ಗುರುವಾರ , ಏಪ್ರಿಲ್ 15, 2021
20 °C

ಒಲಿಂಪಿಕ್ಸ್ ಹೀರೊಗಳಿಗೆ ಅದ್ದೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ದೇಶದ ಹೆಮ್ಮೆಗೆ ಕಾರಣರಾದ ಸುಶೀಲ್ ಕುಮಾರ್, ಮೇರಿ ಕೋಮ್ ಹಾಗೂ ಯೋಗೀಶ್ವರ್ ದತ್ ಅವರು ಅದ್ದೂರಿ ಸ್ವಾಗತದ ನಡುವೆ ತವರು ನಾಡಿಗೆ ಕಾಲಿರಿಸಿದರು.ಮಂಗಳವಾರ ಮುಂಜಾನೆ ಆಗಮಿಸಿದ ಕಂಚಿನ ಪದಕ ವಿಜೇತ ಬಾಕ್ಸರ್ ಮೇರಿ ಅವರಿಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಜೈಕಾರ ಹಾಕುವ ಮೂಲಕ ಬರಮಾಡಿಕೊಂಡರು. ಕ್ರಿಕೆಟೇತರ ಕ್ರೀಡಾಪಟುಗಳಿಗೆ ಈ ಹಿಂದೆ ಇಷ್ಟೊಂದು ಅದ್ದೂರಿ ಸ್ವಾಗತ ಲಭಿಸಿರಲಿಕ್ಕಿಲ್ಲ.ಅವಳಿ ಮಕ್ಕಳ ತಾಯಿ ಮೇರಿ ಪತಿ ಆನ್ಲೇರ್ ಕೋಮ್ ಹಾಗೂ ತಾಯಿ ಅಖಾಮ್ ಕೋಮ್ ಜೊತೆ ಆಗಮಿಸಿದರು. ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿ ಮಹಿಳಾ ಬಾಕ್ಸಿಂಗ್‌ಗೆ ಅವಕಾಶ ನೀಡಲಾಗಿತ್ತು. 51 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಕೋಮ್ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಅವರು ಕಾರಣರಾಗಿದ್ದಾರೆ.`ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಆದರೆ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗು ನನ್ನಲ್ಲಿದೆ. ಸೆಮಿಫೈನಲ್ ಬೌಟ್‌ನಲ್ಲಿ ಏನಾಯಿತು ಎಂಬುದು ನನಗೆ ಗೊತ್ತಾಗಲಿಲ್ಲ. ರಿಂಗ್‌ನೊಳಗೆ ನನ್ನ ಪಾದಚಲನೆ ಚುರುಕಾಗಿರಲಿಲ್ಲ. ತುಂಬಾ ಗೊಂದಲಕ್ಕೆ ಒಳಗಾಗಿದ್ದೆ~ ಎಂದು 29 ವರ್ಷ ವಯಸ್ಸಿನ ಮೇರಿ ನುಡಿದರು.ಸೆಮಿಫೈನಲ್ ಬೌಟ್‌ನಲ್ಲಿ ಮೇರಿ ಗ್ರೇಟ್ ಬ್ರಿಟನ್‌ನ ನಿಕೋಲಾ ಆ್ಯಡಮ್ಸ ಎದುರು ಸೋಲು ಕಂಡಿದ್ದರು. ಈ ವಿಭಾಗದಲ್ಲಿ ಆ್ಯಡಮ್ಸ ಚಿನ್ನದ ಪದಕ ಗೆದ್ದರು.`ಆ ದಿನವೇ ನನ್ನ ಪಾಲಿಗೆ ಸರಿಯಾಗಿರಲಿಲ್ಲ. ಯಾವಾಗಲೂ ಆಕ್ರಮಣಕಾರಿ ಮೂಡಿನಲ್ಲಿರುತ್ತಿದ್ದ ನನಗೆ ಸೆಮಿಫೈನಲ್ ಬೌಟ್‌ನಲ್ಲಿ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ನಿಕೋಲಾ ಅವರಿಗೆ ಜನರ ಬೆಂಬಲವೂ ಇತ್ತು.ಅವರು ಜೋರಾಗಿ ಕೂಗುವ ಮೂಲಕ ಆತಿಥೇಯ ರಾಷ್ಟ್ರದ ಬಾಕ್ಸರ್‌ಗೆ ಬೆಂಬಲ ನೀಡುತ್ತಿದ್ದರು. ನಾನು ಸಾಮಾನ್ಯವಾಗಿ ಇದರಿಂದ ವಿಚಲಿತವಾಗುವುದಿಲ್ಲ. ಆದರೆ ಸೆಮಿಫೈನಲ್‌ನಲ್ಲಿ ಏಕೆ ಆ ರೀತಿ ಆಯಿತು ಎಂಬುದು ನನಗೆ ಗೊತ್ತಾಗುತ್ತಿಲ್ಲ~ ಎಂದರು.`ಆದರೆ ಪದಕ ಗೆಲ್ಲಬೇಕೆಂಬ ನನ್ನ ಕನಸು ನನಸಾಗಿದೆ. ಇಷ್ಟಕ್ಕೆ ನಾನು ಸುಮ್ಮನಾಗುವುದಿಲ್ಲ. ರಯೋ ಡಿ ಜನೈರೊ ಒಲಿಂಪಿಕ್ಸ್ ನವರೆಗೆ ರಿಂಗ್‌ನೊಳಗಿನ ನನ್ನ ಹೋರಾಟ ಮುಂದುವರಿಯಲಿದೆ. ಅದಕ್ಕೆ ನನ್ನ ದೇಹ ಸ್ಪಂದಿಸಲಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಪ್ರಯತ್ನ ಮಾತ್ರ ಮುಂದುವರಿಯಲಿದೆ~ ಎಂದು ಮಣಿಪುರದ ಬಾಕ್ಸರ್ ನುಡಿದರು.ಪುರುಷರ ಬಾಕ್ಸಿಂಗ್‌ನಲ್ಲಿ ವಿವಾದಕ್ಕೆ ಕಾರಣವಾದ ರೆಫರಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಈ ಬಗ್ಗೆ ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ. ರೆಫರಿಗಳು ಸೂಕ್ತ ತರಬೇತಿ ಪಡೆಯದೇ ಇರಬಹುದು~ ಎಂದರು.`ಪುರುಷರು ಪದಕ ಗೆಲ್ಲಲು ಸಾಧ್ಯವಾಗದ್ದು ಎಲ್ಲರನ್ನೂ ನಿರಾಶೆಯಲ್ಲಿ ಮುಳುಗಿಸಿದೆ. ಏಕೆಂದರೆ ಅವರು ತುಂಬಾ ಕಷ್ಟಪಟ್ಟಿದ್ದರು. ಸಾಕಷ್ಟು ಸಿದ್ಧತೆ ಹಾಗೂ ಅಭ್ಯಾಸ ನಡೆಸಿದ್ದರು~ ಎಂದೂ ಮೇರಿ ಹೇಳಿದರು. ಮೇರಿ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು.ಮೇರಿಗೆ ಸನ್ಮಾನ: ಸಾಧಕಿ ಮೇರಿ ಅವರಿಗೆ ಮಂಗಳವಾರ ಬುಡಕಟ್ಟು ವ್ಯವಹಾರಗಳ ಸಚಿವಾಲಯ 10 ಲಕ್ಷ ರೂಪಾಯಿ ಬಹುಮಾನ ನೀಡಿ ಸನ್ಮಾನಿಸಿತು. ಇದು ಪದಕ ಗೆದ್ದ ಬಳಿಕ ಮೇರಿ ಪಾಲಿಗೆ ಮೊದಲ ಸನ್ಮಾನ ಸಮಾರಂಭ.ಈ ಸಂದರ್ಭದಲ್ಲಿ ಜಾನಪದ ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅವರೊಂದಿಗೆ ಮೇರಿ ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಬಾಕ್ಸರ್‌ಗೆ ಸಚಿವ ವಿ.ಕಿಶೋರ್ ಚಂದ್ರ ಸನ್ಮಾನಿಸಿದರು.`ನನ್ನ ಪಾಲಿಗೆ ಇದೊಂದು ವಿಶೇಷ ಕ್ಷಣ. ಎಲ್ಲಾ ಕಡೆಯಿಂದ ನನಗೆ ಬೆಂಬಲವಾಗುತ್ತಿದೆ. ಇದೇ ನನ್ನ ಈ ಸಾಧನೆಗೆ ಕಾರಣ~ ಎಂದು ಸನ್ಮಾನ ಸ್ವೀಕರಿಸಿದ ಮೇರಿ ನುಡಿದರು.ಸುಶೀಲ್, ದತ್‌ಗೂ ಆತ್ಮೀಯ ಸ್ವಾಗತ: ಸೋಮವಾರ ರಾತ್ರಿ ಆಗಮಿಸಿದ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಯೋಗೀಶ್ವರ್ ದತ್ ಅವರಿಗೂ ಆತ್ಮೀಯ ಸ್ವಾಗತ ದೊರೆಯಿತು.ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ಬೆಳ್ಳಿ ಪದಕ ವಿಜೇತ ಸುಶೀಲ್ ಅವರನ್ನು ಮುತ್ತಿಕೊಂಡರು. ಬಳಿಕ ತಮ್ಮ ಭುಜದ ಮೇಲೆ ಕೂರಿಸಿಕೊಂಡು ಸಂಭ್ರಮಿಸಿದರು. ಪಟಾಕಿ ಸಿಡಿಸಿ ಖುಷಿಪಟ್ಟರು. `ಸುಶೀಲ್, ಯೋಗೀಶ್ವರ್ ಕಿ ಜೈ~ ಎಂಬ ಘೋಷಣೆ ಕೂಗಿದರು.ಬಪ್ರೋಲಾದ ಇಡೀ ಗ್ರಾಮದ ಜನರು ವಿಮಾನ ನಿಲ್ದಾಣದ ಬಳಿ ಸೇರಿದಂತೆ ಭಾಸವಾಯಿತು. ಯುವ ಕುಸ್ತಿಪಟುಗಳ ತಮ್ಮ ಹೀರೊಗಳನ್ನು ಬರಮಾಡಿಕೊಂಡರು. ಬಳಿಕ ಅವರನ್ನು ತೆರೆದ ಜೀಪಿನಲ್ಲಿ ಪಾಲಮ್ ದೇವಾಲಯಕ್ಕೆ ಕರೆದುಕೊಂಡು ಹೋಗಲಾಯಿತು.

ಸ್ಟೈಸ್‌ಜೆಟ್‌ನಲ್ಲಿ ಉಚಿತ ಪ್ರಯಾಣ

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳು ಸ್ಟೈಸ್‌ಜೆಟ್‌ನಲ್ಲಿ ಜೀವನಪೂರ್ತಿ ಉಚಿತ ಪ್ರಯಾಣ ಮಾಡಬಹುದು ಎಂದು ವಾಯುಯಾನ ಸಂಸ್ಥೆ ಸ್ಪೈಸ್‌ಜೆಟ್ ಪ್ರಕಟಿಸಿದೆ.`ಸುಶೀಲ್ ಕುಮಾರ್, ವಿಜಯ್ ಕುಮಾರ್, ಮೇರಿ ಕೋಮ್, ಸೈನಾ ನೆಹ್ವಾಲ್, ಗಗನ್ ನಾರಂಗ್ ಹಾಗೂ ಯೋಗೀಶ್ವರ್ ದತ್ ಅವರು ಅದ್ಭುತ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪದಕ ವಿಜೇತರಿಗೆ ಉಚಿತ ವಾಗಿ ಏರ್ ಟಿಕೆಟ್ ನೀಡಲು ಸ್ಟೈಸ್‌ಜೆಟ್ ಲಿಮಿಟೆಡ್ ಬಯಸುತ್ತದೆ~ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.