ಬುಧವಾರ, ಮಾರ್ಚ್ 3, 2021
19 °C

ಒಲಿಂಪಿಕ್ಸ್ ಇನ್ನು 5 ದಿನ ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್ ಇನ್ನು 5 ದಿನ ಮಾತ್ರ

ಅಟ್ಲಾಂಟ (1996)

ಅಟ್ಲಾಂಟ ಒಲಿಂಪಿಕ್ಸ್ ಚಾರಿತ್ರಿಕ ಕಾರಣದಿಂದ ಬಹಳ ಮಹತ್ವದ್ದು. ಆಧುನಿಕ ಒಲಿಂಪಿಕ್ಸ್ ಆಂದೋಲನಕ್ಕೆ ಸರಿಯಾಗಿ ನೂರು ವರ್ಷಗಳು ತುಂಬಿದ ಸಂಭ್ರಮ. ಅಮೆರಿಕಾದ ಜಾರ್ಜಿಯ ಪ್ರಾಂತ್ಯದ ಅಟ್ಲಾಂಟದಲ್ಲಿ ನಡೆದ ಈ ಕ್ರೀಡಾ ಹಬ್ಬದಲ್ಲಿ 197 ದೇಶಗಳು ಪಾಲ್ಗೊಂಡಿದ್ದು, ಅಪೂರ್ವ ಜಾಗತಿಕ ಸಮ್ಮಿಲನವಾಗಿತ್ತು. ಅಮೆರಿಕ ಹಿಂದೆ ಸೇಂಟ್ ಲೂಯಿ ನಗರದಲ್ಲಿ, ಲಾಸ್ ಏಂಜಲೀಸ್‌ನಲ್ಲಿ ಆತಿಥ್ಯ ವಹಿಸಿದ್ದುದಕ್ಕಿಂತ ಭಿನ್ನವಾಗಿ, ವೈಭವೋಪೇತವಾಗಿ ಈ ಕೂಟವನ್ನು ಸಂಘಟಿಸಿತ್ತು.ಈ ಕೂಟದಲ್ಲಿ ಕೆನಡಾದ ಡೊನೊವೊನ್ ಬೇಲಿ 100 ಮೀಟರ್ಸ್ ಓಟವನ್ನು 9.84 ಸೆಕೆಂಡುಗಳಲ್ಲಿ ಕ್ರಮಿಸಿ ನೂತನ ದಾಖಲೆ ನಿರ್ಮಿಸಿದರು. ಬೀಜಿಂಗ್‌ನಲ್ಲಿ ಉಸೇನ್ ಬೋಲ್ಟ್ ಸಾಹಸ ಮೆರೆಯುವವರೆಗೆ ಡೊನೊವೊನ್ ಹೆಸರಿನಲ್ಲಿಯೇ  ಈ ದಾಖಲೆ ಇತ್ತು.ಜಗತ್ತಿನ ಗಮನ ಸೆಳೆಯುವಲ್ಲಿ ಈ ಕೂಟ ಅತ್ಯಂತ ಯಶಸ್ವಿಯಾಯಿತು. ಜಗತ್ತಿನಾದ್ಯಂತ ಸುಮಾರು 350 ಕೋಟಿ ಜನ ಟೆಲಿವಿಷನ್‌ನಲ್ಲಿ ಒಲಿಂಪಿಕ್ಸ್ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದರು. ಈ ಒಲಿಂಪಿಕ್ಸ್‌ನಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮನ್ನು ತೊಡಗಿಸಿಕೊಂಡಿದ್ದವು. ಅಮೆರಿಕ ತನ್ನ ಬಂಡವಾಳಷಾಹಿ ಮೌಲ್ಯಗಳಿಗೆ ತಕ್ಕಂತೆಯೇ ಈ ಕೂಟವನ್ನು ಸಂಘಟಿಸಿತ್ತು. ಆ ಸಲ 24 ದೇಶಗಳು ಅದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದವು.ಭಾರತದ ಸವಾಲು ಈ ಕೂಟದಲ್ಲಿ ಕೂಡಾ ಎದ್ದು ಕಾಣುವಂತಹದ್ದೇನೂ ಆಗಿರಲಿಲ್ಲ. ಟೆನಿಸ್ ಪುರುಷರ ಸಿಂಗಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಕಂಚಿನ ಪದಕ ಗೆದ್ದುಕೊಂಡಿದ್ದೇ ಭಾರತದ ದೊಡ್ಡ ಸಾಧನೆ !ವೇಗದ ಓಟಗಾರ್ತಿಯರಾದ ಬೀನಾಮೋಳ್, ರೋಸಾ ಕುಟ್ಟಿ, ಜ್ಯೋತಿರ್ಮಯಿ ಸಿಕ್ದರ್, ಶೈನಿ ವಿಲ್ಸನ್ 4್ಡ400 ಮೀಟರ್ಸ್ ರಿಲೆಯ ಮೊದಲ ಹೀಟ್ಸ್‌ನಲ್ಲಿಯೇ ಸೋತು ನಿರ್ಗಮಿಸಿದರು. ಶಕ್ತಿಸಿಂಗ್ ಡಿಸ್ಕಸ್ ಎಸೆತದಲ್ಲಿ (56.58ಮೀ.) ಹೀನಾಯವಾಗಿ ಹಿಂದೆ ಬಿದ್ದರು. ಹಾಕಿಯಲ್ಲಿ ಭಾರತ ಎಂಟನೇ ಸ್ಥಾನಕ್ಕಿಳಿಯಿತು.ಈ ಕೂಟದಲ್ಲಿ ಅಮೆರಿಕ 44 ಚಿನ್ನವೂ ಸೇರಿದಂತೆ 101 ಪದಕಗಳನ್ನು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ರಷ್ಯಾ 26 ಚಿನ್ನವೂ ಸೇರಿದಂತೆ 63 ಪದಕಗಳನ್ನು ಗೆದ್ದರೆ, ಜರ್ಮನಿ 20 ಚಿನ್ನವೂ ಸೇರಿದಂತೆ 65 ಪದಕಗಳನ್ನು ಪಡೆದು ಮೂರನೇ ಸ್ಥಾನಕ್ಕಿಳಿಯಿತು.

ಬಾಬ್ ಹೇಸ್

ಲಂಡನ್ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ ಐದು ಬಹಳ ಮಹತ್ವದ ದಿನ.  ಭಾರತೀಯ ಕಾಲಮಾನದ ಪ್ರಕಾರ ಆರನೇ ತಾರೀಕು ಮುಂಜಾನೆ 2.30ಕ್ಕೆ ಭಾರತದಾದ್ಯಂತ ಸಾವಿರಾರು ಮಂದಿ ಕಣ್ಣುಜ್ಜಿಕೊಳ್ಳುತ್ತಾ ಟಿ.ವಿ. ಎದುರು ಕುಳಿತು 100 ಮೀಟರ್ಸ್ ಓಟದ ಫೈನಲ್ ಹಣಾಹಣಿಯ ನೇರ ಪ್ರಸಾರವನ್ನು ವೀಕ್ಷಿಸಲಿದ್ದಾರೆ.ಮೊದಲ ಒಲಿಂಪಿಕ್ಸ್‌ನಿಂದ ಈವರೆಗೆ ವೇಗದ ಓಟದ `ವೇಗ~ ಸುಧಾರಿಸುತ್ತಲೇ ಇದೆ. ಇದಕ್ಕೆ ಕೊನೆಯೇ ಇರಲಿಕ್ಕಿಲ್ಲ... !ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಕೆನಡಾದ ಡೊನೊವನ್ ಬೇಲಿ 9.84 ಸೆಕೆಂಡುಗಳಲ್ಲಿ ಗುರಿ ತಲುಪಿ ಸ್ಥಾಪಿಸಿದ್ದ ದಾಖಲೆಯನ್ನು ಬೀಜಿಂಗ್‌ನಲ್ಲಿ ಉಸೇನ್ ಬೋಲ್ಟ್ (9.69ಸೆ.) ಹಿಂದಿಕ್ಕಿದ್ದರು. ಇದೀಗ ಲಂಡನ್‌ನಲ್ಲಿ ಬೋಲ್ಟ್ ಸೇರಿದಂತೆ ಇನ್ನು ಅನೇಕ ಮಂದಿ 9.69ಸೆಕೆಂಡುಗಳನ್ನು ಹಿಂದಿಕ್ಕುವ ತಹತಹದಲ್ಲಿದ್ದಾರೆ. ಏನಾಗಬಹುದು ?ಇಂತಹ ಸಂದರ್ಭದಲ್ಲೆಲ್ಲಾ 1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಂಚಿನಂತೆ ಓಡಿದ್ದ ಅಮೆರಿಕಾದ ಬಾಬ್ ಹೇಸ್ ನೆನಪಾಗುತ್ತಲೇ ಇರುತ್ತಾರೆ. ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದು ಅದೊಂದೇ ಸಲ. ಆದರೆ ಮಾನವ ಕುಲ ಇವರನ್ನು ಯಾವತ್ತೂ ಮರೆಯುವುದಿಲ್ಲ. ಏಕೆಂದರೆ ವೇಗದ ಓಟದಲ್ಲಿ 10.0 ಸೆಕೆಂಡುಗಳ ಗಡಿ ತಲುಪಿದ ಮೊಟ್ಟ ಮೊದಲ ಸಾಹಸಿ ಇವರು. ಆರಡಿ ಎತ್ತರ ಮತ್ತು ಸುಮಾರು 80ಕೆ.ಜಿ. ತೂಕದ ಆಜಾನುಬಾಹು ವ್ಯಕ್ತಿ ಇವರು.ಅಂದು 4್ಡ100 ಮೀ. ರಿಲೆಯಲ್ಲಿಯೂ ಅಮೆರಿಕ ವಿಶ್ವದಾಖಲೆಯೊಂದಿಗೆ (39.06ಸೆ.) ಚಿನ್ನ ಗೆಲ್ಲುವಲ್ಲಿಯೂ ಹೇಸ್ ಮುಖ್ಯ ಪಾತ್ರ ವಹಿಸಿದ್ದರು. ನಂತರ ಕಾರ್ಲ್‌ಲೂಯಿಸ್, ಡೊನೊವನ್, ಬೋಲ್ಟ್ ಮುಂತಾದವರು ಅತಿ `ವೇಗ~ದಿಂದ ಓಡಿದ್ದರೂ, ಕ್ರೀಡಾತಜ್ಞರು ಮಾತ್ರ ಬಾಬ್ ಹೇಸ್ ಅವರನ್ನೇ ಸರ್ವಕಾಲ ಶ್ರೇಷ್ಟ ವೇಗದ ಓಟಗಾರ ಎಂದೇ ಪರಿಗಣಿಸುತ್ತಾರೆ.ಅಮೆರಿಕಾದ ಟೆಕ್ಸಾಸ್ ಪ್ರಾಂತ್ಯದ ಜಾಕ್ಸನ್‌ವಿಲೆಯಲ್ಲಿ ಹುಟ್ಟಿದ (20-12-1942) ಇವರು ಶಾಲೆಯಲ್ಲಿ ಕಲಿಯುವುದರಲ್ಲಿ ಅಷ್ಟೇನೂ ಆಸಕ್ತಿ ತೋರಲಿಲ್ಲ. ಎಳವೆಯಲ್ಲಿ ಇವರಿಗೆ ಫುಟ್‌ಬಾಲ್‌ನಲ್ಲಿಯೇ  ಉತ್ಸಾಹ. ಆದರೆ ಫ್ಲಾರಿಡಾಕ್ಕೆ ತೆರಳಿ ಅಲ್ಲಿ ವೇಗದ ಓಟಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳು ತರಬೇತಿ ಪಡೆದಿದ್ದರು. ಸಣ್ಣಪುಟ್ಟ ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದ ಇವರು ಒಂದು ಸಲ 200ಮೀ. ಓಟದಲ್ಲಿ ಉತ್ತಮ ಸಾಮರ್ಥ್ಯ (20.5ಸೆ.) ತೋರಿದರು. ಹೀಗಾಗಿ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಓಡಿ ಟೋಕಿಯೊಗೆ ತೆರಳಲಿದ್ದ ಅಮೆರಿಕ ತಂಡದಲ್ಲಿ ಸ್ಥಾನ ಪಡೆದರು.

 

ಟೋಕಿಯೊದ ಸಿಂಡರ್ ಟ್ರ್ಯಾಕ್‌ನಲ್ಲಿಯೇ ಇವರು 100ಮೀ. ಫೈನಲ್‌ನಲ್ಲಿ ಓಡಿ 10.0 ಸೆಕೆಂಡುಗಳ ಗಡಿ ತಲುಪುತ್ತಿದ್ದಂತೆಯೇ ಜಗತ್ತಿನಾದ್ಯಂತ ಸುದ್ದಿಯಾಗಿಬಿಟ್ಟರು. ಆದರೆ ಅಮೆರಿಕಾಕ್ಕೆ ವಾಪಸಾದ ಮೇಲೆ ಏಕಾಏಕಿ ವೇಗದ ಓಟ ನಿಲ್ಲಿಸಿ `ಅಮೆರಿಕ ರೂಲ್ಸ್~ ಫುಟ್‌ಬಾಲ್‌ನಲ್ಲಿ ತನ್ಮಯರಾಗಿಬಿಟ್ಟರು. ಇವರು ಆ ಫುಟ್‌ಬಾಲ್‌ನಲ್ಲಿ ಅದೆಷ್ಟು ಜನಪ್ರಿಯರಾದರೆಂದರೆ ಜನ ಇವರನ್ನು ವೇಗದ ಓಟಗಾರ ಎಂಬುದನ್ನೇ ಮರೆತುಹೋದರು. `ಡಲ್ಲಾಸ್ ಕೌಬಾಯ್~ ಕ್ಲಬ್ ತಂಡದ ಪರ ದಶಕದ ಕಾಲ ಆಡಿದ ಬಾಬ್ ಅವರನ್ನು `ಅಮೆರಿಕಾದ ಸರ್ವಕಾಲ ಶ್ರೇಷ್ಠ ಫುಟ್‌ಬಾಲ್ ಆಟಗಾರ~ ಎಂದೂ ಆಯ್ಕೆ ಮಾಡಲಾಯಿತು.ಆದರೆ ಬಾಬ್ ಹೇಸ್ ಜೂಜಾಟ, ಕುಡಿತಗಳಲ್ಲಿಯೇ ಮುಳುಗಿದ್ದು ಒಮ್ಮೆಯಂತೂ ಜೈಲು ಶಿಕ್ಷೆ ಅನುಭವಿಸಿದ್ದರು. ಅಶಿಸ್ತಿನ ಜೀವನ ಶೈಲಿಯಿಂದಾಗಿ ಕಿಡ್ನಿ ವೈಫಲ್ಯ, ಯಕೃತ್ತಿನ ರೋಗಗಳಿಂದ ಬಳಲತೊಡಗಿದ್ದೇ ಅಲ್ಲದೆ, ಮೂತ್ರಕೋಶದ ಕಂಠಕ್ಕೆ ಸಂಬಂಧಿಸಿದ ಕ್ಯಾನ್ಸರ್ ರೋಗಕ್ಕೂ ಸಿಲುಕಿದರು. ಅರವತ್ತು ವರ್ಷ ತುಂಬುವುದಕ್ಕೆ ಮುನ್ನವೇ ಬಾಬ್ ಸಾವನ್ನಪ್ಪಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.