ಸೋಮವಾರ, ಮೇ 10, 2021
21 °C

ಎಲ್ಲ ಕಡೆ ಸಿಸಿಟಿವಿ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭದ್ರತೆ ದೃಷ್ಟಿಯಿಂದ ನಗರದ ಎಲ್ಲ ಕಡೆ ಸಿಸಿ ಟಿವಿಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಆರ್.ಅಶೋಕ ಶನಿವಾರ ಇಲ್ಲಿ ಹೇಳಿದರು.ದೆಹಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಹೈಕೋರ್ಟ್, ಕೆ.ಆರ್.ಮಾರುಕಟ್ಟೆ ಸೇರಿದಂತೆ ಎಲ್ಲ ಕಡೆ ಸಿಸಿ ಟಿವಿ ಅಳವಡಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ಕೇಂದ್ರವು 500 ಕೋಟಿ ರೂಪಾಯಿ ತೆಗೆದಿರಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಅಪರಿಚಿತ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಲು ಇದರಿಂದ ಅನುಕೂಲವಾಗಲಿದೆ. ಅಲ್ಲದೇ ಸಂಚಾರ ನಿಯಮಗಳ ಉಲ್ಲಂಘನೆ, ಕೊಲೆ, ಸುಲಿಗೆ ಪ್ರಕರಣಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ. ಈ ಕುರಿತು ಒಂದು ತಿಂಗಳಲ್ಲಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಲ್ಲೂ ಇದೇ ರೀತಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದರು.ಹೈಕೋರ್ಟ್‌ಗೆ ಈಗಾಗಲೇ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸಿಸಿ ಟಿವಿಯನ್ನು ಸಹ ಅಳವಡಿಸಲಾಗುವುದು. ಅಲ್ಲದೆ ಬರುವ ದಿನಗಳಲ್ಲಿ ಕೆಳ ಹಂತದ ನ್ಯಾಯಾಲಯಗಳಿಗೂ ಭದ್ರತೆಯನ್ನು ಒದಗಿಸಲಾಗುವುದು. ಟೆಂಡರ್ ಕರೆದರೆ ವಿಳಂಬವಾಗುತ್ತದೆ ಎಂಬ ಕಾರಣಕ್ಕಾಗಿ ನೇರವಾಗಿ ಸಿಸಿ ಟಿವಿ ಖರೀದಿಗೆ ಅನುಮತಿ ನೀಡುವಂತೆ ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ಬ್ಯಾಂಕ್‌ಗಳು, ಮಾಲ್‌ಗಳು, ಚಿನ್ನದ ಅಂಗಡಿಗಳು, ಬಸ್ ನಿಲ್ದಾಣಗಳಲ್ಲಿ ಯಾವ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕು ಎಂಬ ಮಾರ್ಗದರ್ಶಿ ಸೂತ್ರಗಳು ಸಿದ್ಧವಾಗುತ್ತಿದ್ದು, ಆದಷ್ಟು ಬೇಗ ನೋಟಿಸ್ ರೂಪದಲ್ಲಿ ಅವುಗಳನ್ನು ಕಳುಹಿಸಿಕೊಡಲಾಗುವುದು. ಪೊಲೀಸರು ಮತ್ತು ನಾಗರಿಕರ ನಡುವೆ ಉತ್ತಮ ಸಹಕಾರ ಇದ್ದರೆ ಬಹಳಷ್ಟು ಅನಾಹುತಗಳನ್ನು ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾರ ಕೈವಾಡವಿದೆ, ಅವರು ಯಾವ ದೇಶದವರು ಎಂಬುದು ಗೊತ್ತಿದೆ. ಕೇಂದ್ರಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.