ಗುರುವಾರ , ಜೂನ್ 24, 2021
29 °C

ಎಸ್‌.ಮಲ್ಲಿಕಾರ್ಜುನಯ್ಯ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಜ್ಜನಿಕೆ, ಸರಳತೆಗೆ ಹೆಸರಾಗಿದ್ದ ಲೋಕಸಭೆಯ ಮಾಜಿ ಉಪ ಸಭಾಧ್ಯಕ್ಷ ಎಸ್‌.ಮಲ್ಲಿ­ಕಾರ್ಜುನಯ್ಯ (83) ಗುರುವಾರ ಬೆಳಗಿನ ಜಾವ 2.30ರಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.ಏಳು ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿ ಬಿದ್ದು ಕೋಮಾ ಸ್ಥಿತಿಗೆ ಹೋದವರಿಗೆ ಮತ್ತೆ ಪ್ರಜ್ಞೆ ಮರಳಿರಲಿಲ್ಲ. ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಐದು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ನಂತರ ತುಮಕೂರು ಆದರ್ಶ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.ಸ್ನಾತಕೋತ್ತರ ಪದವಿಯಷ್ಟೇ ಅಲ್ಲದೆ ಕಾನೂನು ಮತ್ತು ಪತ್ರಿಕೋದ್ಯಮ ಶಿಕ್ಷಣವನ್ನೂ ಪಡೆದಿದ್ದರು. ವ್ಯವಸಾಯ, ವಕೀಲ ವೃತ್ತಿ ಎರಡನ್ನೂ ನಿಭಾಯಿ­ಸುತ್ತಿದ್ದರು. ಪ್ರಸಿದ್ಧ ವಕೀಲರಾಗಿದ್ದರು. ಸರಳತೆಯ ಕಾರಣದಿಂದ ಜನರಿಗೆ ಹತ್ತಿರವಾಗಿದ್ದರು.1945ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌.ಎಸ್‌.ಎಸ್‌) ಸದಸ್ಯರಾದ ನಂತರ ಅವರು ಎಬಿವಿಪಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಜನಸಂಘದ ಮೂಲಕವೇ ರಾಜಕಾರಣ ಪ್ರವೇಶಿಸಿದ್ದರು.ಹಳೆ ಮೈಸೂರು ರಾಜ್ಯದ ಜನ ಸಂಘದ ರಾಜ್ಯ ಘಟಕದ ಅಧ್ಯಕ್ಷರಾ­ಗಿದ್ದರು. 1977ರಲ್ಲಿ ಜನತಾ ಪಕ್ಷದ ಹಿರಿಯ ಉಪಾಧ್ಯಕ್ಷರಾಗಿದ್ದರು. ತುಮಕೂರು ನಗರಸಭೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದ ಅವರು 1962ರಲ್ಲಿ ಮೊದಲ ಸಲ ವಿಧಾನಸಭೆಗೆ ಸ್ಪರ್ಧಿಸಿ ಪರಾಭವ­ಗೊಂಡಿದ್ದರು. ನಂತರ ವಿಧಾನ ಪರಿಷತ್‌ ಚುನಾವಣೆಯಲ್ಲೂ ಮೊದಲ ಸಲ ಸೋಲು ಅನುಭವಿ­ಸಿದರು. ನಿರಂತರ 20 ವರ್ಷ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 18 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು. ಜನತಾ ಪಕ್ಷದಿಂದ 1977ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ 1978ರಲ್ಲಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲವು ಸಾಧಿಸಿದರು. ಇಲ್ಲಿಂದ ನಿರಂತರವಾಗಿ ಮೂರು ಅವಧಿಗೆ ಚುನಾಯಿತರಾಗಿದ್ದ ಅವರು ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿಯೂ ಆಯ್ಕೆಯಾಗಿದ್ದರು. ಹನ್ನೊಂದನೇ ಲೋಕಸಭೆ ಚುನಾವಣೆ­ಯಲ್ಲಿ 1991ರಲ್ಲಿ ಗೆಲವು ಸಾಧಿಸಿದ ಮೊದಲ ಸಲವೇ ಅವರನ್ನು ಲೋಕಸಭೆ ಉಪಾಧ್ಯಕ್ಷರನ್ನಾಗಿ ಆರಿಸಲಾಗಿತ್ತು. ನಂತರ ನಾಲ್ಕು ಅವಧಿಗೆ ಅವರು ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು.ಅವರ ಪಾರ್ಥಿವ ಶರೀರವನ್ನು ಗಾಂಧಿನಗರದ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಹುಟ್ಟೂರು ನಾಗವಲ್ಲಿ ಸಮೀಪದ ಹೊನಸಿಗೆರೆ ಗ್ರಾಮಕ್ಕೆ ಕೊಂಡೂಯ್ಯಲಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಮಲ್ಲಿಕಾರ್ಜುನಯ್ಯ ಅವರ ತೋಟ­ದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲ­ಗಳು ತಿಳಿಸಿವೆ. ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸ­ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.