ಶನಿವಾರ, ಮೇ 15, 2021
25 °C

ಒಪ್ಪೊತ್ತಿನ ಊಟಕ್ಕೆ 40 ಕೋಟಿ ಜನರ ಪರದಾಟ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ನಮ್ಮ ದೇಶದಲ್ಲಿ ಪ್ರತಿ ದಿನವೂ ಸುಮಾರು 40 ಕೋಟಿ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂದು ಬಳ್ಳಾರಿಯ ಸರಳಾದೇವಿ ಪದವಿ ಕಾಲೇಜಿನ ಉಪನ್ಯಾಸಕ ನಾಗನಗೌಡ ಆತಂಕ ವ್ಯಕ್ತಪಡಿಸಿದರು.ಅವರು ಈಚೆಗೆ ಪಟ್ಟಣದ ಎಸ್‌ಎವಿಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಆಂತರಿಕ ಗುಣಮಟ್ಟ ಭರವಸೆ ಕೋಶ ಉಪನ್ಯಾಸ ಮಾಲಿಕೆಯಲ್ಲಿ ಆಹಾರ ಭದ್ರತೆ ಮಸೂದೆ ತೊಡಕುಗಳು ಕುರಿತು ಉಪನ್ಯಾಸ ನೀಡಿದರು.ಆಹಾರ ಭದ್ರತೆ ಮಸೂದೆಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 7 ಕೆ.ಜಿ ಧಾನ್ಯ ನೀಡಬೇಕು. ಭಾರತದ ಗ್ರಾಮೀಣ ಪ್ರದೇಶದ ಶೇ 75ರಷ್ಟು ಜನತೆಗೆ, ನಗರ ಪ್ರದೇಶದ ಶೇ 50ರಷ್ಟು ಜನರಿಗೆ ಆಹಾರ ಭದ್ರತೆ ಒದಗಿಸುತ್ತದೆ ಎಂದು ಅವರು ತಿಳಿಸಿದರು. ಆದ್ಯತೆ ಜನರಿಗೆ ಶೇ 40ರಷ್ಟು, ಆದ್ಯತೆಯಿಂದ ಹೊರಗಿರುವ ಜನರಿಗೆ ಶೇ 20ರಷ್ಟು ಆಹಾರಭದ್ರತೆ ಒದಗಿಸಿದಂತಾಗುತ್ತದೆ ಎಂದರು.ಇದಕ್ಕಾಗಿ ಸರ್ಕಾರ ರೂ. 1,25,000 ಕೋಟಿಗಳನ್ನು ವ್ಯಯ ಮಾಡಲು ಸಿದ್ಧತೆ ನಡೆಸಿದೆ. ಆದರೆ ಇದನ್ನು ಕೆಲವು ಜನಪ್ರತಿನಿಧಿಗಳು ಹಾಗೂ ಆರ್ಥಿಕ ತಜ್ಞರು ಇದು ಕೇವಲ ಚುನಾವಣೆ ಗಿಮಿಕ್ ಎಂದು ಹೇಳಿದ್ದಾರೆ. ಆದರೂ ಕೂಡ ಈ ಮಸೂದೆ ಸಾಕಷ್ಟು ಜನಕ್ಕೆ ಆಹಾರ ಭದ್ರತೆಯನ್ನು ಒದಗಿಸಬಲ್ಲದು ಎಂದು ಅವರು ತಿಳಿಸಿದರು.40 ಕೋಟಿ ಜನಕ್ಕೆ ಆಹಾರ ಧಾನ್ಯ ನೀಡುವುದೇ ಈ ಮಸೂದೆಯ ಉದ್ದೇಶವಾಗಿದೆ. 1989ರಲ್ಲಿ ಅಮರ್ತ್ಯಸೇನ್ ಅವರ `ಹಂಗರ್ ಆಂಡ್ ಪಬ್ಲಿಕ್ ಪಾಲಸಿ~ ಎಂಬ ಪುಸ್ತಕದಲ್ಲಿ ಭಾರತದ 44 ದಶಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಅಸುನೀಗುತ್ತಿದ್ದಾರೆಂದು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.ಹಸಿದವನಿಗೆ ಅನ್ನ ಸಿಕ್ಕರೆ ಅದು ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಂತೆ, ಇದು ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಅವರು ಹೇಳಿದರು. ಕೇವಲ ಆದಾಯ ಕಡಿಮೆ ಇದ್ದರೆ ಮಾತ್ರ ಬಡತನವಲ್ಲ, ಉದ್ಯೋಗ ಸಿಗದಿದ್ದರೆ, ಆರೋಗ್ಯ ದೊರೆಯದಿದ್ದರೆ, ಶಿಕ್ಷಣ ಸಿಗದಿದ್ದರೆ ಇವು ಕೂಡ ಬಡತನದ ಸಂಕೇತಗಳಾಗಿವೆ ಎಂದು ವಿವರಿಸಿದರು.

ವೇದಿಕೆಯಲ್ಲಿ ಪ.ಪಂ. ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಉಪನ್ಯಾಸಕರಾದ ಎಸ್.ಕೆ. ಬಸವರಾಜ್, ಎನ್.ಕಲ್ಲಪ್ಪ ಉಪಸ್ಥಿತರಿದ್ದರು.ಜೀಲಾನ್‌ಖಾನ್, ಶಿವಕುಮಾರ ಕಂಪ್ಲಿ, ಡಾ.ಬಸವರಾಜ್, ಪಾಪಣ್ಣ, ಡಾ.ಭೀಮಲಿಂಗ, ಸಕ್ರಾರೆಡ್ಡಿ, ಟಿ.ಬಸವರಾಜ್, ಡಾ.ತಿಪ್ಪೇಸ್ವಾಮಿ, ಬೊಮ್ಮಯ್ಯ, ದೈಹಿಕ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ್, ಗ್ರಂಥಪಾಲಕ ಪಾಪಣ್ಣ ಪಾಲ್ಗೊಂಡಿದ್ದರು.ಪ್ರಾಚಾರ್ಯ ಶಿವಮೂರ್ತಿಗೌಡ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ಶಾಂಭವಿ, ಪದ್ಮಾಕ್ಷಿ, ವನಜಾಕ್ಷಿ ಪ್ರಾರ್ಥಿಸಿದರು. ಉಪನ್ಯಾಸಕ ಎಸ್.ಕೆ. ಬಸವರಾಜ್ ಸ್ವಾಗತಿಸಿ, ಶಶಿಕುಮಾರ್.ಬಿ ವಂದಿಸಿದರು. ರಾಘವೇಂದ್ರ ಗುರಿಕಾರ್ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.