ಸೋಮವಾರ, ಮೇ 16, 2022
27 °C

ಎಲ್ಲ ಕ್ಷೇತ್ರಗಳಲ್ಲೂ ಬಿಎಸ್‌ಆರ್ ಕಾಂಗ್ರೆಸ್ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಸ್ಥಾಪಕ, ಶಾಸಕ ಬಿ. ಶ್ರೀರಾಮುಲು ಘೋಷಿಸಿದರು.ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ತಮ್ಮ ಪಾದಯಾತ್ರೆಯ (ಬಸವಕಲ್ಯಾಣದಿಂದ ಬೆಂಗಳೂರಿಗೆ) ಸಮಾರೋಪ, ಬಿಎಸ್‌ಆರ್ ಕಾಂಗ್ರೆಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಹೈಕಮಾಂಡ್‌ನ ಹಂಗು ಇಲ್ಲದಂತೆ ನಮ್ಮ ಪಕ್ಷವನ್ನು ರಾಜ್ಯದಲ್ಲಿ ಬೆಳೆಸಲಾಗುವುದು, ಕಾರ್ಯಕರ್ತರ ನೋಂದಣಿ ಕಾರ್ಯವನ್ನು ತಕ್ಷಣದಿಂದ ಆರಂಭಿಸಲಾಗುವುದು~ ಎಂದರು.ಭಾಷಣದುದ್ದಕ್ಕೂ ರಾಷ್ಟ್ರೀಯ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಅವರು, `ರಾಜ್ಯದ ನಾಯಕರು ಕಷ್ಟಪಟ್ಟು ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಆದರೆ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ದೆಹಲಿಯ ಮುಖಂಡರು ನಿರ್ಧರಿಸುತ್ತಾರೆ. ಇಂಥ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಇಲ್ಲ. ಇಲ್ಲಿ ಜನರೇ ಹೈಕಮಾಂಡ್~ ಎಂದು ಹೇಳಿದರು.ಬಿಜೆಪಿ ಬಗ್ಗೆ ಕೆಂಡ ಕಾರಿದ ಅವರು, `ಬಸವಣ್ಣ ಆಸ್ಥಾನ ತೊರೆದ ನಂತರ ಬಿಜ್ಜಳನ ಸಾಮ್ರಾಜ್ಯ ಪತನವಾದ ಮಾದರಿಯಲ್ಲೇ, ಶ್ರೀರಾಮುಲು ಇಲ್ಲದ ಬಿಜೆಪಿ ರಾಜ್ಯದಲ್ಲಿ ನಾಶವಾಗಲಿದೆ~ ಎಂದರು.ಕಾರವಾರದಿಂದ ಕನಕಪುರಕ್ಕೆ ಬೈಕ್ ರ‌್ಯಾಲಿ ಕೈಗೊಳ್ಳಲಾಗುವುದು. ಈ ರ‌್ಯಾಲಿ ಕರಾವಳಿ, ಮಲೆನಾಡು ಹಾಗೂ ಮೈಸೂರು ಭಾಗಗಳನ್ನು ಹಾದು ಬರಲಿದೆ. ಅದರ ನಂತರ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸಲಾಗುವುದು ಎಂದರು.ಕಣ್ಣೀರಿಟ್ಟ ರೆಡ್ಡಿ: ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ವಶದಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ನೆನಪಿಸಿಕೊಂಡು ಅವರ ಸಹೋದರ, ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಅವರು ಕಣ್ಣೀರಿಟ್ಟ ಪ್ರಸಂಗವೂ ಸಮಾವೇಶದಲ್ಲಿ ನಡೆಯಿತು. ಜನಾರ್ದನ ಹಾಗೂ ಶ್ರೀರಾಮುಲು ಅವರನ್ನು ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯರಿಗೆ ಹೋಲಿಸಿದ ಸೋಮಶೇಖರ, `ಚಾಣಕ್ಯ - ಚಂದ್ರಗುಪ್ತ ಜೊತೆ ಸೇರಿ ಸರ್ಕಾರ ರಚಿಸುತ್ತಾರೆ~ ಎಂದರು.`ಸಿಬಿಐ ನ್ಯಾಯಾಧೀಶ ಪಟ್ಟಾಭಿ ರಾಮರಾವ್ ಅವರಿಗೆ ಲಂಚ ನೀಡಿದ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಆದರೂ ಕೆಲವು ದುಷ್ಟ ಮಾಧ್ಯಮಗಳು, ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿವೆ~ ಎಂದು ಹರಿಹಾಯ್ದರು.ಜನತಾ ನ್ಯಾಯಾಲಯ ದೊಡ್ಡದು~: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಮಾತನಾಡಿ, `ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್‌ಮೋಹನ್ ರೆಡ್ಡಿ ಅವರ ಮೇಲೆ ಕಾಂಗ್ರೆಸ್ಸಿಗರು ಸಾಕಷ್ಟು ಆಪಾದನೆ ಹೊರಿಸಿದರು.

 

ಆದರೂ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಜಗನ್ ನೇತೃತ್ವದ ಪಕ್ಷ ಭರ್ಜರಿ ಜಯ ಸಾಧಿಸುವ ಮೂಲಕ ಜನತಾ ನ್ಯಾಯಾಲಯದಲ್ಲಿ ಗೆಲುವು ಪಡೆದಿದೆ. ನಮ್ಮನ್ನು ನಿಯಂತ್ರಿಸುವ ಇತರ ನ್ಯಾಯಾಲಯಗಳಿಗಿಂತ ಜನತಾ ನ್ಯಾಯಾಲಯವೇ ದೊಡ್ಡದು. ಶ್ರೀರಾಮುಲು  ಜನತಾ ನ್ಯಾಯಾಲಯದಲ್ಲಿ ಗೆಲುವು ಸಾಧಿಸುತ್ತಾರೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.ತಾಂತ್ರಿಕವಾಗಿ ಇಂದಿಗೂ ಬಿಜೆಪಿಯಲ್ಲೇ ಇರುವ ಕೆಲವು ಜನಪ್ರತಿನಿಧಿಗಳು ಬಿಜೆಪಿ ವಿರುದ್ಧ ಕಾರ್ಯಕ್ರಮದಲ್ಲಿ ಬಹಿರಂಗ ವಾಗ್ದಾಳಿ ನಡೆಸಿದರು. ಬಳ್ಳಾರಿಯ ಮಾಜಿ ಸಂಸದೆ ಜೆ. ಶಾಂತಾ, `ನಾಡಿನಲ್ಲಿ ರೈತರು ಅನ್ನಕ್ಕಾಗಿ ಪರದಾಡುವಂತಾಗಲು ಬಿಜೆಪಿ ಸರ್ಕಾರವೇ ಕಾರಣ~ ಎಂದು ದೂರಿದರು.ರಾಯಚೂರು ಸಂಸದ ಸಣ್ಣ ಫಕೀರಪ್ಪ ಅವರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ರಾಜ್ಯದಿಂದ ಕಿತ್ತೊಗೆಯಬೇಕು ಎಂದರು. `ನಾವು ಯಾವುದೇ ಪಕ್ಷದ ಬಲದಿಂದ ಚುನಾವಣೆ ಗೆದ್ದವರಲ್ಲ. ಶ್ರೀರಾಮುಲು ಮುಖ ನೋಡಿ ಜನ ನಮಗೆ ಮತ ನೀಡಿದ್ದಾರೆ~ ಎಂದು ಕಂಪ್ಲಿ ಶಾಸಕ ಸುರೇಶ್ ಬಾಬು ಹೇಳಿದರು.ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್, ಕೊಪ್ಪಳದ ಮಾಜಿ ಸಂಸದ ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಕೂಡ್ಲಿಗಿ ಶಾಸಕ ನಾಗೇಂದ್ರ, ಚಿತ್ರನಟಿ ರಕ್ಷಿತಾ, ಕೋಲ್ಕತ್ತದ ಮುಸ್ಲಿಂ ಧರ್ಮಗುರು ಮಹಮ್ಮದ್ ಅಬುತಾಲೀಬ್ ರೆಹಮಾನಿ ಮತ್ತಿತರರು ಪಾಲ್ಗೊಂಡಿದ್ದರು.

ಮಳವಳ್ಳಿ ತುಂಗ...

ಕಮ್ಯುನಿಸ್ಟ್ ಮುಖಂಡ, ಚೀನಾದ ಮಾವೊತ್ಸೆ ತುಂಗ ಅವರನ್ನು ಬಿ. ಶ್ರೀರಾಮುಲು ತಮ್ಮ ಭಾಷಣದಲ್ಲಿ `ಮಳವಳ್ಳಿ ತುಂಗ~ ಎಂದು ಕರೆದ ಪ್ರಸಂಗ ಭಾನುವಾರದ ಕಾರ್ಯಕ್ರಮದಲ್ಲಿ ನಡೆಯಿತು! ಹಾಗೆಯೇ ವಿನೋಬಾ ಭಾವೆ ಅವರನ್ನು `ವಿನೋಬಾ ಬಾವಯ್ಯ~ ಎಂದೂ ಎಂದೂ ಕರೆದು ಸಭಿಕರಲ್ಲಿ ನಗೆಯುಕ್ಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.