ಮಂಗಳವಾರ, ಮೇ 18, 2021
31 °C
ಗೋಕಾಕದಲ್ಲಿ ಗುಂಪು ಘರ್ಷಣೆ; ಲಘು ಲಾಠಿ ಪ್ರಹಾರ

ಎಸ್‌ಐ ಸೇರಿ ಇಬ್ಬರ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಗೋಕಾಕ ನಗರದ ರವಿವಾರ ಪೇಟೆಯಲ್ಲಿ ಶನಿವಾರ ಸಂಜೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದ ಪರಿಣಾಮ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಪಿಎಸ್‌ಐ ಸೇರಿ ಇಬ್ಬರ ಸ್ಥಿತಿ ಚಿಂತಾಜನಕಾಗಿದೆ. ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿದೆ.ಒಂದು ಗುಂಪಿಗೆ ಸೇರಿದ ಹಲವರು ಚಿನ್ನಾಭರಣ ವ್ಯಾಪಾರಿಯೊಬ್ಬರ ಅಂಗಡಿಗೆ ನುಗ್ಗಿ ಇಬ್ಬರನ್ನು ಮನಬಂದಂತೆ ಥಳಿಸಿದರು. ಅದೇ ವೇಳೆಗೆ ಅಲ್ಲಿಗೆ ಬಂದು ಸೇರಿದ ಸುಮಾರು ನೂರಕ್ಕೂ ಹೆಚ್ಚು ಜನರಿದ್ದ ಗುಂಪು ವರ್ತಕನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸಂಜಯ ಸುಕುಮಾರ ಚಿಪ್ಪಲಕಟ್ಟಿ ಎಂಬಾತನನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮತ್ತೊಂದು ಗುಂಪು ಪ್ರತ್ಯೇಕ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಪೊಲೀಸ್ ಜೀಪು ಜಖಂಗೊಂಡು, ಅದರಲ್ಲಿದ್ದ ಶಹರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಡಿ.ಕೆ. ಪಾಟೀಲ ಅವರಿಗೂ ತೀವ್ರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.ಒಂದು ಗುಂಪಿಗೆ ಸೇರಿದ ಜನರು ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿ ತಮ್ಮವರ ವಿರುದ್ಧ ದೂರು ದಾಖಲಿಸಿಕೊಳ್ಳದೇ ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸುವಂತೆ ಒತ್ತಾಯಿಸಿದರು.ಘಟನೆ ಹಿನ್ನೆಲೆಯಲ್ಲಿ ಇಡಿ ಮಾರುಕಟ್ಟೆ ಪ್ರದೇಶ ಕ್ಷಣಾರ್ಧದಲ್ಲಿ ಸ್ಥಗಿತಗೊಂಡು ಅಂಗಡಿ- ಮುಂಗಟ್ಟುಗಳ ಬಾಗಿಲು ಬಂದ್ ಆದವು. ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಈ ಸುದ್ದಿ ನಗರದಾದ್ಯಂತ ಕೆಲವೇ ಕೆಲವು ನಿಮಿಷಗಳಲ್ಲಿ ಪಸರಿಸಿ, ಸಾರಿಗೆ ಸಂಚಾರವೂ ಸ್ಥಗಿತಗೊಂಡಿತು. ಸಂಜೆ 7ಕ್ಕೂ ಮೊದಲು ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.ಸ್ಥಳಕ್ಕೆ ಎಸ್‌ಪಿ ಭೇಟಿ: ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಶನಿವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ, ಎರಡೂ ಗುಂಪಿನವರ ನಡುವೆ ಸಭೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.`ಎರಡು ಚಿನ್ನಾಭರಣ ಅಂಗಡಿಗಳ ಕಾರ್ಮಿಕರ ನಡುವಿನ ವಿಷಯಕ್ಕೆ ಸಂಬಂಧಿಸಿದಂತೆ ಗುಂಪು ಘರ್ಷಣೆ ನಡೆದಿತ್ತು. ಒಂದು ಗುಂಪಿನವರು ದೂರು ದಾಖಲಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬಂದಿದ್ದಾಗ ಕಲ್ಲು ತೂರಾಟ ನಡೆದು ಪಿಎಸ್‌ಐ ಗಾಯಗೊಂಡಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲಾಗಿದ್ದು, ಪರಿಸ್ಥಿತಿಯು ಈಗ ನಿಯಂತ್ರಣಕ್ಕೆ ಬಂದಿದೆ. ಮೂರು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ದೂರು ಹಾಗೂ ಪ್ರತಿ ದೂರು ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ' ಎಂದು ಸಂದೀಪ ಪಾಟೀಲ `ಪ್ರಜಾವಾಣಿ'ಗೆ ತಿಳಿಸಿದರು.ಮೂರು ಲ್ಯಾಪ್‌ಟಾಪ್ ಕಳವು

ಬೆಳಗಾವಿ: ತಾಲ್ಲೂಕಿನ ಹಲಗಾ-ಬಸ್ತವಾಡ ಗ್ರಾಮದಲ್ಲಿರುವ `ಸುವರ್ಣ ವಿಧಾನಸೌಧ'ದ ಎದುರಿಗೆ ಇರುವ `ಶೋಧಾ ಟೊಯೊಟಾ' ಶೋರೂಮ್‌ನಲ್ಲಿದ್ದ ಒಟ್ಟು 85,000 ರೂಪಾಯಿ ಮೌಲ್ಯದ 3 ಲ್ಯಾಪ್‌ಟಾಪ್‌ಗಳು ಶುಕ್ರವಾರ ರಾತ್ರಿ ಕಳ್ಳತನವಾಗಿದೆ.ಶೋರೂಮ್‌ನ ಕಿಡಕಿಯನ್ನು ಒಡೆದು ಒಳ ನುಗ್ಗಿದ ಕಳ್ಳರು, ಮೂರು ಲ್ಯಾಪ್‌ಟಾಪ್‌ಗಳೊಂದಿಗೆ ಪರಾರಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಸಿಬ್ಬಂದಿಯು ಕೆಲ ಗಂಟೆ ಬಳಿಕ ನಿದ್ರೆಯಿಂದ ಎದ್ದು ಗಸ್ತು ತಿರುಗುವಾಗ ಶೋರೂಮ್‌ನಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.