ಮಂಗಳವಾರ, ಜನವರಿ 28, 2020
24 °C

ಒಡೆಯರ್‌ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯವ್ಯಕ್ತಿಗಳು ಆಸ್ಪತ್ರೆಗೆ ಧಾವಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಯದುಕುಲದ ಕೊನೆಯ ಕುಡಿಯ ನಿಧನಕ್ಕೆ ಗಣ್ಯರು ಕಂಬನಿ ಮಿಡಿದರು.ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರು ಒಡೆಯರ್‌ ಪತ್ನಿ ಪ್ರಮೋದಾದೇವಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸಚಿವರಾದ ಕೆ.ಜೆ.ಜಾರ್ಜ್‌ ಮತ್ತು ಯು.ಟಿ.ಖಾದರ್‌ ಅವರು ಆಸ್ಪತ್ರೆಯಲ್ಲಿದ್ದು, ಪಾರ್ಥಿವ ಶರೀರ ಕೊಂಡೊಯ್ಯಲು ಪೂರ್ವ ತಯಾರಿಯ ವ್ಯವಸ್ಥೆ ಮಾಡಿಸಿದರು.ಕೇಂದ್ರದ ಮಾಜಿ ಸಚಿವ ಎಸ್‌.ಎಂ.ಕೃಷ್ಣ, ‘ಒಡೆಯರ್‌ ಸಾವಿನಿಂದ ನಾಡಿನಲ್ಲಿ ಶೂನ್ಯ ತುಂಬಿದಂತಾಗಿದೆ. ನಾಡಿಗೆ ಮೈಸೂರು ಒಡೆಯರ ಕೊಡುಗೆ ಅಪಾರ. ಆರ್ಥಿಕ ಸಂಕಷ್ಟದ ಸಂದರ್ಭದಲ್ಲೂ ಅರಮನೆಯ ಚಿನ್ನಾಭರಣ ಅಡವಿಟ್ಟು ಕೃಷ್ಣರಾಜ ಸಾಗರ ಅಣೆಕಟ್ಟೆ ಕಟ್ಟಿಸಿದವರು ಮೈಸೂರು ಅರಸರು. ಅವರ ಕೊಡುಗೆಯ ಫಲವಾಗಿ ಇಂದು ಮಂಡ್ಯ ಜಿಲ್ಲೆ ಕಬ್ಬು, ಭತ್ತದಿಂದ ಸಮೃದ್ಧವಾಗಿದೆ’ ಎಂದು ಹೇಳಿದರು.ವಸತಿ ಸಚಿವ ಅಂಬರೀಶ್‌, ‘ನನ್ನಜ್ಜ ಪಿಟೀಲು ಚೌಡಯ್ಯ ಅರಮನೆಯ ವಿದ್ವಾಂಸರಾಗಿದ್ದ ದಿನದಿಂದ ನನಗೆ ಅರಮನೆಯೊಂದಿಗೆ ನಂಟಿದೆ. ಹಿಂದೆ ಜಯಚಾಮರಾಜ ಒಡೆಯರ್‌ ಜತೆಗೆ ಶ್ರೀಕಂಠದತ್ತರು ಅಂಬಾರಿಯಲ್ಲಿ ಹೋಗು­ವುದನ್ನು ನೋಡಲು ಸಂತೋಷವಾಗುತ್ತಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಾಗ ತಮ್ಮ ಪ್ರಭುತ್ವವನ್ನೇ ಬಿಟ್ಟುಕೊಟ್ಟ ಮೈಸೂರರಸರ ಕೊನೆಯ ಕುಡಿಯನ್ನು ನಾಡು ಕಳೆದುಕೊಂಡಿದೆ’ ಎಂದರು.ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ‘ಆಸ್ತಿ ಒಡೆತನಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಒಡೆಯರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದೆ. ರಾಜವಂಶಸ್ಥರ ಆಸ್ತಿ ವಿಚಾರದಲ್ಲಿ ಸರ್ಕಾರ ಹಿಂದಿನಿಂದಲೂ ಅಮಾನವೀಯವಾಗಿ ನಡೆದುಕೊಂಡಿದೆ. ಇನ್ನು ಮುಂದಾದರೂ ಅವರ ಕುಟುಂಬಕ್ಕೆ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಎಂ.ವಿ.­ರಾಜಶೇಖರನ್‌, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.­ಶಂಕರಮೂರ್ತಿ, ಕೆಎಸ್‌ಸಿಎ ಮಾಜಿ ಅಧ್ಯಕ್ಷ ಅನಿಲ್‌ ಕುಂಬ್ಳೆ, ರಾಜ್ಯಪೊಲೀಸ್‌ ಮಹಾನಿರ್ದೇಶಕ ಲಾಲ್‌ರೋಕುಮಾ ಪಚಾವೊ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಒಡೆಯರ್‌ ಅವರಿಗೆ ಅಂತಿಮ ನಮನ ಸಲ್ಲಿಸಿದರು.ಶ್ರದ್ಧಾಂಜಲಿ:   ಒಡೆಯರ್‌ ನಿಧನಕ್ಕೆ ಸಂತಾಪ ಸೂಚಿಸಿ ಚಾಮರಾಜಪೇಟೆಯ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ‘ಕೃಷ್ಣರಾಜ ಒಡೆಯರ್‌ ಅವರು ಸಂಸ್ಥೆಗೆ ಜಾಗ ನೀಡಿದ್ದರು. ಸಂಸ್ಥೆಯ ಹುಟ್ಟು ಹಾಗೂ ಬೆಳವಣಿಗೆಯಲ್ಲಿ ಮೈಸೂರು ಒಡೆಯರ ಕೊಡುಗೆ ಅಪಾರ. ಒಡೆಯರ್‌ ಗೌರವಾರ್ಥ ಮಂಗಳವಾರ ಸಂಸ್ಥೆಯ ಸಿಬ್ಬಂದಿಗೆ ರಜೆ ನೀಡಲಾಯಿತು’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ರವೀಂದ್ರ ಲಕ್ಕಪ್ಪ ಹೇಳಿದರು.ತಪ್ಪದೇ ಬರುತ್ತಿದ್ದ ಆಮಂತ್ರಣ

‘ಅರಮನೆಯಲ್ಲಿ ಯಾವುದೇ ಕಾರ್ಯ­ಕ್ರಮ ನಡೆದರೂ ಅದರ ಆಮಂತ್ರಣ ಮನೆಗೆ ಬರುತ್ತಿತ್ತು. ಇದಲ್ಲದೆ ಸಮಾರಂಭಗಳಿಗೆ ಅರ­ಮನೆಯ ಉಡುಗೊರೆ ಬರುವುದು ಸಾಮಾನ್ಯವಾಗಿತ್ತು. ಶ್ರೀಕಂಠದತ್ತ ಆಡಿ ಬೆಳೆದಿದ್ದು, ದೊಡ್ಡವನಾಗಿ ಸಿಂಹಾ­ಸನದ ಮೇಲೆ ಕುಳಿತ ದೃಶ್ಯಗಳೆಲ್ಲವೂ ಕಣ್ಣಿಗೆ ಕಟ್ಟಿದಂತಿದೆ’

–ತ್ರಿಪುರಸುಂದರಮ್ಮಣ್ಣಿ ಪ್ರಮೋದಾದೇವಿ ಅವರ ಚಿಕ್ಕಮ್ಮ

 

ಪ್ರತಿಕ್ರಿಯಿಸಿ (+)