ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ

ತುಮಕೂರು: ‘ಝಗಮಗಿಸುವ ನಗರ’ದ ಕನಸಿಗೆ ಪ್ರೇರೇಪಿಸುತ್ತಿರುವ ಮಹಾನಗರ ಪಾಲಿಕೆ, ಉಳ್ಳವರು ಮತ್ತು ಇಲ್ಲದವರ ನಡುವೆ ಅಭಿವೃದ್ಧಿಯ ಹೆಸರಿನಲ್ಲಿ ಬಿತ್ತುತ್ತಿರುವ ತಾರತಮ್ಯ ನೋಡಬೇಕಾದರೆ ಪಾಲಿಕೆಯ 6ನೇ ವಾರ್ಡ್ ನ ದಿಬ್ಬೂರು ಜನತಾ ಕಾಲೊನಿಯಲ್ಲಿ ಸುತ್ತಾಡಿ ಬರಬೇಕು.
ದಿಬ್ಬೂರು ಮತ್ತು ದಿಬ್ಬೂರು ಕಾಲೊನಿ ಒಂದಕ್ಕೊಂದು ಹೊಂದಿಕೊಂಡತೆ ಇದ್ದರೂ ಅಭಿವೃದ್ಧಿಯ ವಿಷಯದಲ್ಲಿ ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ. ಅಲ್ಲದೆ ನಗರ ಹೊರ ವಲಯದಲ್ಲಿರುವ ಈ ಬಡಾವಣೆಗೂ ಮತ್ತು ನಗರಕ್ಕೂ ಅಭಿವೃದ್ಧಿ ವಿಚಾರದಲ್ಲಿ ದೊಡ್ಡ ಕಂದರವೇ ಇದೆ.
ದಿಬ್ಬೂರು ಜನರು, ದಿಬ್ಬೂರು ಕಾಲೊನಿ ಜನರನ್ನು ಕಾಣಬೇಕಾದರೆ ಮೂರೂವರೆ ಕಿಲೋ ಮೀಟರ್ ಸುತ್ತಬೇಕು. ದಿಬ್ಬೂರು ಕಾಲೊನಿ ಜನರು ಪಡಿತರಕ್ಕಾಗಿ ಮೂರೂವರೆ ಕಿಲೋ ಮೀಟರ್ ಸುತ್ತಿ ದಿಬ್ಬೂರಿಗೆ ತಲುಪಬೇಕು. ಹತ್ತಿರದ ದಾರಿ ಹುಡುಕಬೇಕೆಂದರೆ ತೋಟ ಸಾಲುಗಳ ನಡುವಿನ ಕಾಲುದಾರಿಯನ್ನು ಆಶ್ರಯಿಸಬೇಕು.
ಮೂರು ಕಿಲೋ ಮೀಟರ್ ನಡೆದು ಪಡಿತರ ಪಡೆಯುವ ಕಷ್ಟಕ್ಕಿಂತಲೂ ಬಡಾವಣೆಯ ದಾರಿಗಳನ್ನು ಸರಿಮಾಡಿದರೆ ಸಾಕು ಸ್ವಾಮಿ ಎನ್ನುವರು ಇಲ್ಲಿನ ಜನರು.
ಎರಡು ಹೋಳುಗಳಾಗಿ ವಿಭಾಗವಾಗಿರುವ 6ನೇ ವಾರ್ಡ್ ಗೆ ದಿಬ್ಬೂರು, ದಿಬ್ಬೂರು ಜನತಾ ಕಾಲೊನಿ ಸೇರುತ್ತವೆ. ದಿಬ್ಬೂರಿನಲ್ಲಿ ಅಷ್ಟಿಷ್ಟು ಅಭಿವೃದ್ಧಿ ಕೆಲಸಗಳು ಕಾಣುತ್ತದೆ.
ಆದರೆ ಪರಿಶಿಷ್ಟರು, ಬಡವರು ವಾಸಿಸುವ ದಿಬ್ಬೂರು ಕಾಲೊನಿ ಜನರಿಗೆ ಕುಡಿಯಲು ಶುದ್ಧ ನೀರು ಸಹ ಇಲ್ಲವಾಗಿದೆ! ಕಾಲೊನಿಯಲ್ಲಿ 250 ಮನೆಗಳಿವೆ. ಬಡವರು, ಪರಿಶಿಷ್ಟರು ಹೆಚ್ಚಿರುವ ಕಾರಣದಿಂದಲೇ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂಬ ಆರೋಪ ಇಲ್ಲಿನ ಬಹುತೇಕ ಜನರದು.
ಕಾಲೊನಿಗೆ ಸರಿಯಾದ ಮುಖ್ಯ ರಸ್ತೆಯೇ ಇಲ್ಲ. ಕಿರಿದಾಗಿರುವ ಮಣ್ಣಿನ ರಸ್ತೆ ಮಳೆಗಾಲದಲ್ಲಿ ನಾನಾ ಚಿತ್ತಾರಗಳನ್ನು ಬಿಡಿಸಿಕೊಂಡು ನಿಂತಿದೆ. ಪಾದಚಾರಿಗಳು, ವಾಹನ ಸವಾರರು ರಸ್ತೆಯಲ್ಲಿ ಸಾಗಬೇಕಾದರೆ ಸರ್ಕಸ್ ಮಾಡಿದಂತೆ.
ಈ ಕಚ್ಚಾ ರಸ್ತೆಯಲ್ಲಿ ಕೆಲವರು ಬಿದ್ದು ಬಟ್ಟೆಗಳನ್ನು ಕೆಸರು ಮಾಡಿಕೊಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಮುಂದೆ ಸಾಗಿರುವ ಉದಾಹರಣೆಗಳು ಸಾಕಷ್ಟಿವೆ.
ಮೈದಾನವೂ ಕೆಸರು: ಶಾಲಾ ಮೈದಾನವೂ ಕೆಸರುಮಯವಾಗಿದೆ. ಮಳೆ ನೀರು ನಿಂತು ಮಲಿನವಾಗಿದೆ. ಮಕ್ಕಳು ಆಟ ಆಡುವುದು ಇರಲೀ, ಕಾಲು ಕೆಸರು ಆಗದಂತೆ ಶಾಲೆ ಒಳಗೆ ನಡೆದು ಹೋಗುವುದೇ ಕಷ್ಟ.
ಶಾಲೆಗೆ ತಾಗಿಕೊಂಡಂತೆ ಇರುವ ಅಂಗನವಾಡಿ ಮಕ್ಕಳ ಪಾಡು ಹೇಳ ತೀರದು. ಕೆಸರು ತುಳಿದೇ ಈ ಕಂದಮ್ಮಗಳು ಅಂಗನವಾಡಿ ಹೊಸ್ತಿಲು ತುಳಿಯುತ್ತವೆ. ಬಟ್ಟೆಗಳು ಗಲೀಜು ಮಯ. ರಸ್ತೆ ಅವ್ಯವಸ್ಥೆ ಇಲ್ಲಿ ಮತ್ತೊಂದು ತಾಪತ್ರಯವನ್ನು ತಂದೊಡ್ಡಿದೆ.
ರಸ್ತೆ ಅವ್ಯವಸ್ಥೆಯಿಂದ ಬಡಾವಣೆಯಲ್ಲಿ ನಿತ್ಯ ತ್ಯಾಜ್ಯಸಂಗ್ರಹ ಕೂಡ ನಿಂತು ಹೋಗಿದೆ. ಯಾವ ರಸ್ತೆ ನೋಡಿದರೂ ತಾಜ್ಯದ ಗುಡ್ಡೆ ಕಾಣುತ್ತದೆ.
‘ಚರಂಡಿ ಕಟ್ಟಿಕೊಂಡು ದುರ್ನಾತ ಬೀರುತ್ತಿವೆ.
ಪೌರ ಕಾರ್ಮಿಕರು ಚರಂಡಿ ಕಸ ತೆಗೆದು ಅಲ್ಲಲ್ಲೇ ಗುಡ್ಡಿ ಹಾಕುವರು. ನಮಗೆ ಮನುಷ್ಯರು ಬದುಕುವಂಥ ವಾತಾವರಣ ನಿರ್ಮಿಸಿಕೊಡಿ’ ಎನ್ನುವರು ಬಡಾವಣೆಯ ಡಿವೈಎಫ್ಐ ಮುಖಂಡ ಮಂಜುನಾಥ್.
‘ಕಸ ಎತ್ತದ ಕಾರಣ ಸೊಳ್ಳೆಗಳ ಕಾಟ ಹೆಚ್ಚಿದೆ. ಸಂಜೆ 5ರ ನಂತರ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ. ಆಶಾ ಕಾರ್ಯಕರ್ತೆಯರು ಗುರುತಿಸಿರುವಂತೆ ಬಡಾವಣೆಯಲ್ಲಿ 42 ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ. ಇವರಲ್ಲಿ ಡೆಂಗಿ, ಚಿಕೂನ್್ ಗುನ್ಯಾದಿಂದ ಬಳಲುವ ಮಕ್ಕಳು ಇದ್ದಾರೆ’ ಎಂದು ಹೇಳಿದರು.
ಕಾಲೊನಿಯ ಸಾಕಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವೇ ಇಲ್ಲ. ಟ್ಯಾಂಕ್ ನಿಂದ ನೀರು ಹಿಡಿಯಬೇಕು. ಇರುವುದೊಂದೇ ಕೊಳವೆಬಾವಿ. ತಿಂಗಳಿಗೆ ಒಂದು ಸಲವಾದರೂ ಮೋಟರ್ ಪಂಪ್ ಕೆಡುತ್ತದೆ. ನೀರಿಗಾಗಿ ತೋಟದ ಸಾಲುಗಳಿಗೆ ಅಲೆಯಬೇಕು. ಯುಜಿಡಿ ಕಾಮಗಾರಿ ಕಾರಣ ಪೈಪ್ಗಳು ಒಡೆದಿವೆ. ಟ್ಯಾಂಕ್ ನೀರು ಬಣ್ಣದಿಂದ ಕೂಡಿದೆ ಎನ್ನುವರು ಇಲ್ಲಿನ ಮಹಿಳೆಯರು.
‘ಜನರ ಹೋರಾಟದ ಕಾರಣದಿಂದ ಮತ್ತೊಂದು ಕೊಳವೆಬಾವಿ ಕೊರೆಸಲಾಗಿದೆ. ಮೂರು ತಿಂಗಳಾದರೂ ಅದಕ್ಕೆ ಮೋಟರ್, ಪಂಪ್ ಬಿಟ್ಟಿಲ್ಲ’ ಎಂದು ಸಮಸ್ಯೆಗಳನ್ನು ಬಿಡಿಸಿಡುವರು ಸ್ಥಳೀಯ ನಿವಾಸಿ ಹಾಗೂ ಸಿಪಿಎಂ ನಗರ ಘಟಕ ಅಧ್ಯಕ್ಷ ಎಸ್.ರಾಘವೇಂದ್ರ.
‘ಸಮೀಪದ ಭೀಮಸಂದ್ರ ಕೆರೆಯಲ್ಲಿ ಒಳಚರಂಡಿ ನೀರು ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಲ್ಲ. ಕುಡಿಯಲು ಹೇಮಾವತಿ ನೀರನ್ನು ಕೊಡಬೇಕು’ ಎಂದು ಆಗ್ರಹಿಸಿದರು.
ಕೆಲವು ಕಡೆಗಳಲ್ಲಿ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೆಲವು ಕಡೆ ಪೈಪ್ಲೈನ್ ಪೂರ್ಣವಾಗಿದ್ದರೆ ಕೆಲವು ಕಡೆ ಆಗಿಲ್ಲ. ಕೆಲವು ಕಡೆ ಕಾಮಗಾರಿಯೇ ನಿಂತಿದೆ.
ದಿಬ್ಬೂರು ಮುಖ್ಯ ರಸ್ತೆಯಿಂದ ಜನತಾ ಕಾಲೊನಿಗೆ ರಸ್ತೆ ಸಂಪರ್ಕವೇ ಇಲ್ಲ. ಇಲ್ಲಿಗೆ ಸಂಪರ್ಕ ಕಲ್ಪಿಸುವ ಕಾಲುದಾರಿಯನ್ನು ರಸ್ತೆಯಾಗಿ ವಿಸ್ತರಿಸಿದರೆ ದಿಬ್ಬೂರಿನ ಪಡಿತರ ಅಂಗಡಿಗೆ ಸುಲಭವಾಗಿ ತಲುಪಬಹುದು ಎಂಬುದು ಇಲ್ಲಿನ ಮಹಿಳೆಯರ ಆಶಾವಾದ.
ಬಿ.ಎಚ್.ರಸ್ತೆಯ ಸಾಯಿ ಗಾರ್ಮೆಂಟ್ ಪಕ್ಕದಿಂದ ಕಾಲೊನಿಗೆ ರಸ್ತೆ ಸಂಪರ್ಕ ಇದೆ. ಇಲ್ಲಿಂದ ಸುತ್ತಿಬಳಸಿ ದಿಬ್ಬೂರಿಗೆ ಬರಬೇಕಾದರೆ ಮೂರು ಕಿಲೋ ಮೀಟರ್ ಆಗಲಿದೆ. ಒಂದೇ ವಾರ್ಡ್ನಲ್ಲಿ ಪರಸ್ಪರ ಸಂಪರ್ಕ ಇಲ್ಲದೇ ಬದುಕಬೇಕಾಗಿದೆ’ ಎನ್ನುವ ಮಹಿಳೆಯ ಮಾತುಗಳಲ್ಲಿ ಅಭಿವೃದ್ಧಿಯ ತಾರತಮ್ಯ ಇಣುಕುತ್ತದೆ.
*
ವಾರ್ಡ್ ಸದಸ್ಯ ಪ್ರೆಸ್ ರಾಜಣ್ಣ ಆಗಾಗ ಭೇಟಿ ನೀಡುತ್ತಾರೆ. ಸಮಸ್ಯೆ ಬಗೆಹರಿಸಿ ಎಂದು ಕೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ.
-ಮಂಜುನಾಥ್,
ಬಡಾವಣೆ ವಾಸಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.