ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲಿದೆ ನಮ್ ಮನೆ?

ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಗುಜರಾತಿನಿಂದ ನಾಗಾಲ್ಯಾಂಡಿನ ತನಕ ಹರಡಿರುವ ಭವ್ಯ ಭಾರತದ ಏಕತೆ ಇರುವುದೇ ಕುರಿಕೋಳಿ ಕಿರುಮೀನುಗಳಿಂದ ತೊಡಗಿ ಹುಲಿ, ಹುಲ್ಲೆ ಹೀಗೆ ಸಕಲೆಂಟು ಮಾಂಸಗಳಲ್ಲಿಯೂ, ಅದು ಬೇಡವೆಂದರೆ ಅಲ್ಲಲ್ಲಿ ದೊರೆಯುವ ಸೊಪ್ಪು, ಕಾಯಿ, ಗೆಡ್ಡೆ, ಬೇರುಗಳನ್ನು ಬಳಸಿ ತಯಾರಿಸಬಹುದಾದ ಬಿರಿಯಾನಿಯಲ್ಲಿ ಎಂಬುದು ನನ್ನ ನಂಬಿಕೆಯಾಗಿತ್ತು. ಇದೆಲ್ಲಾ ಕೇವಲ ಭ್ರಮೆ ಮಾತ್ರ ಎಂದು ಅರ್ಥ ಮಾಡಿಸಿದ್ದು ನನ್ನ ಬಾಡಿಗೆ ಮನೆಯ ಹುಡುಕಾಟ.

ಹರಿದಾಡುವುದರಲ್ಲಿ ಹಾವು, ಹಲ್ಲಿ, ಓತಿಕ್ಯಾತಗಳನ್ನು ಬಿಟ್ಟು, ಎರಡು ಕಾಲಿನವುಗಳಲ್ಲಿ ಮನುಷ್ಯನನ್ನು ಬಿಟ್ಟು, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ ಮೇಜುಗಳನ್ನು ಬಿಟ್ಟು, ಹಾರಾಡುವವುಗಳಲ್ಲಿ ವಿಮಾನಗಳನ್ನು ಬಿಟ್ಟು, ನೀರಿನಲ್ಲಿರುವವುಗಳಲ್ಲಿ ಆಮೆಯನ್ನು ಬಿಟ್ಟು ಉಳಿದೆಲ್ಲವನ್ನೂ ತಿನ್ನಬಲ್ಲೆ ಎಂಬ ನನ್ನ ಅಸಾಮಾನ್ಯ ಧೈರ್ಯದ ಹಿಂದೆ ಇದ್ದದ್ದು ಒಂದೇ. ಹುಲಿ, ಸಿಂಹ, ಚಿರತೆ, ಬೆಕ್ಕು, ನಾಯಿ, ತೋಳ ಇತ್ಯಾದಿಗಳಂತೆಯೇ ಮನುಷ್ಯರಲ್ಲಿ ಬಹು ಸಂಖ್ಯಾತರು ಮಾಂಸಾಹಾರಿಗಳು. ‘ನಾನು ದೊಡ್ಡ ಗುಂಪಿನಲ್ಲಿದ್ದೇನೆ. ಅರ್ಥಾತ್‌ ನಾನೂ ಬಹುಸಂಖ್ಯಾತ’ ಎನ್ನುವ ಅಹಂಕಾರವಿತ್ತು.

ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಗುಜರಾತಿನಿಂದ ನಾಗಾಲ್ಯಾಂಡಿನ ತನಕ ಹರಡಿರುವ ಭವ್ಯ ಭಾರತದ ಏಕತೆ ಇರುವುದೇ ಕುರಿಕೋಳಿ ಕಿರುಮೀನುಗಳಿಂದ ತೊಡಗಿ ಹುಲಿ, ಹುಲ್ಲೆ ಹೀಗೆ ಸಕಲೆಂಟು ಮಾಂಸಗಳಲ್ಲಿಯೂ, ಅದು ಬೇಡವೆಂದರೆ ಅಲ್ಲಲ್ಲಿ ದೊರೆಯುವ ಸೊಪ್ಪು, ಕಾಯಿ, ಗೆಡ್ಡೆ, ಬೇರುಗಳನ್ನು ಬಳಸಿ ತಯಾರಿಸಬಹುದಾದ ಬಿರಿಯಾನಿಯಲ್ಲಿ ಎಂಬುದು ನನ್ನ ನಂಬಿಕೆಯಾಗಿತ್ತು. ಇದೆಲ್ಲಾ ಕೇವಲ ಭ್ರಮೆ ಮಾತ್ರ ಎಂದು ಅರ್ಥ ಮಾಡಿಸಿದ್ದು ನನ್ನ ಬಾಡಿಗೆ ಮನೆಯ ಹುಡುಕಾಟ.

‘ನಾವು ವೆಜಿಟೇರಿಯನ್ಸ್‌ಗೆ ಮಾತ್ರ ಮನೆ ಕೊಡ್ತೀವಿ’
‘ನಂ ಬಿಲ್ಡಿಂಗಲ್ಲಿ ಬರೇ ವೆಜಿಟೇರಿಯನ್ಸ್ ಇದ್ದಾರೆ ಸಾರ್’
‘ನಾನ್‌ವೆಜ್ ವಾಸನೆ ನಮಗಾಗಲ್ಲ ಅದಕ್ಕೇ... ಬೇಜಾರ್ ಮಾಡ್ಕೋ ಬೇಡಿ...’
ಬೆಂಗಳೂರಿನ ಉತ್ತರದಿಂದ ದಕ್ಷಿಣದ ತನಕ, ಪೂರ್ವದಿಂದ ಪಶ್ಚಿಮ ತನಕ ಇದೇ ಮಾತುಗಳನ್ನು ಒಬ್ಬೊಬ್ಬರೇ ಮನೆ ಮಾಲೀಕರು ಹೇಳತೊಡಗಿದಾಗ– ‘ರಂಜಾನಿನ ಬಿರಿಯಾನಿಯ ವಾಸನೆ ಬೇರೇನೇ ಮಾರಾಯ. ಕರ್‍ಯೋಕೆ ಮರೀಬೇಡ’ ಎಂದು ಹೇಳುತ್ತಿದ್ದ ಸಕಲೆಂಟು ಜಾತಿಗಳ ಗೆಳೆಯರ ಮಾತುಗಳು ನೆನಪಾದವು. ಸಸ್ಯಾಹಾರಿ ಜಾತಿಗಳಿಗೆ ಸೇರಿದವರಿಗಾಗಿ ನನ್ನ ತಮ್ಮ ಪ್ರತೀ ರಂಜಾನಿನಲ್ಲಿ ಏರ್ಪಡಿಸುತ್ತಿದ್ದ ಗುಟ್ಟಿನ ಔತಣ ಕೂಟಗಳೂ ನೆನಪಾದವು. ಆದರೆ ಇವ್ಯಾವೂ ಮನೆ ಕೊಡಿಸುವುದಿಲ್ಲ ಎಂಬುದು ಖಚಿತವಾಗುತ್ತಾ ಬಂತು. ದಲ್ಲಾಳಿಗಳ ಹಂಗಿಲ್ಲದೆ ಮನೆ ಹುಡುಕಿಕೊಳ್ಳುತ್ತೇನೆಂಬ ಉತ್ಸಾಹ ಕುಸಿಯುತ್ತಾ ಬಂತು. ದಲ್ಲಾಳಿಯೆಂಬುದೂ ಒಂದು ವೃತ್ತಿ. ಅವರೂ ಬದುಕಬೇಕು, ಅದಕ್ಕಾಗಿ ಪರಮ ದಯಾಳುವೂ ಕರುಣಾಮಯನೂ ಆದ ಅಲ್ಲಾಹು ನಮ್ಮಂಥ ಸೆಲ್ಫ್ ಸರ್ವೀಸ್ ಜನರಿಗೆ ಇಂಥ ಅಡೆತಡೆಗಳನ್ನು ಸೃಷ್ಟಿಸುತ್ತಾನೆಂಬ ನಿರ್ಧಾರಕ್ಕೆ ಬಂದೆ.

ಮೊದಲ ಬ್ರೋಕರಿಗೆ ಫೋನು ಹಚ್ಚಿ ನನ್ನ ಬಜೆಟ್ ಹೇಳಿದಾಗ ಲಭ್ಯತೆಯ ಪಟ್ಟಿಯನ್ನೇ ಕೊಟ್ಟ. ಖುಷಿಯಲ್ಲಿ ಸ್ಕೂಟರ್ ಹತ್ತಿ ಅವನು ಹೇಳಿದ ಸ್ಥಳದಲ್ಲಿ ಇಳಿದಾಗ ಅಗಲ ನಗುವಿನ ಸ್ವಾಗತವೂ ಸಿಕ್ಕಿತು. ಮೊದಲ ಮನೆಯೇ ಇಷ್ಟವಾಯಿತು. ಮಾಲೀಕರೂ ಭಾವೀ ಬಾಡಿಗೆದಾರನನ್ನು ಇಷ್ಟಪಟ್ಟರು. ಸರಿ ಟೋಕನ್ ಅಡ್ವಾನ್ಸ್ ಕೊಟ್ಟು ಖಚಿತ ಪಡಿಸಿಕೊಳ್ಳೋಣ ಎಂದು ಜೇಬಿಗೆ ಕೈ ಹಾಕುವ ಹೊತ್ತಿಗೆ ಮಾಲೀಕರಿಂದ ಒಂದು ಪ್ರಶ್ನೆ ಬಂತು. ‘ಏನು ಕೆಲಸ ಮಾಡುತ್ತೀರಿ’.

ತಕ್ಷಣ ನನಗೆ ಪತ್ರಿಕಾವೃತ್ತಿಗೆ ಸೇರಿದ ಆರಂಭದ ದಿನಗಳಲ್ಲಿ ಅಪ್ಪ ಹೇಳಿದ್ದು ನೆನಪಿಗೆ ಬಂತು. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಮಗ ಏನು ಮಾಡುತ್ತಿದ್ದಾನೆ ಎಂದು ಕೇಳಿದರೆ ಅಪ್ಪ ‘ಪೇಪರಲ್ಲಿದ್ದಾನೆ’ ಎಂದು ಉತ್ತರಿಸಿ ಮುಗಿಸುವಂತಿರಲಿಲ್ಲ. ಏಕೆಂದರೆ ಅವರ ಉತ್ತರವನ್ನು ಬಯಸುತ್ತಿರುವವರಿಗೆ ಪತ್ರಿಕೆಯ ಕೆಲಸ ಎಂದರೆ ಒಂದೋ ಬೆಳಿಗ್ಗೆ ಮನೆ ಮನೆಗೆ ಪತ್ರಿಕೆ ತಲುಪಿಸುವ ಏಜೆಂಟ್ ಕೆಲಸ ಗೊತ್ತಿತ್ತು. ಅದನ್ನು ಬಿಟ್ಟರೆ ಪತ್ರಿಕೆಗೆ ಸಂಬಂಧಿಸಿದಂತೆ ಅವರಿಗೆ ಗೊತ್ತಿದ್ದದ್ದು ರದ್ದಿ ಕಾಗದದ ವ್ಯಾಪಾರ. ಮಗ ಇವರೆಡೂ ಅಲ್ಲದ, ಪತ್ರಿಕೆಗೆ ಬರೆಯುವ ಕೆಲಸವನ್ನು ವಿವರಿಸುವುದಕ್ಕೆ ನನ್ನ ಅಪ್ಪ ಒದ್ದಾಡಬೇಕಾಗುತ್ತಿತ್ತಂತೆ. ನಾನು ತಕ್ಷಣ ಮನೆಯ ಗೇಟಿನ ಕಡೆ ನೋಡಿದೆ. ಕೃಷ್ಣನ ಕೃಪೆ ಕಾಣಿಸಿತು. ಧೈರ್ಯವಾಗಿ ‘ಜರ್ನಲಿಸ್ಟು...’ ಎಂದು ಬಿಟ್ಟೆ. ಅವರು ತಮ್ಮ ಏರಿಯಾದ ರಸ್ತೆಗಳೆಲ್ಲಾ ಹಾಳಾಗಿರುವುದನ್ನು ಹೇಳುತ್ತಾ, ‘ಹೆಸರೇನು’ ಎಂದರು. ಈ ಹೊತ್ತಿಗಾಗಲೇ ಮನೆ ಗ್ಯಾರಂಟಿ ಎಂದುಕೊಂಡಿದ್ದ ನಾನು ‘ಇಸ್ಮಾಯಿಲ್’ ಅಂದೆ.

ಬ್ರೋಕರ್ ಮುಖ ಸಣ್ಣದಾಯಿತು. ಮಾಲೀಕರು ಪೆಚ್ಚಾದರು. ಸಾವರಿಸಿಕೊಂಡು ‘ನನಗೇನೂ ಪರವಾಗಿಲ್ಲ ಸಾರ್. ನಮ್ಮಮ್ಮ ಇನ್ನೂ ಬದುಕಿದ್ದಾರೆ ಸಾರ್. ಅವರಿಗೆ ಇಷ್ಟ ಆಗಲ್ಲ... ಬೇಜಾರು ಮಾಡ್ಕೋಬೇಡಿ’ ಎಂದರು.

ನನಗೆ ಬೇಜಾರು ಮಾಡಿಕೊಳ್ಳಲು ಏನೂ ಉಳಿದಿರಲಿಲ್ಲ. ಸ್ವಲ್ಪ ಸಿಟ್ಟಿನಲ್ಲಿ ಕೇಳಿಯೇಬಿಟ್ಟೆ ‘ಮೊದಲಿಗೇ ನೀವು ಮುಸ್ಲಿಮರಿಗೆ ಮನೆ ಕೊಡುವುದಿಲ್ಲ ಅಂದಿದ್ದರೆ ಎಲ್ಲಾ ಮುಗಿದು ಹೋಗುತ್ತಿತ್ತಲ್ಲ’.
‘ಇಷ್ಟೊಂದು ಚೆನ್ನಾಗಿ ಕನ್ನಡ ಮಾತಾಡ್ತಿದ್ರಲ್ಲ... ಅದಕ್ಕೆ ನನಗೆ ಗೊತ್ತಾಗಲಿಲ್ಲ’.
ಮಾಲೀಕರು ನನ್ನನ್ನು ಹೊಗಳುತ್ತಿದ್ದಾರೋ ಬೈಯುತ್ತಿದ್ದಾರೋ ಎಂಬುದು ಅರ್ಥವಾಗದೆ ನಾನು ಸ್ಕೂಟರ್ ಹತ್ತಿದೆ. ಪಿಲಿಯನ್ ಏರಿದ ಬ್ರೋಕರ್ ಮಹಾಶಯ ‘ನೀವು ಕನ್ನಡದಲ್ಲಿ ಮಾತಾಡಿದ್ರಲ್ಲಾ... ನನಗೂ ಕನ್ಫ್ಯೂಷನ್ ಆಗ್ಬಿಟ್ಟಿತ್ತು ಸಾರ್. ಇಲ್ಲಾ ಅಂದ್ರೆ ಮುಸ್ಲಿಂ ಓನರ್ ಮನೆಗೇ ಕರ್ಕೊಂಡು ಹೋಗತ್ತಿದೆ’ ಎಂದ. ಸ್ಕೂಟರನ್ನು ಎದುರಿನಿಂದ ಬರುತ್ತಿದ್ದ ಬಿಎಂಟಿಸಿ ಬಸ್ಸಿನಡಿಗೆ ನುಗ್ಗಿಸಬೇಕೆನಿಸಿತು. ನಾನು ಮನೆ ಹುಡುಕಿಕೊಂಡು ಬರುತ್ತೇನೆಂದು ಮನೆಯಲ್ಲಿಯೇ ಕಾಯುತ್ತಿದ್ದ ತುಂಬು ಗರ್ಭಿಣಿ ಹೆಂಡತಿಯ ನೆನಪಾಗಿ ಸ್ಕೂಟರ್ ಸೈಡಿಗೆ ನಿಲ್ಲಿಸಿ ಅವನನ್ನಿಳಿಸಿ, ‘ನನಗೆ ಮನೆ ಬೇಡಾ ಕಣ್ರೀ... ಟೆಂಟ್ ಹಾಕ್ಕೊಂಡು ರೋಡ್ ಸೈಡಲ್ಲಿ ಮಲಗ್ತೀನಿ’ ಎಂದು ಹೊರಟುಬಿಟ್ಟೆ.

ಅಲ್ಲಿಯ ತನಕ ನಮಗೆ ಆಶ್ರಯ ಕೊಟ್ಟಿದ್ದ ಮನೆಯ ಮಾಲೀಕರು ಒಳ್ಳೆಯವರಾಗಿದ್ದರು. ವರ್ಷಕ್ಕೊಂದು ಬಾರಿ ಮನೆಗೆ ಬರುತ್ತಿದ್ದ ಮಾಲೀಕರ ಹೆಂಡತಿ ‘ಒಂದು ವರ್ಷವಾಯಿತಲ್ಲ’ ಎಂದಾಗ ನಾನೇ ಒಂದು ಮೊತ್ತ ಹೇಳುತ್ತಿದ್ದೆ. ಅದನ್ನೊಪ್ಪಿಕೊಂಡು ಹೋಗುತ್ತಿದ್ದವರು ಮತ್ತೆ ಬರುತ್ತಿದ್ದುದು ಮುಂದಿನ ವರ್ಷವೇ. ಇಂಥಾ ಸದ್ಗುಣ ಸಂಪನ್ನ ಮಾಲೀಕರಿಗೆ ಇನ್ನಿಲ್ಲದ ಕಷ್ಟ ಎದುರಾಗಿ ನನ್ನನ್ನು ಮನೆ ಬಿಡಿಸುವಂಥ ಪ್ರಾರಬ್ಧ ಎದುರಾಗಿತ್ತು. ಅವರ ಕಷ್ಟವನ್ನು ನಿವಾರಿಸುವುದಕ್ಕಾಗಿ ನಾನಂತೂ ಮನೆ ಹುಡುಕಲೇ ಬೇಕಾಗಿತ್ತು.

ಸ್ವಂತ ಪ್ರಯತ್ನ ವಿಫಲವಾಗಿ ಬ್ರೋಕರ್ ಪ್ರಯತ್ನದಲ್ಲಿ ದಂತಭಗ್ನವಾಗಿ ಸ್ಕೂಟರ್ ಏರಿ ಗೊತ್ತು ಗುರಿಯಿಲ್ಲದೆ ಸಾಗುತ್ತಿದ್ದ ನನಗೆ ಗೆಳೆಯನೊಬ್ಬ ಹೇಳಿದ್ದ ಉಚಿತ ಕ್ಲಾಸಿಫೈಡ್‌ಗಳ ಮೂರ್ನಾಲ್ಕು ಪತ್ರಿಕೆಗಳ ಹೆಸರು ನೆನಪಾಯಿತು. ದಾರಿಯಲ್ಲಿ ಕಂಡ ಗೂಡಂಗಡಿಯಲ್ಲಿ ಅವುಗಳನ್ನೆಲ್ಲಾ ಖರೀದಿಸಿ ಮನೆಗೆ ಹೋದೆ.

ನನ್ನ ಮುಖ ನೋಡಿಯೇ ಹೆಂಡತಿಗೆ ಎಲ್ಲವೂ ಅರ್ಥವಾಗಿತ್ತು. ಅವಳು ನನ್ನನ್ನೇ ನೋಡಿದಳು. ಬೇಂದ್ರೆ ನೆನಪಾದರು. ಅದನ್ನು ಮರೆಸುವಂತೆ ಅವಳು ನನ್ನ ವೃತ್ತಿಯ ಬಗ್ಗೆ, ನನ್ನ ಕೆಟ್ಟ ನಾಲಿಗೆಯ ಬಗ್ಗೆ ಭಾಷಣ ಆರಂಭಿಸಿ ‘ನಿನಗೆ ಮನೆ ಹುಡುಕಲು ಗೊತ್ತಿಲ್ಲ’ ಎಂದು ಆರೋಪಿಸಿದಳು. ‘ನೀನೇ ಹುಡುಕು’ ಎಂದು ನಾನು ಫ್ರೀ ಕ್ಲಾಸಿಫೈಡ್ಸ್‌ನಲ್ಲಿ ಮುಳುಗಿದೆ. ಅವಳು ಫೋನೆತ್ತಿಕೊಂಡು ರಂಗಕರ್ಮಿ, ಕಲಾವಿದೆ ಭವಾನಿ ಪ್ರಕಾಶ್ ಅವರಿಗೆ ಫೋನ್ ಮಾಡಿದಳು. ಗಂಡ ಎಂಬ ಜಂತುವಿನ ಕುರಿತ ವಿಮರ್ಶೆಗಳು ನಡೆಯುತ್ತಿದ್ದಂತೆ ಭಾಸವಾಯಿತು. ಒಂದು ಹಂತದಲ್ಲಿ ಫೋನ್ ನನ್ನ ಕೈಗೆ ಬಂತು. ಭವಾನಿ ‘ಯಾರ್ರೀ ನಿಮಗೆ ಮನೆ ಕೊಡಲ್ಲಾ ಅಂದವ್ರು. ನಾನು ಏಳೆಂಟು ಟು ಲೆಟ್ ಬೋರ್ಡ್ ನೋಡಿದ್ದೇನೆ. ನೀವಿಬ್ಬರೂ ಈಗಲೇ ಬನ್ನಿ. ಸಣ್ಣ ಫ್ಯಾಮಿಲಿಗೆ ನಮ್ಮ ಏರಿಯಾದಲ್ಲಿ ಮನೆ ಸಿಗುತ್ತೆ’ ಎಂದರು. ನಾನು ಸರಿ ಎಂದು ಅರ್ಧಾಂಗಿಯನ್ನೂ ಸ್ಕೂಟರ್ ಹತ್ತಿಸಿಕೊಂಡು ‘ಅವರ ಏರಿಯಾ’ಕ್ಕೆ ಹೋದೆ.

ಈ ಹೊತ್ತಿಗಾಗಲೇ ಹತ್ತಾರು ಮನೆ ನೋಡಿ ಅನುಭವಿಯಾಗಿದ್ದ ನಾನೊಂದು ಸ್ಥಿತಪ್ರಜ್ಞ ಮನಸ್ಥಿತಿಯಲ್ಲಿದ್ದೆ. ಭವಾನಿ ಹೊಸ ಅಗಸನ ಉತ್ಸಾಹದಲ್ಲಿದ್ದರು. ಮತ್ತೆ ಹುಡುಕಾಟ ಆರಂಭವಾಯಿತು. ಮೊದಲ ‘ಟು ಲೆಟ್’ ಕಂಡಾಗ ನಾನು ಸುತ್ತಮುತ್ತೆಲ್ಲಾ ನೋಡಿದೆ. ತುಳಸಿ ಕಟ್ಟೆ ಕಾಣಿಸಿತು. ನನ್ನ ಉತ್ಸಾಹ ಕಡಿಮೆಯಾಯಿತು. ಆದರೆ ಭವಾನಿ ಮುನ್ನುಗ್ಗಿದ್ದರು. ಲೇಡೀಸ್ ಫಸ್ಟ್ ಎಂದುಕೊಂಡು ಹಿಂಬಾಲಿಸಿದೆ. ಮಾಲೀಕರು ಒಳ್ಳೆಯವರಂತೆ ಕಾಣಿಸಿದರು. ‘ಸಣ್ಣ ಫ್ಯಾಮಿಲಿ. ಬರೀ ಗಂಡ ಹೆಂಡತಿ ಇಬ್ಬರೇ’ ಇತ್ಯಾದಿ ಪ್ರವರ ಆರಂಭಿಸಿದರು. ಮಾಲೀಕರು ಮನೆ ಬಾಗಿಲು ತೆರೆದು ತೋರಿಸತೊಡಗಿದರು. ಈ ಮಧ್ಯೆ ಅವರು ಮನೆ ಯಾರಿಗೆ ಎಂದಾಗ, ಭವಾನಿ ನನ್ನನ್ನು ತೋರಿಸಿ ‘ಇವರಿಗೆ’ ಎಂದರು. ನಾನು ನನ್ನ ಹೆಸರು ಹೇಳಿ ಪರಿಚಯಿಸಿಕೊಂಡೆ. ಮಾಲೀಕರು ‘ನಾನ್ ವೆಜಿಟೇರಿಯನ್ಸ್‌ಗೆ ಮನೆ ಕೊಡಲ್ಲ’ ಎಂದರು. ಪೆಚ್ಚಾಗಿ ಅಲ್ಲಿಂದ ಮುಂದಿನ ಗುರಿ ಹುಡುಕಿ ಹೊರಟವು.

ಎರಡನೇ ‘ಟು ಲೆಟ್’ ಕೂಡಾ ಮಾಂಸಾಹಾರಿಗಳಿಗೆ ಪ್ರವೇಶ ನಿಷೇಧಿಸಿತ್ತು. ಮೂರನೆಯವರೂ ಇದನ್ನೇ ಹೇಳಿದಾಗ ಕ್ರುದ್ಧರಾಗಿದ್ದ ಭವಾನಿ ‘ನೋಡೀ, ನಾನ್ ವೆಜಿಟೇರಿಯನ್ ಮಾಡಿದ್ರೆ ನಿಮಗೆ ಕೊಡಲ್ಲ. ಅವರೇ ತಿನ್ತಾರೆ. ಈ ತರಾ ಮಾಂಸಕ್ಕೆ ರೇಟು ಏರಿರೋವಾಗ ದಿನಾ ಅದನ್ನೇ ತಿನ್ನೋಕೆ ಆಗುತ್ತೇನ್ರೀ’ ಎಂದು ರೇಗಿದರು. ನಾನೇ ಅವರನ್ನು ಸಮಾಧಾನಪಡಿಸಿ ಮುಂದಿನ ಮನೆಗೆ ಹೋಗೋಣ ಎಂದು ಹೊರಟೆ. ಒಂದೆರಡು ಮನೆಗಳು ಇಷ್ಟವಾಗಲಿಲ್ಲ. ಉಳಿದವರು ಬ್ರಾಹ್ಮಣರಿಗೆ ಮಾತ್ರ, ಹಿಂದೂಗಳಿಗೆ ಮಾತ್ರ ಷರತ್ತುಗಳನ್ನು ವಿಧಿಸಿದ್ದನ್ನು ಕೇಳುವ ಹೊತ್ತಿಗೆ ಅಂದಿನ ದಿನವೂ ಮುಗಿದಿತ್ತು.

ಈ ಹೊತ್ತಿಗೆ ಭವಾನಿ ಕೂಡಾ ನನ್ನಂತೆಯೇ ಸ್ಥಿತಪ್ರಜ್ಞತೆಯನ್ನು ರೂಢಿಸಿಕೊಂಡಿದ್ದರು. ಒಂದಷ್ಟು ಗೆಳೆಯರಿಗೆ ಫೋನಾಯಿಸಿ ಮುಸ್ಲಿಂ ದಂಪತಿಗಳಿಗೆ ಮನೆ ಬೇಕು ಎಂದು ಹೇಳಲಾರಂಭಿಸಿದ್ದರು. ನಾನು ಮತ್ತೆ ಫ್ರೀ ಕ್ಲಾಸಿಫೈಡ್ಸ್‌ನಲ್ಲಿ ಜಾಹೀರಾತು ನೀಡಿದ್ದ ಮಾಲೀಕರಿಗೆ ಫೋನಾಯಿಸಲು ಆರಂಭಿಸಿದೆ. ಮಾಲೀಕರು ಫೋನ್ ಎತ್ತಿಕೊಂಡ ತಕ್ಷಣ ಕೇಳುತ್ತಿದ್ದ ಮೊದಲ ಪ್ರಶ್ನೆ– ‘ನೀವು ಮುಸ್ಲಿಮರಿಗೆ ಮನೆ ಕೊಡುತ್ತೀರಾ...?’. ಈ ಪ್ರಶ್ನೆಯಿಂದ ಅವರೇನೂ ಮುಜುಗರಕ್ಕೆ ಒಳಗಾಗುತ್ತಿರಲಿಲ್ಲ ಅನ್ನಿಸುತ್ತದೆ. ಬಹುಶಃ ಅವರಿಗೆ ಈ ನೇರ ಪ್ರಶ್ನೆ ಸಂತೋಷವನ್ನೇ ಉಂಟುಮಾಡುತ್ತಿತ್ತೇನೋ? ಅವರೂ ನೇರವಾಗಿ ‘ಕೊಡುವುದಿಲ್ಲ’ ಎನ್ನುತ್ತಿದ್ದರು.

ಛಲ ಬಿಡದ ತ್ರಿವಿಕ್ರಮನಂತೆ ಫೋನಾಯಿಸುತ್ತಾ ಹೋದ ನನಗೆ ಮನೆ ಸಿಗಬಹುದಾದ ಪ್ರದೇಶಗಳ್ಯಾವುವು ಎಂಬುದು ತಿಳಿಯುತ್ತಾ ಹೋಯಿತು. ಒಂದು ಬಗೆಯಲ್ಲಿ ನಾನು ಬೆಂಗಳೂರಿನ ಹಲವು ಪ್ರದೇಶಗಳ ಸಾಮಾಜಿಕ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾ ಇದ್ದೆ. ಹೀಗೆ ಫೋನ್ ಮಾಡುವ ಕೆಲಸವೇ ಒಂದು ರೀತಿಯಲ್ಲಿ ಮಜಾ ಕೊಡಲು ತೊಡಗಿದಾಗ ನನ್ನ ಪ್ರಶ್ನೆಯ ಶೈಲಿಯನ್ನೂ ಬದಲಾಯಿಸಿದೆ.
‘ನಾನ್ ವೆಜಿಟೇರಿಯನ್ಸ್‌ಗೆ ಮನೆ ಕೊಡ್ತೀರಾ?’ ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರ ಬಂದರೆ ಮುಂದೆ ಮಾತನಾಡುತ್ತಿರಲಿಲ್ಲ. ‘ಕೊಡುತ್ತೇವೆ’ ಎಂದರೆ ಪ್ರಶ್ನೆ ಮುಂದುವರಿಯುತ್ತಿತ್ತು–  ‘ನೀವು ಯಾವ ಜಾತಿ ಸಾರ್’. ಈ ಪ್ರಶ್ನೆಯನ್ನು ಹೆಚ್ಚಿನವರು ಧನಾತ್ಮಕವಾಗಿಯೇ ಸ್ವೀಕರಿಸಿ, ‘ನಾವು ರೆಡ್ಡೀಸು, ಕುರುಬಾಸ್, ಗೌಡ್ರು’ ಇತ್ಯಾದಿ ಉತ್ತರಗಳನ್ನು ಕೊಡುತ್ತಿದ್ದರು.

ಈ ಉತ್ತರ ಬಂದ ಮೇಲೆ ಮಾತನಾಡಿದವರ ಮಾತಿನ ಶೈಲಿ ನೋಡಿಕೊಂಡು ಮುಂದಿನ ಪ್ರಶ್ನೆ ಎಸೆಯುತ್ತಿದ್ದೆ, ‘ಮುಸ್ಲಿಮರಿಗೆ ಮನೆ ಕೊಡ್ತೀರಾ...?’. ಹೆಚ್ಚಿನವರು ‘ಆಗಲ್ಲಾರೀ’ ಎನ್ನುತ್ತಿದ್ದರು. ನಾನು ಅಷ್ಟಕ್ಕೇ ಬಿಡುತ್ತಿರಲಿಲ್ಲ, ‘ಏನ್ಸಾರ್ ನಾನ್ ವೆಜಿಟೇರಿಯನ್ಸ್ ಆಗ್ಬಹುದು ಅಂದ್ರಿ. ಈಗ ನೋಡಿದ್ರೆ ಆಗಲ್ಲ ಅಂತೀರಲ್ಲ...?’. ಅದಕ್ಕೆ ಅವರು ನೀಡುತ್ತಿದ್ದ ಉತ್ತರ ತಮಾಷೆಯಾಗಿರುತ್ತಿತ್ತು. ‘ನಿಮ್ಮ ಕನ್ನಡ ಎಷ್ಟು ಚೆನ್ನಾಗಿದೆ... ಆದ್ರೆ...’ ಅಥವಾ ‘ಸಾಬ್ರು ತುಂಬಾ ಜನಾ ಇರ್ತಾರೆ. ಅದಕ್ಕೇ ಕೊಡಲ್ಲ’. ಇಂಥ ಉತ್ತರ ಬಂದರೆ ಮತ್ತೂ ಖುಷಿಯಾಗುತ್ತಿತ್ತು. ‘ಇಲ್ಲಾ ಸಾರ್. ನಾವಿಬ್ಬರೇ ಇರೋದು. ನನ್ನ ಅಪ್ಪ–ಅಮ್ಮಾನೂ ಇಲ್ಲ. ನನ್ನ ಹೆಂಡತಿಗೆ ಇಬ್ಬರೂ ಇದ್ದಾರೆ. ಆದರೆ ಅವರಿಗೆ ಬೆಂಗಳೂರು ಅಂದ್ರೇ ಹೆದ್ರಿಕೆ. ಟ್ರೈ ಮಾಡಿ ಸಾರ್. ಬಾಡಿಗೆ ಕರೆಕ್ಟ್ ಟೈಮಿಗೆ ಕೊಡುತ್ತೇವೆ’ ಎಂದು ಸತಾಯಿಸುತ್ತಿದ್ದೆ. ನನ್ನ ಕಾಟ ಸಹಿಸಲಾರದೆ ಫೋನ್ ಇಟ್ಟು ಬಿಡುತ್ತಿದ್ದರು.

ಈ ಮನೆ ಹುಡುಕುವ ಪ್ರಕ್ರಿಯೆಯಲ್ಲಿ ನನಗೆ ಬೆಂಗಳೂರಿನ ಜಾತಿ ನಕಾಶೆ, ಧರ್ಮದ ನಕಾಶೆ ಮತ್ತು ಬಾಡಿಗೆ ಮನೆ ಮಾಲೀಕರ ಮನಸ್ಸಿನ ನಕಾಶೆಗಳೆಲ್ಲವೂ ಮನೋಗತವಾದವು. ಮುಸ್ಲಿಮರಿಗೆ ಎಲ್ಲಿ ಮನೆ ಸಿಗಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಸಿದ್ಧಾಂತವೊಂದನ್ನು ರೂಪಿಸುವುದಕ್ಕೆ ಬೇಕಿರುವ ಬೌದ್ಧಿಕ ಪರಿಕರಗಳೇನು. ಭೌತಿಕ ಪರಿಕರಗಳೇನು ಇತ್ಯಾದಿಗಳೆಲ್ಲವೂ ಅರ್ಥವಾಗತೊಡಗಿದವು. ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು.

* ‘ನಾನ್ ವೆಜಿಟೇರಿಯನ್ಸ್‌ಗೆ ಮನೆ ಕೊಡುವುದಿಲ್ಲ’ ಎಂದು ಯಾರಾದರೂ ಹೇಳಿದರೆ ಅದನ್ನು ಯಾವಾಗ ಹೇಳಿದರು ಎಂಬುದನ್ನು ಆಧಾರವಾಗಿಟ್ಟುಕೊಂಡು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮುಸ್ಲಿಂ ಹೆಸರು ಹೇಳಿದ ನಂತರ ಈ ಮಾತು ಬಂದಿದ್ದರೆ ಅದರ ಅರ್ಥ ಬೇರೆ. ನೀವು ಮನೆ ಕೇಳಿದ ತಕ್ಷಣವೇ ಈ ಮಾತು ಹೇಳಿದರೆ ಅದರ ಅರ್ಥ ಬೇರೆ.
*ಅಹಿಂದ, ಇತ್ಯಾದಿ ಸಿದ್ಧಾಂತಗಳನ್ನು ಬಾಡಿಗೆಮನೆ ಹುಡುಕುವಾಗ ಮರೆತುಬಿಡಿ.
*ಬ್ರೋಕರ್ ಮೂಲಕ ಮನೆ ಹುಡುಕುವುದಿದ್ದರೆ ಮೊದಲಿಗೇ ಧರ್ಮವನ್ನು ಹೇಳಿಬಿಡುವುದು ಉತ್ತಮ.
*ದಕ್ಷಿಣ ಬೆಂಗಳೂರಿನಲ್ಲಿ ಮುಸ್ಲಿಮರಿಗೆ ಮನೆ ಕೊಡುವವರಲ್ಲಿ ಮುಸ್ಲಿಂ ಮಾಲೀಕರೇ ಹೆಚ್ಚು. ಇದಕ್ಕೆ ಹೊರತಾದುದೇನಾದರೂ ಸಂಭವಿಸಬೇಕೆಂದರೆ ಬ್ರಿಟಿಷರ ಕಾಲದ ಬೆಂಗಳೂರು ಅಂದರೆ ಕಂಟೋನ್ಮೆಂಟ್ ಪ್ರದೇಶದಲ್ಲಿ ಹುಡುಕಬೇಕು.
* ಸುಮಾರು 25,000 ರೂಪಾಯಿಗಳಿಗಿಂತ ಹೆಚ್ಚಿನ ಬಾಡಿಗೆ ಕೊಡಲು ಸಿದ್ಧರಿದ್ದರೆ ಜಾತಿ, ಧರ್ಮ ಇತ್ಯಾದಿಗಳೆಲ್ಲಾ ಅಷ್ಟೇನೂ ಮುಖ್ಯವಾಗುವುದಿಲ್ಲ.
*ಹೊಸತಾಗಿ ರೂಪುಗೊಂಡ ಲೇಔಟ್‌ಗಳಲ್ಲಿ ಮುಸ್ಲಿಮರು ಅದೃಷ್ಟ ಪರೀಕ್ಷೆ ಮಾಡಬಹುದು.
*ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶದಲ್ಲಿ ಮನೆ ಸಿಗುವುದು ಸುಲಭ.

ಈ ಸೂತ್ರಗಳನ್ನು ಬಳಸಿಕೊಂಡು ಮನೆ ಮಾಡಿಕೊಳ್ಳಲು ಹೊರಡುವ ಹೊತ್ತಿಗೆ ಇನ್ನೂ ಹುಟ್ಟಬೇಕಿದ್ದ ನನ್ನ ಮಗಳ ಪುಣ್ಯದಿಂದಲೋ ಅಥವಾ ನನ್ನ ಮುಸ್ಲಿಮೇತರ ಗೆಳೆಯರ ಸಾತ್ವಿಕ ರೋಷದಿಂದಲೋ ಮುಸ್ಲಿಂ ಸದ್ಗೃಹಸ್ತರೊಬ್ಬರು ನನಗೊಂದು ಮನೆಕೊಟ್ಟರು. ಬಾಡಿಗೆ ಮನೆಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಧ್ಯಯನ ತಾತ್ಕಾಲಿಕವಾಗಿ ಕೊನೆಗೊಂಡಿತು. ಎಲ್ಲವನ್ನೂ ಕಾಣುವವನೂ ಎಲ್ಲವನ್ನೂ ನಿಯಂತ್ರಿಸುವವನೂ ಆಗಿರುವ ಇಹ ಪರಗಳ ಒಡೆಯ ಈ ಪರೀಕ್ಷೆಗೆ ನನ್ನನ್ನು ಗುರಿಪಡಿಸುವ ಮೂಲಕ ಅಸ್ಪೃಶ್ಯತೆಯೆಂದರೇನು ಎಂಬುದನ್ನು ತಿಳಿಸಿಕೊಟ್ಟನೆಂಬುದನ್ನು ಈ ರಂಜಾನ್ ದಿನಗಳಲ್ಲಿ ನಾನು ನೆನಪಿಸಿಕೊಳ್ಳಲೇಬೇಕು. ಸರ್ವ ಸ್ತುತಿಗಳಿಗೂ ಅವನಿಗಿರಲಿ. ಆಮೀನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT