ಭಾನುವಾರ, ಜನವರಿ 19, 2020
26 °C
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ

ಐಎಎಸ್‍ ಕನಸು ಬಿತ್ತಿದ ಜಿಲ್ಲಾಧಿಕಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಎಎಸ್‍ ಕನಸು ಬಿತ್ತಿದ ಜಿಲ್ಲಾಧಿಕಾರಿ!

ಕೋಲಾರ: ಅಲ್ಲಿ ನೆರೆದ ನೂರಾರು ಯುವಕ-– ಯುವತಿಯರು ಬುಧವಾರ ಐಎಎಸ್‍ ಪರೀಕ್ಷೆಗೆ ಹಾಜರಾಗುವ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣ­ರಾಗುವ ಆಕಾಂಕ್ಷೆಯನ್ನು ದೃಢಪಡಿಸಿ­ಕೊಂಡರು. ಸಾಧನೆ ಮಾಡಿಯೇ ತೀರು­ತ್ತೇವೆ ಎಂಬ ಪ್ರತಿಜ್ಞೆಯನ್ನೂ ಸ್ವೀಕರಿ­ಸಿದರು. ಅದಕ್ಕೆ ಕಾರಣವಾಗಿದ್ದು ಜಿಲ್ಲಾ­ಧಿಕಾರಿ ಡಿ.ಕೆ.ರವಿ.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಆ ಯುವಜನರನ್ನು  ಸುಮಾರು ಒಂದು ಗಂಟೆ ಕಾಲ ತಮ್ಮ ಸ್ವಯಂಸ್ಫೂರ್ತಿ ಉಪನ್ಯಾಸದಿಂದ ಜಿಲ್ಲಾ­ಧಿಕಾರಿ ಸ್ಪರ್ಧಾತ್ಮಕ ಮನೋಭಾವವನ್ನು ಉದ್ದೀಪಿಸಿದರು. ತಾವು ಐಎಎಸ್ ಪರೀಕ್ಷೆಗೆ ಸಿದ್ಧರಾದ ಬಗೆ, ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿದ ರೀತಿ ನೀತಿಗಳನ್ನು ಹಲವು ನಿದರ್ಶನಗಳ ಸಮೇತ ವಿವರಿಸಿದ್ದು ಮತ್ತು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ್ದು ಇಡೀ ಕಾರ್ಯಕ್ರಮಕ್ಕೆ ವಿಶೇಷ ಘನತೆ­ಯನ್ನೂ ತಂದಿತು.ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು  ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯು ನಗರದ ಪತ್ರಕರ್ತರ ಭವನದಲ್ಲಿ  ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಅದು. ಸಭಾಂಗಣದಲ್ಲಿ ಜಾಗವಿಲ್ಲದೆ ಹೊರಗೂ ನೂರಾರು ಮಂದಿ ಕುಳಿತಿದ್ದುದನ್ನು ಗಮನಿಸಿದ ಜಿಲ್ಲಾಧಿಕಾರಿಯು ಉದ್ಘಾ­ಟನೆ ಬಳಿಕ ವೇದಿಕೆಯಲ್ಲಿ ಹೊರ ಆವರಣಕ್ಕೆ ಸ್ಥಳಾಂತರಿಸುವಂತೆ ಸೂಚಿ­ಸಿದರು. ಸಾವಕಾಶವಾಗಿ ಕುಳಿತ ಯುವ­ಜನರಿಗೆ ಅವರು ದೀರ್ಘ ಉಪ­ನ್ಯಾಸ­ವನ್ನೂ ನೀಡಿದರು. ಪ್ರತಿಭೆ, ಪರಿಶ್ರಮ­ವಿದ್ದರೆ ಯಾರು ಬೇಕಾದರೂ ಐಎಎಸ್‍ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಹಳ್ಳಿ ಹಿನ್ನೆಲೆಯುಳ್ಳವರಿಗೆ ಕಡಿಮೆ ಅಂಕ ನೀಡಲಾಗುತ್ತದೆ ಎಂಬುದು ತಪ್ಪು ಕಲ್ಪನೆಯಷ್ಟೇ ಎಂದರು.ಆರಂಭದಲ್ಲಿ ಯುವಕನೊಬ್ಬನನ್ನು ತನ್ನ ಬಗ್ಗೆ ಪರಿಚಯ ಹೇಳಿಕೊಳ್ಳಲು ಸೂಚಿಸಿದ ಅವರು, ನಂತರ ಪರಿಚಯ­ವನ್ನು ಸಕಾರಾತ್ಮಕ ನೆಲೆಯಲ್ಲಿ ಮಾಡು­ವುದು ಹೇಗೆ ಎಂಬುದನ್ನು ವಿವರಿಸಿದರು. ಅಭ್ಯರ್ಥಿಯ ಬಡತನ ಮತ್ತು ಕಷ್ಟದ ಕುರಿತು ಯಾರೂ ಕೇಳಿಸಿಕೊಳ್ಳಲು ಆಸಕ್ತಿ ಹೊಂದಿರುವುದಿಲ್ಲ. ಬದಲಿಗೆ ಅಭ್ಯ­ರ್ಥಿಯು ಕೆಲಸವನ್ನು ಹೇಗೆ ಮಾಡ­ಬಲ್ಲರು, ಅವರ ಗುಣಗಳೇನು, ಸಾಮರ್ಥ್ಯ­ವೇನು ಎಂಬುದರ ಕಡೆಗೆ ಗಮನವಿರುತ್ತದೆ. ಪರಿಚಯ ಹೇಳಿಕೊಳ್ಳ­ುವವರು ಅವುಗಳ ಕುರಿತು ವಿವರಿಸಬೇಕು ಎಂದು ಹೇಳಿದರು.ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂದರ್ಭ­ದಲ್ಲಿ ನೀಡುವ ಸ್ವ ಪರಿಚಯದ ಎಲ್ಲ ಅಂಶಗಳ ಕುರಿತೂ ಅಭ್ಯರ್ಥಿಗೆ ಹೆಚ್ಚಿನ ಅರಿವಿರಬೇಕು. ಸಂದರ್ಶನ ನಡೆಸುವ­ವರು ಆ ಸ್ವಪರಿಚಯದ ಮಾಹಿತಿಗಳನ್ನು ಆಧರಿಸಿಯೇ ಸಂದರ್ಶನದಲ್ಲಿ ಪ್ರಶ್ನೆ­ಗಳನ್ನು ಕೇಳುತ್ತಾರೆ. ಪ್ರಾಥಮಿಕ ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ವ್ಯಾಪಕ ಓದು ಅಗತ್ಯ. ಮುಖ್ಯ ಪರೀಕ್ಷೆ ಸಂದರ್ಭದಲ್ಲಿ ಅಂಕ ಮತ್ತು ಅದಕ್ಕೆ ತಕ್ಕ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಮುಖ್ಯ ಎಂದು ವಿವರಿಸಿದರು.34ನೇ ರ್‍್ಯಾಂಕ್ ಗಳಿಸುವ ಮೂಲಕ ತಾವು ನಾಲ್ಕನೇ ಬಾರಿಗೆ ಐಎಎಸ್ ಪರೀಕ್ಷೆ ಉತ್ತೀರ್ಣರಾಗಿ ಆಯ್ಕೆಯಾಗು­ವವರೆಗೂ ಎದುರಿಸಿದ ಸಮಸ್ಯೆಗಳು, ಅದನ್ನು ವಿಶ್ಲೇಷಿಸಿ ಪರಿಹರಿಸಿಕೊಂಡ ಬಗೆಯ ಕುರಿತು ಅವರು ವಿವರಿಸಿದರು.

ಪ್ರತಿಭಾವಂತರಾಗಿದ್ದರೂ ತಮ್ಮ ಸಹ­ಪಾಠಿಗಳು ಸಂದರ್ಶನ ಸಮಯದಲ್ಲಿ ಎದುರಿಸಿದ ಸಣ್ಣ ಸಮಸ್ಯೆಗಳ ಕುರಿತು ಅವರು ಗಮನ ಸೆಳೆದರು. ಸಂದರ್ಶನಕ್ಕೆ ತಯಾರಾಗುವುದು, ಮುಖ್ಯ ಪರೀಕ್ಷೆ, ಪ್ರಾಥಮಿಕ ಪರೀಕ್ಷೆಗಳಿಗೆ ನಡೆಸಬೇಕಾದ ಸಿದ್ಧತೆಗಳ ಕುರಿತು, ಪರೀಕ್ಷೆಗಳನ್ನು ಯುಪಿಎಸ್‌ಸಿ ನಡೆಸುವ ವಿಧಾನಗಳ ಕುರಿತು ಬಿಡಿಬಿಡಿಯಾಗಿ ತಿಳಿಹೇಳಿದ ಅವರು, ನಿಜವಾದ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದರು.ನಂತರ ಬೆಂಗಳೂರು ವಿಶ್ವ­ವಿದ್ಯಾ­ಲಯ ಜೈವಿಕ ರಸಾಯನಶಾಸ್ತ್ರ ವಿಭಾ­ಗದ ಮುಖ್ಯಸ್ಥ ಡಾ.ಎನ್.­ರಾಮಚಂದ್ರ­ಸ್ವಾಮಿ, ಸಮಾಜಕಾರ್ಯ ವಿಭಾಗದ ಎನ್.ಮುರಳಿ, ಗುಂಡಪ್ಪ, ಎಚ್.ವಿ.­ನಾಗೇಶ ಉಪನ್ಯಾಸ ನೀಡಿದರು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿ ಎಸ್.ಎಂ.­ಝುಲ್ಫಿಕರ್ ಉಲ್ಲಾ, ಡಿವೈಎಸ್ಪಿ ಕೆ.ಅಶೋಕಕುಮಾರ್, ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ನಾಗ­ಭೂಷಣ, ಕ್ರಿಯಾ ಸಮಿತಿಯ ಪ್ರಮುಖ­ರಾದ ಚಿ.ನಾ.ರಾಮು, ಜಿ.ವೆಂಕಟಾ­ಚಲಪತಿ, ಎನ್.ಅಜಿತ್‌ಕುಮಾರ್, ಆದರ್ಶ  ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)