ಶನಿವಾರ, ಜನವರಿ 18, 2020
21 °C
ಕಥೆ

ಐದು ರೂಪಾಯಿ

ಶೈಲಜಾ ಕಂಜರ್ಪಣೆ Updated:

ಅಕ್ಷರ ಗಾತ್ರ : | |

ಐದು ರೂಪಾಯಿ

ಹೊಸದಾಗಿ ಸಾರಣೆ ಮಾಡಿ, ಕೆಂಪುಕಾವಿ   ಬಳಿಸಿಕೊಂಡಿದ್ದ ಮೆಟ್ಟಿಲ ಮೇಲೆ ಕುಳಿತಿದ್ದ ಕಿಟ್ಟಿಗೆ ಅಳು ಬರುವ ಹಾಗಾಗಿತ್ತು. ಅವನು ರಸ್ತೆಯ ತುದಿಗೇ ದೃಷ್ಟಿ ನೆಟ್ಟು ಮೂರ್ತಿ ಮಾವನ ಬರವನ್ನೇ ಕಾಯುತ್ತಾ ಕುಳಿತಿದ್ದ. ಮೂರ್ತಿ ಮಾವ ಹೀಗೇ. ಯಾವಾಗಲೂ ಮನೆಯಲ್ಲಿ ಇರುವುದೇ ಇಲ್ಲ. ಎಷ್ಟು ಹೊತ್ತು ಕಾಯಬೇಕೋ.

ಒಳಗೆ, ಮಾಡಿದ ಅಡುಗೆಗೆ ಅಜ್ಜಿ ಒಗ್ಗರಣೆ ಹಾಕಿದ ಸದ್ದು ಕೇಳಿಸಿತು. ಅಜ್ಜಿ ಹೇಳಿದ್ದೇನು? ನಾನು ಇವತ್ತು ಬರುದು ಗೊತ್ತಿರಲಿಲ್ಲವಂತೆ, ಗೊತ್ತಿದ್ದಿದ್ದರೆ ಮೂರ್ತಿ ಮಾವ ಮನೇಲೇ ಇರುತ್ತಿದ್ದರಂತೆ! ಕಿಟ್ಟಿಗೆ ಮಾವ ಮನೆಯಲ್ಲಿ ಇಲ್ಲದಿದ್ದುದು ದೊಡ್ಡ ಚಿಂತೆಯಾಗಲಿಲ್ಲ. ಅವನನ್ನು ತೀರಾ ಗಲಿಬಿಲಿಗೊಳಿಸಿದ್ದು ಗೋಪಿ ನಿನ್ನೆಯೇ ಕಾವಳ್ಳಿಗೆ ಹೋದ ವಿಚಾರ.



ಕಿಟ್ಟಿಗೆ ದೊಡ್ಡ ಪರೀಕ್ಷೆ ಮುಗಿಯುತ್ತಿದ್ದಂತೆ ಅವನ ತಂದೆ, ಟಿಕೇಟ್ ತೆಗೆದು ಕೊಟ್ಟು, ಬಸ್‌ನಲ್ಲಿ ಕೂರಿಸಿ ಸರಸೀಪುರಕ್ಕೆ ಕಳುಹಿಸಿದ್ದರು. ಅಣ್ಣ ಪರೀಕ್ಷೆ ಮುಗಿಸಿ ಮೊದಲೇ ಅಲ್ಲಿಗೆ ಹೋಗಿದ್ದ. ಆ ಧೈರ್ಯದಿಂದಲೇ ಕಿಟ್ಟಿ ಉತ್ಸಾಹದಿಂದ ಅಜ್ಜಿ ಮನೆಗೆ ಒಬ್ಬನೇ ಬಂದಿದ್ದ. ಈಗ ಕಿಟ್ಟಿಗೆ ಅಣ್ಣನಿಲ್ಲದ್ದು ತಿಳಿದು ಗಾಬರಿಯಾಗಿತ್ತು.



ಕಾವಳ್ಳಿ ಸುಬ್ಬಣ್ಣ ಮಾವನ ಊರು. ಸುಬ್ಬಣ್ಣ ಮಾವ ಅಂದರೆ ಕಿಟ್ಟಿಯ ತಾಯಿಯ ದೊಡ್ಡಪ್ಪನ ಮಗ. ಕಿಟ್ಟಿ ಮಗುವಾಗಿದ್ದಾಗ ಯಾವಾಗಲೋ ಒಮ್ಮೆ ತಾಯಿ ಜೊತೆ ಹೋದದ್ದು. ಊರಿನ ನೆನಪಂತೂ ಚೂರೂ ಇಲ್ಲ. ಕನಸಿನಲ್ಲಿ ಕಂಡಂತೆ ಮಸುಕು ಮಸುಕು. ಈಗ ಯಾವುದೋ ಜಾತ್ರೆ ಇತ್ತಂತೆ. ಊರಿನವರು ಯಾರೋ ಬಂದಿದ್ದರಂತೆ. ರಜಾ ಇದ್ಯಲ್ಲಾ ಬಾ ನಿಮ್ಮ ಮಾವನ ಮನೆಗೆ ಅಂದರಂತೆ. ಗೋಪಿ ಅಣ್ಣ ಹೋದನಂತೆ.



ಹಗಲು ಕಳೆಯುತ್ತಿದ್ದಂತೆ ಕಿಟ್ಟಿಗೆ ದುಃಖ ಒಳಗಿನಿಂದ ಮಡುಗಟ್ಟುತ್ತಿತ್ತು. ಕಣ್ಣಿನಿಂದ ನೀರು ಚಿಮ್ಮಲು ಕಾತರಿಸುತಿತ್ತು. ಪಕ್ಕದ ಮನೆಯವರು ಸಲಿಗೆಯಿಂದ ಮಾತನಾಡಿಸಿದರೂ ತಲೆ ಎತ್ತಲಾಗಲಿಲ್ಲ. ಮೂರ್ತಿ ಮಾವ ಪೇಟೆಯಿಂದ ಬಂದದ್ದೇ ಕಿಟ್ಟಿ ಅಳುವುದಕ್ಕೆ ಶುರುಮಾಡಿದ.ಕಿಟ್ಟಿ ಯಾವಾಗ ಬಂದದ್ದು ಎಂದು ಉತ್ಸಾಹದಿಂದ ಕೇಳಲು ಹೊರಟ ಮೂರ್ತಿಮಾವನಿಗೆ ಆಶ್ಚರ್ಯವಾಯಿತು, ಯಾಕಪ್ಪ ಏನಾಯ್ತು? ಎಂದು ವಿಚಾರಿಸಿದರು.

ಅಳುತ್ತಲೇ ಇದ್ದ. ಒಳಗಿನಿಂದ ಬಂದ ಅಜ್ಜಿ ಮಾವನಿಗೆ ಗೋಪಿ ಇರ್ತಾನೆ ಅಂದ್ಕೊಂಡು ಬಂತಂತೆ. ಅವನು ಇಲ್ಲಿ ಇಲ್ಲ ಅಂತ ತಿಳಿಯುತ್ತಲೂ ಮುಖ ಗಂಟಿಕ್ಕಿ ಕೂತಿದೆ. ಮಖೇಡಿ. ರಾತ್ರಿ ಇದು ಇಲ್ಲಿ ಸುಮ್ನೆ ನಿಲ್ಲುದಿಲ್ಲ. ಕಾವಳ್ಳಿಗೆ ಬಸ್ಸ್ ಹತ್ತಿಸಿ ಬಾ ಎಂದು ರೇಗಿದರು. ಅಜ್ಜಿ ಬೈಯುತ್ತಿದ್ದರೂ, ಬಸ್ ಹತ್ತಿಸಿ ಬಾ ಎಂದು ಅಪ್ಪಣೆ ಕೊಡಿಸಿದ್ದು ಕೇಳಿ ಕಿಟ್ಟಿಗೆ ಖುಷಿಯಾಯಿತು.

ನಿರೀಕ್ಷೆಯಿಂದ ಕಿಟ್ಟಿ ಮೂರ್ತಿಮಾವನ ಮುಖ ನೋಡಿದ. ಕಳುಹಿಸುವ ಆತುರ ಅವರ ಮುಖದಲ್ಲೇನೂ ಕಾಣಿಸ್ಲಿಲ್ಲ. ಯಾಕಪ್ಪಾ ಇಲ್ಲೇ ಎರಡು ದಿನಾ ಇರುಕ್ಕಾಗಲ್ವ ಕಿಟ್ಟಿ, ನಮಗೂ ಮಕ್ಳು ಮನೆಗೆ ಬರ್‌ದೇ ಬೇಜಾರಾಗಿದೆ. ಹೇಗೂ ಬಂದಿದೀಯಾ. ಆಚೆ ಈಚೆ ಮಕ್ಳೂ ಇರ್‌ತಾರೆ, ಆಡ್ಕೊಂಡು ಇರಬಹುದು. ರಾತ್ರಿ ಗುರುಗಳ ಮಠಕ್ಕೆ ಹೋಗಿ ಬರುವಾಗ ಪೇಟೆಗೂ ಹೋಗಿ ಬರೋಣ... ಎಂದು ಇನ್ನೂ ಏನೇನೋ ಹೇಳುತ್ತಲೇ ಹೋದರು.



ಕಿಟ್ಟಿ ಬಿಕ್ಕಳಿಸಲು ಶುರು ಮಾಡಿದ, ಮೂರ್ತಿ ಮಾವನಿಗೆ ಒಂದು ಕ್ಷಣ ಸಿಟ್ಟು ಬಂದಿರಬೇಕು– ಎಂಥಾ ಮೊಂಡು ಹುಡುಗರಪ್ಪ, ನಾವು ಮಕ್ಳು ಬರುತ್ವಾ ಅಂತ ಕಾಯ್ತಾ ಇದ್ರೆ, ಇವಕ್ಕೆ ವಾಂಛಲ್ಯವೇ ಇಲ್ಲ ಎಂದು ಗೊಣಗುಟ್ಟಿಕೊಂಡರು. ಅಳಬೇಡ ಸಂಜೆ ಆರುಗಂಟೆಗೆ ಬಸ್ಸಿದೆ, ಹತ್ತಿಸುತ್ತೇನೆ. ನಿಮ್ಮಣ್ಣನ ಹತ್ರಾನೇ ಹೋಗು... ಎಂದು ಬೇಜಾರುಮಾಡಿಕೊಂಡರು.

                                                                                          ***

ಬಸ್ಸು ಕಾವಳ್ಳಿಯನ್ನು ಮುಟ್ಟಿದಾಗ ಕತ್ತಲಾಗತೊಡಗಿತ್ತು. ಬಸ್ಸಿನಿಂದ ಇಳಿದ ಕಿಟ್ಟಿಗೆ ಅಪರಿಚಿತವಾದ ಊರು ನೋಡಿ ಗಲಿಬಿಲಿಯಾಯಿತು. ಇವನು ಎಚ್ಚೆತ್ತುಕೊಳುವ ವೇಳೆಗೆ ಬಸ್ಸಿನಿಂದ ಇಳಿದವರು ಊರಿನೊಳಗೆ ಹೋಗಿಯಾಗಿತ್ತು. ರಸ್ತೆ ಪಕ್ಕದಲ್ಲಿದ್ದ ದೀಪ ಪೂರ್ತಿ ಹತ್ತದೇ ಪಕಪಕನೆ ಮಿನುಗುತ್ತಿತ್ತು. ಕಟ್ಟಿಗೆ ಹೊತ್ತು ತರುತ್ತಿದ್ದ ಹೆಂಗಸೊಬ್ಬಳು ಊರಿಗೆ ಹೊಸಬನಾದ ಹುಡುಗನನ್ನು ದಿಟ್ಟಿಸುತ್ತಾ ಯಾರ ಮನಿಗೆ? ಎಂದು ಕೇಳಿದಳು. ಸುಬ್ಬಣ್ಣ ಮಾಸ್ಟ್ರ ಮನೆಗೆ ಎಂದು ಕಿಟ್ಟಿ ಹೇಳಿದ. ಈಗ ಬಸ್ಸಿನಿಂದ ಇಳಿದವ್ರು ಆ ಕಡೆಗೆ ಅಲ್ವಾ ಹೋದ್ದು, ಆಗ್ಲೇ ಹೇಳ್ಬೇಕಿತ್ತು. ಈ ಓಣಿಯಾಗೇ ಸೀದಾ ಹೋಗು. ಜೋಯಿಸರ ಮನೆ ಹತ್ರ ಹೋಗಿ ಕೇಳು, ಹೇಳ್ತಾರೆ ಎಂದು ಕೈ ನೀಡಿ ದಾರಿ ತೋರಿಸಿ ಹೋಗಿಯೇ ಬಿಟ್ಟಳು.

ಮುಸ್ಸಂಜೆಯ ಕತ್ತಲಲ್ಲಿ ಕಳ್ಳಿ ಗಿಡಗಳ ನಡುವೆ ಇದ್ದ ಕಾಲು ದಾರಿಯಲ್ಲಿ ಕಿಟ್ಟಿ ನಡೆದ. ಬೀದಿ ನಾಯಿಗಳ ಹಿಂಡು ಕಂಡು ಭಯವಾಯಿತು. ಪಕ್ಕಕ್ಕೆ ಸರಿಯಲು ಹೋಗಿ ಕತ್ತಲಲ್ಲಿ ಯಾರೋ ದಾರಿ ಬದಿ ಮಾಡಿದ್ದ ಅಮೇಧ್ಯ ಮೆಟ್ಟಿದ್ದ. ಅಸಹ್ಯದಿಂದ ಹಾರಿ ಜಿಗಿದು ಪಕ್ಕದ ಹುಲ್ಲಿಗೆ ತಿಕ್ಕೀ ತಿಕ್ಕೀ ಕಾಲು ಒರೆಸಿಕೊಂಡ. ಎರಡೆರಡು ನಿಮಿಷಕ್ಕೂ ಮರಳಿಗೋ, ಕಲ್ಲಿಗೋ, ಹುಲ್ಲಿಗೋ ಕಾಲು ತಿಕ್ಕುತ್ತಾ ಹೆಜ್ಜೆ ನಿಧಾನ ಮಾಡಿದ. ಮಧ್ಯೆ ಮಧ್ಯೆ ವಿಚಾರಿಸಿ ಮನೆ ತಲುಪಿದಾಗ ಸರಿಯಾಗೇ ಕತ್ತಲಾಗಿತ್ತು. ಸಣ್ಣ ಹಳ್ಳಿಯಾದ್ದರಿಂದ ಇವನು ಮನೆ ಮುಟ್ಟುವ ಮೊದಲೇ, ಸುದ್ದಿ ಮನೆಗೆ ತಲುಪಿಯಾಗಿತ್ತು.



ಸುಬ್ಬಣ್ಣ ಮಾವನ ಮಕ್ಕಳೆಲ್ಲಾ ಇವನಿಗಿಂತ ತುಂಬಾ ದೊಡ್ಡವರು. ಸುಬ್ಬಣ್ಣ ಮಾವನ ದೊಡ್ಡ ಮಗ ಶಾಮುಬಾವ ಜಗುಲಿಯಿಂದಲೇ ವಿಚಾರಿಸಿದರು, ‘ಬಾಪ್ಪ ಕಿಟ್ಟಿ, ಏನಪ್ಪ ಚೆನ್ನಾಗಿದೀಯಾ?’ ಎಂದು ಕೇಳುತ್ತಾ ಕೈ ನೀಡಿದರು. ಹತ್ತಿರಕ್ಕೆ ಎಳೆದುಕೊಂಡರು. ಪಕ್ಕದಲ್ಲೇ ಇದ್ದ ಸುಬ್ಬಣ್ಣ ಮಾವ ‘ಒಹ್ಹೊಹ್ಹೊ ಏನಯ್ಯಾ, ಬಾರಯ್ಯ ಕಿಟ್ಟಣ್ಣ, ನೀನು ಇಲ್ಲಿಗೆ ಬಂದದ್ದು ಫಸ್ಟ್ ಟೈಮು ಅಲ್ವೇ? ಸಂತೋಷ, ತುಂಬ ಸಂತೋಷ ಆಯ್ತಪ್ಪ’ ಎಂದು ದೊಡ್ಡವರನ್ನು ಮಾತನಾಡಿಸುವಂತೆ ಮಾತನಾಡಿಸಿ, ‘ಜಾನಕಮ್ಮನ ಮಗ ಊರಿಂದ ಬಂದಿದಾನೆ’ ಎಂದು ಜಗಲಿಯಲ್ಲಿ ಕೂತಿದ್ದ ಊರಿನ ಕೆಲವರಿಗೆ ಪರಿಚಯ ಮಾಡಿಸಿದರು.



ಶಾಮೂ ಬಾವ ನಿಂತು ಯಾರೊಡನೆಯೊ ಮುಂದಿನವಾರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾತುಕತೆಯಲ್ಲಿ ತೊಡಗಿದರು. ಸುಬ್ಬಣ್ಣ ಮಾವನೂ ಮಧ್ಯೆ ಮಧ್ಯೆ ಬಾಯಿ ಹಾಕುತ್ತಿದ್ದರು. ಸಂಕೋಚದಿಂದ ಮುದುಡಿ ನಿಂತಿದ್ದ ಕಿಟ್ಟಿಗೆ ಒಳಗೆ ಹೋಗುವ ತವಕ, ಅವನ ಕಣ್ಣುಗಳು ಗೋಪಿಯನ್ನು ಹುಡುಕುತ್ತಿದ್ದವು. ಮಾತಿನ ಮಧ್ಯೆ ಎಲ್ಲರೂ ದೇವಸ್ಥಾನಕ್ಕೆ ಹೋಗಿರುವುದು ತಿಳಿಯಿತು.



ಕಿಟ್ಟಿಗೆ ಅಲ್ಲಿಗೇ ಹೋಗಿ ಅಣ್ಣನನ್ನು ಮೊದಲು ಕಾಣಬೇಕು ಅನ್ನಿಸಿತು. ಹೇಳಲು ಸಂಕೋಚ. ಹಾಗೆಯೇ ಮುದುಡಿ ಮಾವನ ಪಕ್ಕದಲ್ಲಿ ನಿಂತಿದ್ದ. ಕೊಳಕು ಮೆಟ್ಟಿದ್ದ ಕಾಲನ್ನು ತೊಳೆದುಕೊಳ್ಳಬೇಕು ಅನ್ನಿಸತೊಡಗಿತು. ಮರೆತೇ ಹೋಗಿತ್ತು. ಅತ್ತೆ ‘ಕಿಟ್ಟಿ ಚೆನ್ನಾಗಿದೀಯಪ್ಪ, ನೀನು ಬಂದಿದ್ದು ಗೊತ್ತಾಯ್ತು. ಮಂಗಳಾರತಿ ಆಗ್ತಾ ಇತ್ತು. ನಿಂತಿದ್ವಿ. ಒಳಗೆ ಬಾಪ್ಪ’ ವಿಚಾರಿಸಿ ಒಳ ನಡೆದರು.



ಎಲ್ಲರೂ ವಿಚಾರಿಸಿದ್ದಾಯ್ತು. ಅಣ್ಣ ಯಾಕೋ ಕಾಣ್ತಾ ಇಲ್ಲ. ಮೆಲ್ಲಗೇ ಗೋಪಿ ‘ಅಣ್ಣ ಎಲ್ಲಿ?’ ಎಂದು ಕೇಳಿದ. ಇವನ ಬರುವಿಕೆಯು ಈಗ ಅರ್ಥವಾದಂತೆ, ಮಾವನ ಎರಡನೇ ಮಗ ರಾಮು ಬಾವ ‘ಲೋ ನಿಮ್ಮ ಗೋಪಿ, ಇವತ್ತಿನ ಬೆಳಗ್ಗಿನ ಬಸ್ಸಿಗೇ ನಿಮ್ಮೂರಿಗೆ ಹೋದ್ನಲ್ಲೋ’ ಎಂದವನು, ಕೂಡಲೇ ತನ್ನ ಉಬ್ಬು ಹಲ್ಲು ಬಿಡುತ್ತಾ ‘ಅಯ್ಯೋ ಇದು ಗೋಪಿ ಇದಾನೆ ಅಂತ ಬಂದಿದೆ ಕಣೋ ಪಾಪ’ ಎಂದು ರಾಗವಾಗಿ ಹೇಳಿದ. ಕೂಡಲೇ ಕಿಟ್ಟಿಗೆ ಗಾಬರಿಯಾಯಿತು. ಗೋಪಿ ಅಣ್ಣ ಊರಿಗೆ ಹೋದ್ನ? ತಗ್ಗಿಸಿದ ತಲೆ ಮೇಲೆತ್ತಲೂ ಆಗದಂತೆ ನಿಂತುಬಿಟ್ಟ.

ಕೂತಿದ್ದ ಅವನ ಕಣ್ಣಿಂದ ನೀರ ಹನಿಗಳು ತಟಕ್ ತಟಕ್ ಎಂದು ಇಳಿಯತೊಡಗಿದವು. ಮನೆಯವರೆಲ್ಲರಿಗೂ ಮೊದಲು ಅವನ ಅವಸ್ಥೆ ಕಂಡು ತಮಾಷೆಯೆನಿಸಿದರೂ, ಅಳಲು ಶುರುಮಾಡಿದ್ದು ನೋಡಿ ಪಾಪ ಹುಡುಗ ಎನಿಸಿರಬೇಕು. ಸಮಾಧಾನಿಸುವ ಪ್ರಯತ್ನ ಮಾಡಿದರು. ಕಿಟ್ಟಿ ಬಹಳ ಹೊತ್ತಿನವರೆಗೂ ಅಳುತ್ತಲೇ ಇದ್ದ. ಶಾಮ ಬಾವ ದೇವಸ್ಥಾನಕ್ಕೆ ಹೊರಟಿದ್ದವರು ಎದ್ದು ಬಂದು ಅವನ ಕೈ ಹಿಡಿದು ಎಬ್ಬಿಸುತ್ತಾ ‘ಬಾ ದೇವಸ್ಥಾನದಲ್ಲಿ ಉತ್ಸವಕ್ಕೆ ಅಲಂಕಾರ ಮಾಡ್ತಿದಾರೆ. ನೋಡ್ಕೊಂಡು ಬರೋಣ’ ಎಂದು ಕರೆದರು.

ಮೇಲೆದ್ದು ಮೂಗು ಒರೆಸಿಕೊಳ್ಳುತ್ತಾ  ನಿಂತ. ಅತ್ತೆ, ಒಳಗೆ ಹೋಗಿದ್ದವರು ಹೊರಗೆ ಬಂದು ‘ಬಂದಾಗಿನಿಂದ ಹುಡುಗ ಏನೂ ಕುಡಿದಿಲ್ಲ, ನಿಲ್ಲು’ ಎಂದು ಹೇಳಿ ಒಳಗಿನಿಂದ ಒಂದು ಲೋಟ ಕಾಫಿ ತಂದುಕೊಟ್ಟರು. ಕಿಟ್ಟಿಗೆ ಹೋಗಲೂ ಮನಸ್ಸಿಲ್ಲದಿದ್ದರೂ, ಆ ಕ್ಷಣ ಕರೆಂಟ್ ಹೋಗಿ ಒಳಗೆ ಹೊರಗೆಲ್ಲಾ ಕತ್ತಲು ಕವಿದಿದ್ದರಿಂದ ಶಾಮ ಬಾವನ ಹಿಂದೆಯೇ ಓಡಿ ಹೊರಬಂದ. ಏನೋ ಯೋಚಿಸಿ ನಿಂತ ಶಾಮ ಬಾವ ಇವನತ್ತ ತಿರುಗಿ, ‘ಕರೆಂಟು ಬರಲಿ ಅಮೇಲೆ ಹೋಗೋಣ. ದೇವಸ್ಥಾನದಲ್ಲೂ ರೋಡಲ್ಲೂ ಹೇಗೂ ಕರೆಂಟ್ ಇರೋದಿಲ್ಲ’ ಎಂದರು.



ಎಷ್ಟು ಹೊತ್ತಾದರೂ ಕರೆಂಟು ಬರಲಿಲ್ಲ. ಇದು ಅಂತಹ ಆತ್ಮೀಯತೆ ಇರುವ ಸಂಬಂಧವೇನೂ ಅಲ್ಲದ್ದರಿಂದ ಕಿಟ್ಟಿಗೆ ಒಂಥರಾ ಉಸಿರು ಹಿಡಿದಂತೆ ಆಗಿತ್ತು. ಮಾವನ ಹೆಣ್ಣುಮಕ್ಕಳು ಇವನನ್ನು ಒಮ್ಮೆ ನೋಡಿ ನಕ್ಕವರು ಮತ್ತೇನೂ ಮಾತನಾಡಿಸಿಯೇ ಇರಲಿಲ್ಲ. ಇವನ ಇರವನ್ನೇ ಮರೆತಂತೆ ತಮ್ಮ ಮಾತುಕತೆಯಲ್ಲಿ ತೊಡಗಿದ್ದರು. ಕಿಟ್ಟಿ, ನಾಳೆ ಎಷ್ಟು ಹೊತ್ತಿಗೆ ಹೊರಡಲಿ? ಬಸ್ಸು ಎಷ್ಟು ಹೊತ್ತಿಗಿದೆ? ಯಾರನ್ನು ಕೇಳಲಿ? ಬಸ್ಟಾಂಡ್‌ಗೆ ಯಾವ ಕಡೆ ಹೋಗಬೇಕು? ಎಂದು ಬಂದ ದಾರಿ ನೆನಪಿಸಿಕೊಳ್ಳುತ್ತಾ ಕೂತ.

ಈಗಲೇ ಕೇಳಬೇಕೆಂದು ಅನ್ನಿಸಿತು. ನನ್ನನ್ನು ಆಟ ಆಡಿಸಲು ಅಣ್ಣನನ್ನು ಮುಚ್ಚಿಟ್ಟಿರಬಹುದು ಎಂದು ಸಣ್ಣ ಆಸೆ ಇತ್ತು. ಕರೆಂಟು ಹೋದರೂ, ಇಷ್ಟು ಹೊತ್ತಾದರೂ ಬಾರದ್ದು ನೋಡಿ ಅವನು ಊರಿಗೆ ಹೋಗಿರುವುದು ಖಚಿತವಾಯಿತು. ಕೂತಲ್ಲೇ ತೂಕಡಿಕೆ ಶುರುವಾಗಿತ್ತು. ಕರೆಂಟ್ ಬಂದಾಗ ಎಲ್ಲರೂ ಹೋ ಎಂದು ಕಿರುಚಿದ್ದಕ್ಕೆ ಇವನಿಗೆ ಎಚ್ಚರವಾಯಿತು. ಕಿಟ್ಟಿ ಗೋಡೆಯ ಪಕ್ಕ ಚಾಪೆಯ ಮೇಲೆ ಮಲಗಿದ್ದ. ಎಲ್ಲರೂ ಊಟಕ್ಕೆ ಕುಳಿತಿದ್ದರು. ತನ್ನನ್ನು ಊಟಕ್ಕೆ ಎಬ್ಬಿಸಲಿಲ್ಲ ಎನಿಸಿ ಅನಾಥ ಭಾವ ಮೂಡಿತು. ಶಾಮಬಾವ ಹೊರಗಿನಿಂದ ಬಂದವರು ‘ಎಚ್ಚರ ಆಯ್ತಾ ಬಾ ಊಟ ಮಾಡುವ’ ಎಂದರು.

                                                                                 ***

ಮರುದಿನಕ್ಕೆ ಸಂಕೋಚ ಕಡಿಮೆಯಾಗಿದ್ದರೂ ಊರಿಗೆ ಹೋಗಬೇಕು ಎಂದು ಕಿಟ್ಟಿಗೆ ಅನ್ನಿಸುತಿತ್ತು. ಶಾಮ ಬಾವ ಬಂದವರು, ‘ಊರ ಒಳಗೆ ಹೋಗ್ತಾ ಇದೀನಿ. ಬಾ ಎಲ್ರನ್ನೂ ಮಾತಾನಾಡಿಸಿಕೊಂಡು ಬರುವೆಯಂತೆ, ನಿಂಗೂ ಎಲ್ರೂ ಪರಿಚಯಾಗ್ತಾರೆ’ ಎಂದು ಚಪ್ಪಲಿ ಹಾಕಿಕೊಂಡರು. ಊಟದ ಹೊತ್ತಿಗೆ ಮನೆಗೆ ಬಂದಾಗ ಎಲ್ರೂ ಊಟಕ್ಕೆ ಕೂತಾಗಿತ್ತು.



ಅಜ್ಜಿಗೆ ಯಾಕೋ ಇವರಾರು ಇಷ್ಟ ಇಲ್ಲ. ಯಾವಾಗಲೂ ಹೇಳ್ತಾ ಇರ್‌ತಾರೆ. ನಮ್ಮ ಭೂಮಿ ಎಲ್ಲಾ ಕಿತ್ತುಕೊಂಡು ಬಿಟ್ಟರು ಅಂತ. ಅಜ್ಜಿಗೆ ತುಂಬಾ ಕಷ್ಟ ಕೊಟ್ಟಿದ್ದಾರಂತೆ. ಮೇಲೆ ಮಾತ್ರ ಚೆನ್ನಾಗಿ ಮಾತಾಡ್ತಾನೆ ಅವನು ಅಂತ ಅಜ್ಜಿ ಹೇಳೋದು. ವಿವರಗಳು ಗೊತ್ತಿಲ್ಲ. ಆದರೆ ಅಪ್ಪ, ಅಮ್ಮ, ಚಿಕ್ಕಮ್ಮ, ಅಜ್ಜಿ, ಮೂರ್ತಿ ಮಾವ ಎಲ್ಲಾ ಮಾತನಾಡುವುದು ಕೇಳಿದಾಗ ಸುಬ್ಬಣ್ಣ ಮಾವ ತುಂಬಾ ಜಿಪುಣ ಅಂತ ಅನ್ನಿಸಿದೆ. ಹೆಣ್ಣುಗಳಿಗೆಲ್ಲಾ ಅಪ್ಪನ ಗುಣಾನೇ ಬಂದಿರೋದು ಎಂದು ಅಜ್ಜಿ ಬೈತಿರ್ತಾರೆ. ಅಮ್ಮ ಶಾಮನಿಗೆ ಮಾತ್ರ ಸ್ವಲ್ಪ ತಾಯಿ ಗುಣ ಅನ್ನುತ್ತಾರೆ.



ಊಟ ಮಾಡುವಾಗ ಮಾವ ಕಿಟ್ಟಿಗೆ ‘ಕಿಟ್ಟಿ ನಮ್ಮ ಅಂಗಡೀಲಿ ಕೂರ್‌ತೀಯಾ? ವ್ಯಾಪಾರ ಮಾಡುಕ್ಕೆ ಬರುತ್ತಾ?’ ಅಂದರು. ‘ಇಲ್ಲಪ್ಪ ನಂಗೇನೂ ಗೊತ್ತಾಗುಲ್ಲ’ ಕಿಟ್ಟಿ ಕಣ್ಣರಳಿಸಿ ಭಯದಿಂದ ತಟ್ಟಂತ ಉತ್ತರಿಸಿದ. ಶಾಮ ಬಾವ ‘ನಿನ್ನಣ್ಣನೂ ಹೀಗೆ ಹೇಳಿದ್ದ. ಕೂತ್ಕೋ ಅದೇನೂ ಕಷ್ಟ ಇಲ್ಲ ನಿಂಗೆ, ನಾನು ಹೇಳಿಕೊಡ್ತೀನಿ’ ಎಂದು ಹೇಳಿದರು. ಉತ್ಸಾಹದಿಂದ ಊಟ ಆದೊಡನೆ ಕಿಟ್ಟಿ ಅಂಗಡಿ ಒಳಗೆ ಹೋದ. ಅಣ್ಣನಿಗೆ ಬರೆದು ಕೊಟ್ಟಿದ್ದ ರೇಟಿನ ಚೀಟಿಯನ್ನು ಕೊಟ್ಟು ನೋಟು, ಚಿಲ್ಲರೆ ಹೇಗೆ ಇಡಬೇಕೆಂದು, ಹೇಳಿಕೊಟ್ಟರು. ಅಂಗಡಿ ಎಂದರೆ ಹಳ್ಳಿಯವರಿಗೆ ಅಗತ್ಯಕ್ಕೆ ಬೇಕಾದ ಸಣ್ಣಪುಟ್ಟ ಸಾಮಾನುಗಳು ಮಾತ್ರ ಇರುವಂತದ್ದು. ದೊಡ್ಡದೇನಿಲ್ಲ, ಮನೆ ಒಳಗಿನಿಂದಲೇ ಅದಕ್ಕೆ ಬಾಗಿಲಿದೆ. ಹೊರಗಡೆಗೆ ಇನ್ನೊಂದು ಬಾಗಿಲು ಅಷ್ಟೆ.



ಉತ್ಸಾಹದಿಂದ ವ್ಯಾಪಾರ ಮಾಡಿದ. ರಾತ್ರಿ ಎಲ್ಲರೂ ಒಟ್ಟಿಗೆ ಕುಳಿತಾಗ ಕಿಟ್ಟಿಯನ್ನು ಹೊಗಳಿದ್ದೇ ಹೊಗಳಿದ್ದು. ರಾತ್ರಿ ಆಗುತ್ತಿದ್ದಂತೆ ಕಿಟ್ಟಿಗೆ ಊರಿಗೆ ಹೊರಡಬೇಕು ಅನಿಸುತ್ತದೆ.. ಇವತ್ತಿಗೆ ಬಂದು ಮೂರು ದಿನ ಆಯಿತು. ಕಿಟ್ಟಿಗೆ ನಿಜವಾಗಿ ಹೋಗಬೇಕು ಅನಿಸಿದಾಗಲೇ ದೊಡ್ಡ ಸಮಸ್ಯೆ ಎದುರಾದದ್ದು. ಬರುವಾಗ ಅಪ್ಪ ಟಿಕೇಟು ತೆಗೆದು ಕೊಟ್ಟು ಬಸ್ ಹತ್ತಿಸಿದರು. ಸರಸಿಪುರದಿಂದ ಮೂರ್ತಿ ಮಾವ ಟಿಕೇಟು ತೆಗೆದುಕೊಟ್ಟರು. ಇಲ್ಲಿ ಅಣ್ಣ ಇದಾನೆ ಎನ್ನುವ ನಂಬಿಕೆಯಿಂದ ಬಂದದ್ದು. ಕಿಟ್ಟಿ ಹತ್ತಿರ ಬಿಡಿಗಾಸೂ ಇಲ್ಲ. ಮೂರು ದಿನದಿಂದ ಕಿಟ್ಟಿಗೆ ಏನು ಮಾಡುವುದೆಂದು ತೋಚುತ್ತಿಲ್ಲ.

ಅವನ ಹತ್ತಿರ ಯಾರೂ ದುಡ್ಡು ಕೊಟ್ಟಿಲ್ಲ. ಮೂರ್ತಿ ಮಾವ ಸಾಮಾನ್ಯವಾಗಿ ಕೊಡುತ್ತಿದ್ದರು. ಇವನು ಬಂದು ಒಂದು ದಿನವೂ ನಿಲ್ಲದೇ ಓಡಿ ಬಂದನಲ್ಲ. ಅವರಿಗೂ ನೆನಪಾಗಿರಲಿಕ್ಕಿಲ್ಲ. ಊರಿಗೆ ಹೊರಟಾಗ ಮಕ್ಕಳ ಕೈಗೆ ಮನೆಯವರು ದುಡ್ಡು ಕೊಡುವುದು ಕಿಟ್ಟಿ ನೋಡಿದ್ದಾನೆ. ಆದರೆ ತಾನು ಹೊರಟುನಿಂತಾಗ ಸುಬ್ಬಣ್ಣಮಾವ ದುಡ್ಡು ಕೊಡದೇ ಹೋದರೆ? ಬಸ್ಸಲ್ಲಿ ಕಂಡಕ್ಟರ್ ಹತ್ತಿರ ಏನೆಂದು ಹೇಳುವುದು? ಬಸ್ಸಿನಲ್ಲಿ ಎಲ್ಲರ ಮುಂದೆ ನಾಚಿಕೆ ಆಗುವುದಿಲ್ಲವೇ? ಟಿಕೇಟು ತಗೊಳ್ಳದೇ ಕದ್ದು ಕೂರೋಕ್ಕಾಗುತ್ತಾ? ಬಸ್ಸಿನಿಂದ ಮಧ್ಯದಲ್ಲೇನಾದರೂ ಇಳಿಸಿಬಿಟ್ಟರೇ! ಕಿಟ್ಟಿಗೆ ಚಿಂತಿಸಿ ತಲೆ ಕೆಟ್ಟು ಹೋಯಿತು.



ಮಧ್ಯಾಹ್ನ ಊಟಕ್ಕೆ ಕೂತಾಗ ‘ನಾನು ನಾಳೆ ಊರಿಗೆ ಹೋಗ್ತೀನಿ’ ಎಂದು ಮೆಲ್ಲನೆ ಹೇಳಿದ. ‘ಅಂತೂ ಮೂರು ದಿನ ಇದ್ಯಲ್ಲಪ್ಪ’ ಎಂದು ರಾಮು ಬಾವ ಒಪ್ಪಿಗೆ ಸೂಚಿಸಿಬಿಟ್ಟ. ಸುಬ್ಬುಮಾವ ‘ಹೋಗ್ಲೇ ಬೇಕೇನೋ ಹುಡುಗ?’ ಎಂದು ಕೇಳಿದರು. ಕಿಟ್ಟಿಗೆ ಹೆದರಿಕೆ ಶುರುವಾಯಿತು. ಹ್ಞೂ ಅಂದುಬಿಟ್ಟರೆ ಟಿಕೇಟಿಗೆ ದುಡ್ಡೂ? ಶಾರದಕ್ಕ ಮಾವನ ಎರಡನೆ ಮಗಳು ಪರವಾಗಿಲ್ಲ.

ಸ್ವಲ್ಪ ಮಾತಾಡಿಸುತ್ತಾಳೆ, ಅವಳನ್ನು ಕೇಳೋದಾ? ದೊಡ್ಡಮಗಳು ಸ್ವಲ್ಪ ಶ್ರೀಮಂತೆ ಅಂತೆ, ಕೊಟ್ಟಿರಿ ಅಂದಿರಲ? ನಗ್ತಾರೇನೋ, ಎಲ್ರಿಗೂ ಹೇಳಿಬಿಟ್ಟರೆ? ನಮ್ಮಪ್ಪ ಅಮ್ಮನ ಬಗ್ಗೆ ಏನು ಅಂದ್ಕೋತಾರೋ? ನನ್ನನ್ನು ನಂಬ್ತಾರಾ? ಹಾಗಂತ ಎಷ್ಟು ದಿನ ಇಲ್ಲಿ ಇರೋದು, ಅವರೇ ಊರಿಗೆ ಹೊರಡ್ತೀಯ? ಅಂತೇನಾದ್ರೂ ಕೇಳಿಬಿಟ್ರೇ, ಥೂ! ಎಷ್ಟು ನಾಚಿಕೆ? ಅಂತೂ ಅತ್ತೆ ‘ರಜಾ ಇದೆ ಅಲ್ವೇನೋ, ಇರೋ ಎರಡು ದಿನ’ ಅಂದ್ರು. ಅಂದಿದ್ದೇ ಸಾಕು ಅನಿಸಿದ್ದೇ ಕಿಟ್ಟಿ ಸುಮ್ಮನಾಗಿ ಬಿಟ್ಟ.



ಮತ್ತೆ ಸಂಜೆಯಾಗುತ್ತಿದ್ದಂತೆ ಊರಿಗೆ ಹೋಗಬೇಕು ಅನ್ನಿಸುತ್ತಿದೆ. ಇವರ ಹೆಣ್ಣುಮಕ್ಕಳು ಚೆನ್ನಾಗಿ ಮಾತನಾಡಿಸುತ್ತಿದ್ದರೆ, ಕೇಳಬಹುದಿತ್ತು. ಯಾವಾಗಲೂ ಮುಖ ಒಂಥರಾ ಊದಿಸಿಕೊಂಡೇ ಇರ್ತಾರೆ. ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿ ಕೂತ ಕಿಟ್ಟಿಗೆ ದುಡ್ಡು ಎಣಿಸುವಾಗ ಐದು ರೂಪಾಯಿಯ ನೋಟು ಒಂದು ತಗೊಳ್ಳಲಾ ಎಂಬ ಯೋಚನೆ ಬಂತು. ಎಷ್ಟೊಂದು ವ್ಯಾಪಾರ ಮಾಡಿದ್ದೀನಿ. ಅವ್ರಿಗೇನು ಗೊತ್ತಾಗುತ್ತ? ಬೇಡಪ್ಪಾ ಅವರಿಗೆ ಸರಿಯಾದ ಲೆಕ್ಕ ಇರತ್ತಂತೆ, ಇಲ್ದೆ ಇದ್ರೆ ಹಾಗೆ ಇದ್ದಕ್ಕಿದ್ದ ಹಾಗೇ ನನ್ನ ಒಬ್ಬನನ್ಬೇ ಬಿಟ್ಟು ಹೋಗ್ಬಿಡ್ತಾರಾ? ಮೊನ್ನೆ ರಾತ್ರೀನೇ ಮಾವ ಹೇಳಲಿಲ್ವ? ಎಷ್ಟು ಬುದ್ಧಿವಂತ ನೋಡು ಕಿಟ್ಟಿ, ಒಂದು ದಿನಕ್ಕೆ ಎಷ್ಟು ಚೆನ್ನಾಗಿ ವ್ಯಾಪಾರ ಮಾಡಿದ್ದಾನೆ ಅಂತ. ಹೇಗೋ ಅವರಿಗೆ ಗೊತ್ತಾಗುತ್ತೆ. ಚಿಲ್ಲರೆ ತಗೊಂಡರೆ ಗೊತ್ತಾಗುಲ್ಲ ಅನ್ನಿಸುತ್ತೆ.



ಅಂಗಡಿಯಿಂದ ಹೊರಗೆ ಬಂದು ನಿಂತ. ಮಧ್ಯಾಹ್ನ ಯಾರೂ ಕಾಣ್ತಾ ಇಲ್ಲ, ಅಂಗಡೀಗೂ ಯಾರೂ ಬಂದಿಲ್ಲ. ಮನೇಲಿ ಎಲ್ರೂ ಊಟ ಮಾಡಿ ಮಲಗಿದ್ದಾರೆ. ಚಿಲ್ಲರೆ ತಗೊಂಡು ಬಿಡ್ಲ? ಬೇಡ.. ಚಿಲ್ಲರೆ ಸದ್ದು ಮಾಡುತ್ತೆ. ಗೊತ್ತಾಗಿ ಹೋಗುತ್ತೆ. ನನ್ನನ್ನು ಪರೀಕ್ಷೆ ಮಾಡುಕ್ಕೇ ಕೂರಿಸಿದ್ದರೇ..? ನಾನು ಕಳ್ಳ ಅಂತ ತೀರ್ಮಾನಿಸಿ ಬಿಡ್ತಾರೇನೋ. ಆಮೇಲೆ ನಮ್ಮಪ್ಪ ಮನೆಗೆ ಸೇರಿಸೋದೇ ಇಲ್ಲ ಅಷ್ಟೇ. ಅಜ್ಜಿಗೆ ಮೊದಲೇ ಇವರನ್ನು ಕಂಡ್ರೆ ಅಷ್ಟಕಷ್ಟೇ. ಇನ್ನೂ.. ಥೂ ನಿಂಗೇನು ಬಂದಿತ್ತೋ? ಅವನ ಮನೇಲಿ ಮೂರ್ಕಾಸು ತೆಗೆದ್ಯಲ್ಲಾ ಅಂದು ಬಿಟ್ರೆ? ಸಣ್ಣ ಊರು. ಊರಲ್ಲಿ ಎಲ್ರಿಗೂ ಗೊತ್ತಾಗಿ ಬಿಟ್ರೆ? ಥತ್, ಕಿಟ್ಟಿಗೆ ತಲೆ ಹಣ್ಣಾಗಿ ಹೋಯ್ತು.



ಮೂತ್ರ ಮಾಡಬೇಕು ಅನ್ನಿಸಿತು. ಕಿಟ್ಟಿ ಬಚ್ಚಲ ಮನೆಗೆ ಹೋಗಿಬಂದ. ಅತ್ತೆ ಅಡಿಗೆ ಕೋಣೆಯಲ್ಲಿ ಏನೋ ಮಾಡುತ್ತಾ ಕೂತಿದ್ದರು. ನೀರು ಕುಡಿಯಲು ಒಳ ಹೋದವನು ಸುತ್ತಾ ಕಣ್ಣಾಡಿಸಿದ,  ಅತ್ತೆ ‘ಚಕ್ಕುಲಿ ತಿಂತಿಯೇನೋ? ಅಲ್ಲೇ ಆ ಮೂಲೇ ಡಬ್ಬದಲ್ಲಿದೆ. ನಿನ್ನೆ ಆ ರಂಗಣ್ಣನ ಮಗಳ ಮದುವೇಲಿ ಕೊಟ್ಟಿದ್ದು, ತಗೊಂಡು ತಿನ್ನು’ ಎಂದರು. ಚಕ್ಕುಲಿ ತಿನ್ನುವ ಉತ್ಸಾಹವೇ ಇಲ್ಲ. ಎಲ್ಲಿಯಾದರೂ ಹಣ ಕಂಡೀತೆಂಬ ಅಸೆಯಿಂದ ಸ್ಟಾಂಡಿನ ಹತ್ತಿರ ಹೋದ.

ಡಬ್ಬದ ಹತ್ತಿರ ಐವತ್ತು ರೂಪಾಯಿಯ ನೋಟು! ಕ್ಷಣ ಹೊತ್ತು ನೋಡುತ್ತಾ ನಿಂತ... ಅವರೇ ಈಗಷ್ಟೇ ಇಟ್ಟಿರಬೇಕು. ಅದೂ ಅಲ್ದೆ ಕಂಡಕ್ಟರ್‌ಗೆ ಐದು ರೂಪಾಯಿಗೆ ಐವತ್ತು ರೂಪಾಯಿ ನೋಟು ಕೊಟ್ರೆ ಅನುಮಾನ ಬರಲ್ವಾ? ಚಕ್ಕುಲಿನೂ ತೆಗೆದುಕೊಳ್ಳದೇ ಹೊರಬಂದು ಬಿಟ್ಟ. ಅತ್ತೆ ‘ಯಾಕೋ ಬೇಡ್ವೇನೋ?’ ಅಂದರು. ಉತ್ತರಿಸಲಿಲ್ಲ. ಕೇಳಿಸದಂತೆ ಇದ್ದುಬಿಟ್ಟ. ಟಿ.ವಿ., ರೇಡಿಯೋ ಸ್ಟಾಂಡ್, ಕಿಟಕಿ, ಟೇಬಲಿನ ಮೇಲೆ ಎಲ್ಲೂ ಹಣ ಕಾಣಿಸುತ್ತಿಲ್ಲ.



ಮಾವ ಮಧ್ಯಾಹ್ನ ಬಂದಾಗ ಯಥಾ ಪ್ರಕಾರ ಅಂಗಡಿಯಲ್ಲಿ ಕೂತಿದ್ದಕ್ಕಾಗಿ ಹೊಗಳಿದರು. ದುಡ್ಡು ನೋಡು ಎಷ್ಟು ಸರಿಯಾಗಿ ಲೆಕ್ಕ ಮಾಡಿಟ್ಟಿದೆ ಎಂದರು. ರಾಮಣ್ಣ ಬಾವ ‘ಊರು ಈಗ ಮರೆತು ಹೋಯ್ತೇನೋ, ಊರಿಗೆ ಹೋಗ್ತೀನಿ ಅಂತಾನೇ ಇಲ್ಲ ನೋಡು. ಒಗ್ಗಿ ಕೊಂಡುಬಿಡ್ತು’ ಅಂದ. ಕಿಟ್ಟಿಗೆ ಯಾರ ಮಾತೂ ಕೇಳಿಸುತ್ತಿಲ್ಲ. ಯಾರನ್ನು ಬಸ್‌ಚಾರ್ಜಿಗೆ ಐದು ರೂಪಾಯಿ ಕೊಡಿ ಅಂತ ಕೇಳೋದು? ಕೈಯಲಿದ್ದುದು ಬಿದ್ದು ಹೋಯ್ತು ಅಂತ ನಾಟಕ ಮಾಡಿದರೆ ಹೇಗೆ? ಎಂಬ ಆಲೋಚನೆ ಬಂತು. ಬಸ್ಸಿನಿಂದ ಇಳಿಸಿಬಿಟ್ರೇ ಅನಿಸಿತು.

ಬಸ್ಸಲ್ಲಿ ಯಾರಾದ್ರೂ ಪಾಪ ಸಣ್ಣ ಹುಡುಗ ಅಂತ ಟಿಕೇಟು ತೆಗೆದುಕೊಡಬಹುದೇನೋ ಅನ್ನಿಸಿತು. ಹೊರಟು ಬಿಡ್ಲಾ ಅಂದುಕೊಂಡ. ಹೊರಡುವಾಗ ಮಾವ ದುಡ್ಡು ಕೊಡಬಹುದೇನೋ. ಕೊಡದೇ ಹೋದರೇ? ಕಿಟ್ಟಿಗೆ ಯಾರು ಹೊಗಳೋದೂ ಕೇಳಿಸುತ್ತಿಲ್ಲ, ರಾಮ ಬಾವನ ವ್ಯಂಗ್ಯದ ಮಾತೂ ಅರ್ಥವಾಗುತ್ತಿಲ್ಲ. ಮಾವನ ಹೆಣ್ಣುಮಕ್ಕಳು ತಾತ್ಸಾರ ಮಾಡುತ್ತಿರುವುದೂ ಕಾಣುತ್ತಿಲ್ಲ. ಟಿಕೇಟಿಗೆ ಐದು ರೂಪಾಯಿ ಸಿಕ್ಕಿದ್ದರೆ ಸಾಕಿತ್ತು. ಅತ್ತಿಗೆಯಂದಿರ ವ್ಯಾನಿಟಿ ಬ್ಯಾಗು, ಪರ್ಸ್ ಯಾವುದೂ ಕಾಣುತ್ತಿಲ್ಲ.

ಅಳು ಬಂದು ಬಿಡ್ತು. ಥೂ ತಾನು ಕಳ್ಳಾನ? ಗೋವಿನ ಹಾಡು, ಮಹಾತ್ಮಾಗಾಂಧೀಜಿ, ಸತ್ಯಹರಿಶ್ಚಂದ್ರ ಪಾಠ, ಕಥೆಗಳೆಲ್ಲಾ ನೆನಪಾದವು. ಇವತ್ತು ಒಂದು ಸಲ ಆಗ್ಬಿಟ್ರೆ, ಇನ್ಯಾವತ್ತೂ ಕದಿಯಲ್ಲಪ್ಪ. ಊರಿಗೆ ಹೋಗ್ಬಿಟ್ಟು ಗಣೇಶನ ದೇವಸ್ಥಾನಕ್ಕೆ ತಪ್ಪು ಕಾಣಿಕೆ ಹಾಕ್ಬಿಡ್ತೀನಿ. ಅಪ್ಪ ಅಮ್ಮಂಗೂ ಹೇಳ್ತೀನಿ. ಯಾರೂ ಬೈಯಲ್ಲ. ‘ಕಿಟ್ಟಿ ಸ್ನಾನ ಮಾಡ್ತೀಯೇನೋ... ಬಚ್ಚಲಲ್ಲಿ ಯಾರೂ ಇಲ್ಲ’ ಅತ್ತೆ ಜೋರಾಗಿ ಕರೆದರು, ‘ಹ್ಞೂ ಮಾಡ್ತೀನಿ’ ಎಂದು ಟವೆಲ್ ತೆಗೆದುಕೊಂಡು ಬಚ್ಚಲ ಮನೆಗೆ ಹೋದ. ದೊಡ್ಡ ಹಂಡೆ ಭರ್ತಿ ಬಿಸಿನೀರು, ಖುಷಿಯಾಯಿತು. ಸೋಪಿನ ಸ್ಟಾಂಡಿನ ಮೇಲೆ, ಸೌದೆ ಒಟ್ಟಿರುವ ಮೂಲೆಯಲ್ಲಿ ಎಲ್ಲಾ ಕಡೆ ಐದು ರೂಪಾಯಿ ನೋಟು ಏನಾದರೂ ಬಿದ್ದಿರಬಹುದೇ ಎಂದು ನೋಡಿದ. ಊಹ್ಞೂ ಇಲ್ಲವೇ ಇಲ್ಲ.



ಸ್ನಾನ ಮುಗಿಸಿ ಟವೆಲ್ ಸುತ್ತಿಕೊಂಡು ರೂಮಿಗೆ ಚಡ್ಡಿ ಹಾಕಿಕೊಳ್ಳಲು ಬಂದ. ರೂಮಿನ ಬಾಗಿಲು ಭದ್ರ ಪಡಿಸಲು ಹೋದ. ಹಳೇ ಬಾಗಿಲು. ಸ್ವಲ್ಪ ಎತ್ತಿ ದೂಡಬೇಕು. ಇಲ್ಲದಿದ್ದರೆ ಹಾಕುವುದು ಕಷ್ಟ. ಬಾಗಿಲನ್ನು ಎತ್ತಿ ದೂಡುವಾಗ! ದೂಡುವಾಗ ಅದರ ಹಿಂದೆ ಒಂದು ಹಳೆಯದಾದ ಕಪ್ಪು ಬಣ್ಣದ ಬ್ಯಾಗು ನೇತಾಡುತ್ತಿರುವುದು ಕಂಡಿತು. ಯಾರದ್ದು ಇದು ಕಮಲತ್ತಿಗೆಯದೋ ಶಾರದತ್ತಿಗೆಯದೋ. ಮೆಲ್ಲನೆ ಜಿಪ್ ಎಳೆಯಲು ಕೈ ಹಾಕಿದ. ಅಲ್ಲಿಗೆ ನೇತುಹಾಕಿ ಎಷ್ಟು ದಿನವಾಗಿತ್ತೋ, ದೂಳು ಕೈಗೆ ಮೆತ್ತಿಕೊಂಡಿತು. ಜಿಪ್ಪೇ ಇಲ್ಲ  ಕಿತ್ತುಹೋಗಿದೆ.

ಒಳಗೆ ಕೈ ಹಾಕಿದರೆ  ಮುಗಿದುಹೋದ ಫೇರ್ ಅಂಡ್ ಲವ್ಲಿ ಕ್ರೀಂನ ಟ್ಯೂಬ್. ಒಂದು ಬಾಚಣಿಗೆ ಅಷ್ಟೆ. ಅದರೊಳಗಡೆ ಇನ್ನೊಂದು ಸಣ್ಣ ಪಾಕೆಟ್ ಇತ್ತು. ಅದರ ಜಿಪ್ ಗಟ್ಟಿಯಾಗಿತ್ತು. ಎಳೆದಾಗ ಅರ್ಧಬಾಯಿ ತೆರೆದು ತುಂಡಾಯಿತು. ಬೆರಳನ್ನೇ ಮೆಲ್ಲನೆ ಅದರೊಳಗೆ ತೂರಿದರೆ, ಏನೋ ಸಿಕ್ಕಿತು. ನೋಟಿರಬೇಕು. ಹೊರತೆಗೆದರೆ. ಯಾವುದೋ ಡಾಕ್ಟರು ಬರೆದುಕೊಟ್ಟ ಔಷಧಿ ಚೀಟಿ, ಹಣೆಗೆ ಇಡುವ ಸ್ಟಿಕ್ಕರ್, ಒಂದು ರಾಘವೇಂದ್ರ ಸ್ವಾಮಿಯ ಸಣ್ಣ ಫೋಟೊ, ಬ್ಯಾಗಿನ ಹಿಂಭಾಗ ಸಣ್ಣ ಜಿಪ್.

ಮೆಲ್ಲನೆ ಎಳೆದು, ಕೈ ಹಾಕಿದರೆ ಬೆರಳೆಲ್ಲಾ ಕೆಂಪಾಯಿತು. ಯಾವುದೋ ಪ್ರಸಾದದ ಕುಂಕುಮ ಇರಬೇಕು. ಕಟ್ಟು ಬಿಟ್ಟುಕೊಂಡು ಚೆಲ್ಲಿತ್ತು. ಮತ್ತೆಂತದೋ ಪೇಪರ್ ತುಂಡು, ನಾಲ್ಕು ಮಡಿಕೆ ಮಡಿಚಿಕೊಂಡು ಮೂಲೆಯಲ್ಲೂ ಅರ್ಧ ಮಡಿಚಿಕೊಂಡಿರುವ ಐದು ರೂಪಾಯಿಯ ಒಂದು ನೋಟು! ಕಿಟ್ಟಿಗೆ ಸಂತೋಷದಿಂದ ಕುಣಿಯುವಂತಾಯಿತು. ಮೆಲ್ಲಗೆ ತೆಗೆದುಕೊಂಡ. ಕೈಯೆಲ್ಲಾ ಕುಂಕುಮ. ತನ್ನ ಬನಿಯನ್ನಿಗೆ ಒರಸಿಕೊಂಡ.

ಮೆಲ್ಲನೆ ಬ್ಯಾಗನ್ನು ಯಥಾಸ್ಥಿತಿ ಇಟ್ಟ. ಇದು ಇಟ್ಟಿರೋದು ಅವರಿಗೆ ನೆನಪಿರಲ್ವಾ? ಕದಿಯೋದು ತಪ್ಪಲ್ವಾ? ಗಾಂಧಿ ಪಾಠ ನೆನಪಾಯಿತು. ಗಾಂಧೀಜಿಗೆ ಯಾವತ್ತೂ ಹೀಗೆ ಆಗಿರಲಿಲ್ವಾ. ಅವರಿಗಾಗಿದ್ದರೆ ಏನು ಮಾಡ್ತಾ ಇದ್ದರು ಅನ್ನಿಸಿತು. ಈ ಹೊತ್ತು ಹೆಚ್ಚು ಯೋಚಿಸುವುದು ಕಿಟ್ಟಿಗೆ ಬೇಕಾಗಿರಲಿಲ್ಲ. ಏನಾದರೂ ಆಗಲಿ ಊರಿಗೆ ಹೊರಟು ಬಿಡಬೇಕು. ರೂಮಿನಿಂದ ಹೊರಬಂದವನೇ ಉತ್ಸಾಹದಲ್ಲಿ ‘ಅತ್ತೇ ನಾನು ಇವತ್ತು ಊರಿಗೆ ಹೋಗ್ತೀನಿ’ ಎಂದ. ‘ಇನ್ನೆರಡು ದಿನ ಇರೋ ಅಂದ್ರು’ ಅವರು. ‘ಇಲ್ಲಪ್ಪ, ಸ್ಕೂಲಿದು ಹೋಂ ವರ್ಕ್ ಮಾಡ್ಕೋಬೇಕು’ ಎಂದ. ಶಾಮಬಾವ, ‘ಹೋಗ್ಲೇ ಬೇಕೇನೋ’ ಎಂದರು. ಹ್ಞೂ ಅಂದ. ಅಂತೂ ಸಾಯಂಕಾಲ ಐದು ಗಂಟೆ ಬಸ್ಸಿಗೆ ಹೋಗುವುದು ಎಂದಾಯಿತು.



ಊಟ ಮುಗಿಸಿ ನಿರಾಳವಾಗಿ ಮತ್ತೆ ಅಂಗಡಿಗೆ ಹೋಗಿ ಕುಳಿತ, ನಿನ್ನೆ ಮೊನ್ನೆಗಿಂತ ಹೆಚ್ಚು ವ್ಯಾಪಾರ ಆಯಿತು. ದುಡ್ಡು ನೋಡಿ ಏನೂ ಅನ್ನಿಸುತ್ತಿಲ್ಲ. ಹೊರಡುವಾಗ ಅತ್ತೆಯ ಕಾಲಿಗೆ ನಮಸ್ಕಾರ ಮಾಡಿದ. ಅವರು ಹಿತ್ತಲಿನ ಎರಡು ಸೀಬೆಹಣ್ಣು ಕೈಗೆ ಕೊಟ್ಟರು. ಚೆನ್ನಾಗಿ ಓದು ಒಳ್ಳೇದಾಗಲಿ ಎಂದರು. ಮಾವ ಕಾಣಲಿಲ್ಲ. ಅತ್ತೆ ‘ಎಲ್ಲೋ ಹೊರಗೆ ಹೋದ್ರೇನೋ. ನಾನು ಹೇಳ್ತೀನಿ ಬಿಡು’ ಎಂದರು. ಎಲ್ಲರಿಗೂ ಹೇಳಿಯಾಯ್ತು. ‘ನಮ್ಮ ಹುಡುಗನ್ನ ಸ್ವಲ್ಪ ಬಸ್ಸಿಗೆ ಹತ್ತಿಸಿ ಬಿಡಿ, ಊರಿಗೆ ಹೋಗ್ತಾ ಇದಾನೆ’ ಎಂದು ಶಾಮ ಬಾವ ಆ ಕಡೆ ಹೊರಟ ಯಾರಿಗೋ ಹೇಳಿ, ‘ಅಮ್ಮಾ ನಂಗೆ ಸ್ವಲ್ಪ ಕೆಲಸ ಇದೆ, ರಾತ್ರಿ ಬರ್ತೇನೆ’ ಎಂದು ಹೊರನಡೆದರು.



ಕಿಟ್ಟಿ ಬಸ್‌ಸ್ಟಾಂಡಿಗೆ ಹೊರಟ, ಜೊತೆಯಲ್ಲಿದ್ದವರು ತಮ್ಮ ಪಾಡಿಗೆ ನಡೆದರು. ಬಸ್ ಬಂತು. ಕಿಟಕಿ ಪಕ್ಕ ಕೂತುಕೊಂಡ. ನಿರಾಳವಾಗಿ ಉಸಿರುಬಿಟ್ಟ. ಕಿಟಕಿಯಿಂದ ತಲೆ ಹೊರಹಾಕಿದ. ಮಾವ ಯಾರ ಜೊತೆಯೋ ಮಾತಾಡುತ್ತಿರುವುದು ಕಾಣಿಸಿತು. ಯಾವಾಗ ಬಂದರೋ? ಕಂಡಕ್ಟರ್ ರೈಟ್ ರೈಟ್ ಎಂದು ಕೂಗಿ ವಿಷಲ್ ಹಾಕಿದ. ಮಾವ ಇವನತ್ತ ಧಾವಿಸಿ ಕಂಡಕ್ಟರ್ ಕೈಲಿ ದುಡ್ಡು ಕೊಟ್ಟಿದ್ದೇನೆ, ‘ಟಿಕೆಟ್ ಕೊಡ್ತಾರೆ ಇಸ್ಕೋ’ ಅಂದ್ರು.

ಕಂಡಕ್ಟರ್ ತಲೆ ಆಡಿಸಿದ. ಕಿಟ್ಟಿ ಕಣ್ಣುಬಿಟ್ಟುಕೊಂಡು ಸುಬ್ಬಣ್ಣಮಾವನ ಮುಖವನ್ನೇ ನೋಡತೊಡಗಿದ. ಕೈಯಲ್ಲಿದ್ದ ನೋಟು ನೋಡಿಕೊಂಡ. ದೇವರ ಕುಂಕುಮ ಪ್ರಸಾದ ಅಂಟಿಕೊಂಡಿತ್ತು. ಮೆಲ್ಲನೆ ಕೈಯನ್ನು ಕಿಟಕಿಯಿಂದ ಹೊರಹಾಕಿ ನೋಟು ಜಾರಿಸಿ ‘ಮಾವ, ದುಡ್ಡು ಕೆಳಗೆ ಬಿತ್ತು ತೆಗೊಳ್ಳಿ’ ಎಂದು ಕಿರುಚಿ ಹೇಳಿದ. ಬಸ್ಸು ಹೊರಟಿತು. ಕಿಟ್ಟಿಗೆ ಯಾಕೋ ಅಳು ಬಂದಿತು.

ಪ್ರತಿಕ್ರಿಯಿಸಿ (+)