ಏರ್ ಏಷ್ಯಾ: ಹೊಸ ಮಾರ್ಗಗಳ ವಿಸ್ತರಣೆ

ಬೆಂಗಳೂರು: ಅಗ್ಗದ ದರದ ವಿಮಾನಯಾನ ಸೇವೆ ಒದಗಿಸುತ್ತಿರುವ ಏರ್ ಏಷ್ಯಾ ಇಂಡಿಯಾ, ಬುಧವಾರ ಮತ್ತಷ್ಟು ಹೊಸ ಮಾರ್ಗಗಳ ವಿಸ್ತರಣೆಯ ಜತೆಗೆ ದರ ಕಡಿತ ಘೋಷಿಸಿದೆ.
ಹೈದರಾಬಾದ್ನಿಂದ ಬೆಂಗಳೂರು ಮತ್ತು ಗೋವಾಕ್ಕೆ ಹಾಗೂ ಬೆಂಗಳೂರಿನಿಂದ ಗುವಾಹಟಿಗೆ ಪ್ರತಿ ನಿತ್ಯ ಅಗ್ಗದ ದರದಲ್ಲಿ ವಿಮಾನ ಸೇವೆ ಆರಂಭಿಸಿದೆ.
ಸೆಪ್ಟೆಂಬರ್ 22 ರಿಂದ ಏರ್ ಏಷ್ಯಾ ಬಳಗಕ್ಕೆ 180 ಸೀಟುಗಳ ಸಾಮರ್ಥ್ಯದ ಎ320 ವಿಮಾನ ಹೊಸದಾಗಿ ಸೇರ್ಪಡೆಯಾಗಲಿದೆ. ಸಂಸ್ಥೆಯ ಏಳನೇ ವಿಮಾನ ಇದಾಗಿದೆ ಎಂದು ಏರ್ ಏಷ್ಯಾ ಇಂಡಿಯಾದ ಸಿಇಒ ಅಮರ್ ಅಬ್ರೋಲ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಎಲ್ಲವೂ ಎಣಿಕೆಯಂತೆ ನಡೆದಲ್ಲಿ ಮುಂದಿನ ಆರು ತಿಂಗಳಲ್ಲಿ ಏರ್ ಏಷ್ಯಾ ಬಳಗಕ್ಕೆ 20 ಹೊಸ ವಿಮಾನಗಳು ಸೇರ್ಪಡೆಯಾಗಲಿವೆ. ವಿಮಾನ ಖರೀದಿಸಲು ಏರ್ಏಷ್ಯಾ ಮತ್ತು ಟಾಟಾ ಸನ್ಸ್ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ’ ಎಂದು ಅವರು ತಿಳಿಸಿದರು.
‘ಎರಡು ವರ್ಷಗಳ ಹಿಂದೆ ಭಾರತದ ವಿಮಾನಯಾನ ಮಾರುಕಟ್ಟೆ ಪ್ರವೇಶಿಸಿದ ಏರ್ ಏಷ್ಯಾ ಶೇ 2.2 ರಷ್ಟು ಪಾಲು ಹೊಂದಿದೆ. ಪ್ರಯಾಣಿಕರ ಪ್ರಮಾಣ
ಶೇ 54ರಷ್ಟಿದೆ’ ಎಂದು ಅಬ್ರೋಲ್ ತಿಳಿಸಿದರು.
‘ನುರಿತ ಪೈಲಟ್ಗಳ ಕೊರತೆ ಮತ್ತು ವಿಮಾನ ಸಂಖ್ಯೆ ಕಡಿಮೆ ಇರುವ ಕಾರಣ ಕರ್ನಾಟಕದ ಎರಡನೇ ಹಂತದ ನಗರಗಳಿಗೂ ವಿಮಾನ ಸಂಚಾರ ಆರಂಭಿಸುವ ಯೋಚನೆ ಸದ್ಯಕ್ಕಿಲ್ಲ. ಬೇಡಿಕೆ ಆಧರಿಸಿ ಕಾಲ ಕ್ರಮೇಣ ಈ ನಗರಗಳಿಗೂ ಸೇವೆ ಆರಂಭಿಸಬಹುದು. ಆ ಬಗ್ಗೆ ಈಗಲೇ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದರು.
ಬುಕ್ಕಿಂಗ್ ಆರಂಭ
ಹೊಸ ಮಾರ್ಗಗಳ ಬುಕ್ಕಿಂಗ್ ಆಗಸ್ಟ್ 17ರಿಂದ ಆರಂಭವಾಗಿದ್ದು, ಬೆಂಗಳೂರು–ಹೈದರಾಬಾದ್ (₹1,499), ಬೆಂಗಳೂರು– ಗುವಾಹಟಿ (₹5,499), ಹೈದರಾಬಾದ್–ಗೋವಾ (₹2,499) ನಡುವೆ ಸಂಚರಿಸುವ ವಿಮಾನಗಳಿಗೆ ಸಂಸ್ಥೆಯ ವೆಬ್ಸೈಟ್ನಲ್ಲಿ www.airasia.com ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.
ಏರ್ ಏಷ್ಯಾ ವಿಮಾನಗಳು ಬೆಂಗಳೂರು ಮತ್ತು ದೆಹಲಿಯನ್ನು ಕೇಂದ್ರವಾಗಿರಿಸಿಕೊಂಡು ಚಂಡೀಗಡ, ಜೈಪುರ, ಇಂಫಾಲ್, ಗೋವಾ, ಪುಣೆ, ಹೈದರಾಬಾದ್, ಕೊಚ್ಚಿ, ವಿಶಾಖಪಟ್ಟಣ ಸೇರಿ 11 ನಗರಗಳಿಗೆ ಸಂಚರಿಸುತ್ತಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.