ಬುಧವಾರ, ಜೂಲೈ 8, 2020
21 °C

ಐಐಎಸ್ಸಿಯಲ್ಲಿ ಓಡಿ ನಲಿದ ಚಿಣ್ಣರು ವೃದ್ಧರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಎಸ್ಸಿಯಲ್ಲಿ ಓಡಿ ನಲಿದ ಚಿಣ್ಣರು ವೃದ್ಧರು...

ಬೆಂಗಳೂರು: ಅಲ್ಲಿ ವಯಸ್ಸಿನ ಭೇದ ಇರಲಿಲ್ಲ. ಹಾಗೆಯೇ ಮನಸ್ಸಿನದೂ ಕೂಡ. ಅಂದರೆ ಗಂಡು-ಹೆಣ್ಣೆಂಬ, ಚಿಕ್ಕವರು- ದೊಡ್ಡವರೆಂಬ ತಾರತಮ್ಯಗಳು ಇರಲಿಲ್ಲ. ಇದ್ದದ್ದೊಂದೇ, ವಿಜ್ಞಾನವನ್ನು ಜನಪ್ರಿಯಗೊಳಿಸುವುದು. ಆ ಉದ್ದೇಶಕ್ಕಾಗಿಯೇ ಅವರೆಲ್ಲ ಓಡುತ್ತಿದ್ದರು.ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಹಳೆಯ ವಿದ್ಯಾರ್ಥಿಗಳ ಸಂಘವು ಸತತ ಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ‘ವಿಜ್ಞಾನ ಮತ್ತು ತಂತ್ರಜ್ಞಾನ ಓಟ’ದ ಅಂಗವಾಗಿ ಭಾನುವಾರ ಸಂಸ್ಥೆಯ ಆವರಣದಲ್ಲಿ 2, 5 ಮತ್ತು 10 ಕಿ.ಮೀ. ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ‘ವಿಜ್ಞಾನಕ್ಕಾಗಿ ಓಟ, ಸಂಶೋಧನೆಯ ಉತ್ಸಾಹಕ್ಕಾಗಿ ಓಟ’ ಎಂಬ ಆಶಯದೊಂದಿಗೆ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಸಮಾಜದ ವಿವಿಧ ಸ್ತರದ 2000ಕ್ಕೂ ಅಧಿಕ ಉತ್ಸಾಹಿಗಳು ಭಾಗವಹಿಸಿದ್ದರು.ಸಂಸ್ಥೆಯ ನಿರ್ದೇಶಕ ಪ್ರೊ.ಪಿ.ಬಲರಾಮ್ ಅವರು ಓಟಕ್ಕೆ ಚಾಲನೆ ನೀಡುತ್ತಿದ್ದಂತೆ ಉತ್ಸಾಹದ ಬುಗ್ಗೆಯಾಗಿದ್ದ ಸ್ಪರ್ಧಿಗಳು ತಿರುಗಿ ನೋಡದೇ ಓಡತೊಡಗಿದರು! ಮಕ್ಕಳು, ಯುವಕರು, ಉದ್ಯಮಿಗಳು ಮತ್ತು ಹಿರಿಯರು ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಮಕ್ಕಳು ಮತ್ತು ಹಿರಿಯರಿಗೆ ಎರಡು ಕಿ.ಮೀ. ಯುವಕರಿಗೆ ಹಾಗೂ ಉದ್ಯಮಿಗಳಿಗೆ 5 ಮತ್ತು 10 ಕಿ.ಮೀ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಯಿತು. ಭಾನುವಾರವಾದ್ದರಿಂದ ನಗರದ ವಿವಿಧ ಭಾಗಗಳಿಂದ ಬಂದಿದ್ದ ಐಐಎಸ್‌ಸಿಯ ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪ್ರೊ.ಬಲರಾಮ್, ‘ಮೂರು ವರ್ಷಗಳ ಹಿಂದೆ ಜೇಮ್‌ಷೆಡ್‌ಜಿ ಟಾಟಾ ಅವರ ಜನ್ಮ ಶತಮಾನೋತ್ಸದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಯೇ ಈ ಓಟವನ್ನು ಆಯೋಜಿಸುವ ನಿರ್ಧಾರಕ್ಕೆ ಬರಲಾಯಿತು. ಅದರಂತೆ ಪ್ರತಿವರ್ಷ ಅವರ ಜನ್ಮದಿನದ ಆಚರಣೆಯ ನಂತರದ ಭಾನುವಾರ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿಗಿಂತ ಈ ವರ್ಷ ಭಾಗವಹಿಸುವವರ ಸಂಖ್ಯೆ ಹೆಚ್ಚಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.ಅಥ್ಲೀಟ್‌ಗಳು: ಈ ಓಟಕ್ಕೆ ಖ್ಯಾತ ಅಥ್ಲೀಟ್‌ಗಳಾದ ಅಶ್ವಿನಿ ನಾಚಪ್ಪ, ರೀತ್ ಅಬ್ರಹಾಂ ಮತ್ತು ನಜೀಬ್ ಅಗಾ ಅವರು ತಾವೂ ಹೆಜ್ಜೆ ಹಾಕುವ ಮೂಲಕ ಓಟದ ಕಳೆ ಹೆಚ್ಚಿಸಿದರು. ಅಲ್ಲದೇ 50 ಕಾರ್ಪೊರೇಟ್ ಕಂಪೆನಿಗಳ ಪ್ರತಿನಿಧಿಗಳು ಸಹ ಭಾಗವಹಿಸಿದರು. 

 

ಚಿಣ್ಣರ ಆಟ, ಹಿರಿಯರ ಸಿಳ್ಳೆ...

ವಿಜ್ಞಾನದ ಜನಪ್ರಿಯತೆಗೆ ನಡೆದ ಓಟದ ಸ್ಪರ್ಧೆಯಲ್ಲಿ ವಿವಿಧ ವಯೋಮಾನದವರು ಭಾಗವಹಿಸಿದ್ದರಿಂದ ಓಟದ ಜೊತೆಗೆ ರಂಜನೆಯೂ ದೊರೆಯಿತು. ಕಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂರುವರೆ ವರ್ಷದ ಪ್ರಥಮ್ ಎಂಬ ಬಾಲಕ ‘ಪ್ರಥಮ’ ಸ್ಥಾನಕ್ಕಾಗಿ ಆತನ ತಾಯಿಯ ಕೈಹಿಡಿದು ಓಡುತ್ತಿದ್ದ! ಹೇಗಿದೆ ಮರಿ ಓಟ ಎಂದು ಕೇಳಿದರೆ ‘ಇಟ್ಸ್ ಫೈನ್ ಅಂಕಲ್’ ಎಂದು ತಾಯಿ ಹೇಳಿಕೊಟ್ಟದ್ದನ್ನೇ ಉಲಿದು ಮುಂದೆ ಸಾಗಿದ. ಹೆಗಲಿಗೆ ಬ್ಯಾಗ್ ಏರಿಸಿಕೊಂಡಿದ್ದ 80 ದಾಟಿದ ಹಿರಿಯೊಬ್ಬರು ತಾವು ಓಡದಿದ್ದರೂ ಇತರರನ್ನು ಹುರಿದುಂಬಿಸಲು ಎರಡು ಕಿ.ಮೀ. ಮುಗಿಯುವವರೆಗೂ ಸಿಳ್ಳೆ ಹಾಕಿ ಹುರಿದುಂಬಿಸಿದ ಪರಿ ಯುವಕರೂ ನಾಚುವಂತಿತ್ತು.78 ವರ್ಷದ ನಾಗವಲ್ಲಿ ಅವರದ್ದು ಇನ್ನೊಂದು ಅನುಭವ. ತಮ್ಮ ಮಗ, ಸೊಸೆ, ಮೊಮ್ಮಗ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನೋಡಲು ಬಂದಿದ್ದ ಅವರು, ಉತ್ಸಾಹ ತಾಳದೇ ಓಟದಲ್ಲಿ ಭಾಗವಹಿಸಿಬಿಟ್ಟರು! ‘ಕಾಂಪಿಟೇಷನ್‌ನಲ್ಲಿ ಭಾಗವಹಿಸ್ತೀನಿ ಅಂತ ಗೊತ್ತಿದ್ದಿದ್ರೆ ಶೂ ಆದ್ರೂ ಹಾಕ್ಕೊಂಡು ಬರ್ತಿದ್ದೆ’ ಎಂದರು. 1945ರಲ್ಲಿ ತಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ ಉದ್ದ ಜಿಗಿತ, ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ ಎಂದು ಹೇಳುತ್ತಾ ನೆನಪಿನಂಗಳಕ್ಕೆ ಜಾರಿದರು. ಸ್ಪರ್ಧೆ ಆರಂಭವಾದಾಗಿನಿಂದಲೂ ಭಾಗವಹಿಸಿ ಪ್ರಶಸ್ತಿ ಪಡೆದ 56 ವರ್ಷದ ನಾಗರತ್ನ ಅವರು, ಈ ಬಾರಿಯೂ ದ್ವಿತೀಯ ಸ್ಥಾನ ಗಿಟ್ಟಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.