ಮಂಗಳವಾರ, ಜನವರಿ 28, 2020
17 °C

ಒಳ್ಳೆತನ ಸಾಮರ್ಥ್ಯ ಮೀರಿದ್ದು: ಪ್ರೊ.ಜಿ.ಕೆ.ಗೋವಿಂದರಾವ್‌

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಒಳ್ಳೆತನ ಎನ್ನುವುದು ಸಾಮರ್ಥ್ಯವನ್ನು ಮೀರಿದ್ದು. ಜನಪ್ರಿಯತೆ ಕಳೆದುಕೊಂಡವನೂ

ಕೂಡ ಒಳ್ಳೆಯ ಮನುಷ್ಯನಾಗಲು ಸಾಧ್ಯ. ಈ ಕ್ಷಣದ ಜನಪ್ರಿಯತೆಗಿಂತ ಅನಂತ ಕಾಲದ ಸಾಫಲ್ಯವನ್ನು ಸಾಧಿಸಿದವರು ಬಿ.ಎನ್‌.ರಂಗಪ್ಪ ಅವರು ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದ ರಾವ್‌ ಅಭಿಪ್ರಾಯಪಟ್ಟರು.ಶನಿವಾರ ಪಟ್ಟಣದ ಕೆಟಿಕೆ ಕಲ್ಯಾಣ ಮಂದಿರದಲ್ಲಿ ಡಾ.ಬಿ.ಎನ್‌.ರಂಗಪ್ಪ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಡಾ.ಬಿ.ಎನ್‌.ರಂಗಪ್ಪ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಳ್ಳೆತನ ಎನ್ನುವುದು ಈ ಕ್ಷಣದ ವೈಯುಕ್ತಿಕ ಸಾಮರ್ಥ್ಯವನ್ನು ಮೀರಿದ ಗುಣ. ಮಲೆನಾಡಿನಲ್ಲಿ ಹುಟ್ಟಿದವರು ಒಳ್ಳೆಯವರಾಗದೇ ಇರಲು ಸಾಧ್ಯವೇ?. ಇಲ್ಲಿನ ಪ್ರಕೃತಿ ಮನುಷ್ಯರನ್ನು ಸಜ್ಜನರನ್ನಾಗಿ ಮಾಡುತ್ತದೆ.ರಂಗಪ್ಪ ಅವರಲ್ಲಿ ಮಾನವೀಯ ಗುಣಗಳಿದ್ದವು. ಒಬ್ಬ ಕುವೆಂಪು ಅವರನ್ನು ಸೃಷ್ಟಿಸಿದ ಪ್ರಕೃತಿಯೇ ನಮ್ಮನ್ನು, ನಿಮ್ಮನ್ನು ಸೃಷ್ಟಿಸಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ನಮ್ಮಲ್ಲಿ ಸಾಮಾನ್ಯ ಪ್ರಜ್ಞೆ ಬೆಳೆಯದೇ ಇದ್ದರೆ ಹೆಣಗಳಾಗಿ ಬದುಕುವಂತಾಗುತ್ತದೆ. ರಂಗಪ್ಪ ಅವರ ಗುಣಗಳನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.ಸಮಾರಂಭದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಡಾ.ಬಿ.ಎನ್‌.ರಂಗಪ್ಪ ಅವರಲ್ಲಿನ ಒಳ್ಳೆಯ ಗುಣಗಳು ಇತರರಿಗೆ ಮಾದರಿಯಾಗಿವೆ. ಯಾವುದೇ ಸ್ಥಾನ ಮಾನಗಳನ್ನು ಪಡೆಯದೇ ಇದ್ದರೂ ಇಂದಿಗೂ ಅವರ ವ್ಯಕ್ತಿತ್ವ ನೆನೆಪು ಮಾಡಿಕೊಳ್ಳುವಷ್ಟು ಗಟ್ಟಿಯಾಗಿ ಉಳಿದಿದೆ. ಸಮಾಜದಲ್ಲಿ ಬದಲಾವಣೆ ತರಲು ಸಾವಿರಾರು ಮಂದಿ ಬೇಕಾಗಿಲ್ಲ. ಒಳ್ಳೆಯ ವ್ಯಕ್ತಿತ್ವ ಇರುವ ಕೆಲವರಿಂದ ಅದು ಸಾಧ್ಯವಾಗಲಿದೆ. ಅಂಥವರ ಸಾಲಿಗೆ ರಂಗಪ್ಪ ಸೇರಿದ್ದರು ಎಂದರು.ಸಾಹಿತಿ ಡಾ.ಜೆಕೆ.ರಮೇಶ್‌, ‘ಮ್ಯಾಮ್ಕೋಸ್‌’ ಉಪಾಧ್ಯಕ್ಷ ಕೆ.ನರಸಿಂಹ ನಾಯಕ್‌, ಬಿ.ಕೆ.ಜಯದೇವ್‌ ಮಾತನಾಡಿದರು.ನಿವೃತ್ತ ಪ್ರಾಂಶುಪಾಲ, ಹಿಂದುಸ್ಥಾನಿ ಗಾಯಕ ಪ್ರೊ.ಇಂದೂಧರ ಎಚ್‌.ಪೂಜಾರ್‌ ಅಧ್ಯಕ್ಷತೆ ವಹಿಸಿದ್ದರು.

ವಿಶಾಲ್‌ ಪ್ರಾರ್ಥಿಸಿದರು. ಕೌಲಾನಿ ಧರ್ಮಯ್ಯ ಸ್ವಾಗತಿಸಿದರು. ಕಡಿದಾಳ್‌ ದಯಾನಂದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಹರೀಶ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)