ಮಂಗಳವಾರ, ಏಪ್ರಿಲ್ 20, 2021
29 °C

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:  ಕೊನೆಯ ಕ್ಷಣದಲ್ಲಿ ತೀವ್ರ ಕಸರತ್ತು ನಡೆಸುವ ಬದಲು ಈಗಿನಿಂದಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜು ಗೌಡ) ಸೂಚಿಸಿದರು.ಸೋಮವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯಮಟ್ಟದಲ್ಲಿ ಜಿಲ್ಲೆಯು ಕೊನೆಯ ಸ್ಥಾನದಲ್ಲಿ ನಿಲ್ಲುತ್ತಿದೆ. ಶಿಕ್ಷಕರ ಕೊರತೆ, ಮತ್ತಿತರ ಸಮಸ್ಯೆಗಳು ಇರುವುದು ನಿಜ. ಕೊರತೆಗಳನ್ನೇ ನೆಪವಾಗಿಟ್ಟುಕೊಂಡು ಕ್ರಮಗಳನ್ನೇ ಕೈಗೊಳ್ಳದಿದ್ದರೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಅವರಿಗೆ ಸೂಚಿಸಿದರು.ಕಳೆದ ಎರಡು, ಮೂರು ವರ್ಷಗಳ ಫಲಿತಾಂಶವನ್ನು ಪರಿಗಣಿಸಿ, ಯಾವ ವಿಷಯದಲ್ಲಿ ಹೆಚ್ಚು ವಿಷಯದಲ್ಲಿ ವಿದ್ಯಾರ್ಥಿಗಲು ಅನುತ್ತೀರ್ಣರಾಗಿದ್ದಾರೋ, ಆ ವಿಷಯಗಳ ಬಗ್ಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಲ್ಲಿಯೇ ಹೆಚ್ಚಿನ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿದ್ದು, ಈ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಚಿವರು ಸಲಹೆ ಮಾಡಿದರು.ವಿಶೇಷ ತರಗತಿಗಳ ಕುರಿತು ವರದಿ ತಯಾರಿಸಿ ಒಂದು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿದ ಅವರು, ಈ ಬಾರಿಯಾದರೂ ಜಿಲ್ಲೆಯ ಫಲಿತಾಂಶ ಉತ್ತಮ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಆರ್‌ಐಡಿಎಫ್ 15 ಮತ್ತು 16 ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳು ಎರಡು ಮೂರು ವರ್ಷಗಳಾದರೂ ಮುಗಿಯುತ್ತಿಲ್ಲ. ಹಿಂದೆ ಇದ್ದ ಯೋಜನೆಯ ವೆಚ್ಚ ಹೆಚ್ಚಾಗುತ್ತ ಹೋಗುತ್ತದೆ. ಇದಕ್ಕೆ ಯಾರು ಜವಾಬ್ದಾರರು ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಚಿವರು ಕೇಳಿದರು.ಇದಕ್ಕೆ ಉತ್ತರಿಸಿದ ಕಾರ್ಯ ನಿರ್ವಾಹಕ ಎಂಜಿನಿಯರ್ ಚೆನ್ನಬಸಪ್ಪ ಮೆಕಾಲೆ, ಆರ್‌ಐಡಿಎಫ್ 15 ರಡಿ ಕೇವಲ ಒಂದು ಕಾಮಗಾರಿ ಉಳಿದಿದೆ. ಎರಡು ತಿಂಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.ಜಿಲ್ಲೆಯಲ್ಲಿ ಹಲವಾರು ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡಿರುವ ಕುರಿತು ನಾಮನಿರ್ದೇಶಿತ ಸದಸ್ಯ ವೆಂಕಟರಡ್ಡಿ ಅಬ್ಬೆತುಮಕೂರ ಸಭೆಯ ಗಮನ ಸೆಳೆದರು. ಠಾಣಗುಂದಿಯಲ್ಲಿನ ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದ್ದು, ರೈತರ ಉಪಯೋಗಕ್ಕೆ ಬಾರದಂತಾಗಿದೆ ಎಂದು ಹೇಳಿದರು.  ಕೂಡಲೇ ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ, ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆಗಳ ಕುರಿತು ಸಮಗ್ರವಾದ ವರದಿಯನ್ನು ಒಂದು ವಾರದಲ್ಲಿ ತಮಗೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಶಾಲೆಗಳಿಗೆ ಕಟ್ಟಡವಿಲ್ಲ: 
ರಾಜೀವ ಗಾಂಧಿ ನಗರ ಹಾಗೂ ಶಿವನಗರಗಳಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಟ್ಟಡಗಳೇ ಇಲ್ಲದೇ ವಿದ್ಯಾರ್ಥಿಗಳು ಗಿಡದ ನೆರಳಿನಲ್ಲಿ ಪಾಠ ಕೇಳಬೇಕಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ದೇವರಾಜ ನಾಯಕ ಹಾಗೂ ಹನುಮೇಗೌಡ ಮರಕಲ್ ತಿಳಿಸಿದರು. ರಾಜೀವ ಗಾಂಧಿ ನಗರದಲ್ಲಿ ಶಾಲಾ ಕಟ್ಟಡಕ್ಕೆ ಸ್ಥಳವಿದ್ದರೂ, ನಗರಸಭೆಯಿಂದ ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಮೊಹ್ಮದ್ ಮುನೀರ್, ಎರಡು ದಿನಗಳ ಹಿಂದಷ್ಟೇ ಈ ಶಾಲೆಯ ಕಟ್ಟಡಕ್ಕೆ ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಆರಂಭಿಸಬಹುದಾಗಿದೆ ಎಂದು ತಿಳಿಸಿದರು.

ಶಿವನಗರದಲ್ಲಿ ಶಾಲಾ ಕಟ್ಟಡಕ್ಕೆ ನಿವೇಶನ ಇಲ್ಲದೇ ಇರುವ ಬಗ್ಗೆ ಸರ್ವ ಶಿಕ್ಷಣ ಅಭಿಯಾನದ ಉಪಸಮನ್ವಯಾಧಿಕಾರಿ ನಾಗರಾಜ ತಿಳಿಸಿದರು.ಕೂಡಲೇ ನಗರಸಭೆ ಆಯುಕ್ತರು, ಪಟ್ಟಣ ಪಂಚಾಯಿತಿ, ಪುರಸಭೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ, ನಗರ, ಪಟ್ಟಣಗಳಲ್ಲಿನ ಲೇಔಟ್‌ಗಳಲ್ಲಿ ಇರುವ ಸಿಎ ಸೈಟ್ ಹಾಗೂ ಉದ್ಯಾನಕ್ಕೆ ಮೀಸಲಿಟ್ಟ ಜಾಗೆಗಳನ್ನು ಗುರುತಿಸಬೇಕು. ಅತಿಕ್ರಮಣ ಆಗಿದ್ದರೆ ಅವುಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.ಇನ್ನೊಂದೆಡೆ ಸರ್ಕಾರದ ಯೋಜನೆಗಳಿಗೆ ಅಗತ್ಯವಿರುವ ಜಮೀನಿನ ಬಗ್ಗೆ ಬೇಡಿಕೆ ಸಲ್ಲಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಅವಶ್ಯಕತೆ ಇರುವ ಜಮೀನಿನ ಬಗ್ಗೆ ಕೂಡಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ.ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ಜಂಟಿಯಾಗಿ ಅಧ್ಯಯನ ನಡೆಸಿ, ವರದಿ ಕೊಡುವಂತೆ ಸಚಿವರು ಸೂಚನೆ ನೀಡಿದರು.ಜಿಲ್ಲೆಯಲ್ಲಿ ಹಾಫ್‌ಕಾಮ್ಸ ಆರಂಭಿಸಲು ಪ್ರಸ್ತಾವನೆ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.  ಸುರಪುರದಲ್ಲಿ ಶಾದಿ ಮಹಲ್ ಕಟ್ಟಲು ಬಿಸಿಎಂ ಇಲಾಖೆಯಿಂದ ರೂ.5 ಲಕ್ಷ ಬಿಡುಗಡೆ ಮಾಡಲಾಗಿದ್ದು, ಈ ಅನುದಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.

 

ಶಾದಿ ಮಹಲ್ ಬದಲು ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ ಎಂದು ನಾಮನಿರ್ದೇಶಿತ ಸದಸ್ಯ ಸಲೀಂ ವರ್ತಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಬೇಕು. ಅನುದಾನ ದುರುಪಯೋಗ ಆಗಿದ್ದಲ್ಲಿ, ಹಣವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬಿಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಜಹೀರಾ ನಸೀಮ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ತಂಗಡಗಿ, ಉಪಾಧ್ಯಕ್ಷೆ ಶರಣಮ್ಮ ಸಾಹುಕಾರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವೀಂದ್ರನಾಥ ನಾದ್, ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಎಚ್.ಸಿ. ಪಾಟೀಲ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗ ವಹಿಸಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.