ಸೋಮವಾರ, ಏಪ್ರಿಲ್ 12, 2021
24 °C

ಐದು ಸಾವಿರ ಕೋಟಿ ಅನುದಾನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐದು ಸಾವಿರ ಕೋಟಿ ಅನುದಾನಕ್ಕೆ ಒತ್ತಾಯ

ಬೆಂಗಳೂರು: `ಕೇಂದ್ರ ಸರ್ಕಾರದ `ನರ್ಮ್~ ಯೋಜನೆಯಿಂದ ರಾಜ್ಯದ ನಗರಾಭಿವೃದ್ಧಿಗೆ ಐದು ಸಾವಿರ ಕೋಟಿ ರೂಪಾಯಿ ಅನುದಾನ ನೀಡುವಂತೆ ಸಂಸತ್ತಿನ ಅಧಿವೇಶನದಲ್ಲಿ ಒತ್ತಾಯಿಸಲಿದ್ದೇವೆ~ ಎಂದು ಸಂಸದ ಅನಂತಕುಮಾರ್ ತಿಳಿಸಿದರು.ನಗರದಲ್ಲಿ ಸೋಮವಾರ ನಡೆದ ಕದಿರೇನಹಳ್ಳಿ ಅಂಡರ್‌ಪಾಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ನರ್ಮ್ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ದೊರೆಯುವ ಒಟ್ಟು 10 ಸಾವಿರ ಕೋಟಿ ರೂಪಾಯಿ ಹಣವನ್ನು ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ, ಕೆರೆಗಳ ಪುನಶ್ಚೇತನ ಮತ್ತು ಸಿಗ್ನಲ್ ಮುಕ್ತ ಕಾರಿಡಾರ್‌ಗಳ ನಿರ್ಮಾಣದಂತಹ ಪ್ರಮುಖ ಯೋಜನೆಗಳಿಗೆ ಬಳಸಬಹುದು. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ವ್ಯಯಿಸಲು ಸಿದ್ಧವಿದ್ದು, ಕೇಂದ್ರದ ನೆರವನ್ನು ಪಡೆಯಲು ಪ್ರಯತ್ನಿಸುತ್ತೇವೆ~ ಎಂದು ತಿಳಿಸಿದರು.`ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನೀರಿನ ಅಭಾವವನ್ನು ತಪ್ಪಿಸಲು ಹೇಮಾವತಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬಿಡುವುದರ ಜತೆಗೆ, ವೃಷಾಭವತಿ ಮತ್ತು ಅರ್ಕಾವತಿ ನದಿಗಳಿಗೂ ಹರಿಯಬಿಡುವ ಮೂಲಕ ಈ ನದಿಗಳ ಪುನಶ್ಚೇತನ ಕಾರ್ಯ ನಡೆಸಬೇಕು. ನರೇಂದ್ರ ಮೋದಿ ಗುಜರಾತ್‌ನಲ್ಲಿರುವ ಸಬರಮತಿ ನದಿಗೆ ನರ್ಮದಾ ನದಿಯ ನೀರನ್ನು ಹರಿಸುವ ಮೂಲಕ ಕ್ರಾಂತಿ ಮಾಡಿದ್ದಾರೆ. ಈ ಮಾದರಿಯನ್ನು ನಗರದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ~ ಎಂದು ಸಲಹೆ ನೀಡಿದರು.`ನಗರದಾದ್ಯಂತ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಹ ಕಾರ್ಯಪ್ರವೃತ್ತರಾಗಬೇಕು. ನಗರದಲ್ಲಿರುವ ಒಟ್ಟು 300 ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು~ ಎಂದು ಸಲಹೆ ಮಾಡಿದರು.ಮೇಯರ್ ಡಿ.ವೆಂಕಟೇಶಮೂರ್ತಿ, `ಕಳೆದ ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಕದಿರೇನಹಳ್ಳಿ ಅಂಡರ್‌ಪಾಸ್ ಉದ್ಘಾಟನೆ ಕೊನೆಗೂ ನಡೆದಿರುವುದಕ್ಕೆ ಹರ್ಷಿಸುತ್ತೇನೆ. ನಗರಾಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಂದಿನ ಎರಡು ವಾರಗಳಲ್ಲಿ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಹೊರಡಲಿರುವ ನಿಯೋಗವು ಪ್ರಧಾನಿಗೆ ಮನವಿ ಸಲ್ಲಿಸಲಿದೆ~ ಎಂದು ತಿಳಿಸಿದರು.ಉಪ ಮುಖ್ಯಮಂತ್ರಿ ಆರ್.ಅಶೋಕ, `ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಪ್ರಸಿದ್ಧಿ ಪಡೆದ ಗುತ್ತಿಗೆದಾರರನ್ನು ಪಾರದರ್ಶಕ ಕಾಯ್ದೆಯಡಿಯೇ ನಿಯೋಜಿಸುವ ಪದ್ದತಿಯನ್ನು ಜಾರಿಗೆ ತಂದರೆ ಆದಷ್ಟು ಕಾಮಗಾರಿ ವಿಳಂಬದಂತಹ ಸಮಸ್ಯೆಗಳು ಬಗೆಹರಿಯಲಿವೆ~ ಎಂದರು.`ಕಲ್ಲಿದ್ದಲು: ಶತಮಾನದ ದೊಡ್ಡ ಹಗರಣ~

 `ಪ್ರಧಾನಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಲ್ಲಿದ್ದಲು ಹಗರಣ ಈ ಶತಮಾನದ ದೊಡ್ಡ ಹಗರಣ~ ಎಂದು ಸಂಸದ ಅನಂತಕುಮಾರ್ ಎಂದು ಹೇಳಿದರು. ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಲ್ಲಿದ್ದಲು ಖಾತೆಯನ್ನೂ ಹೊಂದಿರುವ ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ 2 ಜಿ ಸ್ಪೆಕ್ಟ್ರಮ್ ಹಗರಣಕ್ಕಿಂತಲೂ ಬಹುದೊಡ್ಡದಾದ ಕಲ್ಲಿದ್ದಲ್ಲು ಹಗರಣ ನಡೆದಿದೆ.

 

ನೈತಿಕತೆಯನ್ನು ಗಮನದಲ್ಲಿಟ್ಟುಕೊಂಡು ಸಿಂಗ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಮಂಗಳವಾರ ನಡೆಯಲಿರುವ ಅಧಿವೇಶನದಲ್ಲಿ ಪಟ್ಟು ಹಿಡಿಯಲಿವೆ~ ಎಂದು ತಿಳಿಸಿದರು. ಪ್ರಧಾನಿ ಕಚೇರಿಯು ಕಲ್ಲಿದ್ದಲು ಗಣಿಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ದೇಶದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿದೆ. ಈ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು~ ಎಂದು ಅವರು ಆಗ್ರಹಿಸಿದರು.2008ರಲ್ಲಿ ಅಂಡರ್ ಪಾಸ್‌ಗೆ ಚಾಲನೆ

ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜಯನಗರ, ಜೆ.ಪಿ.ನಗರ ಭಾಗಗಳಿಗೆ ದಟ್ಟಣೆ ಮುಕ್ತ ಸಂಚಾರ ಸಾಧ್ಯವಾಗುವ ದೃಷ್ಟಿಯಿಂದ ಕದಿರೇನಹಳ್ಳಿ ಹೊರ ವರ್ತುಲ ರಸ್ತೆಯ ಸಮೀಪದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ 2008 ರ ಮಾರ್ಚ್‌ನಲ್ಲಿ ಬಿಬಿಎಂಪಿ ವತಿಯಿಂದ ಚಾಲನೆ ದೊರೆತಿತ್ತು. ಸುಮಾರು  28.72 ಕೋಟಿ ರೂ. ಅಂದಾಜು ವೆಚ್ಚದಲ್ಲಿ  356 ಮೀಟರ್ ಉದ್ದದ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಮಾಧವ ಹೈಟೆಕ್ -ಬ್ರಹ್ಮಪುತ್ರ ಕಂಪೆನಿಗೆ ವಹಿಸಿಕೊಡಲಾಗಿತ್ತು.

 

10 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ದಲಾಗಿತ್ತು. ಆದರೆ 4 ವರ್ಷಗಳೂ ಕಳೆದರೂ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ  ಕುಂಟುತ್ತಲೇ ಸಾಗಿದ್ದು, ಸೋಮವಾರ ಸಾರ್ವಜನಿಕರಿಗೆ ಸಂಚಾರ ಮುಕ್ತವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.