ಗುರುವಾರ , ಮೇ 13, 2021
17 °C

ಒತ್ತಡದ ವಹಿವಾಟು ನಿರೀಕ್ಷೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಹೊಸ ಹಣಕಾಸು ವರ್ಷದ ಮೊದಲ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ತೀವ್ರ ಏರಿಳಿತ ಕಾಣುವ ನಿರೀಕ್ಷೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲದ ಬೆಲೆ, ಡಾಲರ್ ಎದುರು ರೂಪಾಯಿ ಅಪಮೌಲ್ಯ ಇತ್ಯಾದಿ ಬೆಳವಣಿಗೆಗಳ ಜತೆಗೆ `ಸೆಬಿ~ಯಲ್ಲಿ ನೋಂದಾಯಿಸಿಕೊಳ್ಳದೆ ಪಾರ್ಟಿಸಿಪೇಟರಿ ನೋಟ್ಸ್ ಮೂಲಕ ವಹಿವಾಟು ನಡೆಸುವ ವಿದೇಶಿ ಸಂಸ್ಥೆಗಳ ಮೇಲೆ ತೆರಿಗೆ ವಿಧಿಸುವ ಕುರಿತಾದ ವಿವಾದ ಕೂಡ ಷೇರುಪೇಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಮಹಾವೀರ ಜಯಂತಿ ಮತ್ತು ಶುಭ ಶುಕ್ರವಾರದ ದಿನದಂದು ಷೇರುಪೇಟೆಗೆ ರಜೆ ಇರುವುದರಿಂದ ಈ ವಾರ ವಹಿವಾಟು ನಡೆಯುವುದು ನಾಲ್ಕು ದಿನಗಳು ಮಾತ್ರ. ಆದರೂ, ಈ ಅಲ್ಪ ಅವಧಿಯಲ್ಲಿ ಸೂಚ್ಯಂಕ ಗರಿಷ್ಠ ಏರಿಳಿತ ಕಾಣಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಕಾರ್ಪೋರೇಟ್ ಕಂಪೆನಿಗಳ ನಾಲ್ಕನೆಯ ತ್ರೈಮಾಸಿಕ ಅವಧಿಯ ಹಣಕಾಸು ಫಲಿತಾಂಶಗಳು ಕೂಡ ಈ ತಿಂಗಳು ಷೇರುಪೇಟೆಯ ಗತಿ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಇದರ ಜತೆಗೆ ಕಂಪೆನಿಗಳು 2012-13ನೇ ಸಾಲಿನ ಹಣಕಾಸು ವರ್ಷಕ್ಕೆ ಪ್ರಕಟಿಸಲಿರುವ ಯೋಜನೆಗಳು ಕೂಡ ವಹಿವಾಟಿನ ಮೇಲೆ ಪರಿಣಾಮ ಬೀರಲಿವೆ.

ಹೊಸ ಹಣಕಾಸು ವರ್ಷದ ಮೊದಲ ವಾರ `ಪಾರ್ಟಿಸಿಪೇಟರಿ ನೋಟ್ಸ್~ ವಹಿವಾಟು ತೀವ್ರ ಸಂಚಲನ ಸೃಷ್ಟಿಸಲಿದೆ ಎಂದು ಸಿಎನ್‌ಐ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಕಿಶೋರ್ ಓಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಈಗಾಗಲೇ `ಪಿ-ನೋಟ್ಸ್~ ವಹಿವಾಟಿನ ಮೇಲೆ ತೆರಿಗೆ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಮಾರುಕಟ್ಟೆ ಸಂಶೋಧನಾ ಸಂಸ್ಥೆ `ಷೇರ್‌ಖಾನ್~ ಸಮೀಕ್ಷೆ ಪ್ರಕಾರ, ಮುಂಬರುವ ದಿನಗಳಲ್ಲಿ ಹಣದುಬ್ಬರ ಮತ್ತು ಪೆಟ್ರೋಲ್ ಬೆಲೆ ಹೆಚ್ಚಲಿದೆ. ಈ ಸಂಗತಿಯೂ ಹೂಡಿಕೆದಾರರ ಆತ್ಮವಿಶ್ವಾಸ ತಗ್ಗಿಸಲಿದೆ ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.

ಹೆಚ್ಚಿದ `ಎಫ್‌ಐಐ~ ಚಟುವಟಿಕೆ

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮುಂಬೈ ಷೇರುಪೇಟೆಯಲ್ಲಿ ಒಟ್ಟು ರೂ. 1,982 ಕೋಟಿ ಮೊತ್ತದ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ `ಎಫ್‌ಐಐ~ ಹೂಡಿಕೆ ಮೊತ್ತ ರೂ. 44,686 ಕೋಟಿಗೆ ಏರಿಕೆಯಾಗಿದೆ. ಮಾರ್ಚ್ 19ರಿಂದ 22ರ ನಡುವಿನ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ರೂ. 3,487 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.