ಸೋಮವಾರ, ಜೂನ್ 21, 2021
29 °C
1998, 99, 2004ರ ಕೆಪಿಎಸ್‌ಸಿ ನೇಮಕಾತಿ

ಐವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ 1998ರಲ್ಲಿ ನಡೆದ ನೇಮಕಾತಿಗೆ ಸಂಬಂಧಿಸಿದಂತೆ, ಮಾಡರೇಷನ್‌ ಪ್ರಕ್ರಿಯೆಯನ್ನು ಹೈಕೋರ್ಟ್‌ ಆದೇಶದ ಅನುಸಾರ ನಡೆಸದ ಐವರು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಬಾರದು ಎಂದು ಹೈಕೋರ್ಟ್‌ ಕೇಳಿದೆ.‘1998ರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 2012ರಲ್ಲಿ ಈ ನ್ಯಾಯಾಲಯ ನೀಡಿದ ಆದೇಶದ ಅನುಸಾರ ಮಾಡರೇಷನ್‌ ಕಾರ್ಯ ನಡೆಸದ ಐವರು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಬಾರದು ಎಂದು ಕಾರಣ ಕೇಳಿ ಅವರಿಗೆ ನೋಟಿಸ್‌ ಜಾರಿಗೊಳಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯ­ಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಹೈಕೋರ್ಟ್‌ನ ರಿಜಿಸ್ಟ್ರಿಗೆ ಶುಕ್ರವಾರ ಸೂಚಿಸಿದೆ.ಐವರು ಅಧಿಕಾರಿಗಳು ಏಪ್ರಿಲ್‌ 11ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಬೇಕು ಎಂದೂ ಪೀಠ ಹೇಳಿದೆ. 1998, 99 ಮತ್ತು 2004ರಲ್ಲಿ ನಡೆದ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿ ಖಲೀಲ್‌ ಅಹಮದ್‌ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.ಮೂವರು ಅಭ್ಯರ್ಥಿಗಳು: 1998ರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶದ ಅನುಸಾರ ಮಾಡರೇಷನ್‌ ಪ್ರಕ್ರಿಯೆ ಪುನಃ ನಡೆಸಲಾಗಿದೆ. ಎಂಟು ಉತ್ತರ ಪತ್ರಿಕೆಗಳನ್ನು ಮೂರನೆಯ ಮೌಲ್ಯ­ಮಾಪನಕ್ಕೆ ಒಳಪಡಿಸಲಾಗಿದೆ. ನಂತರ ಸಂದರ್ಶನಕ್ಕೆ ಕರೆಯಬೇಕಿದ್ದ ಅಭ್ಯರ್ಥಿ­ಗಳ ಹೊಸ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಕೆಪಿಎಸ್‌ಸಿ ನ್ಯಾಯಪೀಠಕ್ಕೆ ಈಗಾಗಲೇ ಹೇಳಿಕೆ ಸಲ್ಲಿಸಿದೆ.ಹೊಸ ಪಟ್ಟಿ ಮತ್ತು ಹಳೆ ಪಟ್ಟಿಯನ್ನು ಹೋಲಿಕೆ ಮಾಡಿದಾಗ, ಸಂದರ್ಶನಕ್ಕೆ ಸಿದ್ಧಪಡಿಸಿದ ಹಳೆ ಪಟ್ಟಿಯಲ್ಲಿದ್ದ 94 ಅಭ್ಯರ್ಥಿಗಳ ಹೆಸರನ್ನು ಕೈಬಿಡಬೇಕಿತ್ತು, ಹಳೆ ಸಂದರ್ಶನ ಪಟ್ಟಿಯಲ್ಲಿಲ್ಲದ 94 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಾಗುತ್ತಾರೆ. ಕೈಬಿಡಬೇಕಿದ್ದ 94 ಅಭ್ಯರ್ಥಿಗಳಲ್ಲಿ ಮೂವರು ಮಾತ್ರ (ಆರ್‌. ತೇಜೋಮೂರ್ತಿ, ಕೆ. ಮಾಯಣ್ಣ ಗೌಡ ಮತ್ತು ಕೆ. ನರಸಿಂಹಮೂರ್ತಿ) ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ಆಯೋಗ ಹೇಳಿದೆ.ಈ ಮೂವರ ವಿರುದ್ಧ ಯಾವ ಕ್ರಮ ಜರುಗಿಸಬಹುದು ಎಂಬ ಬಗ್ಗೆ ಪರಿಶೀಲಿಸಿ, ಹೇಳಿಕೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಚ್‌. ಕಾಂತರಾಜ ಅವರು ತಿಳಿಸಿದರು. ವಿಚಾರಣೆಯನ್ನು ಮಾ. 26ಕ್ಕೆ ಮುಂದೂಡಲಾಗಿದೆ. ಹೊಸದಾಗಿ ಸಂದರ್ಶನಕ್ಕೆ ಕರೆಯಬೇಕಿರುವ 94 ಅಭ್ಯರ್ಥಿಗಳ ವಿಳಾಸ ಪತ್ತೆ ಮಾಡಬೇಕು. ಸಂದರ್ಶನ ಕುರಿತು ಅವರಿಗೆ ಮಾಹಿತಿ ನೀಡಬೇಕು.  ಅವರ ಸಂದರ್ಶನ ನಡೆಸಿ, ಅಂತಿಮ ಆಯ್ಕೆ ಪಟ್ಟಿಯನ್ನು ಬದಲಾಯಿಸಬೇಕೇ ಎಂಬುದನ್ನು ಪರಿಶೀಲಿಸಬೇಕು. ಅಂತಿಮ ಪಟ್ಟಿ ಬದಲಾಯಿಸಬೇಕು ಎಂಬುದಾ­ದರೆ, ಇದರಿಂದ ಬಾಧಿತರಾಗುವ ಅಧಿಕಾರಿಗಳ ವಾದ ಆಲಿಸಬೇಕು. ಇದಕ್ಕೆ ಆರು ವಾರಗಳ ಕಾಲಾವಕಾಶ ಬೇಕು ಎಂದು ಕೆಪಿಎಸ್‌ಸಿ ಪರ ಹಿರಿಯ ವಕೀಲ ಪಿ.ಎಸ್‌. ರಾಜಗೋಪಾಲ್‌ ಪೀಠಕ್ಕೆ ತಿಳಿಸಿದರು.

ಐವರು ಅಧಿಕಾರಿಗಳು ಯಾರು?

ಬಿ.ಎಸ್‌. ರಾಮಪ್ರಸಾದ್‌ (ಕೆಪಿಎಸ್‌ಸಿಯ ಹಿಂದಿನ ಕಾರ್ಯದರ್ಶಿ, ಈಗ ರಾಜ್ಯಪಾಲರ ಕಾರ್ಯದರ್ಶಿ), ಬಿ.ಎ. ಹರೀಶ್‌ ಗೌಡ (ನಿವೃತ್ತ ಐಎಎಸ್‌ ಅಧಿಕಾರಿ), ಶೋಭಾ ಬಸವರಾಜ್‌ (ಕೆಪಿಎಸ್‌ಸಿ ತಾಂತ್ರಿಕ ಸಿಬ್ಬಂದಿ), ಎಸ್‌. ಅರುಣಾಚಲಂ (ನಿವೃತ್ತ ಸೆಕ್ಷನ್‌ ಅಧಿಕಾರಿ), ಐ.ಬಿ. ನಿರ್ವಾಣಿ (ಎರಡನೆಯ ಉಪ ಕಾರ್ಯದರ್ಶಿ)

ಕೆಪಿಎಸ್‌ಸಿ 2011: ಅಂತಿಮ ಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ 2011ನೇ ಸಾಲಿನ 362 ಗೆಜೆಟೆಡ್‌ ಅಧಿಕಾರಿಗಳ ನೇಮಕಾತಿ ಅಂತಿಮ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಈ ತಿಂಗಳ 5ರಂದು ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ ಆಯೋಗ ಆಕ್ಷೇಪಗಳನ್ನು ಆಹ್ವಾನಿಸಿತ್ತು. ಸಾಕಷ್ಟು ಮಂದಿ ಆಕ್ಷೇಪ ಸಲ್ಲಿಸಿದ್ದರು. ತಾತ್ಕಾಲಿಕ ಪಟ್ಟಿಯಲ್ಲಿ ಯಾವುದೇ ಬದಲಾವನೆ ಇಲ್ಲದೆ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ನೇಮಕಾತಿ ಬಗ್ಗೆ 21 ದೂರುಗಳ ವಿಚಾರಣೆ ನಡೆಯುತ್ತಿದೆ. ಅಲ್ಲದೆ ಹೈಕೋರ್ಟ್ ನಲ್ಲಿಯೂ ಒಂದು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಅಂತಿಮ ಪಟ್ಟಿ ನ್ಯಾಯಾಲಯಗಳು ನೀಡುವ ಆದೇಶಕ್ಕೆ ಬದ್ಧವಾಗಿದೆ ಎಂದು ಆಯೋಗದ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ತಿಳಿಸಿದ್ದಾರೆ.ನೋಂದಣಿ ಸಂಖ್ಯೆ 12500ರ ಅಭ್ಯರ್ಥಿಯ ಹೆಸರು ಅಂತಿಮ ಪಟ್ಟಿಯಲ್ಲಿ ಇದ್ದರೂ ಈ ಅಭ್ಯರ್ಥಿ ಬಗ್ಗೆ ಆಯೋಗ ಮುಂದೆ ಕೈಗೊಳ್ಳಬಹುದಾದ  ತೀರ್ಮಾನಕ್ಕೆ ಬದ್ಧವಾಗಿದೆ ಎಂದೂ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.