ಗುರುವಾರ , ಜೂನ್ 24, 2021
29 °C

ಏಕಪಕ್ಷೀಯ ತೀರ್ಮಾನ ಸರಿಯಲ್ಲ: ಜವರೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ:`ವಕೀಲರ ಸಂಘದ ಕೆಲವೇ ಕೆಲವು ಸದಸ್ಯರು ರಾಜಕೀಯ ಉದ್ದೇಶದಿಂದ ಸಂಘವನ್ನು ದುರ್ಬಲಗೊಳಿಸುವ ಕಾರ್ಯ ಮಾಡುತ್ತಿದ್ದಾರೆ~ ಎಂದು ಸಂಘದಿಂದ ಮಂಗಳವಾರ ಅಮಾನತುಗೊಂಡಿರುವ ಸದಸ್ಯ, ಜೆಡಿಎಸ್ ಜಿಲ್ಲಾ ಅಧ್ಯಕ್ಷ  ಎಚ್.ಕೆ. ಜವರೇಗೌಡ ಆರೋಪಿಸಿದ್ದಾರೆ.ಸಂಘದ ತೀರ್ಮಾನದ ಬಳಿಕ ಪಕ್ಷದ ಕಚೇರಿಯಲ್ಲಿ ಅವರು ಪತ್ರಕರ್ತರೊಡನೆ ಮಾತನಾಡಿದರು.

`ಯಾರಾದರೂ ತಪ್ಪು ಮಾಡಿದಾಗ ಅವರಿಂದ ಸ್ಪಷ್ಟನೆ ಕೇಳಿದ ಬಳಿಕವೇ ಕ್ರಮ ಕೈಗೊಳ್ಳುವುದು ಸ್ವಾಭಾವಿಕ ನ್ಯಾಯ. ಆದರೆ ನಮಗೆ ನೋಟಿಸ್ ನೀಡಿಲ್ಲ.

 

ಸ್ಪಷ್ಟನೆಯನ್ನೂ ಕೇಳಿಲ್ಲ. ಅಮಾನತು ಮಾಡಿದ ಬಳಿಕವೂ ನಮ್ಮಿಂದ ವಿವರಣೆ ಕೇಳಿಲ್ಲ. ನಾವೇನು ಹೇಳಿದ್ದೇವೆ, ಬೆಂಗಳೂರಿನಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸತ್ಯಾಸತ್ಯತೆ ತಿಳಿಯದೆಯೇ ಏಕಪಕ್ಷೀಯವಾಗಿ ಇಂಥ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ ಎಂದು ಅವರು ನುಡಿದರು.ಮಂಗಳವಾರದ ಸಭೆಯೂ          ಸೇರಿದಂತೆ ಬೆಂಗಳೂರಿನಲ್ಲಿ ಘಟನೆ ನಡೆದ ಬಳಿಕ ಒಟ್ಟು ಮೂರು ಸಭೆ ಗಳನ್ನು ನಡೆಸಲಾಗಿದೆ. ಹಿಂದಿನ ಸಭೆಗಳಲ್ಲಿ ಉಲ್ಲೇಖವೇಆಗದ ಅಮಾನತು ವಿಚಾರ ಈ ಬಾರಿ ಒಮ್ಮೆಲೇ ಮುಂದೆ ಬಂದಿದೆ. ವಕೀಲರ ಸಂಘದ ಕಾರ್ಯದರ್ಶಿ ರವಿಶಂಕರ್, ಖಜಾಂಜಿ ಯತೀಶ್ ಸೇರಿದಂತೆ ಅನೇಕ ಪದಾಧಿಕಾರಿಗಳು ಸಂಘದ ತೀರ್ಮಾನವನ್ನು ಸಭೆಯಲ್ಲೇ ವಿರೋಧಿಸಿದ್ದರೂ ಸರ್ವಾ ನುಮತದಿಂದ ತೀರ್ಮಾನ ಕೈಗೊಂಡಿದ್ದಾಗಿ ನಡಾವಳಿ ಪುಸ್ತಕದಲ್ಲಿ ನಮೂದಿಸಿದ್ದಾರೆ.

 

ಆದ್ದರಿಂದ ಮಂಗಳವಾರದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನ ಕಾನೂನು ಪ್ರಕಾರ ಸರಿಯಾದುದಲ್ಲ, ಇದಕ್ಕೆ ಬೆಲೆ ಇಲ್ಲ ಎಂದರು.`ರಾಜಕೀಯ ಉದ್ದೇಶದಿಂದ ಇಂಥ ತೀರ್ಮಾನ ಕೈಗೊಂಡಿದ್ದರಿಂದ ಸಂಘದಲ್ಲಿ ಆಯಾ ಪಕ್ಷದ ಪರ ಇರುವ ವಕೀಲರ ಗುಂಪುಗಳ ರಚನೆಗೆ ದಾರಿ ಮಾಡಿಕೊಟ್ಟಂತಾಗಿದೆ. ಇದರಿಂದ ಸಂಘ ದುರ್ಬಲವಾಗುವುದು ಖಚಿತ. ಜತೆಗೆ ವಕೀಲರ ಸಂಘದ ಮುಂದಿನ ಚುನಾವಣೆಯ ಮೇಲೆ ಈ ಘಟನೆ ಪರಿಣಾಮ ಬೀರಲಿದೆ ಎಂದು ವಾದಿಸಿದರು.`ಘಟನೆಯ ಬಗ್ಗೆ ಆಕ್ಷಣದ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಅದಕ್ಕೆ ಈಗಲೂ ಬದ್ಧನಿದ್ದೇನೆ. ನೋಟಿಸ್ ಬಂದರೂ ಅದಕ್ಕೆ ಉತ್ತರಿಸಲು ಸಿದ್ಧನಿದ್ದೇನೆ~ ಎಂದು ಸ್ಪಷ್ಟಪಡಿಸಿದರು.ಮಾಧ್ಯಮದಿಂದಲೂ ತಪ್ಪಾಗಿದೆ: ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ವಕೀಲರು ಮಾತ್ರವಲ್ಲ, ಮಾಧ್ಯಮಗಳು ಹಾಗೂ ಪೊಲೀಸರಿಂದಲೂ ತಪ್ಪುಗಳಾಗಿವೆ. ಬೆಂಗಳೂರಿನಲ್ಲಿ ವಕೀಲರು ನಡೆಸಿದ ದಾಳಿಯನ್ನು ರಾಜ್ಯದ ಹಲವು ವಕೀಲರು ಖಂಡಿಸಿದ್ದಾರೆ. ಆದರೆ `ದಾಳಿಯಿಂದ ಪೇದೆ ಸಾವು~ ಎಂದು ತಪ್ಪು ಸುದ್ದಿ ಬಿತ್ತರಿಸಿದ್ದ ಮಾಧ್ಯಮಗಳು ಆ ಮೇಲೆ ಸುದ್ದಿಯನ್ನು ತಡೆಹಿಡಿದವೇ ವಿನಾ ಆಗಿರುವ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿಲ್ಲ~ ಎಂದು ಜವರೇಗೌಡ ಆರೋಪಿಸಿದರು.

ಮುಖಂಡರಾದ ಎಸ್.ದ್ಯಾವೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ    ಜಯರಾಂ, ರವಿಶಂಕರ್ ಇದ್ದರು.

ಜಾಂಜಿ ಯತೀಶ್, ವಕೀಲರಾದ ಶರತ್, ಶೇಷಾದ್ರಿ, ಇಂದು ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.