ಭಾನುವಾರ, ಮೇ 9, 2021
25 °C

ಏಳು ಕಡೆ ಲೋಕಾಯುಕ್ತ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ/ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಹಾಗೂ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಜಿಲ್ಲೆಯ ಸಿರುಗುಪ್ಪದ ಬಿಜೆಪಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರ ನಿವಾಸ ಹಾಗೂ ಇತರೆ ಆರು ಕಡೆಗಳಲ್ಲಿ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ದಾಖಲೆ ಪತ್ರಗಳು, ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಸೋಮಲಿಂಗಪ್ಪ ಅವರ ಸ್ವಂತ ಊರಾದ ತೆಕ್ಕಲಕೋಟೆಯಲ್ಲಿ ಪುತ್ರನ ಹೆಸರಿನಲ್ಲಿರುವ ಮನೆ (ಇದು ಶಾಸಕರ ಪತ್ನಿ ಶಾರದಾ ಅವರ ಹೆಸರಿನಲ್ಲಿದೆ), ಅದೇ ಊರಲ್ಲಿರುವ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀರಾಮ ಭಾಷಾ ನಿವಾಸ, ಶಾಸಕರ ಬೆಂಬಲಿಗ ಕೆ.ನೆಣಿಕೆಪ್ಪ ನಿವಾಸ, ಸಿರುಗುಪ್ಪದಲ್ಲಿ ಪುರಸಭೆಯ ಆಶ್ರಯ ಸಮಿತಿಯ ಮಾಜಿ ಸದಸ್ಯ ಟಿ.ಸಿ. ಮೋಹನಕುಮಾರ್ ನಿವಾಸ, ಪುರಸಭೆ ಮಾಜಿ ಸದಸ್ಯ ಅಶೋಕ ಕುಮಾರ್ ಜೈನ್ ನಿವಾಸ, ತಾಲ್ಲೂಕು ಭೂನ್ಯಾಯ ಮಂಡಳಿಯ ಸದಸ್ಯ ಎಚ್.ಬಿ. ಗಂಗಪ್ಪ ಅವರಿಗೆ ಸೇರಿರುವ ಇಬ್ರಾಹಿಂಪುರ ಗ್ರಾಮದಲ್ಲಿನ ಮನೆಗಳ ಮೇಲೆ ದಾಳಿ ನಡೆದಿದೆ.ಬಳ್ಳಾರಿ ತಾಲ್ಲೂಕಿನ ಹಡ್ಲಿಗಿ ಗ್ರಾಮದಲ್ಲಿರುವ ಶಾಸಕರ ಪತ್ನಿ ಶಾರದಾ ಅವರ  ಸೋದರ ಮಾರೆಪ್ಪ ಅವರ ಬೃಹತ್ ಬಂಗಲೆ ಹಾಗೂ ಹಳೆ ನಿವಾಸದ ಮೇಲೂ ಇದೇ ವೇಳೆ ದಾಳಿ ನಡೆಯಿತು. ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ನೇತೃತ್ವದಲ್ಲಿ ದಾಳಿ ನಡೆಯಿತು. ಬೆಂಗಳೂರಿನಿಂದ ಹತ್ತಾರು ವಾಹನಗಳಲ್ಲಿ ಬಂದಿದ್ದ 50ಕ್ಕೂ ಅಧಿಕ ಸಿಬ್ಬಂದಿ ಬೆಳಗಿನ ಜಾವ ಈ ಎಲ್ಲ ನಿವಾಸಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದರು. ಸಂಜೆಯವರೆಗೂ ಪರಿಶೀಲನೆಯಲ್ಲಿ ತೊಡಗಿದ್ದರು.ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ತೆಕ್ಕಲಕೋಟೆಯಲ್ಲಿನ ಶಾಸಕರ ನಿವಾಸದ ಮೇಲೆ ದಾಳಿ ನಡೆಸಿದರೆ, ಸಿರುಗುಪ್ಪದಲ್ಲಿ ಡಿವೈಎಸ್‌ಪಿ ಫಾಲಾಕ್ಷಯ್ಯ, ಸಿಪಿಐ ನಾಗರಾಜ್ ಅವರ ನೇತೃತ್ವದ ತಂಡಗಳು ದಾಳಿ ನಡೆಸಿದವು. ದಾಳಿಯ ವೇಳೆ ಸೋಮಲಿಂಗಪ್ಪ ಅವರೂ ಒಳಗೊಂಡಂತೆ ಎಲ್ಲರೂ ಸ್ಥಳದಲ್ಲೇ ಇದ್ದರು.ಸೋಮಲಿಂಗಪ್ಪ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದಲ್ಲದೆ, ಸರ್ಕಾರಿ ಜಮೀನನ್ನು ಹಾಗೂ ವಾರಸುದಾರರೇ ಇಲ್ಲದ, ಸರ್ಕಾರಕ್ಕೆ ಸೇರಬೇಕಿರುವ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಆರೋಪಿಸಿ ಸಿರುಗುಪ್ಪದ ವಿಕೆಜಿ ಕಾಲೇಜಿನ ನಿವೃತ್ತ ಉಪನ್ಯಾಸಕ ಬಿ.ಈರಣ್ಣ ಅವರು ಇದೇ ಜನವರಿ 7ರಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲೂ, ಫೆಬ್ರುವರಿ 6ರಂದು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲೂ ದೂರು ಸಲ್ಲಿಸಿದ್ದರು. ಮಾರ್ಚ್ 5ರಂದು ಪ್ರಥಮ ಮಾಹಿತಿ ವರದಿ ಸಿದ್ಧಪಡಿಸಿದ್ದ ಲೋಕಾಯುಕ್ತ ಸಿಬ್ಬಂದಿ, ಇದೀಗ ತನಿಖೆಯ ಅಂಗವಾಗಿ ದಾಳಿ ನಡೆಸಿದ್ದಾರೆ.ದಾಖಲೆ, ಚಿನ್ನಾಭರಣ ವಶ: ಸೋಮಲಿಂಗಪ್ಪ ಅವರ ಎರಡು ಬ್ಯಾಂಕ್ ಖಾತೆಗಳಲ್ಲಿ ಒಂಬತ್ತು ಲಕ್ಷ ರೂಪಾಯಿ, ಬೊಲೆರೋ ವಾಹನ, ಮೋಟಾರ್ ಬೈಕ್, ಸ್ಥಿರಾಸ್ತಿ ಒಡೆತನದ ದಾಖಲೆಗಳು ಮನೆಯಲ್ಲಿ ಪತ್ತೆಯಾಗಿವೆ. ಬಾಷಾ ಮನೆಯಲ್ಲಿ ಎರಡು ಗಣಿ ಗುತ್ತಿಗೆಗಳು ದೊರೆತಿವೆ.  ನೆಣಿಕಪ್ಪ ಮನೆಯಲ್ಲಿ ಮೂರು ಎಕರೆ ಜಮೀನಿನ ದಾಖಲೆಗಳು ದೊರೆತಿವೆ. ಮಾರೆಪ್ಪ ಮನೆಯಲ್ಲಿ 50 ಎಕರೆಗೂ ಹೆಚ್ಚು ಭೂಮಿಯ ದಾಖಲೆಗಳು, ಎರಡು ಟ್ರ್ಯಾಕ್ಟರ್, ಸ್ಕಾರ್ಪಿಯೋ ವಾಹನ ಪತ್ತೆಯಾಗಿದೆ ಎಂದು ಲೋಕಾಯುಕ್ತ ಡಿಐಜಿ ಜೆ.ಅರುಣ್ ಚಕ್ರವರ್ತಿ ತಿಳಿಸಿದ್ದಾರೆ.`ಆರೋಪದಲ್ಲಿ ಹುರುಳಿಲ್ಲ~: `ನನ್ನ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ~ ಎಂದು ಸೋಮಲಿಂಗಪ್ಪ ತೆಕ್ಕಲಕೋಟೆಯಲ್ಲಿ ಗುರುವಾರ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.