ ಸ್ಥಾನಮಾನ ನೀಡುವ ಭಾಷಾ ನೀತಿಯನ್ನು ರೂಪಿಸುವುದೇ ನಿಜವಾದ ಒಕ್ಕೂಟ ಧರ್ಮ~ ಎಂದರು.ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ, `ರಾಷ್ಟ್ರೀಯ ಪಕ್ಷಗಳ ಕೈಗೊಂಬೆಯಾಗಿರುವ ರಾಜ್ಯದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕರ್ನಾಟಕವು ಹಿಂದಿ ಹೇರಿಕೆಗೆ ತುತ್ತಾಗಬೇಕಾಗಿದೆ. ದೇಶಕ್ಕೊಪ್ಪೋ ಭಾಷಾ ನೀತಿ ರೂಪಿಸಲು ಪಕ್ಷಭೇದ ಮರೆತು ರಾಜ್ಯದ ರಾಜಕಾರಣಿಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು~ ಎಂದರು.ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, `ಭಾರತದ ಅಂತರರಾಷ್ಟ್ರೀಯ ಸಿನಿಮಾ ಅಕಾಡೆಮಿ (ಐಐಎಫ್‌ಎ)ಯ ಹೆಸರಿನಲ್ಲಿ ಹಿಂದಿ ಚಿತ್ರಗಳನ್ನು ಪ್ರೋತ್ಸಾಹಿಸುವುದು, ಆಸ್ಕರ್ ಪ್ರಶಸ್ತಿಗೆ ಹೆಚ್ಚಾಗಿ ಹಿಂದಿ ಚಿತ್ರಗಳನ್ನೇ ನಾಮಕರಣ ಮಾಡುವುದು, ದೂರದರ್ಶನ, ವಿವಿಧ ಭಾರತಿ ರೇಡಿಯೊ ವಾಹಿನಿಗಳ ಮೂಲಕ ಹಿಂದಿ ಪ್ರಚಾರಕ್ಕೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಭಾಷೆಗಳನ್ನು ಮೂಲೆಗುಂಪು ಮಾಡಲಾಗುತ್ತದೆ~ ಎಂದು ವಿಷಾದಿಸಿದರು.ಬನವಾಸಿ ಬಳಗವು ಹೊರತಂದ `ಹಿಂದಿ ಹೇರಿಕೆ-ಮೂರು ಮಂತ್ರ, ನೂರು ತಂತ್ರ~ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಚಿಂತಕ ಕೆ.ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ರವಿ ಹೆಗಡೆ ಮಾತನಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry