ಎಸ್‌ಬಿಎಂ ಉದ್ಯೋಗಿ ಕೊಲೆ ಪ್ರಕರಣ: ಆರೋಪಿ ಪತ್ತೆಗೆ ತನಿಖೆ ಚುರುಕು

7

ಎಸ್‌ಬಿಎಂ ಉದ್ಯೋಗಿ ಕೊಲೆ ಪ್ರಕರಣ: ಆರೋಪಿ ಪತ್ತೆಗೆ ತನಿಖೆ ಚುರುಕು

Published:
Updated:

ಬೆಂಗಳೂರು: ನಗರದ ಕುಮಾರ  ಪಾರ್ಕ್ ಪಶ್ಚಿಮ ಬಡಾವಣೆಯ ಪೊಲೊ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ಮೈಸೂರು ಬ್ಯಾಂಕ್ ಉದ್ಯೋಗಿ ಎಸ್.ಅನಸೂಯ (42) ಅವರ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಆರೋಪಿ ಅಶ್ರಫ್‌ನ ಪತ್ತೆಗೆ ತೀವ್ರ ಪ್ರಯತ್ನ ನಡೆಸಿದ್ದಾರೆ.ಪೊಲೊ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲೇ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಶ್ರಫ್, ಅನಸೂಯ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಈ ಸಂಬಂಧ ಅನಸೂಯ ದಂಪತಿ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಕ್ಕೆ ದೂರು ಕೊಟ್ಟಿದ್ದರು.ಈ ದೂರಿನ ಹಿನ್ನೆಲೆಯಲ್ಲಿ ಅಪಾ  ರ್ಟ್‌ಮೆಂಟ್ ನಿವಾಸಿಗಳ ಸಂಘದ ಸದಸ್ಯರು ಕೆಲಸದಿಂದ ತೆಗೆದು ಹಾಕುವುದಾಗಿ ಅಶ್ರಫ್‌ಗೆ ಎಚ್ಚರಿಕೆ ಕೊಟ್ಟಿದ್ದರು. ಆ ನಂತರವೂ ಆತ ಅನಸೂಯ ಅವರೊಂದಿಗೆ ಹಲವು ಬಾರಿ ಅಸಭ್ಯವಾಗಿ ವರ್ತಿಸಿದ್ದ. ಆದ ಕಾರಣ ಸಂಘದ ಸದಸ್ಯರು ಆತನನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರ ಕೈಗೊಂಡಿದ್ದರು.ಅಲ್ಲದೇ ಆತನ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ನೇಮಿಸಿಕೊಳ್ಳುವ ಪ್ರಯತ್ನ ಕೂಡ ನಡೆಸಿದ್ದರು. ಅಶ್ರಫ್ ಈ ವಿಷಯ ತಿಳಿದು ಕೋಪಗೊಂಡು ಅನಸೂಯ ಅವರನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆತ ಕೊಲೆ ಮಾಡಿದ ನಂತರ ಮೊಬೈಲ್ ಫೋನ್ ತನ್ನ ಕೊಠಡಿಯಲ್ಲೇ ಬಿಟ್ಟು ಹೋಗಿದ್ದಾನೆ. ಆತನ ಮೊಬೈಲ್‌ನಿಂದ ಹೊರ ಹೋಗಿರುವ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನಿಗೆ ಪರಿಚಿತರಾಗಿರುವ ಅಸ್ಸಾಂ ಮೂಲದ ಕೆಲ ವ್ಯಕ್ತಿಗಳು ನಗರದಲ್ಲಿ ನೆಲೆಸಿದ್ದಾರೆ. ಅವರಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಅಶ್ರಫ್‌ನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಶನಿವಾರ ಅನಸೂಯ ಅವರ ಮರಣೋತ್ತರ ಪರೀಕ್ಷೆ ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಶ್ರಫ್ ಶುಕ್ರವಾರ ಮಧ್ಯಾಹ್ನ ಅಪಾರ್ಟ್‌ಮೆಂಟ್‌ನ ಲಿಫ್ಟ್‌ನಲ್ಲೇ ಚಾಕುವಿನಿಂದ ಅನಸೂಯ ಅವರ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry