ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನು ರಮ್ಯ, ಸೌಮ್ಯ ಸಮವಸರಣ

Last Updated 26 ಏಪ್ರಿಲ್ 2012, 9:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅದು ಮಹಾ ಮಂಟಪ. ಅಲ್ಲಿ ಭೂಲೋಕದ ಸಕಲ ಪಶು-ಪಕ್ಷಿಗಳು ಇದ್ದವು. ಈ ಮಂಟಪದ ಬಳಿ ಬಂದ ಅಂಧ, ದೃಷ್ಟಿ ಪಡೆದುಕೊಂಡ. ಕುಂಟ, ಕುಣಿಯುತ್ತ ಹೋದ. ರಾಕ್ಷಸ ತನ್ನ ದುಷ್ಟತನವನ್ನು ಬಿಟ್ಟು ಹೋದ. ಹುಲಿ, ಚಿರತೆ, ಸಿಂಹಗಳು ಸೌಮ್ಯ ಸ್ವಭಾವವನ್ನು ಮೈಗೂಡಿಸಿಕೊಂಡು ಹೋದವು. ಇದೆಲ್ಲವನ್ನೂ ನೋಡಿ ಮುದಗೊಂಡ ಕವಿ ಹಾಡಿದರು- `ಏನು ರಮ್ಯ, ಏನು ಸೌಮ್ಯ ಸಮವಸರಣ....~

ನಗರದ ದಿಗಂಬರ ಜೈನ್ ಬೋರ್ಡಿಂಗ್ ಹಮ್ಮಿಕೊಂಡಿರುವ ಚಂದ್ರಪ್ರಭ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮದ ಕೇವಲ ಜ್ಞಾನಕಲ್ಯಾಣ ದಿನವಾದ ಬುಧವಾರ ಸಂಜೆ ಎ.ಕೆ. ಇಂಡಸ್ಟ್ರೀಸ್ ಆವರಣದ ಮಹೋತ್ಸವ ಮಂಟಪದಲ್ಲಿ ಸಂಭ್ರಮ ತುಂಬಿತ್ತು.

ಅಪರೂಪದ ಸಮವಸರಣ ಅಲ್ಲಿ ಸಿದ್ಧಗೊಂಡಿತ್ತು. ತೀರ್ಥಂಕರರು ಕೇವಲಜ್ಞಾನ ಪ್ರಾಪ್ತಿಯಾದ ನಂತರ ಧರ್ಮೋಪದೇಶವನ್ನು ನೀಡಲು ಬಳಸುವ ಸಭಾಮಂಟಪದ ಮಾದರಿಯನ್ನು ಇಲ್ಲಿ ಸಿದ್ಧಗೊಳಿಸಿದವರು ಧರ್ಮಸ್ಥಳದ ಪದ್ಮಲತಾ ನಿರಂಜನ ಕುಮಾರ.

ನಾಲ್ಕು ಮಹಾದ್ವಾರ, ನಾಲ್ಕು ಮಂಟಪಗಳು, ಅಷ್ಟಕೂಟಗಳು, ಸಕಲ ಋತುಗಳಲ್ಲೂ ಹಣ್ಣು ಕೊಡುವ ವೃಕ್ಷಗಳು, ಸಕಲ ಪ್ರಾಣಿ-ಪಕ್ಷಿಗಳನ್ನು ಒಳಗೊಂಡ ಸರ್ವಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಸಮವಸರಣದ ಪೂಜೆಯ ಸಂದರ್ಭದ ಕಾರ್ಯಕ್ರಮಗಳು ಅಲ್ಲಿ ಸೇರಿದ್ದ ಜನರಿಗೆ ವಿಶಿಷ್ಟ ಅನುಭವ ನೀಡಿತು.

ಸಮವಸರಣದ ರೂಪಕ ಪ್ರಸ್ತುತಪಡಿಸಲು ಮಕ್ಕಳು ವಿವಿಧ ಪ್ರಾಣಿ-ಪಕ್ಷಿಗಳ ವೇಷತೊಟ್ಟು ಬಂದಿದ್ದರೆ ಅರಸ-ಅರಸಿಯರನ್ನು ಹೊತ್ತುಕೊಂಡು ಬಂದ ಜೀವಂತ ಆನೆ ಗಂಭೀರವಾಗಿ ಹೆಜ್ಜೆ ಹಾಕಿತು.

ಚೆಂಡೆ ವಾದನ, ಹಾಡು-ನೃತ್ಯ, ಪ್ರಶ್ನೋತ್ತರ ಇತ್ಯಾದಿಗಳನ್ನು ಒಳಗೊಂಡ ರೂಪಕದಲ್ಲಿ ಕವಿಗಳ ವರ್ಣನೆ,  ಪೂಜೆ ಇತ್ಯಾದಿ ದಿವ್ಯಾನುಭೂತಿ ನೀಡಿತು.

ಪ್ರಶ್ನೋತ್ತರದ ಸಂದರ್ಭದಲ್ಲಿ ಮಾತನಾಡಿದ ವರೂರು ನವಗ್ರಹ ಕ್ಷೇತ್ರದ ಗುಣಧರನಂದಿ ಮಹಾರಾಜರು, ಜಗತ್ತಿನ ಎಲ್ಲ ಸುಖ-ದುಃಖ, ನೋವು-ನಲಿವುಗಳಿಗೂ ಮನಸ್ಸು ಹಾಗೂ ಬುದ್ಧಿಯೇ ಕಾರಣ ಎಂದು ಹೇಳಿದರು.

`ಮನಸ್ಸಿನಲ್ಲಿ ಏನು ಅಂದುಕೊಳ್ಳುತ್ತೇವೆಯೋ ಹಾಗೆಯೇ ಭಾವನೆಗಳು ಇರುತ್ತವೆ. ಕಳೆದುಹೊದದ್ದು ನನ್ನದು ಎಂದು ಅಂದುಕೊಂಡರೆ ಅದರಿಂದ ದುಃಖವಾಗುತ್ತದೆ. ನನ್ನದಲ್ಲ ಎಂದು ತಿಳಿದರೆ ಯಾವುದೇ ಭಾವನೆ ಮೂಡುವುದಿಲ್ಲ~ ಎಂದು ಅವರು ಹೇಳಿದರು.

ಗದುಗಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು, ಕೊಲ್ಲಾಪುರದ ಲಕ್ಷ್ಮಿಸೇನ ಭಟ್ಟಾರಕ ಮಹಾರಾಜ, ದಿಗಂಬರ ಜೈನ್ ಬೋರ್ಡಿಂಗ್‌ನ ಅಧ್ಯಕ್ಷ ದತ್ತಾ ಡೋರ್ಲೆ, ಡಾ. ನಿರಂಜನ ಕುಮಾರ, ದಕ್ಷಿಣ ಭಾರತ ಜೈನ ಸಭಾದ ಮಹಾಮಂತ್ರಿ ಜಿ.ಜಿ. ಲೋಬೊಗೋಳ, ಟ್ರಸ್ಟಿ ಎಸ್.ಎ. ಬರಗಾಲಿ, ದಿಗಂಬರ ಜೈನ್ ಬೋರ್ಡಿಂಗ್‌ನ ಕಾರ್ಯದರ್ಶಿ ಭರತ ಆರ್. ಬೀಳಗಿ,  ಸ್ಥಾನಿಕ ಮಂಡಳಿ ಸದಸ್ಯರಾದ ಮಹಾವೀರ ಕಂಚಗಾರ, ಪಿ.ಎಸ್. ಧರಣೆಪ್ಪನವರ, ಎಸ್.ಆರ್. ಹಿರೇಗೌಡ್ರ, ಮುಖಂಡರಾದ ಬಿ.ಎ. ರೋಖಡೆ, ಎ.ಎಲ್. ಚೌಗುಲಾ, ಉದ್ಯಮಿ ನಾಗಕುಮಾರ ಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT